ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂದರ್ಶಕರ ಚೀಟಿ ಕೊಟ್ಟು ಒಳಹೋಗಿದ್ದ ಆರೋಪಿ’

ಲೋಕಾಯುಕ್ತರ ಕೊಲೆಗೆ ಯತ್ನ ಪ್ರಕರಣ * ದಲಾಯತ್‌ ಪಳನಿ ದೂರಿನನ್ವಯ ಎಫ್‌ಐಆರ್‌ ದಾಖಲು
Last Updated 11 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಾಯುಕ್ತರನ್ನು ಭೇಟಿಯಾಗಲು ಬಂದಿದ್ದ ತೇಜ್‌ರಾಜ್‌ ಶರ್ಮಾ, ತನ್ನ ಹೆಸರು ಹಾಗೂ ವಿಳಾಸವನ್ನು ಸಂದರ್ಶಕರ ಚೀಟಿಯಲ್ಲಿ ಬರೆದುಕೊಟ್ಟಿದ್ದ. ಆ ಚೀಟಿ ನೋಡಿಯೇ ಲೋಕಾಯುಕ್ತರು, ಆತನನ್ನು ಕೋಣೆಯೊಳಗೆ ಕಳುಹಿಸುವಂತೆ ಹೇಳಿದ್ದರು’.

ಚಾಕು ಇರಿತದ ಘಟನೆಯನ್ನು ಪ್ರತ್ಯಕ್ಷವಾಗಿ ಕಂಡಿರುವ ಲೋಕಾಯುಕ್ತ ಕಚೇರಿಯ ದಲಾಯತ್‌ ಕೆ.ಪಳನಿ, ಪೊಲೀಸರಿಗೆ ನೀಡಿರುವ ದೂರಿನಲ್ಲಿ ಈ ವಿಷಯ ತಿಳಿಸಿದ್ದಾರೆ.

‘ಲೋಕಾಯುಕ್ತರನ್ನು ಭೇಟಿಯಾಗಲು ಯಾರೇ ಬಂದರೂ ಅವರ ಹೆಸರು ಹಾಗೂ ವಿಳಾಸವನ್ನು ಸಂದರ್ಶಕರ ಚೀಟಿಯಲ್ಲಿ ಬರೆದು ಲೋಕಾಯುಕ್ತರಿಗೆ ಕೊಡುವುದು ನನ್ನ ಕೆಲಸ. ಮಾ.7ರಂದು ಮಧ್ಯಾಹ್ನ 1 ಗಂಟೆಗೆ ತೇಜ್‌ರಾಜ್‌, ಲೋಕಾಯುಕ್ತರ ಭೇಟಿಗೆ ಬಂದಾಗಲೂ ಅದನ್ನೇ ಮಾಡಿದ್ದೆ. ಮಧ್ಯಾಹ್ನ 1.45ರ ಸುಮಾರಿಗೆ ಬೆಲ್‌ ಮಾಡಿದ್ದ ಲೋಕಾಯುಕ್ತರು, ಆತನನ್ನು ಒಳಗೆ ಕಳುಹಿಸುವಂತೆ ಹೇಳಿದ್ದರು.’

‘ಆತನನ್ನು ನಾನೇ ಒಳಗಡೆ ಕಳುಹಿಸಿದ್ದೆ. ಈ ವೇಳೆ ಆತನ ಕೈಯಲ್ಲಿ ಸಾಕಷ್ಟು ಕಾಗದ ಪತ್ರಗಳು ಇದ್ದವು. ಆತ ಒಳಗೆ ಹೋದ 2–3 ನಿಮಿಷದ ಬಳಿಕ ಲೋಕಾಯುಕ್ತರು ಕಿರುಚಿಕೊಂಡ ಶಬ್ದ ಕೇಳಿಸಿತು. ನಾನು ಬಾಗಿಲು ತೆರೆದು ಒಳಗಡೆ ಹೋದಾಗ, ಆರೋಪಿಯು ಲೋಕಾಯುಕ್ತರನ್ನು ಹಿಂದಿನಿಂದ ಹಿಡಿದುಕೊಂಡಿದ್ದ. ಅವನ ಬಲಗೈಯಲ್ಲಿ ಚಾಕು ಇತ್ತು. ಲೋಕಾಯುಕ್ತರ ಹೊಟ್ಟೆಯ ಎಡಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದರಿಂದ ಗಾಯವಾಗಿ ರಕ್ತ ಬರುತ್ತಿತ್ತು.’

‘ನನ್ನನ್ನು ನೋಡಿದ್ದ ಆರೋಪಿ, ಚಾಕು ತೋರಿಸಿ ಹತ್ತಿರ ಬರದಂತೆ ಹೆದರಿಸಿದ್ದ. ಕೂಡಲೇ ನಾನು, ಗನ್‌ಮ್ಯಾನ್ ಪುರುಷೋತ್ತಮ್‌, ಸುರೇಶ್‌ ಹಾಗೂ ಚಿದಂಬರ್ ಅವರನ್ನು ಕೂಗಿ ಕರೆದೆ. ಚಿದಂಬರ್‌ ಅವರು ಲೋಕಾಯುಕ್ತರನ್ನು ಆತನಿಂದ ಬಿಡಿಸಿದರು. ಪುರುಷೋತ್ತಮ್ ಹಾಗೂ ಸುರೇಶ್‌, ಆರೋಪಿಯನ್ನು ಹಿಡಿದುಕೊಂಡರು.’

‘ಲೋಕಾಯುಕ್ತರ ಹಣೆ, ಎಡಗೈ ಹಸ್ತ, ಕಿಬ್ಬೊಟ್ಟೆ ಹಾಗೂ ಎದೆ ಭಾಗದಿಂದ ರಕ್ತ ಬರುತ್ತಿತ್ತು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯಾವುದೋ ದುರುದ್ದೇಶದಿಂದಲೋ ಅಥವಾ ವೈಯಕ್ತಿಕ ದ್ವೇಷದಿಂದಲೋ ಲೋಕಾಯುಕ್ತರನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ತೇಜ್‌ರಾಜ್‌ ಶರ್ಮಾ ಪ್ರಯತ್ನಿಸಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಪಳನಿ ದೂರಿನಲ್ಲಿ ಬರೆದಿದ್ದಾರೆ.

ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿ, ‘ಪಳನಿ ಅವರು ಪ್ರತ್ಯಕ್ಷದರ್ಶಿಯಾಗಿರುವುದರಿಂದ ಅವರಿಂದಲೇ ದೂರು ಪಡೆದುಕೊಂಡಿದ್ದೇವೆ. ಅಕ್ರಮ ಬಂಧನ (ಐಪಿಸಿ 341), ಕೊಲೆ ಯತ್ನ (ಐಪಿಸಿ 307), ಕರ್ತವ್ಯಕ್ಕೆ ಅಡ್ಡಿ (ಐಪಿಸಿ 332 ಹಾಗೂ 353)  ಆರೋಪದಡಿ ತೇಜ್‌ರಾಜ್‌ ಶರ್ಮಾ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT