ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌, ಬಿಜೆಪಿ ವಿರುದ್ಧ ಹರಿಹಾಯ್ದ ದೇವೇಗೌಡ

ಬೆಳಗಾವಿಯ ಸಿ.ಪಿ.ಎಡ್ ಮೈದಾನದಲ್ಲಿ ನಡೆದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ
Last Updated 13 ಮಾರ್ಚ್ 2018, 6:50 IST
ಅಕ್ಷರ ಗಾತ್ರ

ಬೆಳಗಾವಿ: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ವಿರುದ್ಧ ಹರಿಹಾಯ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ‘ರಾಜ್ಯದ ಹಿತಾಸಕ್ತಿ ಕಾಪಾಡಲು ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಬೆಂಬಲ ನೀಡಬೇಕು’ ಎಂದು ಜನರಲ್ಲಿ ಮನವಿ ಮಾಡಿದರು.

ಇಲ್ಲಿನ ಸಿ.ಪಿ.ಎಡ್‌ ಮೈದಾನದಲ್ಲಿ ಸೋಮವಾರ ಪಕ್ಷ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕಕ್ಕೆ ಅವಶ್ಯಕವಾಗಿರುವ ಮಹದಾಯಿ ಯೋಜನೆ ಅನುಷ್ಠಾನಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಮಾಡಿದೆ. ಆದರೆ, ಅವರು ಏನನ್ನೂ ಮಾತನಾಡದೇ ಮೌನವಾಗಿ ಬಿಟ್ಟರು. ಬಿಜೆಪಿ ಪ್ರತಿನಿಧಿಸುವ 17 ಜನ ಸಂಸದರು ರಾಜ್ಯದಲ್ಲಿದ್ದರೂ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

‘ಪ್ರತಿವರ್ಷ ಗೋಲಿಬಾರ್‌, ಲಾಠಿಚಾರ್ಜ್‌ ನಡೆಯುತ್ತಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದವನ್ನು ಮುಖ್ಯಮಂತ್ರಿಯಾಗಿದ್ದಾಗ ನಾನು ಬಗೆಹರಿಸಿದೆ’. ಆದರೆ, ಇಂದು ಮಂಗಳೂರು ಏನಾಗಿದೆ? ಕೋಮು ದ್ವೇಷ ಹೊತ್ತಿ ಉರಿಯುತ್ತಿದೆ. ಮುಸ್ಲಿಮರು, ಕ್ರೈಸ್ತರು ನಮ್ಮ ಅಣ್ಣತಮ್ಮಂದಿರಲ್ಲವೇ? ನಾವೆಲ್ಲರೂ ಒಂದೇ ಅಲ್ಲವೇ? ಅವರನ್ನು ಎಲ್ಲಿಗೆ ಓಡಿಸಬೇಕೆಂದಿರುವರಿ? ಎಂದು ಹರಿಹಾಯ್ದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಮಂತ್ರಿಯಾದಾಗ ರಾಜ್ಯದ ಬೊಕ್ಕಸ ಖಾಲಿಯಾಗಿತ್ತು. ನೌಕರರ ವೇತನ ಪಾವತಿ ಮಾಡಲು ₹ 120 ಕೋಟಿ ಸಾಲ ಮಾಡಲಾಗಿತ್ತು. ಅವರಿಗೆ ಜನರ ಹಣದ ಮಹತ್ವ ಗೊತ್ತಿಲ್ಲ. ಈಗ ಟಿ.ವಿ, ಪತ್ರಿಕೆಗಳಿಗೆ ಕೋಟ್ಯಂತರ ರೂಪಾಯಿ ಮೊತ್ತದ ಜಾಹೀರಾತು ನೀಡುತ್ತಿದ್ದಾರೆ. ನೀವು ನಿಜವಾಗಿಯೂ ಕೆಲಸ ಮಾಡಿದ್ದಾರೆ ಜನರಿಗೆ ಗೊತ್ತಾಗುತ್ತದೆ. ಜಾಹೀರಾತು ನೀಡುವ ಅವಶ್ಯಕತೆ ಏನಿದೆ ಎಂದು’ ಪ್ರಶ್ನಿಸಿದರು.

ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಲು ಸಾಲ ಮನ್ನಾ ಮಾಡಲು 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಕುಮಾರ
ಸ್ವಾಮಿ ಮುಂದಾದಾಗ ಅಂದು ಉಪಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ಅವಕಾಶ ನೀಡಲಿಲ್ಲ. ಈ ಸಲ ಸ್ವಂತ ಬಲದ ಮೇಲೆ ಸರ್ಕಾರ ರಚನೆಯಾದರೆ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಲಿದ್ದಾರೆ ಎಂದು ಹೇಳಿದರು.

‘ಕುಮಾರಸ್ವಾಮಿ ಅವರ ಆರೋಗ್ಯ ಸರಿಯಿಲ್ಲ. ಎರಡು ಸಲ ಹೃದಯ ಸಂಬಂಧಿ ಶಸ್ತ್ರಚಕಿತ್ಸೆ ಆಗಿದೆ. ಪ್ರತಿದಿನ 100 ಸಭೆ ಮಾಡುತ್ತಾರೆ. ನೂರಾರು ಜನರನ್ನು ಭೇಟಿ ಮಾಡುತ್ತಾರೆ. ಆದರೆ, ಹಠ ಇದೆ. ರೈತರ ಸಾಲ ಮನ್ನಾ ಮಾಡುವ ಹಠವಿದೆ’ ಎಂದರು.

ನಾನೇ ಬೆಂಬಲ ಕೇಳಿದ್ದೆ: ‘ಬಿಜೆಪಿ,ಕಾಂಗ್ರೆಸ್‌ ಸೋಲಿಸುವ ಉದ್ದೇಶದಿಂದಲೇ ಬಿಎಸ್ಪಿ ನಾಯಕಿ ಮಾಯಾವತಿ ಅವರ ಬೆಂಬಲವನ್ನು ಕೋರಿದೆ.
ಯಾವುದೇ ಕಾರಣಕ್ಕೂ ಬಿಜೆಪಿ, ಕಾಂಗ್ರೆಸ್ ಸರ್ಕಾರ ರಚನೆಯಾಗ ಬಾರದೆಂದು ಮಾಯಾವತಿ ಅವರು ಕೂಡ ಹೇಳಿದ್ದಾರೆ. ಈ ಸಲ ಬಿಎಸ್ಪಿ ಹಾಗೂ ಇತರ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಚುನಾವಣೆ ಎದುರಿಸಲಿದ್ದೇವೆ’ ಎಂದು ನುಡಿದರು.

ಜೆಡಿಎಸ್‌ ಹಿರಿಯ ಮುಖಂಡ ಪಿ.ಜಿ.ಆರ್‌. ಸಿಂಧ್ಯ ಮಾತನಾಡಿ, ‘ಜನತಾದಳವು ಒಳ್ಳೊಳ್ಳೆಯ ನಾಯಕರನ್ನು ತಯಾರಿಸುವ ಕಾರ್ಖಾನೆಯಂತಾಗಿದೆ. ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ, ಎ.ಬಿ. ಪಾಟೀಲ, ಸೇರಿದಂತೆ ಹಲವು ನಾಯಕರು ಮೂಲತಃ ನಮ್ಮಿಂದ ಕಾಂಗ್ರೆಸ್‌ ಕಡೆಗೆ ಹೋಗಿದ್ದಾರೆ’ ಎಂದರು.

ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಎನ್‌.ಗೋಪಿನಾಥ ಮಾತನಾಡಿ, ‘ಬೆಳಗಾವಿಯ ಚಿಕ್ಕೋಡಿ, ನಿಪ್ಪಾಣಿ ಹಾಗೂ ರಾಯಬಾಗ ಮೂರು ಕ್ಷೇತ್ರಗಳನ್ನು ಜೆಡಿಎಸ್‌ ನಮಗೆ ಬಿಟ್ಟುಕೊಟ್ಟಿದೆ. ನಮ್ಮೊಂದಿಗೆ ಜೆಡಿಎಸ್‌ ಕಾರ್ಯಕರ್ತರು ಕೂಡ ಕೈಜೋಡಿಸಿ, ಪ್ರಚಾರ ನಡೆಸಲಿದ್ದಾರೆ’ ಎಂದರು.

ಶೋಷಿತರ ಪರವಾಗಿ ಹೋರಾಟ ಮಾಡಿದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಕೊಡಬಾರದ ಕಷ್ಟಗಳನ್ನೆಲ್ಲ ಕೊಟ್ಟಿದೆ. ಮೀಸಲಾತಿ ಜಾರಿಯನ್ನು ತಡೆಗಟ್ಟಲು ಸಾಕಷ್ಟು ಪ್ರಯತ್ನ ಪಟ್ಟಿತು. ದಲಿತರ ಅಭಿವೃದ್ಧಿಯನ್ನು ಯಾವತ್ತೂ ಕಾಂಗ್ರೆಸ್‌ ಬಯಸುವುದಿಲ್ಲ ಎಂದು ಆರೋಪಿಸಿದರು.

ನಾಸಿರ ಬಾಗವಾನ್‌ ಸೇರ್ಪಡೆ: ದೇವೇಗೌಡರ ಸಮ್ಮುಖದಲ್ಲಿ ಖಾನಾಪುರದ ಮುಖಂಡ ನಾಸಿರ ಬಾಗವಾನ್‌ ಪಕ್ಷಕ್ಕೆ ಮರುಸೇರ್ಪಡೆಯಾದರು. ಅವರೊಂದಿಗೆ ಇನ್ನು ಹಲವರು ಪಕ್ಷ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT