ಯಕ್ಷಗಾನದಲ್ಲಿ ಪ್ರಮದೆಯರ ಪರ್ವ

7

ಯಕ್ಷಗಾನದಲ್ಲಿ ಪ್ರಮದೆಯರ ಪರ್ವ

Published:
Updated:
ಯಕ್ಷಗಾನದಲ್ಲಿ ಪ್ರಮದೆಯರ ಪರ್ವ

‘ಯಕ್ಷಗಾನ’ ಹೆಸರು ಕೇಳಿದರೆ ಅದೇನೋ ರೋಮಾಂಚನ. ಗಂಟಲು ಉಬ್ಬಿಸಿಕೊಂಡು, ಉಸಿರು ಹೊರ ಹಾಕುತ್ತ ದನಿಏರಿಸಿ ಹಾಡುವ ಗಡಸು ಧ್ವನಿ ಕಿವಿಯಲ್ಲಿ ಮೊಳಗುತ್ತದೆ. ಚಂಡೆ, ಮದ್ದಳೆಯ ಸದ್ದು ಹುಚ್ಚೆದ್ದು ಕುಣಿಯುವಂತೆ ಪ್ರೇರೇಪಿಸುತ್ತದೆ. ಗಂಡು ಕಲೆಯೆಂದೇ ಪ್ರಸಿದ್ಧಿ ಪಡೆದಿರುವ ಯಕ್ಷಗಾನ ಒಂದು ಸುಂದರ, ಅಭೂತಪೂರ್ವ ಕಲೆಗಳಲ್ಲೊಂದು. ಅದರಲ್ಲೇ ಹೆಸರು ಮಾಡಿದ ಪುರುಷರ ಹೆಸರು ಮಾತ್ರ ನಾವು ಕೇಳುತ್ತೇವೆ. ಸ್ತ್ರೀವೇಷದಲ್ಲೂ ಹೆಣ್ಣನ್ನೇ ನಾಚಿಸುವಂತೆ ಪುರುಷರೇ ಪಾತ್ರಧಾರಿಗಳಾಗಿ ಭೇಷ್‌ ಎನಿಸಿಕೊಂಡವರಿಗೇನು ಕಡಿಮೆಯಿಲ್ಲ. ಸ್ತ್ರೀಪಾತ್ರಕ್ಕೆ ಸ್ತ್ರೀಯರೇ ವೇಷಕಟ್ಟಬಹುದಿತ್ತಲ್ಲ ಎಂದು ಕೇಳುವವರೂ ಇದ್ದಾರೆ. ಅಷ್ಟಕ್ಕೂ ಯಕ್ಷಗಾನ ಗಂಡು ಕಲೆ ಎಂದೇ ಪ್ರಸಿದ್ಧಿ. ಯಕ್ಷಗಾನದಲ್ಲಿ ಸ್ತ್ರೀಯರು ಕುಣಿಯುವುದೇ ಎಂದು ವ್ಯಂಗ್ಯದ ಮಾತು ಕಿವಿ ಮೇಲೆ ಬಿದ್ದರೂ ಅದು ಸಹಜವೇ. ಈ ಭಾವನೆಯೊಂದಿಗೆ ಸ್ತ್ರೀಯರು ಯಕ್ಷಕಲೆಯ ಮುಮ್ಮೇಳ, ಹಿಮ್ಮೇಳದಿಂದ ಹೊರಗುಳಿದು ಪ್ರೇಕ್ಷಕರ ಗ್ಯಾಲರಿಯಲ್ಲಿ ಮಾತ್ರ ಕಾಣಿಸಿಕೊಳ್ಳುವಂತಾಗಿತ್ತು. ಅದು ಆ ಕಾಲದಲ್ಲಿ.

ಈಗ ಕಾಲ ಬದಲಾಗಿದೆ. ಗಂಡುಕಲೆಯಲ್ಲಿ ಪ್ರಮದೆಯರ ಹೆಜ್ಜೆ ಸದ್ದು ಮಾಡುತ್ತಿದೆ. ಪುರುಷರನ್ನೂ ನಾಚಿಸುವಂತೆ ಮಹಿಳೆಯರು ಪುರುಷ ಪಾತ್ರಧಾರಿಗಳಾಗಿ ಧ್ವನಿ ಏರಿಸಿಕೊಂಡಿದ್ದಾರೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಹುಬ್ಬಳ್ಳಿಯೇನು? ರಾಜಧಾನಿ ಬೆಂಗಳೂರಿನಲ್ಲೂ ಮಹಿಳೆಯರ ಯಕ್ಷಗಾನ ಸದ್ದು ಮಾಡುತ್ತಿದೆ. 5 ವರ್ಷದಿಂದ 60ವರ್ಷ ವಯೋಮಾನದಲ್ಲಿರುವ ಸಾಕಷ್ಟು ಮಕ್ಕಳು, ಯುವತಿಯರು, ಮಹಿಳೆಯರು ಯಕ್ಷಕಲೆಯನ್ನು ನೆಚ್ಚಿಕೊಂಡು ವೇಷ ಕಟ್ಟಿದ್ದಾರೆಂದರೆ ಅದೊಂದು ಹೆಮ್ಮೆಯ ಸಂಗತಿಯೇ ಸರಿ. ಪ್ರಜ್ಞಾ ಮತ್ತಿಹಳ್ಳಿ, ಗೀತಾ ಹೆಗಡೆ, ಸುಮಾ ಗಡಿಗೆಹೊಳೆ, ನಿರ್ಮಲಾ ಹೆಗಡೆ, ಅರ್ಪಿತಾ ಹೆಗಡೆ, ಮಯೂರಿ ಉಪಾಧ್ಯಾಯ, ಮಾನಸಾ ಉಪಾಧ್ಯಾಯ, ಉಷಾ ಹೆಗಡೆ ಐನಕೈ, ಅಶ್ವಿನಿ ಕೊಂಡದಕುಳಿ, ಸೌಮ್ಯಾ ಗೋಟಗಾರ್‌, ಭಾಗ್ಯಾ, ರಮಾ ಶಾಸ್ತ್ರಿ, ಸುಕನ್ಯಾ ನಂಜುಂಡಯ್ಯ ಮೊದಲಾದವರು ಯಕ್ಷರಂಗದ ಮುಮ್ಮೇಳದಲ್ಲಿ ಪಳಗುತ್ತಿದ್ದರೆ, ಹಿಮ್ಮೇಳದಲ್ಲೂ ಕಮ್ಮಿ ಇಲ್ಲ ಎಂಬಂತೆ ಭಾಗವತಿಕೆ, ಚಂಡೆಯಲ್ಲಿ ಯುವತಿಯರು ಅಬ್ಬರಿಸುತ್ತಿರುವುದು ಖುಷಿಪಡುವ ಮಾತು. ಭಾಗವತಿಕೆಯಲ್ಲಿ ಕಾವ್ಯಶ್ರೀ ಅಜೇರು, ಅಮೃತಾ ಅಡಿಗ, ಭವ್ಯಶ್ರೀ ಮಂಡೇಕೋಲು, ಲೀಲಾವತಿ ಮಿಂಚುತ್ತಿದ್ದರೆ ಚಂಡೆಯಲ್ಲಿ ಅಪೂರ್ವಾ ಸುರತ್ಕಲ್‌ ಗಮನ ಸೆಳೆಯುತ್ತಿದ್ದಾರೆ. ಇನ್ನು ನಮ್ಮ ಬಾಲಪ್ರತಿಭೆ ತುಳಸಿ ಹೆಗಡೆ ಅಂಬೆಗಾಲಿಡುತ್ತಲೇ ಯಕ್ಷರಂಗಕ್ಕಿಳಿದು ಈಗ ರಾಜ್ಯದೆಲ್ಲೆಡೆ ಯಕ್ಷಪ್ರಯೋಗ ನೀಡುತ್ತಿರುವುದು ಹೆಮ್ಮೆಯ ಸಂಗತಿ.

ಈಗ್ಗೆ ಸುಮಾರು15 ವರ್ಷಕ್ಕಿಂತ ಹಿಂದಿನವರೆಗೂ ಯಕ್ಷಗಾನದಲ್ಲಿ ಹೆಣ್ಣುತಲೆಗಳನ್ನು ಹುಡುಕಬೇಕಿತ್ತು. ಅದಕ್ಕೂ ಹಿಂದೆಯೇ ಯಕ್ಷಗಾನದ ವೇಷ ಕಟ್ಟಿದವರು ಶಿರಸಿಯ ಪ್ರಜ್ಞಾ ಮತ್ತಿಹಳ್ಳಿ. ಆಗ ಅವರು ಆರನೇ ತರಗತಿ ಓದುತ್ತಿದ್ದರು. ಈಗ ಧಾರವಾಡದ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿ. ಯಕ್ಷಗಾನವನ್ನು ಪ್ರವೃತ್ತಿಯಾಗಿ ಸ್ವೀಕರಿಸಿದ್ದಾರೆ. 1979ರಲ್ಲಿ ಹೊಸ್ತೋಟ ಮಂಜುನಾಥ ಭಾಗವತರಲ್ಲಿ ತರಬೇತಿ ಪಡೆದ ಪ್ರಜ್ಞಾ ಮತ್ತಿಹಳ್ಳಿ ಹಾಗೂ ಉಳಿದ ಐವರು ಬಾಲೆಯರು 1980ರಲ್ಲಿ ಪ್ರಥಮ ಪ್ರಯೋಗದಲ್ಲಿ ‘ಏಕಲವ್ಯ’ ಪ್ರಸಂಗವಾಡಿದ್ದರಂತೆ. ಅದರಲ್ಲಿ ಅವರು ದ್ರೋಣನಾಗಿದ್ದರು. ಮುಂದಿನ ವರ್ಷ ಪರಿಸರದೊಂದಿಗೆ ಕೊಂಡಿ ಹೊಂದಿದ್ದ ಪ್ರಸಂಗ, ಮೂರನೇ ವರ್ಷ ಕಂಸ ವಧೆ ಹೀಗೆ ಸಾಗಿದ ಯಕ್ಷಲೋಕದ ಪಯಣ ಈಗಲೂ ಮುಂದುವರಿದಿದೆ. ಆಗ ಹೆಣ್ಣುಮಕ್ಕಳು ಹಾಗೂ ಗಂಡು ಮಕ್ಕಳು ಸೇರಿ ಪ್ರದರ್ಶನ ನೀಡುತ್ತಿದ್ದರು. ಅದಕ್ಕಾಗಿಯೇ ಶಿರಸಿಯಲ್ಲಿ ಸಹ್ಯಾದ್ರಿ ಮಕ್ಕಳ ಯಕ್ಷಗಾನ ಸಮೂಹ ಹುಟ್ಟುಪಡೆಯಿತು.

ರಾಜ್ಯದೆಲ್ಲೆಡೆ ವಿವಿಧ ಉತ್ಸವಗಳಲ್ಲಿ ಸಹ್ಯಾದ್ರಿ ಮಕ್ಕಳ ಯಕ್ಷಗಾನ ಸಮೂಹದ ಯಕ್ಷಗಾನ ಪ್ರದರ್ಶನ ಮನೆಮಾತಾಯಿತು. ಅಲ್ಲಿಂದಲೇ ಯಕ್ಷಕಲೆಯಲ್ಲಿ ಹೆಣ್ಣು ಹೆಜ್ಜೆ ಮೂಡತೊಡಗಿತು. ಇವರು ದೆಹಲಿ, ಆಂಧ್ರಪ್ರದೇಶ, ರಾಮಗುಂಡಮ್‌ನಲ್ಲೂ ‘ಕಂಸ ವಧೆ’ ಪ್ರಸಂಗದ ಮೂಲಕ ಕುಣಿದು ಕುಪ್ಪಳಿಸಿ ಬಂದರು. ಅದೆಷ್ಟು ಪ್ರಯೋಗಗಳು ನಡೆದವೆಂದರೆ ಅದು ಅವರಿಗೇ ಲೆಕ್ಕಕ್ಕಿಲ್ಲ. ಬರಬರುತ್ತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಯಕ್ಷಗಾನಕ್ಕೆ ಮೊದಲು ಪ್ರಜ್ಞಾ ಮತ್ತಿಹಳ್ಳಿಯವರು ಮುಖ್ಯ ಪಾತ್ರದಲ್ಲಿದ್ದ ಪ್ರಸಂಗಗಳು ಪ್ರದರ್ಶನ ಕಾಣಲಾರಂಭಿಸಿದವು. ‘ಆಗೆಲ್ಲ ಚಿಟ್ಟಾಣಿ ಅವರು ತಮ್ಮ ಗೆಜ್ಜೆಯನ್ನೇ ನಮಗೂ ಕೊಡುತ್ತಿದ್ದರು. ಅಷ್ಟೇ ಪ್ರೋತ್ಸಾಹಿಸುತ್ತಿದ್ದರು’ ಎಂದು ಪ್ರಜ್ಞಾ ಅವರು ನೆನಪಿಸಿಕೊಳ್ಳುತ್ತಾರೆ.

ಭಾಗವತಿಕೆಯಲ್ಲಿ ಕಾಳಿಂಗ ನಾವುಡರು ಮುಂಚೂಣಿಯಲ್ಲಿದ್ದ ಸಮಯ. ಉಡುಪಿಯ ರಾಜಾಂಗಣದಲ್ಲಿ ಯಕ್ಷಗಾನ ಪ್ರದರ್ಶನದ ವೇಳೆ ಕಾಳಿಂಗ ನಾವುಡರು ‘ನಾನು ಪದ್ಯ ಹೇಳ್ತೇನೆ, ಕುಣೀತಿಯಾ’ ಎಂದು ಕೇಳಿದರು. ಅವರು ಹೀಗೆ ಕೇಳಿದ್ದೇ ನಂಗೆ ಒಂಥರಾ ಥ್ರಿಲ್‌. ನನ್ನಷ್ಟಕ್ಕೇ ನಂಗೆ ಹೆಮ್ಮೆಯೂ ಅನಿಸಿತು.

10 ವರ್ಷ ಕಳೆಯುತ್ತಲೇ ಗಂಡು ಮಕ್ಕಳು ಮಾತು ಕೇಳದಂತಾದಾಗ ಕೇವಲ ಹೆಣ್ಣು ಮಕ್ಕಳದ್ದೇ ತಂಡ ಗಟ್ಟಿಯಾಯಿತು. ಹೆಣ್ಮಕ್ಕಳು ಯುವತಿಯರಾದರು. ಒಂಬತ್ತು ಮಂದಿ ಹೆಣ್ಮಕ್ಕಳಿದ್ದ ಸಹ್ಯಾದ್ರಿ ಮಕ್ಕಳ ಯಕ್ಷಗಾನ ಸಮೂಹ ಕೂಡ ಸಹ್ಯಾದ್ರಿ ಮಹಿಳಾ ಯಕ್ಷಗಾನ ಸಮೂಹ ಎಂದು ಬಡ್ತಿ ಪಡೆಯಿತು ಎಂದು ತಾವು ಸಾಗಿ ಬಂದ ಹಾದಿಯನ್ನು ಹಂಚಿಕೊಂಡರು ಪ್ರಜ್ಞಾ. ಗಂಡು ಕಲೆಯಲ್ಲಿ ನಾವು ಮಹಿಳೆಯರು ಪ್ರಶಸ್ತಿ ನಿರೀಕ್ಷಿಸೋದು ಕಷ್ಟ ಎನ್ನೋ ಅಭಿಪ್ರಾಯ ಅವರದ್ದು. ಆದರೆ 30 ವರ್ಷಗಳ ಯಕ್ಷ ಪಯಣದಲ್ಲಿ ಕಲಿತಿದ್ದು ಹೆಚ್ಚು. ಅದು ಧೈರ್ಯ, ಆತ್ಮವಿಶ್ವಾಸ, ಭಾಷಾಶುದ್ಧಿ, ಅಭಿವ್ಯಕ್ತಿ ಕಲೆಯನ್ನು ವೃದ್ಧಿಸಿದೆ ಅನ್ನೋದು ಅವರ ಅನುಭವದ ಮಾತು.

ಯಕ್ಷಗಾನ ಕಲೆಯಲ್ಲಿ ಕೇಳಿ ಬರುವ ಮತ್ತೊಂದು ಹೆಸರು ಗಡಿಗೆಹೊಳೆಯ ಕಾಶ್ಯಪ ಪ್ರತಿಷ್ಠಾನ ಮಹಿಳಾ ಯಕ್ಷಗಾನ. 11 ವರ್ಷಗಳ ಹಿಂದೆ ಶಿರಸಿ ಸಮೀಪದ ಗಡಿಗೆಹೊಳೆಯ ಸುಬ್ರಾಯ ಭಟ್ಟರಲ್ಲಿ ತರಬೇತಿ ಪಡೆದ ಈ ತಂಡದ ಮಹಿಳೆಯರು ರಾಜ್ಯದ ಸಾಕಷ್ಟು ಕಡೆ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಈ ತಂಡದಲ್ಲಿರುವ ಕಲಾವಿದೆಯರ ಮಕ್ಕಳು ಕಾಲೇಜಿಗೆ ಹೋಗುತ್ತಿದ್ದಾರೆ. ಮನೆ, ಮಕ್ಕಳು, ಸಂಸಾರವನ್ನು ಸರಿದೂಗಿಸಿಕೊಂಡು ಯಕ್ಷಕಲೆಯನ್ನು ಮುಂದುವರಿಸುತ್ತಿರುವವರು ಸುಮಾ ಹೆಗಡೆ ಹಾಗೂ ನಿರ್ಮಲಾ ಹೆಗಡೆ. ಇಬ್ಬರಿಗೂ ತಾಳಮದ್ದಲೆ ಯಕ್ಷಗಾನದ ಹಿನ್ನೆಲೆಯಿದೆ. ಆದರೂ ಮದುವೆ ಆಗುವವರೆಗೂ ಯಕ್ಷಕಲೆಗಾಗಿ ಗೆಜ್ಜೆ ಕಟ್ಟಿದವರಲ್ಲ. ತಾವು ಕಲಿತ ಭೈರುಂಬೆ ಹೈಸ್ಕೂಲಿನಲ್ಲಿ ಹಳೇವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಯಕ್ಷಗಾನ ಕುಣಿಯುವ ಎಂಬ ಒಂದು ನಿರ್ಧಾರ ಇಂದು ಯಕ್ಷಗಾನ ತಂಡದ ಹುಟ್ಟಿಗೆ ದಾರಿಯಾಗಿದೆ. ಆಗ ಇವರಿಗೆ 32ರ ವಯಸ್ಸು. ಈಗ 42.

ಸುಮಾ ಹೆಗಡೆ

ಚಿಕ್ಕಂದಿನಿಂದಲೇ ಯಕ್ಷಗಾನದ ವಾತಾವರಣದಲ್ಲಿ ಬೆಳೆದ ಸುಮಾ ಹೆಗಡೆಗೆ ಮುಂದೊಂದು ದಿನ ತಾನೇ ಯಕ್ಷಗಾನ ಕಲಾವಿದೆಯಾಗಬಹುದು ಎಂಬ ಊಹೆಯೂ ಇರಲಿಲ್ಲ. ಆದರೆ ಮದುವೆ, ಮಕ್ಕಳು ಆದಮೇಲೆ ಆಕಸ್ಮಿಕವಾಗಿ ಅವಕಾಶ ಒದಗಿ ಬಂತು. ಇವರೀಗ ಅಭಿನಯಿಸುವ ಪ್ರಸಂಗದಲ್ಲೆಲ್ಲ ಇವರದು ಪುರುಷಪಾತ್ರವೇ. ಭಸ್ಮಾಸುರ, ದುಷ್ಟಬುದ್ಧಿ, ಮಾಗಧ, ಭೀಮ, ಈಶ್ವರ, ಮಹಿಷಾಸುರ, ಭೀಷ್ಮ ಹೀಗೆ ಹತ್ತು ಹಲವು ಪಾತ್ರಗಳಿಗೆ ಜೀವತುಂಬಬಲ್ಲರು. 150ಕ್ಕೂ ಹೆಚ್ಚು ಪ್ರದರ್ಶನ ನೀಡಿ ಸೈ ಅನಿಸಿಕೊಂಡಿದ್ದಾರೆ. ಆಸಕ್ತಿ ಇರುವ ಅನೇಕ ಮಹಿಳೆಯರಿಗೆ ಕಲಿಸುತ್ತಿದ್ದಾರೆ.

ನಿರ್ಮಲಾ ಹೆಗಡೆ

ನಿರ್ಮಲಾ ಹೆಗಡೆ ಹೆಚ್ಚಾಗಿ ಮಹಿಳಾ ಪಾತ್ರಗಳನ್ನು ಹಾಕುವವರು. ವೇಷ ಕಟ್ಟಲು 3 ತಾಸು, ಬಿಚ್ಚಲು 1 ತಾಸು ಅನ್ನುವ ಅವರು, ಕಾಶ್ಯಪ ಪ್ರತಿಷ್ಠಾನ ಮಹಿಳಾ ಯಕ್ಷಗಾನ ತಂಡವಲ್ಲದೇ ಕಳೆದ ಎರಡು ಮೂರು ವರ್ಷಗಳಿಂದ ಬೆಂಗಳೂರಿನ ‘ಯಕ್ಷಸಿರಿ’ ತಂಡದೊಂದಿಗೂ ಪ್ರದರ್ಶನಕ್ಕೆ ಹೋಗುತ್ತಾರೆ. ಆಸಕ್ತಿಯಿದ್ದರೆ, ಮನೆಯಲ್ಲಿ ಪ್ರೋತ್ಸಾಹವಿದ್ದರೆ ಯಾವ ಕಲೆಯನ್ನು ಕಲಿಯುವುದು ಕಷ್ಟವಲ್ಲ ಎನ್ನುವ ನಿರ್ಮಲಾ ಹೆಗಡೆ ಯಕ್ಷಗಾನ ಕಲೆಯನ್ನು ನೆಚ್ಚಿಕೊಂಡ ನಂತರ ಪೌರಾಣಿಕ ಪ್ರಜ್ಞೆ ಬೆಳೆದಿದೆ. ಅಂತಃಶಕ್ತಿ ಹೆಚ್ಚಿದೆ ಎನ್ನುತ್ತಾರೆ. ಶಿರಸಿಯಲ್ಲಿ ಯಕ್ಷಗೆಜ್ಜೆ ಕಲಿಕಾ ಕೇಂದ್ರವನ್ನು ಆರಂಭಿಸಿದ್ದಾರೆ. ಒಂದು ಯಕ್ಷಗಾನ ಪ್ರಸಂಗವನ್ನೂ ಬರೆದಿದ್ದಾರೆ.

ಸುಮಾ ಹೆಗಡೆ ಮತ್ತು ನಿರ್ಮಲಾ ಹೆಗಡೆ

ಗೀತಾ ಹೆಗಡೆ

ಬೆಂಗಳೂರಿನಲ್ಲಿ ನೆಲೆಸಿರುವ ಗೀತಾ ಹೆಗಡೆ ಅವರ ಊರು ಶಿರಸಿ. ಅವರು ಯಕ್ಷಗಾನ ಕುಣಿಯಲು ಆರಂಭಿಸಿ 30 ವರ್ಷ ಕಳೆದಿದೆ. ಅವರಿಗೀಗ 50 ವರ್ಷ. ಮಗ ಎಂಜಿನಿಯರ್‌ ಓದುತ್ತಿದ್ದರೆ ಅಮ್ಮ ಯಕ್ಷಗಾನದ ಗೆಜ್ಜೆ ಕಟ್ಟಿಕೊಂಡು ರಾಜ್ಯ ಮಾತ್ರವಲ್ಲದೆ ದೆಹಲಿ, ತಮಿಳುನಾಡು, ಹೈದರಾಬಾದ್, ಕಾಶಿ ಇಲ್ಲೆಲ್ಲ ತಿರುಗಿಬಂದಿದ್ದಾರೆ. ‘ಸಿರಿಕಲಾ’ ಯಕ್ಷಗಾನ ತಂಡದಲ್ಲಿ ಇವರ ಕಲಾಸೇವೆ ಮುಂದುವರಿದಿದೆ.

ಬೆಂಗಳೂರಿನ ಸಿರಿಕಲಾ ಯಕ್ಷಗಾನದ ಮೂಲಕ ಅರ್ಪಿತಾ ಹೆಗಡೆ, ಅಶ್ವಿನಿ ಕೊಂಡದಕುಳಿ ಹೊಸ ಭಾಷ್ಯ ಬರೆಯುತ್ತಿದ್ದಾರೆ. ಮಂಟಪ ಉಪಾಧ್ಯಾಯ ಅವರು ಏಕವ್ಯಕ್ತಿ ಪ್ರದರ್ಶನ ನೀಡಿದಂತೆ, ಅರ್ಪಿತಾ ಹಾಗೂ ಅಶ್ವಿನಿ ಕೃಷ್ಣ–ರಾಧೆಯರಾಗಿ ಯಕ್ಷಗಾನ ಕಥಾ ಪ್ರಸಂಗ ನೀಡುತ್ತಿದ್ದಾರೆ. ಸಿದ್ದಾಪುರ ತಾಲ್ಲೂಕಿನ ದಂಟಕಲ್‌ನಲ್ಲಿ ತಾಳಮದ್ದಲೆ ತಂಡವು ಸಾಕಷ್ಟು ಪ್ರದರ್ಶನ ನೀಡಿದೆ.

ಪುಟ್ಟ ಬಾಲೆ ತುಳಸಿಯ ಗಟ್ಟಿ ಹೆಜ್ಜೆ

ಶಿರಸಿ ತಾಲ್ಲೂಕಿನ ಬೆಟ್ಟಕೊಪ್ಪದ ರಾಘವೇಂದ್ರ ಹೆಗಡೆ ಹಾಗೂ ಗಾಯತ್ರಿ ದಂಪತಿಯ ಮುದ್ದಿನ ಕೂಸು ತುಳಸಿ. ಅಮ್ಮನ ಉದರದಲ್ಲಿರುವಾಗಲೇ ಯಕ್ಷಗಾನದ ಹಾಡುಗಳನ್ನೇ ಕೇಳುತ್ತ ಈ ಪ್ರಪಂಚಕ್ಕೆ ಬಂದ ತುಳಸಿ, ಮೂರರ ಹರೆಯದಲ್ಲಿದ್ದಾಗಲೇ ಯಕ್ಷಗಾನಕ್ಕಾಗಿ ಬಣ್ಣ ಹಚ್ಚಿದಳು. ಅತಿ ಕಿರಿಯ ವಯಸ್ಸಿನಲ್ಲಿ ಯಕ್ಷವೇಷ ಕಟ್ಟಿದ ಹಿರಿಮೆ ತುಳಸಿಯದ್ದು. ಎಂಟು ಕೆ.ಜಿ ಭಾರದ ವೇಷ, ಕಿರೀಟ ಕಟ್ಟಿ ಪುಟ್ಟ ಪುಟ್ಟ ಪಾದಗಳಿಂದ ಗಟ್ಟಿ ಹೆಜ್ಜೆ ಇಡುತ್ತಿದ್ದರೆ ಪ್ರೇಕ್ಷಕರು ತದೇಕಚಿತ್ತದಿಂದ ನೋಡುವಂತೆ ಮಾಡುತ್ತಾಳೆ.

ತುಳಸಿಗೆ ಅವಳಮ್ಮನೇ ಯಕ್ಷಗಾನದ ಮೊದಲ ಗುರು. ಈಗ ಗುರು ಜಿ.ಎಸ್.ಭಟ್ಟ ಪಂಚಲಿಂಗ ಅವರಿಂದ ಪಡೆದುಕೊಳ್ಳುತ್ತಿದ್ದಾಳೆ.

ಐದನೇ ವರ್ಷಕ್ಕೇ ಯಕ್ಷಗಾನದಲ್ಲಿ ವಿಶ್ವಶಾಂತಿ ಸಂದೇಶ ರೂಪಕ ಪ್ರದರ್ಶಿಸಿದ ಹಿರಿಮೆ ಅವಳದ್ದು. ಒಂದು ತಾಸಿನ ಯಕ್ಷ ನೃತ್ಯ ರೂಪಕ ನೀಡುವ ಮೂಲಕ ವಿಶ್ವಶಾಂತಿಯ ಜಾಗೃತಿ ಮೂಡಿಸುತ್ತಿದ್ದಾಳೆ.

ಹಿಮ್ಮೇಳದಲ್ಲೂ ಸೈ

ಯಕ್ಷಗಾನ ಮುಮ್ಮೇಳದಲ್ಲಿ ಇವರಷ್ಟೇ ಅಲ್ಲ; ಇನ್ನು ಹಿಮ್ಮೇಳದಲ್ಲೂ ತಾವೇನು ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ ನಮ್ಮ ವನಿತೆಯರು. ಭಾಗವತಿಕೆಯಲ್ಲಿ ಕಾವ್ಯಶ್ರೀ ಅಜೇರು, ಅಮೃತಾ ಅಡಿಗ ಹಾಗೂ ಚಂಡೆಯಲ್ಲಿ ಅಪೂರ್ವಾ ಸುರತ್ಕಲ್‌ ದೇಶ, ವಿದೇಶ ಸುತ್ತಿ ಬಂದಿದ್ದಾರೆ.

ಶ್ರೀ ಗಜವದನಗೆ ಗಣಪಗೆ... ಆರತಿ ಎತ್ತಿರೆ ಎನ್ನುವ ಧ್ವನಿ ಪುರುಷ ಭಾಗವತರದ್ದಲ್ಲ; ಯುವತಿಯದ್ದು ಎಂಬುದನ್ನು ಮುಖ ನೋಡಿಯೇ ಅರಿಯಬೇಕು. ಯಾವ ಪುರುಷ ಭಾಗವತರಿಗೂ ಕಮ್ಮಿಯಿಲ್ಲ ಎಂಬಷ್ಟರ ಮಟ್ಟಿಗೆ ತಯಾರಾಗಿದ್ದಾರೆ ನಮ್ಮ ಕಾವ್ಯಶ್ರೀ ಅಜೇರು, ಅಮೃತಾ ಅಡಿಗ. ಇಬ್ಬರಿಗೂ ಯಕ್ಷಗಾನದ ಹಿನ್ನೆಲೆ ಇದೆ. ಮಾಂಬಾಡಿ ಸುಬ್ರಹ್ಮಣ್ಯ ಭಟ್‌ರಲ್ಲಿ ಭಾಗವತಿಕೆ ಕಲಿತಾಗ ಅವರಿಗೆ 11 ವರ್ಷ. ಕಲಿಯಲು ಆರಂಭಿಸಿ ಒಂದೇ ವರ್ಷಕ್ಕೆ ರಂಗಪ್ರವೇಶ ಮಾಡಿದರು. ಅಲ್ಲಿಂದ ಆರಂಭವಾದ ಅವರ ಭಾಗವತಿಕೆ 500ರ ಗಡಿ ದಾಟಿದೆ. ಹರೀಶ ಬಳಂತಿ ಮೊಗರು ಅವರು ಪ್ರಸಂಗ ಮಾಹಿತಿ ಗುರು. ದಕ್ಷಿಣ ಕನ್ನಡ, ಉತ್ತರ ಕನ್ನಡವಲ್ಲದೇ ಶಿವಮೊಗ್ಗ, ಮೈಸೂರು, ಹುಬ್ಬಳ್ಳಿ, ಹರಿದ್ವಾರ, ದೆಹಲಿ, ಚೆನ್ನೈ, ಮುಂಬೈ, ದುಬೈನಲ್ಲಿ ಅವರು ಹಾಡಿ ಬಂದಿದ್ದಾರೆ. ವಿನಾಯಕ ಮಕ್ಕಳ ಮೇಳದಲ್ಲಿ ಭಾಗವತಿಕೆ ಮಾಡುತ್ತಾರೆ.

ಪ್ರಜ್ಞಾ ಮತ್ತಿಹಳ್ಳಿ

ಅಮೃತಾ ಅಡಿಗ ಪಾಣಾಜೆ ಕೂಡ 11 ವರ್ಷಕ್ಕೆ ಯಕ್ಷಗಾನ ಹಾಡುಗಾರಿಕೆ ಆರಂಭಿಸಿದರು. ಮುಂಬೈ, ತಿರುಪತಿ, ಮೈಸೂರು, ಹುಬ್ಬಳ್ಳಿ ಮುಂತಾದೆಡೆಗಳಲ್ಲಿ ಭಾಗವತಿಕೆ ಮಾಡಿದ್ದಾರೆ. 300ರಷ್ಟು ಪ್ರದರ್ಶನಕ್ಕೆ ಹಾಡಿದ್ದಾರೆ.

ಯಕ್ಷಗಾನದಲ್ಲಿ ಪುರುಷರಿಗೆ ಮಾತ್ರ ಸೀಮಿತ ಎಂಬಂತಿರುವ ಚಂಡೆಯಲ್ಲಿ ಅಪೂರ್ವಾ ಸುರತ್ಕಲ್ ಭೇಷ್‌ ಎನಿಸಿಕೊಂಡಿದ್ದಾರೆ. ಚಂಡೆ ವಾದನಕ್ಕೆ ಮನಸೋತ ಅಪೂರ್ವಾ 5 ವರ್ಷವಿರುವಾಗಲೇ ಕಲಿಯಲು ಆರಂಭಿಸಿದರು. ಚಂಡೆಯಲ್ಲಿ ಈಗ 14 ವರ್ಷದ ಅನುಭವ ಅವರದ್ದು. ದೊಡ್ಡ ದೊಡ್ಡ ಕಲಾವಿದರಿಗೂ ಚಂಡೆ ಬಾರಿಸಿದ ಹೆಮ್ಮೆ ಇವರದು. ಸತತ 30 ನಿಮಿಷ ಕಾಲ ಚಂಡೆ ಬಾರಿಸುವ ಅಪೂರ್ವಾ, ರಾಜ್ಯ ಮಾತ್ರವಲ್ಲದೆ, ಮುಂಬೈ, ಚೆನ್ನೈ, ಪುಣೆ, ದುಬೈನಲ್ಲೂ ಚಂಡೆ ಬಾರಿಸಿ ಮೋಡಿ ಮಾಡಿ ಬಂದಿದ್ದಾರೆ.

ಶಿರಸಿಯ ಡಾ.ವಿಜಯನಳಿನಿ ರಮೇಶ ಅವರು ಯಕ್ಷಗಾನ ತಾಳಮದ್ದಲೆಯಲ್ಲಿ ಪಿಎಚ್.ಡಿ ಪಡೆದುಕೊಂಡಿದ್ದಾರೆ. ತಾಳಮದ್ದಲೆ–ಯಕ್ಷಗಾನ ಹಿನ್ನೆಲೆಯಲ್ಲಿ ಬರೆದ ‘ಮೌಖಿಕ ಕಲೆಯಲ್ಲಿ ಸಾಹಿತ್ಯ, ಸೌಂದರ್ಯ’ ಎಂಬ ಕೃತಿಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ವಾಸವಾಗಿರುವ ಪರಮೇಶ್ವರ ಹೆಗಡೆ ಐನ್‌ಬೈಲ್‌ ಅವರು, ಅಲ್ಲಿನ ಹೆಣ್ಣುಮಕ್ಕಳಲ್ಲಿ ಯಕ್ಷಕಲೆಯನ್ನು ಬಿತ್ತುತ್ತಿದ್ದಾರೆ. ಶಿವಮೊಗ್ಗದಲ್ಲಿ ಹೆಣ್ಣುಮಕ್ಕಳ ಯಕ್ಷಗಾನದ ಮೂರು ತಂಡಗಳಿವೆ. 60 ವರ್ಷ ವಯಸ್ಸಿನ ರಮಾಶಾಸ್ತ್ರಿ, ಸುಕನ್ಯಾ ನಂಜುಂಡಯ್ಯ, ಪ್ರತಿಮಾ ನಾಯಕ ಅವರು ವೇಷ ಕಟ್ಟಿ ಯಕ್ಷಗಾನ ಕುಣಿಯುತ್ತಿರುವುದು ಅಚ್ಚರಿಯೇ ಸರಿ. ಇವರಿಗೆಲ್ಲ ಸಂಭಾವನೆ ಮುಖ್ಯವಲ್ಲ. ಎಲ್ಲರೂ ಯಕ್ಷಗಾನ ಕಲೆಯ ಮೆಚ್ಚಿ ಹವ್ಯಾಸಕ್ಕಾಗಿ ಸಮಯ ನೀಡುತ್ತಿರುವುದು ವಿಶೇಷ.

ಪರಮೇಶ್ವರ ಹೆಗಡೆ ಆರಂಭಿಸಿರುವ ಯಕ್ಷಗಾನ ತರಬೇತಿಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಅವರಲ್ಲಿ 300ರಷ್ಟು ಹೆಣ್ಣುಮಕ್ಕಳೇ ಇದ್ದಾರೆ ಎಂದು ಪರಮೇಶ್ವರ ಹೆಗಡೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 12 ವರ್ಷಗಳಿಂದೀಚೆಗೆ ಯಕ್ಷಗಾನದಲ್ಲಿ ಮಹಿಳಾ ಪರ್ವ ಆರಂಭವಾಗುತ್ತಿರುವುದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry