‘ಮತದಾರ ಆಮಿಷಕ್ಕೆ ಬಲಿಯಾಗಬಾರದು’

ಬುಧವಾರ, ಮಾರ್ಚ್ 27, 2019
22 °C
‘ಜಾನಪದ ಗೀತಗಾಯನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ’

‘ಮತದಾರ ಆಮಿಷಕ್ಕೆ ಬಲಿಯಾಗಬಾರದು’

Published:
Updated:
‘ಮತದಾರ ಆಮಿಷಕ್ಕೆ ಬಲಿಯಾಗಬಾರದು’

ಚನ್ನಪಟ್ಟಣ: ‘ರಾಜಕೀಯದವರ ಬಯಲಾಟಕ್ಕೆ ಮತದಾರರು ಮರುಳಾಗಬಾರದು. ಮತದಾರ ಜಾಗೃತನಾಗಬೇಕು. ಆಮಿಷಕ್ಕೆ ಒಳಗಾಗದೆ, ನಿಜದಲ್ಲಿ ಜನಸೇವೆ ಮಾಡುವ ವ್ಯಕ್ತಿಯನ್ನು ಆರಿಸಿಕೊಳ್ಳಬೇಕು’ ಎಂದು ರಾಜ್ಯ ಹೈಕೋರ್ಟ್‌ ವಕೀಲ ಎಂ.ಎಸ್.ಮುಕರಮ್ ಕಿವಿಮಾತು ಹೇಳಿದರು.

ಪಟ್ಟಣದ ಗಾಂಧಿ ಭವನದಲ್ಲಿ ಅಂಬೇಡ್ಕರ್ ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ‘ಜಾನಪದ ಗೀತಗಾಯನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ’ವನ್ನು ಉದ್ಘಾಟಿಸಿ ಮಾತನಾಡಿದರು.

‘ಪ್ರತಿಯೊಬ್ಬರೂ ಜಾತಿ ಮತ ಭೇದ ತೊರೆದು ಮಾನವರಾಗಿ ಬಾಳಿದಾಗಲೇ ನಮ್ಮದು ಜಾತ್ಯತೀತ ರಾಷ್ಟ್ರವಾಗಲು ಸಾಧ್ಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ರೈತಸಂಘದ ಮುಖಂಡ ಎಚ್.ಕೆ ಕೃಷ್ಣಪ್ಪ ಮಾತನಾಡಿ, ಜನಪದ, ರಂಗ ಕಲೆ, ಸೋಬಾನೆ ಕಲೆ ಜನರ ದುಃಖ ದುಮ್ಮಾನಗಳನ್ನು ಮರೆಸಿ ನೆಮ್ಮದಿಯತ್ತ ಕೊಂಡೊಯ್ಯುತ್ತವೆ. ಇಂತಹ ಸಾಂಸ್ಕೃತಿಕ ಸಮಾರಂಭಗಳನ್ನು ಹೆಚ್ಚಾಗಿ ಆಯೋಜಿಸಬೇಕು ಎಂದರು.

ಸಾಹಿತಿ ಎಲೆಕೇರಿ ಡಿ.ರಾಜಶೇಖರ್ ಮಾತನಾಡಿ, ‘ಇಂದಿನ ಆಧುನಿಕತೆಯ ತಾಂತ್ರಿಕ ಜಗತ್ತಿನಲ್ಲಿ ಯುವ ಜನಾಂಗ ಮೊಬೈಲ್‌ನಿಂದ ವಿದ್ಯಾಭ್ಯಾಸವನ್ನೇ ಹಾಳು ಮಾಡಿಕೊಂಡು ದಿಕ್ಕು ತಪ್ಪುತ್ತಿರುವುದು ದುಃಖದ ಸಂಗತಿಯಾಗಿದೆ. ಸಾಂಸ್ಕೃತಿಕ ನೆಲೆಗಟ್ಟಿನ ನಮ್ಮ ದೇಶವು ಭ್ರಷ್ಟಾಚಾರದ, ಅತ್ಯಾಚಾರದ ದೇಶವಾಗಿ ಬದಲಾಗುತ್ತಿರುವುದು ವಿಷಾದಕರ’ ಎಂದರು.

ಸಾಧನೆ ಮಾಡಿದ ಕಲಾವಿದೆ ಮಾಯಮ್ಮ ಅವರಿಗೆ ಜಾನಪದ ಕೋಗಿಲೆ ಪ್ರಶಸ್ತಿ, ಮೀನಾಕ್ಷಿ ಅವರಿಗೆ ಜಾನಪದ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಲಾವಿದರಾದ ಮರಿದೇವರು ತಂಡ, ಚಕ್ಕೆರೆ ಲೋಕೇಶ್ ತಂಡ, ಎಂ.ಬಿ.ಮಹದೇವ್ ತಂಡ, ಚೌ.ಪು.ಸ್ವಾಮಿ, ಜಿ.ಕೆ.ಮಹೇಶ್ ತಂಡ, ಎಸ್.ಕುಮಾರ್ ತಂಡ, ಎಸ್.ಬಿ.ಗಂಗಾಧರ್ ತಂಡ, ಗುರುವಿನಪುರ ಬಸವರಾಜು ತಂಡ, ತಸ್ಮಿಯ, ಜಾನಪದ ಗೀತಗಾಯನ ನಡೆಸಿಕೊಟ್ಟರು.

ಚಲ್ಲಮ್ಮ, ಜಯಮ್ಮ, ಗೌರಮ್ಮ, ಬೋರಮ್ಮ, ಮರಿಯಮ್ಮ, ದೊಡ್ಡೋಳಮ್ಮ, ಚಂದ್ರಮ್ಮ, ಭಾಗ್ಯ, ಚನ್ನಮ್ಮ, ಕೆಂಪಮ್ಮ ತಂಡದವರು ಸೋಬಾನೆ ಪದ ಹಾಡಿದರು.

ಟ್ರಸ್ಟ್ ಕಾರ್ಯದರ್ಶಿ ಸಿ.ಪಿ.ನಾಗೇಂದ್ರಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ವಿಜಯ್ ರಾಂಪುರ, ಕಲಾವಿದರಾದ ಅಪ್ಪಗೆರೆ ಶ್ರೀನಿವಾಸಮೂರ್ತಿ, ಅಪ್ಪಗೆರೆ ಸತೀಶ್, ಡಾ.ಪ್ರಕಾಶ್, ಚಂದ್ರಮ್ಮ ರಾಮಗಿರಿ, ಶಿವರಾಮು, ಮಹೇಶ್ ಮೌರ್ಯ, ಟ್ರಸ್ಟ್ ಅಧ್ಯಕ್ಷೆ ಸರೋಜ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry