ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾದಲ್ಲಿ 35 ಮಂದಿಗೆ ಮಂಗನ ಕಾಯಿಲೆ

Last Updated 12 ಮಾರ್ಚ್ 2018, 5:45 IST
ಅಕ್ಷರ ಗಾತ್ರ

ಪಣಜಿ: ಗೋವಾದಲ್ಲಿ ಕನಿಷ್ಠ 35 ಜನರಲ್ಲಿ ಕ್ಯಾಸನೂರು ಅರಣ್ಯ ಕಾಯಿಲೆ ಅಥವಾ ಮಂಗನ ಕಾಯಿಲೆ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕು ಪತ್ತೆಯಾದ ಎಲ್ಲ 35 ಮಂದಿ ಸತ್ತಾರಿ ತಾಲ್ಲೂಕಿನವರು. ಅವರೆಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಈ ವರ್ಷ ಈತನಕ ಈ ರೋಗದಿಂದಾಗಿ ಯಾರೂ ಸತ್ತಿಲ್ಲ ಎಂದು ವಾಲ್ಪೋಯಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ. 2015 ಮತ್ತು 2016ರಲ್ಲಿ ಕೂಡ ಸತ್ತಾರಿ ತಾಲ್ಲೂಕಿನಲ್ಲಿ ಈ ರೋಗ ಕಾಣಿಸಿಕೊಂಡಿತ್ತು. 2016ರಲ್ಲಿ ಮೂವರು ಮತ್ತು 2015ರಲ್ಲಿ ಒಬ್ಬರು ಮೃತಪಟ್ಟಿದ್ದರು.

ಸತ್ತಾರಿಯ ಸನ್‌ವೊರ್ಡೆಮ್‌ ಪಂಚಾಯತಿ ಪ‍್ರದೇಶದಲ್ಲಿಯೇ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಆ ಪ್ರದೇಶದಲ್ಲಿ ಲಸಿಕೆ ಅಭಿಯಾನವನ್ನು ಆರಂಭಿಸಲಾಗಿದೆ.

ಮಂಗಗಳ ಮೈ ಮೇಲೆ ಕಂಡು ಬರುವ ಒಂದು ರೀತಿಯ ಹೇನುಗಳು ಈ ರೋಗವನ್ನು ಹರಡುತ್ತವೆ. ಈ ರೋಗ ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 1957ರಲ್ಲಿ ಮೊದಲ ಬಾರಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನಲ್ಲಿ ಪತ್ತೆಯಾಯಿತು. ಹಾಗಾಗಿ ಈ ಕಾಯಿಲೆಗೆ ಕ್ಯಾಸನೂರು ಅರಣ್ಯ ಕಾಯಿಲೆ ಎಂದು ಹೆಸರಿಡಲಾಗಿದೆ.

ರೋಗ ಲಕ್ಷಣಗಳು: ಸೋಂಕಿನ ಆರಂಭದಲ್ಲಿ ಅತಿಯಾದ ಜ್ವರ ಮತ್ತು ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಬಳಿಕ ಮೂಗು, ಗಂಟಲು ಮತ್ತು ಒಸಡುಗಳಲ್ಲಿ ರಕ್ತಸ್ರಾವ ಉಂಟಾಗಬಹುದು. ಡೆಂಗಿ ಜ್ವರ ಬಂದಾಗ ಕಾಣಿಸಿಕೊಳ್ಳುವ ಲಕ್ಷಣಗಳು ಇರುತ್ತವೆ. ಮೂತ್ರಪಿಂಡ (ಕಿಡ್ನಿ), ಪಿತ್ತಜನಕಾಂಗ (ಲಿವರ್‌) ಮತ್ತು ಹೃದಯ ಸಂಬಂಧಿ ರೋಗ ಇದ್ದವರು ಮಂಗನ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚು.

2015ರಲ್ಲಿ ಸತ್ತಾರಿ ತಾಲ್ಲೂಕಿನ ಪಲ್ಲಿ ಗ್ರಾಮದಲ್ಲಿ ಹಲವು ಜನರಿಗೆ ಈ ಸೋಂಕು ತಗಲಿತ್ತು. ಬಳಿಕ, ಮಣಿಪಾಲ ಸೆಂಟರ್‌ ಫಾರ್‌ ವೈರಸ್‌ ರಿಸರ್ಚ್‌ ವಾಲ್ಪೋಯಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಂಕು ತಗಲಿದ ರಕ್ತ ಕಣಗಳ ಪರೀಕ್ಷಾ ಕೇಂದ್ರ ತೆರೆಯಿತು. 2015ರ ಡಿಸೆಂಬರ್‌ ಮತ್ತು 2016ರ ಮೇ ಅವಧಿಯಲ್ಲಿ 807 ಜನರನ್ನು ಇಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರ ಪೈಕಿ 277 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಕಳೆದ ವರ್ಷ 88 ಜನರಲ್ಲಿ ಈ ರೋಗ ಕಾಣಿಸಿಕೊಂಡಿತ್ತು.

ಈ ರೋಗ ಬಂದರೆ ಮಂಗಗಳು ಬದುಕುಳಿಯುವ ಸಾಧ್ಯತೆ ಬಹಳ ಕಮ್ಮಿ. ರೋಗ ಬಂದ ಮಂಗ ಸತ್ತ ಕೂಡಲೇ ಅದರ ದೇಹದಲ್ಲಿರುವ ಹೇನುಗಳು ಕೆಳಗೆ ಬೀಳುತ್ತವೆ. ಹೀಗೆ ಕೆಳಗೆ ಬಿದ್ದ ಹೇನುಗಳೇ ಸೋಂಕನ್ನು ಹರಡುತ್ತವೆ. ಮಂಗ ಸತ್ತು ಬಿದ್ದ 50 ಮೀಟರ್‌ ಸುತ್ತಳತೆಯ ವರೆಗೆ ಈ ಹೇನುಗಳು ಸಂಚರಿಸುತ್ತವೆ. ಹಾಗಾಗಿ ಕಾಡಿಗೆ ಹೋಗುವ ಜನರಿಗೆ ಈ ಸೋಂಕು ಬರುವ ತಗಲುವ ಅಪಾಯ ಹೆಚ್ಚು.

ಕಳೆದ ಡಿಸೆಂಬರ್‌ನಲ್ಲಿ ಕರ್ನಾಟಕದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. 2016–17ರಲ್ಲಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ 48 ಜನರಿಗೆ ರೋಗ ಬಂದಿತ್ತು. ನಾಲ್ವರು ಮೃತಪಟ್ಟಿದ್ದರು.

ಮಂಗನ ಕಾಯಿಲೆಗೆ ಕಾರಣವಾಗುವ ವೈರಸ್‌ ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ರೋಗದ ಅಪಾಯ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT