ಮತದಾರರ ಮನಗೆಲ್ಲಲು ಪಕ್ಷಗಳ ಸೈಬರ್‌ ಸಮರ

7

ಮತದಾರರ ಮನಗೆಲ್ಲಲು ಪಕ್ಷಗಳ ಸೈಬರ್‌ ಸಮರ

Published:
Updated:
ಮತದಾರರ ಮನಗೆಲ್ಲಲು ಪಕ್ಷಗಳ ಸೈಬರ್‌ ಸಮರ

ಇಂದಿನ ಚುನಾವಣೆಗಳು ಕೇವಲ ಭಾಷಣ, ಸಮಾವೇಶ, ಮೈದಾನ ರಾಜಕಾರಣಕ್ಕಷ್ಟೇ ಸೀಮಿತವಾಗಿಲ್ಲ. ಕ್ರಿಯಾಶೀಲ ಮನಸ್ಸಿನ ಅದ್ಭುತ ಯೋಚನೆಗಳೂ ಪ್ರಮುಖ ಅಸ್ತ್ರಗಳಾಗಿ ಬಳಕೆಯಾಗುತ್ತವೆ. ಇಂತಹ ಪ್ರಬಲ ಅಸ್ತ್ರಗಳನ್ನು ಯಾವ ಸಂದರ್ಭದಲ್ಲಿ (ಟೈಮಿಂಗ್) ಬಳಸುತ್ತಾರೆ, ಅದರ ಪರಿಣಾಮಗಳು ಏನಾಗಬಹುದು ಎಂಬ ನಿಖರ ಲೆಕ್ಕಾಚಾರ ಇದ್ದರಷ್ಟೇ ಚುನಾವಣೆಗಳ ದಿಕ್ಕು– ದೆಸೆಗಳನ್ನು ಬದಲಿಸಲು ಸಾಧ್ಯ. 2014ರ ಲೋಕಸಭೆ ಮತ್ತು ನಂತರ ನಡೆದ ಬಹುತೇಕ ವಿಧಾನಸಭಾ ಚುನಾವಣೆಗಳಲ್ಲಿ ಈ ‘ಆಟ’ವನ್ನು ಕಾಣಬಹುದು. ಇದೊಂದು ರೀತಿಯಲ್ಲಿ ‘ಮೈಂಡ್‌ ಗೇಮ್‌’. ಮಾಹಿತಿ ತಂತ್ರಜ್ಞಾನ ಇದಕ್ಕೆ ಪ್ರಮುಖ ವೇದಿಕೆ. ಸಾಮಾಜಿಕ ಜಾಲ ತಾಣಗಳು ಇದರ ‘ಅಸ್ತ್ರ’ಗಳು. ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಣಕ್ಕೆ ಈಗಾಗಲೇ ‘ಸೈಬರ್‌ ಸೈನ್ಯಗಳು’ ಇಳಿದಿವೆ.

ಇತ್ತೀಚಿನ ಚುನಾವಣೆಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡ ಪಕ್ಷ ಬಿಜೆಪಿ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ ಪ್ರಮಾಣದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಬಳಸಿಕೊಂಡಿತ್ತು. ಅದರ ಬೆನ್ನಲ್ಲೇ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಸೈಬರ್ ಸಮರದಲ್ಲಿ ಬಿಜೆಪಿಯನ್ನೇ ಮೀರಿಸಿತು. ಬುದ್ಧಿವಂತರ ದೊಡ್ಡ ಪಡೆಯೇ ದೆಹಲಿಯ ಸೈಬರ್‌ ಯುದ್ಧದಲ್ಲಿ ಎಎಪಿ ಪರವಾಗಿ ಕೆಲಸ ಮಾಡಿತು. ಇದರ ಆಗಾಧ ಸಾಧ್ಯತೆಯನ್ನು ತಡವಾಗಿ ಅರ್ಥ ಮಾಡಿಕೊಂಡಿದ್ದು ಕಾಂಗ್ರೆಸ್‌. ಇವರು (ಕಾಂಗ್ರೆಸಿಗರು) ಕಣ್ಣು ಬಿಡುವ ಹೊತ್ತಿಗೆ ಬಿಜೆಪಿ ಮತ್ತು ಎಎಪಿ ನಾಗಾಲೋಟದಲ್ಲಿ ಮುಂದಕ್ಕೆ ಸಾಗಿದ್ದವು.

ಸಾಮಾನ್ಯವಾಗಿ ಪಕ್ಷದ ಕಾರ್ಯಕ್ರಮಗಳು, ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತೇವೆ ಎಂದು ರಾಜಕೀಯ ಪಕ್ಷಗಳು ವಿನೀತವಾಗಿ ಹೇಳಿಕೊಂಡರೂ, ವಾಸ್ತವ ಅದಕ್ಕಿಂತ ಭಿನ್ನ. ಸೈಬರ್‌ ಸಮರದಲ್ಲಿ ಎದುರಾಳಿ ಪಕ್ಷಗಳು ಮತ್ತು ಅವುಗಳ ನಾಯಕರುಗಳನ್ನು ಹಣಿಯುವುದಕ್ಕೆ ಬೇಕಾಗುವ ಎಲ್ಲ ಬಗೆಯ ಪಟ್ಟುಗಳನ್ನೂ ಹಾಕಲಾಗುತ್ತದೆ. ಒಂದು ರಾಜಕೀಯ ಪಕ್ಷ ತನ್ನ ನಾಯಕನ ವರ್ಚಸ್ಸು ವೃದ್ಧಿ ಮಾಡಲು ಬೆವರು ಹರಿಸುತ್ತಿದ್ದರೆ, ಎದುರಾಳಿ ಪಕ್ಷ ಆ ವರ್ಚಸ್ಸು ಮಣ್ಣುಪಾಲು ಮಾಡಲು ಏನು ಬೇಕೋ ಅದನ್ನು ಮಾಡುತ್ತಿರುತ್ತದೆ. ಇಂತಹ ಕೆಲಸ ಮಾಡಲು ರಾಜಕೀಯ ಪಕ್ಷಗಳು ಸೈಬರ್‌ ತಂಡಗಳನ್ನು ಇಟ್ಟುಕೊಂಡು, ‘ವಾರ್‌ ರೂಮ್‌’ ಎಂದು ಕರೆಯುವ ಕದನ ರಣತಂತ್ರದ ಕೊಠಡಿಯನ್ನು ಇಟ್ಟುಕೊಂಡಿರುತ್ತವೆ. ಇದಕ್ಕಾಗಿ ಕೆಲಸ ಮಾಡುವ ದೊಡ್ಡ ಪಡೆಯೇ ರಾಜ್ಯ ಮತ್ತು ದೇಶದ ಉದ್ದಗಲಕ್ಕೂ ವ್ಯಾಪಿಸಿರು

ತ್ತದೆ. ಇದಕ್ಕಾಗಿ ಹಣವನ್ನೂ ಧಾರಾಳವಾಗಿ ಖರ್ಚು ಮಾಡಲಾಗುತ್ತದೆ.

ಸಾಮಾಜಿಕ ಮಾಧ್ಯಮವನ್ನು ಕೇವಲ ಯುವಜನರಷ್ಟೇ ನೋಡುತ್ತಾರೆ, ವಯಸ್ಸಾದವರು ನೋಡುವುದಿಲ್ಲ ಎಂಬ ತರ್ಕದಲ್ಲಿ ಅರ್ಥವಿಲ್ಲ. ಇತ್ತೀಚಿನ ವರ್ಷಗಳಲ್ಲಿ 30ರಿಂದ 60 ವರ್ಷ ವಯೋಮಾನದವರೂ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ರಾಜಕೀಯ ಪಕ್ಷಗಳು ನೀಡುವ ಮಾಹಿತಿಗಳು ನಿಶ್ಚಿತವಾಗಿ ಈ ವರ್ಗದ ಮೇಲೆ ಪರಿಣಾಮ ಬೀರುತ್ತವೆ. ಕಳೆದ ಲೋಕಸಭೆ ಚುನಾವಣೆಗೂ ಮುನ್ನ ಮುಂಬೈನ ‘ಇಂಟರ್‌ನೆಟ್‌ ಆ್ಯಂಡ್‌ ಮೊಬೈಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ’ ನಡೆಸಿದ ಅಧ್ಯಯನವು, 543 ಲೋಕಸಭಾ ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಲ್ಲಿ ಸಾಮಾಜಿಕ ಜಾಲತಾಣ ಅದರಲ್ಲೂ ಫೇಸ್‌ಬುಕ್‌ ಪೇಜ್‌ಗಳು ಚುನಾವಣಾ ಫಲಿತಾಂಶದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ ಎಂದು ಭವಿಷ್ಯ ನುಡಿದಿತ್ತು. ಇದಕ್ಕೆ ಮುಖ್ಯ ಕಾರಣ, ಈ ಕ್ಷೇತ್ರಗಳಲ್ಲಿ ಇದ್ದವರಲ್ಲಿ ಅತಿ ಹೆಚ್ಚಿನವರು ಯುವ ಮತದಾರರು. 18ರಿಂದ 25 ವರ್ಷ ವಯಸ್ಸಿನ ಮತದಾರರ ಸಂಖ್ಯೆ ಶೇ 50ರಷ್ಟಿತ್ತು.

ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 150 ವಿಧಾನಸಭಾ ಕ್ಷೇತ್ರಗಳಲ್ಲಿ ಸಾಮಾಜಿಕ ಮಾಧ್ಯಮ ನಿಶ್ಚಿತವಾಗಿ ಪರಿಣಾಮ ಬೀರುತ್ತದೆ. ಈ ಕ್ಷೇತ್ರಗಳು ನಗರ ಪ್ರದೇಶದಲ್ಲಿದ್ದು, ಯುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರೇ ಹೆಚ್ಚು ಎಂದು ತಜ್ಞರು ಹೇಳುತ್ತಾರೆ.

ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣದ ಮೇಲೆ ಸುಮಾರು ₹ 150 ಕೋಟಿಯಿಂದ ₹ 200 ಕೋಟಿವರೆಗೆ ವೆಚ್ಚ ಮಾಡುತ್ತಿವೆ. ಆದರೆ, ಯಾವುದೇ ಪಕ್ಷ ತಾನು ಎಷ್ಟು ಖರ್ಚು ಮಾಡುತ್ತೇನೆ ಎಂಬ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ‘ಸಾಮಾಜಿಕ ಮಾಧ್ಯಮದಲ್ಲಿ ಕೆಲಸ ಮಾಡುವ ಎಲ್ಲರೂ ಸೇವಾ ಮನೋಭಾವದಿಂದಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ’ ಎಂದು ರಾಜಕೀಯ ಪಕ್ಷಗಳ ವಕ್ತಾರರು ಗಿಣಿಪಾಠ ಒಪ್ಪಿಸುತ್ತಾರೆ.

ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸಾಮಾಜಿಕ ಮಾಧ್ಯಮಗಳಿಗಾಗಿ ಪ್ರತ್ಯೇಕವಾಗಿ ಹಣ ಖರ್ಚು ಮಾಡುತ್ತಾರೆ. ಇವರಿಗೆ ಮೊಬೈಲ್ ಆ್ಯಪ್‌ ಸಿದ್ಧಪಡಿಸಿಕೊಡುವ 8ರಿಂದ 10 ನವೋದ್ಯಮಗಳು ಮತ್ತು ಕಂಪನಿಗಳು ಬೆಂಗಳೂರಿನಲ್ಲಿ ಸಕ್ರಿಯವಾಗಿವೆ. ಪ್ರತಿಯೊಬ್ಬ ಅಭ್ಯರ್ಥಿಗೂ ತನ್ನ ಕ್ಷೇತ್ರದ ಮತದಾರರೊಂದಿಗೆ ಪರಿಣಾಮಕಾರಿ ಸಂವಹನ ಮಾಡಲು ಸಾಧ್ಯವಾಗುವ ಮೊಬೈಲ್‌ ಆ್ಯಪ್‌ಗಳನ್ನು ಈ ಕಂಪನಿಗಳು ಅಭಿವೃದ್ಧಿಪಡಿಸಿಕೊಡುತ್ತವೆ. ಅಭ್ಯರ್ಥಿಯ ಅಗತ್ಯಕ್ಕೆ ಅನುಗುಣವಾಗಿ ಆ್ಯಪ್‌ ಸಿದ್ಧಪಡಿಸಲು₹ 1 ಲಕ್ಷದಿಂದ ₹ 5 ಲಕ್ಷದವರೆಗೆ ವೆಚ್ಚವಾಗುತ್ತದೆ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ತಮ್ಮದೇ ಆದ ಐ.ಟಿ ತಂಡಗಳಿಂದ ಆ್ಯಪ್‌, ಸಾಫ್ಟ್‌ವೇರ್‌ಗಳನ್ನು ತಯಾರಿಸಿಕೊಳ್ಳುತ್ತವೆ.

ಆದರೆ, ‘ಸಾಮಾಜಿಕ ಮಾಧ್ಯಮ ಮತ್ತು ರಾಜಕೀಯ’ ಎಂಬ ವಿಷಯದ ಬಗ್ಗೆ ಡಿಜಿಟಲ್‌ ಮಾರ್ಕೆಟಿಂಗ್‌ ಬ್ಲಾಗ್‌ ನಡೆಸಿದ ಅಧ್ಯಯನದ ಪ್ರಕಾರ, 2014ರ ಲೋಕಸಭೆ ಚುನಾವಣೆ ಬಳಿಕ ಎಲ್ಲ ರಾಜಕೀಯ ಪಕ್ಷಗಳೂ ಸಾಮಾಜಿಕ ಮಾಧ್ಯಮದ ಮೇಲೆ ವಿಪರೀತ ಹಣ ಸುರಿಯುತ್ತಿವೆ. ಹಿಂದೆಲ್ಲ ಧ್ವನಿಮುದ್ರಿತ ಸಂದೇಶಗಳು ಅಥವಾ ಸಂದೇಶಗಳನ್ನು ಮೊಬೈಲ್‌ ಮೂಲಕ ಕಳುಹಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದವು. ಆದರೆ, ಲೋಕಸಭಾ ಚುನಾವಣೆ ಬಳಿಕ ನಡೆದ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಡಿಜಿಟಲ್‌ ಮಾಧ್ಯಮ ಬಳಕೆಯ ವಿರಾಟ್‌ ಸ್ವರೂಪವೇ ಅನಾವರಣಗೊಂಡಿದೆ. ಕ್ರಿಯಾಶೀಲತೆಗೆ ಮಿತಿಯೇ ಇಲ್ಲ ಎಂಬಂತಾಗಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಚುನಾವಣೆ, ರಾಜಕೀಯಕ್ಕೆ ಸಂಬಂಧಿಸಿದ ಎಷ್ಟೋ ಗೇಮ್ಸ್‌ ಆ್ಯಪ್‌ಗಳಿವೆ. ಎಲೆಕ್ಷನ್‌ ರೇಸ್‌, ಮೋದಿ– ರಾಹುಲ್‌– ಕೇಜ್ರಿವಾಲ್‌ ಫನ್‌ ಗೇಮ್, ಮೋಡಿಫೈಡ್‌, ರನ್‌ ಮೋದಿ ರನ್‌... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ರಾಜಕೀಯ ಪಕ್ಷಗಳು ಸೈಬರ್‌ ಸಮರದಲ್ಲಿ ಪ್ರಧಾನವಾಗಿ ಟ್ವಿಟರ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮತ್ತು ಇನ್‌ಸ್ಟಾಗ್ರಾಮ್‌ಗಳನ್ನು ಬಳಸುತ್ತಿವೆ. ಟ್ವಿಟರ್‌ ಮೂಲಕ ಯಾವುದೋ ಒಂದು ವಿಷಯವನ್ನು ‘ಟ್ರೆಂಡ್‌ ಸೆಟ್‌’ ಮಾಡಿ, ಅದರ ಮೇಲಿನ ಚರ್ಚೆಯನ್ನು ಮುನ್ನಡೆಸುವ ತಂತ್ರವನ್ನು ಅನುಸರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಮುನ್ನಡೆಸುವ ಗುಂಪುಗಳು ರಹಸ್ಯವಾಗಿಯೇ ಕಾರ್ಯ ನಿರ್ವಹಿಸುತ್ತಿವೆ. ಮೂರು ಪಕ್ಷಗಳ ಬೆರಳೆಣಿಕೆ ನಾಯಕರನ್ನು ಬಿಟ್ಟರೆ ಉಳಿದವರಿಗೆ ಆ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಇದನ್ನು ಕಾರ್ಯಗತಗೊಳಿಸಲು ಮೂರು ಹಂತದ ತಂಡಗಳಿರುತ್ತವೆ. ಮೊದಲ ಹಂತದ ತಂಡ ಪ್ರತಿದಿನ ಹೊಸ ಹೊಸ ಪರಿಕಲ್ಪನೆಗಳನ್ನು ಹುಟ್ಟು ಹಾಕುತ್ತದೆ. ಎರಡನೇ ಹಂತದ ತಂಡ ಆ ಪರಿಕಲ್ಪನೆಗೆ ಜೀವ ತುಂಬುತ್ತದೆ. ಮೂರನೇ ತಂಡ ಅದನ್ನು ವಿವಿಧ ತಾಣಗಳಿಗೆ ಅಪ್‌ಲೋಡ್‌ ಮಾಡಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತದೆ.

ರಾಜ್ಯ ಮಟ್ಟದಿಂದ ಗ್ರಾಮ ಮಟ್ಟದವರೆಗೆ ಮಾಹಿತಿಯನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಣ್ಣ ಸಣ್ಣ ತಂಡಗಳನ್ನು ರಚಿಸಲಾಗಿದೆ. ಈ ಗುಂಪುಗಳು ಸ್ಥಳೀಯ ವಿಷಯಗಳನ್ನು ಮುಂದಿಟ್ಟುಕೊಂಡು ತಂತ್ರ ಹೆಣೆಯುತ್ತವೆ. ಈ ಗುಂಪುಗಳಿಗೆ ಅವುಗಳ ಕ್ಷಮತೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಪಕ್ಷಗಳು ಹಣ ಸಂದಾಯ ಮಾಡುತ್ತವೆ. ಕೆಲವು ತಂಡಗಳು ತಿಂಗಳಿಗೆ ₹ 2 ಲಕ್ಷದಿಂದ ₹ 5 ಲಕ್ಷದವರೆಗೆ ಪ್ಯಾಕೇಜ್‌ ಪಡೆಯುತ್ತವೆ.

‘ಅಭ್ಯರ್ಥಿಗಳಿಗೆ ಫೇಸ್‌ಬುಕ್ ರಚಿಸಿಕೊಟ್ಟು ಅದನ್ನು ನಿರ್ವಹಿಸುವ ಕೆಲವು ಸಣ್ಣ ಪುಟ್ಟ ಕಂಪನಿಗಳು, ಹಣ ಮಾಡುವ ಉದ್ದೇಶದಿಂದ ಕೃತಕವಾಗಿ ಲೈಕ್‌ಗಳ ಸಂಖ್ಯೆ ಹೆಚ್ಚಿಸುವ ಕಸರತ್ತು ಮಾಡುತ್ತಿವೆ. ಅತಿ ಹೆಚ್ಚು ಲೈಕ್‌ಗಳನ್ನು ಕಂಡು ರಾಜಕಾರಣಿಗಳು ಖುಷಿಯಾಗಿ ಹೆಚ್ಚು ಹಣ ನೀಡುತ್ತಾರೆ. ಬಹುತೇಕ ಅಭ್ಯರ್ಥಿಗಳಿಗೆ ಆ್ಯಪ್‌ನ ಉಪಯುಕ್ತತೆ ಬಗ್ಗೆ ಅರಿವು ಇಲ್ಲ. ಇತ್ತೀಚೆಗೆ ಫೇಸ್‌ಬುಕ್‌ ಲೈವ್‌ ಹೆಚ್ಚು ಜನಪ್ರಿಯವಾಗಿದೆ. ರಾಜಕಾರಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದಕ್ಕೆ ಮೊರೆ ಹೋಗುತ್ತಿದ್ದಾರೆ’ ಎನ್ನುತ್ತಾರೆ ವಾಟ್ಸ್‌ ನ್ಯೂಸ್‌ ನೆಟ್‌ ಪ್ರೈವೇಟ್‌ ಲಿಮಿಟೆಡ್‌ನ ಪ್ರಶಾಂತ್‌.

ಚುನಾವಣೆಗಾಗಿ ಸಾಮಾಜಿಕ ಜಾಲತಾಣ ಮಾಧ್ಯಮ ತಂಡವನ್ನು ಕಟ್ಟಲು ಕಾಂಗ್ರೆಸ್‌ ಪಕ್ಷ ಆಸಕ್ತರಿಂದ ಆರ್ಜಿ ಆಹ್ವಾನಿಸಿ, ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಂಡಿತ್ತು. ಆದರೆ, ಬಿಜೆಪಿ ಕಳೆದ ಒಂದು ದಶಕದಷ್ಟು ಹಿಂದೆಯೇ ಸಾಮಾಜಿಕ ಜಾಲತಾಣ ಮಾಧ್ಯಮ ತಂಡವನ್ನು ಹುಟ್ಟುಹಾಕಿತ್ತು. 2014ರ ಚುನಾವಣೆಯಿಂದ ಅದು ಹೆಚ್ಚು ಆಕ್ರಮಣಕಾರಿಯಾಗಿದೆ. ಜೆಡಿಎಸ್‌ ಸುಮಾರು ಏಳೆಂಟು ತಿಂಗಳುಗಳಷ್ಟು ಹಿಂದೆಯೇ ನುರಿತ ಐ.ಟಿ ವೃತ್ತಿಪರರನ್ನು ಒಳಗೊಂಡ ‘ವಾರ್‌ ರೂಮ್‌’ ಸ್ಥಾಪಿಸಿದೆ. ಎಚ್‌.ಡಿ. ಕುಮಾರಸ್ವಾಮಿ ಅವರಿಗಾಗಿಯೇ ವಿಭಿನ್ನ ಆ್ಯಪ್‌ಗಳನ್ನು (ಆರೋಗ್ಯ, ಉದ್ಯೋಗ, ಎಚ್‌ಡಿಕೆ, ಜೆಡಿಎಸ್‌) ಸೃಷ್ಟಿಸಲಾಗಿದೆ. ಕುಮಾರಸ್ವಾಮಿಯವರ ಪ್ರತಿಯೊಂದು ಭಾಷಣ, ಪಾದಯಾತ್ರೆ ಮತ್ತಿತರ ಕಾರ್ಯಕ್ರಮಗಳನ್ನು ಫೇಸ್‌ಬುಕ್‌ನಲ್ಲಿ ಲೈವ್‌ ಮಾಡಲಾಗುತ್ತಿದೆ.

‘ಸಾಮಾಜಿಕ ಜಾಲತಾಣ ಮಾಧ್ಯಮ ತಂಡಗಳನ್ನು ಬಿಜೆಪಿ ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿದೆ. ನಮ್ಮಲ್ಲಿ ಹಣ ಕೊಟ್ಟು ಈ ಕಾರ್ಯ ಮಾಡುತ್ತಿಲ್ಲ. ಸಿದ್ಧಾಂತ ಬದ್ಧ ಯುವಕರು ಈ ಕಾರ್ಯದಲ್ಲಿ ಸ್ವಯಂಪ್ರೇರಣೆಯಿಂದ ತೊಡಗಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಯುವಕರು ದಿನದಲ್ಲಿ ಕೆಲವು ಗಂಟೆಗಳನ್ನು ಇದಕ್ಕಾಗಿ ಮೀಸಲಿಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುವಾಗ ವಿದೇಶಗಳಲ್ಲಿರುವ ಸಾಕಷ್ಟು ಸಂಖ್ಯೆಯ ಬಿಜೆಪಿ ಅಭಿಮಾನಿಗಳು ಬರಲಿದ್ದಾರೆ’ ಎನ್ನುತ್ತಾರೆ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಬಾಲಾಜಿ ಶ್ರೀನಿವಾಸ್‌.

‘ಬೆಂಗಳೂರಿನಲ್ಲಿ ಸಾಮಾಜಿಕ ಮಾಧ್ಯಮ ವಿಭಾಗದ ಅತಿದೊಡ್ಡ ಸಮಾವೇಶ ಮಾಡಿದ್ದೆವು. ಇದರಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಆ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಣ್ಣ ಮಟ್ಟದ ಐ.ಟಿ ಸಮಾವೇಶ ನಡೆಸಿದ್ದೇವೆ. ನಮ್ಮ ಕಾರ್ಯಪಡೆ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾಧ್ಯವಾಗಿದೆ’ ಎಂದು ಅವರು ವಿವರಿಸುತ್ತಾರೆ.

‘ನಾವು ಸಾಮಾಜಿಕ ಮಾಧ್ಯಮದ ಮೇಲೆ ಅತ್ಯಂತ ಕಡಿಮೆ ಖರ್ಚು ಮಾಡುತ್ತಿದ್ದೇವೆ. ಐ.ಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಪಕ್ಷದ ಪದಾಧಿಕಾರಿಗಳು ಎಂದೇ ಪರಿಗಣಿಸುತ್ತಿದ್ದೇವೆ. ಆದ್ದರಿಂದ ಅವರಿಗೆ ವೇತನ ಅಥವಾ ಸಂಭಾವನೆ ಕೊಡುವ ಪ್ರಶ್ನೆಯೇ ಇಲ್ಲ. ಎಲ್ಲರೂ ಪಕ್ಷದ ಪರವಾಗಿ ಸ್ವಯಂಪ್ರೇರಣೆಯಿಂದಲೇ ಕೆಲಸ ಮಾಡುತ್ತಿದ್ದಾರೆ’ ಎನ್ನುತ್ತಾರೆ ಕಾಂಗ್ರೆಸ್‌ ಮಾಧ್ಯಮ ವಿಭಾಗದ ಸಂಚಾಲಕ ಜಿ. ನಟರಾಜ್‌.

‘ಬೆಂಗಳೂರಿನಲ್ಲಿ ಜೆಡಿಎಸ್‌ಗೆ ಮೂರು ‘ವಾರ್ ರೂಮ್‌’ಗಳಿವೆ. ಸುಮಾರು 100 ಜನ ಇಲ್ಲಿ ಕೆಲಸ ಮಾಡುತ್ತಾರೆ. ಎಲ್ಲರೂ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತಿದ್ದಾರೆ. ಫೇಸ್‌ಬುಕ್‌ ಲೈವ್‌ನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗಿಂತಲೂ ಮುಂದಿದ್ದೇವೆ. ಸೋಷಿಯಲ್‌ ಮೀಡಿಯಾ ವಿಭಾಗದಲ್ಲಿ 7 ಸಾವಿರ ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ’ ಎನ್ನುತ್ತಾರೆ ಜೆಡಿಎಸ್‌ ಸಾಮಾಜಿಕ ಮಾಧ್ಯಮ ವಿಭಾಗದ ಕೋರ್‌ ಕಮಿಟಿ ಸದಸ್ಯ ಚಂದನ್‌.

ಲೋಕಸಭೆ ಚುನಾವಣೆಯಲ್ಲಿ ₹ 500 ಕೋಟಿ ಬಳಕೆ

2014ರ ಲೋಕಸಭಾ ಚುನಾವಣೆಯಲ್ಲಿ ದೇಶದ ವಿವಿಧ ರಾಜಕೀಯ ಪಕ್ಷಗಳು ಖರ್ಚು ಮಾಡಿದ ಒಟ್ಟು ಹಣ ₹ 500 ಕೋಟಿಗೂ ಹೆಚ್ಚು ಎಂದು ಡಿಜಿಟಲ್‌ ಮಾರ್ಕೆಟಿಂಗ್‌ ಬ್ಲಾಗ್‌ ಅಂದಾಜಿಸಿದೆ. ಈ ಚುನಾವಣೆಯಲ್ಲಿ ಜಾಹೀರಾತುಗಳು ಮತ್ತಿತರ ಪ್ರಚಾರಕ್ಕಾಗಿ ಮಾಡಿದ ಖರ್ಚು ₹ 4,000ದಿಂದ ₹ 5,000 ಕೋಟಿ. ರಾಜಕೀಯ ಪಕ್ಷಗಳು ತಮ್ಮ ಚುನಾವಣೆಯ ಒಟ್ಟು ವೆಚ್ಚದಲ್ಲಿ ಶೇ 30ರಷ್ಟು ಮೊತ್ತವನ್ನು ಪ್ರಚಾರಕ್ಕಾಗಿ ತೆಗೆದಿಟ್ಟಿದ್ದವು. ಅದರಲ್ಲಿ ಶೇ 15ರಷ್ಟು ಹಣ ಡಿಜಿಟಲ್‌ ಮಾಧ್ಯಮಕ್ಕಾಗಿ ಖರ್ಚು ಮಾಡಿದ್ದವು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಮಾತ್ರವಲ್ಲ, ಸಣ್ಣ ಪಕ್ಷಗಳೂ ತಮ್ಮ ಚುನಾವಣಾ ವೆಚ್ಚದಲ್ಲಿ ಒಂದಷ್ಟು ಭಾಗವನ್ನು ಡಿಜಿಟಲ್‌ ಮಾಧ್ಯಮಕ್ಕೆ ಮೀಸಲಿಡಲಾರಂಭಿಸಿವೆ.

ಪಕ್ಷವೊಂದರ ಸಾಮಾಜಿಕ ಜಾಲತಾಣ ನಿರ್ವಹಣಾ ಕೇಂದ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry