‘ನಮ್ಮ ಮೆಟ್ರೊ’ ಮುಷ್ಕರ ತಪ್ಪಿಸಲು ಇಂದು ಸಂಧಾನ?

7

‘ನಮ್ಮ ಮೆಟ್ರೊ’ ಮುಷ್ಕರ ತಪ್ಪಿಸಲು ಇಂದು ಸಂಧಾನ?

Published:
Updated:

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ನಡೆಸಲು ತೀರ್ಮಾನಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮದ ಸಿಬ್ಬಂದಿ ಜೊತೆ ಸಂಧಾನಕ್ಕೆ ಆಡಳಿತ ಮಂಡಳಿ ಕೊನೆಗೂ ಮುಂದಾಗಿದೆ.

ನಿಗಮದ ಕಾರ್ಯಾಚರಣೆ ಹಾಗೂ ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ನೇತೃತ್ವದಲ್ಲಿ ಬುಧವಾರ ಸಭೆ ಕರೆಯಲಾಗಿದೆ. ಮೆಟ್ರೊ ರೈಲು ಚಾಲಕರು, ನಿಲ್ದಾಣ ನಿಯಂತ್ರಕರು, ಸೆಕ್ಷನ್‌ ಎಂಜಿನಿಯರ್‌ಗಳು, ಸಿಗ್ನಲಿಂಗ್‌, ಟೆಲಿಕಾಂ, ಸ್ವಯಂಚಾಲಿತ ದರ ವಸೂಲಿ (ಎಎಫ್‌ಸಿ), ಹಳಿಯ ಶಾಶ್ವತ ನಿರ್ವಹಣೆ, ಟ್ರ್ಯಾಕ್ಷನ್‌, ಸಿವಿಲ್‌ ಕಾಮಗಾರಿ ವಿಭಾಗಗಳ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ.

ಮುಷ್ಕರಕ್ಕೆ ನೋಟಿಸ್‌ ನೀಡಿದ ಸಂಘಟನೆಯನ್ನು ಸಭೆಗೆ ಆಹ್ವಾನಿಸುವ ಬದಲು ಪ್ರತಿ ವಿಭಾಗದಿಂದ ಇಬ್ಬರು ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಿದ್ದಾರೆ. ಹಾಗಾಗಿ ಬಿಎಂಆರ್‌ಸಿಎಲ್‌ ನೌಕರರ ಸಂಘದ ಸದಸ್ಯರಾಗಿರುವ ಸಿಬ್ಬಂದಿಯನ್ನೇ ಈ ಸಭೆಗೆ ಕಳುಹಿಸಲು ನಿಗಮದ ಸಿಬ್ಬಂದಿ ನಿರ್ಧರಿಸಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಟಿ.ಆರ್‌.ಉದಯ್‌ ’ಪ್ರಜಾವಾಣಿ’ಗೆ ತಿಳಿಸಿದರು.

‘2017ರ ಜುಲೈ 7ರಂದು ಮುಷ್ಕರ ನಡೆಸಿದಾಗಲೂ ಇಂತಹದ್ದೇ ಸಭೆ ನಡೆದಿತ್ತು. ಸಿಬ್ಬಂದಿಯ ಅಹವಾಲು ಆಲಿಸಲು ಶಂಕರ್‌ ಸೇರಿದಂತೆ ಮೂವರು ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಲಾಗಿತ್ತು. ಈ ಸಮಿತಿ ಮುಂದೆ ಇಟ್ಟಿದ್ದ ಬೇಡಿಕೆಗಳ ಪೈಕಿ ಒಂದೂ ಈಡೇರಿಲ್ಲ. ಹಾಗಾಗಿ, ಈ ಸಭೆಯ ಬಗ್ಗೆ ನಾವು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ. ಸಂಘದ ಪ್ರಮುಖರ ಜೊತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಂಧಾನ ಸಭೆ ನಡೆಸಬೇಕು ಎಂದರು.

ಇದೇ 22ರಿಂದ ‘ನಮ್ಮ ಮೆಟ್ರೊ’ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ಸಂಘವು ಮಾ. 7ರಂದು ನಿಗಮಕ್ಕೆ ನೋಟಿಸ್‌ ನೀಡಿತ್ತು. ನಿಗಮದ ಸಿಬ್ಬಂದಿ ಕಪ್ಪು ಬ್ಯಾಡ್ಜ್‌ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಆಡಳಿತ ಮಂಡಳಿಯ ಕಾರ್ಯವೈಖರಿ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry