ಇಂದಿಗೂ ಊಳಿಗಮಾನ್ಯ ಪದ್ಧತಿ ನಿಂತಿಲ್ಲ: ಮಂಜುನಾಥಗೌಡ

7
ಮಾರ್ಚ್14ರಂದು ಶಾಂತವೇರಿಯಲ್ಲಿ ಗೋಪಾಲಗೌಡ ಜನ್ಮ ದಿನಾಚರಣೆ

ಇಂದಿಗೂ ಊಳಿಗಮಾನ್ಯ ಪದ್ಧತಿ ನಿಂತಿಲ್ಲ: ಮಂಜುನಾಥಗೌಡ

Published:
Updated:
ಇಂದಿಗೂ ಊಳಿಗಮಾನ್ಯ ಪದ್ಧತಿ ನಿಂತಿಲ್ಲ: ಮಂಜುನಾಥಗೌಡ

ತೀರ್ಥಹಳ್ಳಿ: ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡ ಜನ್ಮ ದಿನಾಚರಣೆಯನ್ನು ಮಾರ್ಚ್‌ 14ರಂದು ಅವರ ಹುಟ್ಟೂರಾದ ಶಾಂತವೇರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜೆಡಿಎಸ್‌ ಮುಖಂಡ ಆರ್‌.ಎಂ. ಮಂಜುನಾಥಗೌಡ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಗೇಣಿದಾರರ ಪರವಾಗಿ ಹೋರಾಟ ನಡೆಸಿದ ಗೋಪಾಲಗೌಡ ಅವರಿಗೆ ಆರಂಭದಲ್ಲಿ ಹೆಚ್ಚಿನ ಬೆಂಬಲ ಸಿಕ್ಕಿರಲಿಲ್ಲ. ಕೇವಲ ಬೆರಳೆಣಿಕೆಯ ಹೋರಾಟಗಾರರ ಬೆಂಬಲ ಪಡೆದ ಅವರು ನಂತರ ಇಡೀ ದೇಶವೇ ಇತ್ತ ತಿರುಗಿ ನೋಡುವಂತಹ ಚಳವಳಿ ಕಟ್ಟಿದರು. ದುರಂತವೆಂದರೆ ಇಂದಿಗೂ ಊಳಿಗಮಾನ್ಯ ಪದ್ಧತಿ ನಿಂತಿಲ್ಲ’ ಎಂದರು.

‘ಉಳುವವನೇ ಹೊಲದೊಡೆಯ’ ಎಂಬ ಘೋಷವಾಕ್ಯವನ್ನು ನಂಬದ ಗೇಣಿದಾರರು ಗೋಪಾಲಗೌಡ ಹಾಗೂ ಲೋಹಿಯಾ ಅವರಂತಹ ಹೋರಾಟಗಾರರ ಯತ್ನದ ಫಲವಾಗಿ ಇಂದು ಭೂಮಿಯನ್ನು ಪಡೆಯುವಂತಾಗಿದೆ. 1951ರಲ್ಲಿ ಸಾಗರದ ಎಚ್‌.ಗಣಪತಿಯಪ್ಪ ನೇತೃತ್ವದ ರೈತ ಸಂಘದವರು, ಸಮಾಜವಾದಿ ನೇತಾರ ರಾಮಮನೋಹರ ಲೋಹಿಯಾ ಜೊತೆಗೂಡಿ ಅಂದಿನ ಕಾಂಗ್ರೆಸ್‌ ಸರ್ಕಾರದ ಆಡಳಿತದ ವಿರುದ್ಧ ಹೋರಾಟ ನಡೆಸಿದರು ಎಂದು ಮಂಜುನಾಥಗೌಡ ನೆನಪಿಸಿಕೊಂಡರು.

‘ಶರಾವತಿ ಮುಳುಗಡೆ ಸಂತ್ರಸ್ತರು ಇಂದಿಗೂ ಭೂಮಿಹಕ್ಕು ಪಡೆಯಲು ಹೋರಾಟ ನಡೆಸುತ್ತಲೇ ಇದ್ದಾರೆ. 25 ವರ್ಷಗಳಿಂದ ಅನೇಕರು ಶಾಸಕರಾಗಿದ್ದರೂ ಸಂತ್ರಸ್ತರಿಗೆ ನಿರೀಕ್ಷಿತ ಫಲ ದೊರೆಕಿಲ್ಲ. ಅರಣ್ಯ ಇಲಾಖೆಯಿಂದ ಭೂಮಿ ಪಡೆದಿದ್ದರೂ ಸಂತ್ರಸ್ತ ಕುಟುಂಬಗಳಿಗೆ ನೀಡಲು ಆಗಲಿಲ್ಲ. ಇತ್ತೀಚೆಗೆ ಜೆಡಿಎಸ್‌ ನಡೆಸಿದ ಹೋರಾಟದ ಫಲವಾಗಿ ಕೆಲವು ರೈತರಿಗೆ ಹಕ್ಕುಪತ್ರ ನೀಡುವ ಕೆಲಸ ಆಗಿದೆ. ಬಗರ್‌ಹುಕುಂ ಭೂಮಂಜೂರಾತಿಯನ್ನು ಎಷ್ಟು ಮಂದಿ ರೈತರಿಗೆ ನೀಡಲಾಗಿದೆ ಎಂದು ಮಾಹಿತಿ ಹಕ್ಕಿನಡಿಯಲ್ಲಿ ಕೇಳಿದರೆ ತಹಶೀಲ್ದಾರ್‌ ಅವರು ಸ್ವಲ್ಪ ಕಾಲಾವಕಾಶ ಬೇಕು ಎನ್ನುತ್ತಾರೆ. ಆಡಳಿತ ಇಲ್ಲಿ ಏನಾಗಿದೆ' ಎಂದು ಮಂಜುನಾಥಗೌಡ ಪ್ರಶ್ನಿಸಿದರು.

ಜಮೀನ್ದಾರಿ ಪದ್ಧತಿ ಮನಸ್ಸುಗಳು ಇಂದು ಕೆಲಸ ಮಾಡುತ್ತಿವೆ. ಪಟ್ಟಭದ್ರರು ಅಧಿಕಾರ ದುರುಪಯೋಗ ಪಡಿಸಿಕೊಂಡು ಹಕ್ಕುಪತ್ರ ಪಡೆಯುತ್ತಿದ್ದಾರೆ. ಒಂದೇ ಕುಟುಂಬದ ಹಲವರಿಗೆ ಭೂ ಮಂಜೂರಾತಿಯಾದ ನಿದರ್ಶನಗಳಿವೆ. ಸುಳ್ಳು ಪ್ರಮಾಣಪತ್ರವನ್ನು ಸಲ್ಲಿಸಿ ಭೂಮಂಜೂರಾತಿ ಪಡೆಯಲಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಗೋಪಾಲಭಟ್‌, ಟಿ.ಎಲ್‌.ಸುಂದರೇಶ್‌, ಕೃಷ್ಣಮೂರ್ತಿ ಭಟ್‌, ವಿನಂತಿ ಕರ್ಕಿ, ಜೀನಾವಿಕ್ಟರ್‌ ಡಿಸೋಜ, ಕುಣಜೆ ಕಿರಣ್‌, ವೀರೇಶ್‌ ಆಲವಳ್ಳಿ ಇದ್ದರು.

‘ಶಾಂತವೇರಿಯಲ್ಲಿ ಗ್ರಂಥಾಲಯ ಸ್ಥಾಪನೆ’

ಗೋಪಾಲಗೌಡ ಅವರ ಹುಟ್ಟೂರಾದ ಆರಗ ಬಳಿಯ ಶಾಂತವೇರಿಯನ್ನು ಚಿರಸ್ಥಾಯಿಯಾಗಿಸಲು ಸಮಾಜವಾದಿ ಹೋರಾಟಗಾರರ ಕುರಿತ ಗ್ರಂಥಗಳನ್ನು ಒಳಗೊಂಡ ಗ್ರಂಥಾಲಯವನ್ನು ಸ್ಥಾಪಿಸಲಾಗುವುದು. ಕುವೆಂಪು ಪ್ರತಿಷ್ಠಾನದಂತೆ ಅಭಿವೃದ್ಧಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಂಜುನಾಥಗೌಡ ಭರವಸೆ ನೀಡಿದರು.

‘ಹಾಳು ಹಂಪಿಯಂತಾದ ಗೋಪಾಲಗೌಡರ ಜನ್ಮಸ್ಥಳ’

ಶಾಂತವೇರಿ ಗೋಪಾಲಗೌಡ ಅವರು ಜನ್ಮ ಪಡೆದ ಶಾಂತವೇರಿ ಇಂದು ಹಾಳು ಹಂಪೆಯಂತಾಗಿದೆ. ಅವರ ಹೆಸರು ಹೇಳಿಕೊಂಡು ರಾಜಕೀಯ ಲಾಭ ಪಡೆಯುವವರು ಇತ್ತ ಗಮನ ಹರಿಸುತ್ತಿಲ್ಲ. ಗೋಪಾಲಗೌಡರ ಜನ್ಮ ಸ್ಥಳದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ. ಗೋಪಾಲಗೌಡರ ಹೆಸರಿಗೆ ಮೇಲ್ಮಟ್ಟದಲ್ಲಿ ಎಲ್ಲ ಸಹಕಾರ ದೊರಕಲಿದೆ ಎಂದು ಹಿರಿಯ ಸಮಾಜವಾದಿ ಎ.ಪಿ.ರಾಮಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry