ಮುಂಬೈ ತಲುಪಿದ ರೈತರ ಮೆರವಣಿಗೆ

ಬುಧವಾರ, ಮಾರ್ಚ್ 27, 2019
22 °C

ಮುಂಬೈ ತಲುಪಿದ ರೈತರ ಮೆರವಣಿಗೆ

Published:
Updated:
ಮುಂಬೈ ತಲುಪಿದ ರೈತರ ಮೆರವಣಿಗೆ

ಮುಂಬೈ: ಕೆಂಪು ಟೋಪಿ ಧರಿಸಿ ಧ್ವಜ ಹಿಡಿದ ಸುಮಾರು 35 ಸಾವಿರ ರೈತರು ಭಾನುವಾರ ಮುಂಬೈ ನಗರವನ್ನು ಪ್ರವೇಶಿಸಿದರು. ರೈತರ ಮೆರವಣಿಗೆಯು ಕಳೆದ ಮಂಗಳವಾರ ನಾಸಿಕ್‌ನಿಂದ ಹೊರಟಿತ್ತು. ಸೋಮವಾರ (ಮಾರ್ಚ್ 12) ಮಹಾರಾಷ್ಟ್ರದ ವಿಧಾನಭವನ ಎದುರು ಭಾರಿ ಪ್ರತಿಭಟನೆ ನಡೆಸಲು ರೈತರು ಸಜ್ಜಾಗಿದ್ದಾರೆ.

180 ಕಿಲೋಮೀಟರ್ ದೂರದ ನಾಸಿಕ್–ಮುಂಬೈ ಮಾರ್ಗದ ಪ್ರಯಾಣ ಸುಲಭದ್ದಾಗಿರಲಿಲ್ಲ. ಉರಿವ ಸೂರ್ಯನನ್ನೂ ಲೆಕ್ಕಿಸದೆ ಅವರು ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಇವರ ಪೈಕಿ ಹಲವರ ಕಾಲುಗಳು ಊದಿಕೊಂಡಿದ್ದರೆ, ಮತ್ತೆ ಕೆಲವರ ಚಪ್ಪಲಿಗಳು ಕಿತ್ತು ಹೋಗಿದ್ದ ದೃಶ್ಯ ಕಂಡು ಬಂದಿತು. ರೈತರ ಗುಂಪಿನಲ್ಲಿ ಹಿರಿಯರು, ಬುಡಕಟ್ಟು ಮಹಿಳೆಯರು ಹಾಗೂ ಅಪಾರ ಸಂಖ್ಯೆಯ ಯುವಕರು ಇದ್ದಾರೆ.

ಮೆರವಣಿಗೆಯಲ್ಲಿ ತಮಟೆ ಹಾಗೂ ಬುಡಕಟ್ಟು ವಾದ್ಯ ತಾರಪಾವನ್ನು ಬಾರಿಸುತ್ತಾ, ತಮ್ಮ ವ್ಯಥೆಯನ್ನು ಹಾಡುತ್ತಾ ಹೆಜ್ಜೆ ಹಾಕಿದ ಇವರ ಸಂಖ್ಯೆ ಆರಂಭದಲ್ಲಿ 12 ಸಾವಿರ ಮಾತ್ರ ಇತ್ತು. ಆದರೆ ನಗರ ಪ್ರವೇಶಿಸುವಾಗ ಈ ಸಂಖ್ಯೆ 35 ಸಾವಿರಕ್ಕೆ ತಲುಪಿತ್ತು. ‘ಈ ಸಂಖ್ಯೆಯು ಸೋಮವಾರ ಮೂರು ಪಟ್ಟು ಹೆಚ್ಚಲಿದೆ’ ಎಂದು ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಅಜಿತ್ ನವಲೆ ಹೇಳಿದ್ದಾರೆ.

ಅಖಿಲ ಭಾರತೀಯ ಕಿಸಾನ್ ಸಭಾ, ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದ) ರೈತ ವಿಭಾಗದ ನೇತೃತ್ವದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

‘ಹಳ್ಳಿಗಳಿಗೆ ಹೋಗಿ ಅಲ್ಲಿ ಪರಿಸ್ಥಿತಿ ಏನಾಗಿದೆ ಎಂದು ಎಲ್ಲರೂ ತಿಳಿಯಬೇಕಿದೆ. ಇಡೀ ದೇಶದ ಗಮನ ಸೆಳೆಯುವ ಉದ್ದೇಶದಿಂದ ನಾವಿಲ್ಲಿ ಬಂದಿದ್ದೇವೆ’ ಎಂದು ನಾಸಿಕ್‌ನಿಂದ ಬಂದಿರುವ ಬುಡಕಟ್ಟು ಸಮುದಾಯ ಮಾಣಿಕ್ ಗವಿತ್ ಹೇಳಿದರು.

‘ಪರಿಸ್ಥಿತಿ ಚಿಂತಾಜನಕವಾಗಿದೆ. ಕಳೆದ 25 ವರ್ಷಗಳಲ್ಲಿ ಭಾರತದ ಸುಮಾರು 4 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕಿಸಾನ್‌ ಸಭಾದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ. ಅಶೋಕ್ ಧವಳೆ ಹೇಳಿದರು.

ಠಾಣೆ ಜಿಲ್ಲೆಯಿಂದ ಬಂದಿರುವ ಕುಮಾರ ರಾವುತ್ ಎಂಬ ರೈತ, ‘ದಿನಕ್ಕೆ 20ರಿಂದ 30 ಕಿಲೋಮೀಟರ್ ನಡೆದು ಬಂದಿದ್ದೇವೆ. ನಾವು 21ನೇ ಶತಮಾನದಲ್ಲಿದ್ದರೂ ವಿಷವರ್ತುಲದಲ್ಲಿ ಸಿಲುಕಿಕೊಂಡಿದ್ದೇವೆ. ಮಧ್ಯವರ್ತಿಗಳು, ಖಾಸಗಿ ಲೇವಾದೇವಿಗಾರರು ದೊಡ್ಡ ಅಡ್ಡಿಯಾಗಿದ್ದಾರೆ’ ಎಂದರು.

ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಗಿರೀಶ್ ಮಹಾಜನ್ ಅವರು ರೈತರನ್ನು ಭೇಟಿಯಾದರು.

ವಿಧಾನಭವನಕ್ಕೆ ಮುತ್ತಿಗೆ ಇಂದು

ನಾರಿಮನ್ ಪಾಯಿಂಟ್‌ನಲ್ಲಿರುವ ವಿಧಾನಭವನಕ್ಕೆ ಸೋಮವಾರ ಬೆಳಗ್ಗೆ ಮುತ್ತಿಗೆ ಹಾಕಲು ರೈತರು ಉದ್ದೇಶಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿರುವ ಕಾರಣ, ಅವರನ್ನು ಆಜಾದ್ ಮೈದಾನದಲ್ಲೇ ತಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್, ಎನ್‌ಸಿಪಿ, ಶಿವಸೇನಾ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.

ರೈತರ ಮೂರು ಬೇಡಿಕೆಗಳು

1. ಸಂಪೂರ್ಣ ಸಾಲ ಮನ್ನಾ

2. ಕನಿಷ್ಠ ಬೆಂಬಲ ಬೆಲೆ ನಿಗದಿ ಸಂಬಂಧ ಡಾ. ಸ್ವಾಮಿನಾಥನ್ ಸಮಿತಿ ನೀಡಿರುವ ವರದಿ ಅನುಷ್ಠಾನ

3. ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ

**

ಕೇಂದ್ರ ಹಾಗೂ ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳು ರೈತರಿಗೆ ಮೋಸ ಮಾಡಿವೆ

– ಡಾ. ಅಶೋಕ್ ಧವಳೆ, ಕಿಸಾನ್‌ ಸಭಾದ ಮಹಾರಾಷ್ಟ್ರ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry