371(ಜೆ) ವಿಶೇಷ ಮೀಸಲಾತಿ ಗೊತ್ತಿಲ್ಲ!

7
ಸಂವಾದ ಸಭೆಯಲ್ಲಿ ವಿದ್ಯಾರ್ಥಿಗಳ ಉತ್ತರಕ್ಕೆ ಸಚಿವ ಲಾಡ್‌ ಬೇಸರ

371(ಜೆ) ವಿಶೇಷ ಮೀಸಲಾತಿ ಗೊತ್ತಿಲ್ಲ!

Published:
Updated:

ಬಳ್ಳಾರಿ: ‘371 (ಜೆ) ಎಂದರೆ ಏನು? ಅದರಿಂದ ಹೈದರಾಬಾದ್‌ ಕರ್ನಾಟಕ ಪ್ರದೇಶದ ಜನರಿಗೆ ದೊರಕುವ ಸೌಲಭ್ಯಗಳೇನು?’ –ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಈ ಪ್ರಶ್ನೆಯನ್ನು ಕೇಳಿ ಉತ್ತರಕ್ಕಾಗಿ ಕಾದರು. ಅವರಿಗೆ ಪ್ರಶ್ನೆ ಕೇಳಲು ವೇದಿಕೆಯೇರಿದ್ದ ವಿದ್ಯಾರ್ಥಿ ಮೌನವಾದರು. ನಂತರ ಅದೇ ಪ್ರಶ್ನೆಯನ್ನೂ ಸಚಿವರು ಸಭೆಯಲ್ಲಿದ್ದ ವಿದ್ಯಾರ್ಥಿಗಳಿಗೂ ಕೇಳಿದರು. ಅವರಿಂದಲೂ ನಿರೀಕ್ಷಿತ ಉತ್ತರ ಬರಲಿಲ್ಲ.

ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಎನ್‌ಎಸ್‌ಯುಐ ಏರ್ಪಡಿಸಿದ್ದ ಸಂವಾದ ಸಭೆಯ ಮುಖ್ಯಾಂಶಗಳಲ್ಲಿ ಇದು ಎದ್ದು ಕಂಡಿತ್ತು.

‘ವಿಶೇಷ ಮೀಸಲಾತಿ ಕುರಿತು ವಿದ್ಯಾರ್ಥಿಗಳಲ್ಲಿ ಮಾಹಿತಿಯೇ ಇಲ್ಲದಿರುವುದು ಗಾಭರಿ ಮೂಡಿಸುವ ವಿಷಯ. ಹೋರಾಟ ನಡೆಸಿ ಈ ಮೀಸಲಾತಿಯನ್ನು ಪಡೆದಿದ್ದೇವೆ. ಆದರೆ ಅದರ ಫಲಾನುಭವಿಗಳಾದ ನಿಮಗೇ ಈ ಬಗ್ಗೆ ಗೊತ್ತಿಲ್ಲ ಎಂಬುದು ಬೇಸರದ ಸಂಗತಿ’ ಎಂದು ಸಚಿವರು ಹೇಳಿದರು.

‘ಸರ್ಕಾರ ಮುಸ್ಲಿಮರಿಗೆ ಮಾತ್ರ ಯೋಜನೆ ರೂಪಿಸುತ್ತಿದೆ ಏಕೆ? ಎಂದು ಪ್ರಶ್ನಿಸಿದ ವಿದ್ಯಾರ್ಥಿ ರಕ್ಷಿತ್ ಕಡೆಗೂ ಸಚಿವರು ಅಸಮಾಧಾನದ ನೋಟ ಹರಿಸಿದರು.

‘ಸಂವಿಧಾನಯದಡಿಯಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತದೆ. ಅಲ್ಪ ಸಂಖ್ಯಾತರೆಂದರೆ ಮುಸ್ಲಿಮರಷ್ಟೇ ಅಲ್ಲ. ಕ್ರೈಸ್ತರು, ಜೈನರು, ಪಾರ್ಸಿಗಳೂ ಇದ್ದಾರೆ. ನಿಮ್ಮ ಯೋಚನಾ ಲಹರಿಯನ್ನು ಬದಲಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಕಕ್ಕಾಬಿಕ್ಕಿ: ಇದೇ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬರು, ‘ಪಕ್ಷಗಳು ಜಾತಿ ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡುತ್ತಿವೆ. ಬಿಜೆಪಿ ಹಿಂದೂಗಳ ಪರವಿದ್ದರೆ, ಕಾಂಗ್ರೆಸ್‌ ಮುಸ್ಲಿಮರ ಪರವಿದೆ ಏಕೆ’ ಎಂದು ಕೇಳಿದರು.

ಈ ಪ್ರಶ್ನೆಯನ್ನು ನಿರೀಕ್ಷಿಸಿದಂತೆ ಕಾಣದ ಸಚಿವರು ಒಂದು ಕ್ಷಣ ಗೊಂದಲಕ್ಕೆ ಈಡಾದಂತೆ ಕಂಡರು. ನಂತರ ಉತ್ತರಿಸಿದ ಅವರು, ‘ಜಾತ್ಯತೀತ ನಿಲುವುಳ್ಳ ಪಕ್ಷ ನಮ್ಮದು’ಎಂದು ಉತ್ತರಿಸಿದರು.

ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿ ಸುರೇಶ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೊದಲ ಹಂತದಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ಟಾಪ್‌ ನೀಡಲಾಗಿತ್ತು. ಈಗ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು’ ಎಂದರು.

‘ಜಿಂದಾಲ್ ಕಾರ್ಖಾನೆಯಲ್ಲಿ ಬೇರೆ ರಾಜ್ಯದವರಿಗೆ ಮಣೆ ಹಾಕಲಾಗುತ್ತಿದೆ. ಹೀಗಾದರೆ ಸ್ಥಳೀಯರು ಕೆಲಸ ಹುಡುಕಿಕೊಂಡು ಎಲ್ಲಿಗೆ ಹೋಗಬೇಉ’ ಎಂದು ವಿದ್ಯಾರ್ಥಿನಿ ರೇಖಾ ಕೇಳಿದರು.

‘ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶವನ್ನು ನೀಡಲಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಅನ್ಯ ರಾಜ್ಯಗಳಲ್ಲಿ ಉದ್ಯೋಗ ಪಡೆಯ

ಬೇಕೆನ್ನುವ ಸ್ಪರ್ಧಾತ್ಮಕ ಮನೋಭಾವವನ್ನು ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಇದ್ದರೆ ಸಾಕು ಎಂಬ ಸೀಮಿತ ಭಾವನೆಯಲ್ಲಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಾದ ಪವನ್‌ಕುಮಾರ್‌, ಸುದರ್ಶನ್‌ ಸಂವಾದದಲ್ಲಿ ಪಾಲ್ಗೊಂಡರು. ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಅಲ್ಲಂ ಪ್ರಶಾಂತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry