ಭೂಮಿಹಕ್ಕಿಗಾಗಿ ಹಸಲರ ಪಾದಯಾತ್ರೆ

7
ಬೆಳ್ಳೆಣ್ಣೆ ಗ್ರಾಮದಿಂದ ಸಾಗರದವರೆಗೆ 17 ಕಿಲೋ ಮೀಟರ್‌ ಕ್ರಮಿಸಿದ ಹೋರಾಟಗಾರರು

ಭೂಮಿಹಕ್ಕಿಗಾಗಿ ಹಸಲರ ಪಾದಯಾತ್ರೆ

Published:
Updated:
ಭೂಮಿಹಕ್ಕಿಗಾಗಿ ಹಸಲರ ಪಾದಯಾತ್ರೆ

ಸಾಗರ: ತಾಲ್ಲೂಕಿನ ಬೆಳ್ಳೆಣ್ಣೆ ಗ್ರಾಮದಲ್ಲಿ ಬುಡಕಟ್ಟು ಹಸಲರ ಜನಾಂಗದವರಿಗೆ ಭೂಮಿಯ ಹಕ್ಕು ನೀಡುವಂತೆ ಒತ್ತಾಯಿಸಿ ಜಿಲ್ಲಾ ಅರಣ್ಯಮೂಲ ಬುಡಕಟ್ಟು ಹಸಲರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಶುಕ್ರವಾರ ಬೆಳ್ಳೆಣ್ಣೆ ಗ್ರಾಮದಿಂದ ಸಾಗರದವರೆಗೆ 17 ಕಿ.ಮೀ. ಪಾದಯಾತ್ರೆ ನಡೆಸಿದರು. ನಂತರ, ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಸಭೆ ನಡೆಸಿದರು.

ಸಭೆಯಲ್ಲಿ ಹಸಲರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶಪ್ಪ ಎಂ.ಸಿ.ಕೌಲಿ ಮಾತನಾಡಿ, ‘ಬೆಳ್ಳೆಣ್ಣೆ ಗ್ರಾಮದ ಸ.ನಂ.1ರಲ್ಲಿರುವ 73 ಎಕರೆ ಭೂಮಿ ಇದೆ. ಈ ಪ್ರದೇಶದಲ್ಲಿ ಹಸಲರ ಜನಾಂಗದವರಿಗೆ ತಲಾ 5 ಎಕರೆ ಭೂಮಿಯನ್ನು ಶೀಘ್ರವಾಗಿ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

ಹಸಲರ ಜನಾಂಗದವರು ಲಿಂಗನಮಕ್ಕಿ, ಚಕ್ರ, ಸಾವೇಹಕ್ಲು, ಮಡೇನೂರು ಸೇರಿ ವಿವಿಧ ಅಣೆಕಟ್ಟುಗಳ ನಿರ್ಮಾಣದ ಸಂದರ್ಭದಲ್ಲಿ ಕೂಲಿಕಾರರಾಗಿ ಕೆಲಸ ಮಾಡಿರುವ ಜೊತೆಗೆ ನಿರಾಶ್ರಿತರೂ ಆಗಿದ್ದಾರೆ. ಹಲವು ದಶಕಗಳಿಂದ ತಾಲ್ಲೂಕಿನಲ್ಲಿ ಭೂರಹಿತರಾಗಿ ಬದುಕುತ್ತಿರುವ ಹಸಲರ ಜನಾಂಗಕ್ಕೆ ಭೂಮಿಯ ಹಕ್ಕು ನೀಡಲು ತಾಲ್ಲೂಕು ಆಡಳಿತ ಮನಸ್ಸು ಮಾಡಬೇಕು ಎಂದು ಆಗ್ರಹಿಸಿದರು.

ಬೆಳ್ಳೆಣ್ಣೆ ಗ್ರಾಮದಲ್ಲಿ ಹಸಲರ ಜನಾಂಗದವರು ಈ ಹಿಂದೆ ಹಲವು ಬಾರಿ ಭೂಮಿಯ ಹಕ್ಕಿಗಾಗಿ ಒತ್ತಾಯಿಸಿ ಧರಣಿ ನಡೆಸಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಬೇಡಿಕೆ ಈಡೇರಿಸುವತ್ತ ಗಮನ ಹರಿಸಿಲ್ಲ. ಈ ಕಾರಣದಿಂದ ಸರ್ಕಾರದ ಗಮನ ಸೆಳೆಯಲು ಈ ದಿನ ಪಾದಯಾತ್ರೆ ನಡೆಸಲಾಗಿದೆ. ಸರ್ಕಾರ ಇದಕ್ಕೂ ಬಗ್ಗದೇ ಇದ್ದರೆ ಅರೆಬೆತ್ತಲೆ ಮೆರವಣಿಗೆ ಸೇರಿದಂತೆ ಹಲವು ರೀತಿಯಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಹಸಲರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವೇಶ್ವರ ಮಾತನಾಡಿ, ‘ಹಸಲರ ಜನಾಂಗದವರಿಗೆ ಭೂಮಿಯ ಹಕ್ಕಿನ ಜೊತೆಗೆ ಒಳ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಪೌಷ್ಟಿಕ ಆಹಾರ ಯೋಜನೆಯು ಜನಾಂಗದ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದ ನಂತರವೂ ಬುಡಕಟ್ಟು ಸಮುದಾಯಕ್ಕೆ ಸೇರಿದವರಿಗೆ ಭೂಮಿಯ ಹಕ್ಕು ದೊರಕದೆ ಇರುವುದು ದುರದೃಷ್ಟಕರ. ಸರ್ಕಾರ ಹಸಲರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ರಾಜಶೇಖರ ಗಾಳಿಪುರ ಆಗ್ರಹಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಸನ್ನ ಕೆರೆಕೈ, ತಾಲ್ಲೂಕು ಪಂಚಾಯ್ತಿ ಸದಸ್ಯ ಕಲಸೆ ಚಂದ್ರಪ್ಪ, ಹಸಲರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ರಮೇಶ್‌ ಬಿ.ಜಿ.ಹೊಸಗದ್ದೆ, ನಾಗರಾಜ ವಾಟೆಮಕ್ಕಿ, ಮಂಜುನಾಥ ಹಿರೇಮನೆ, ಶಿವರಾಮ್‌ ಕೆ.ಸಿ. ರಾಮಮೂರ್ತಿ ಬೆಳ್ಳೆಣ್ಣೆ, ಗಣಪತಿ ಕೆ.ಟಿ. ಸುನೀತಾ, ಜಯಲಕ್ಷ್ಮಿ, ಮಂಜುಳಾ, ಶಿವಮ್ಮ, ಮಹೇಶ್‌ ಹಿರೇಕಸವಿ, ದ್ರೌಪದಿ ಉಳ್ಳೂರು, ಸುರೇಶ್ ಸೊರಬ, ಡಾ.ಷಣ್ಮುಖಪ್ಪ ಅವರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry