ವಿಜೃಂಭಣೆಯ ತಂಪು, ಮಡೆ ಉತ್ಸವ

7
ನಗರದಲ್ಲಿ ಮುದುಕು ಮಾರಮ್ಮ ಹಬ್ಬದ ಸಂಭ್ರಮ

ವಿಜೃಂಭಣೆಯ ತಂಪು, ಮಡೆ ಉತ್ಸವ

Published:
Updated:
ವಿಜೃಂಭಣೆಯ ತಂಪು, ಮಡೆ ಉತ್ಸವ

ಚಾಮರಾಜನಗರ: ನಗರದ ಮುದುಕು ಮಾರಮ್ಮ ಹಬ್ಬದ ಅಂಗವಾಗಿ ತಂಪು, ಮಡೆ ಉತ್ಸವ ಎರಡು ದಿನ ವಿಜೃಂಭಣೆಯಿಂದ ನೆರವೇರಿತು.

ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆಯ ತನಕ ಮಾರಮ್ಮನ ದೇವಸ್ಥಾನದ ಮುಂಭಾಗ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಜಿಲ್ಲೆಯ ಸ್ಥಳೀಯ ಕಲಾವಿದರಿಂದ ಆಯೋಜಿಸಿದ್ದ ಸಂಗೀತ ರಸ ಸಂಜೆ ಕಾರ್ಯಕ್ರಮ ನೆರೆದಿದ್ದ ಭಕ್ತರನ್ನು ರಂಜಿಸಿತು.

ಹಬ್ಬದ ಅಂಗವಾಗಿ ಸಂತೇಮರಹಳ್ಳಿ ವೃತ್ತ, ನಾಯಕರ ಬೀದಿ ಹಾಗೂ ಉಪ್ಪಾರ ಬೀದಿಗಳಲ್ಲಿ ದೀಪಾಲಂಕಾರ ಹಾಗೂ ಧ್ವನಿವರ್ಧಕ ಅಳವಡಿಸಲಾಗಿತ್ತು. ಹಳೆಯ ಬಸ್ ನಿಲ್ದಾಣದ ಬಳಿ ಇರುವ ಮಾರಿಗುಡಿ ದೇವಸ್ಥಾನದ ಮುಂಭಾಗವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಹಬ್ಬದ ಅಂಗವಾಗಿ ದೇವಸ್ಥಾನದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಸೋಮವಾರ ರಾತ್ರಿ ದೇವಸ್ಥಾನದ ಮುಂಭಾಗ ದ್ವಿಚಕ್ರ ವಾಹನಗಳು ಸೇರಿದಂತೆ ಇತರೆ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು.

ತಲೆಮಾರುಗಳಿಂದ ಆಚರಣೆ: ನಗರದಲ್ಲಿ ಹಲವು ತಲೆಮಾರುಗಳಿಂದ ನಾಯಕ ಹಾಗೂ ಉಪ್ಪಾರ ಸಮುದಾಯದವರು ಸೇರಿ ಈ ಹಬ್ಬವನ್ನು ಆಚರಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಉತ್ಸವ ಜೋರಾಗುತ್ತಿದೆ.

ಮಾರಮ್ಮನಿಗೆ ಹರಕೆ ಹೊತ್ತ ಮಂದಿ ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಸಾಮೂಹಿಕವಾಗಿ ಮೆರವಣಿಗೆಯಲ್ಲಿ ಬಂದು ತಂಪು ಸೇವೆ ಮಾಡುವುದು ಇಲ್ಲಿನ ವಿಶೇಷ. ತಂಬಿಟ್ಟನ್ನು ದೇವಿಗೆ ಅರ್ಪಿಸಿ ತಮ್ಮ ಹರಕೆ ಪೂರೈಸುವುದು ವಾಡಿಕೆ. ಈ ಬಾರಿಯೂ ಮಾರಮ್ಮನಿಗೆ ಸಾವಿರಾರು ಮಹಿಳೆಯರು ತಂಪು ಮತ್ತು ಮಡೆ ಸೇವೆ ಸಲ್ಲಿಸಿದರು.

ಮಂಗಳವಾರ ಸೂರ್ಯೋದ ಯಕ್ಕೂ ಮುನ್ನ ದೇವಸ್ಥಾನದ ಆವರಣ ದಲ್ಲಿ ಮಡೆ ಸೇವೆ ಸಲ್ಲಿಸಿದರು. ಬಳಿಕ, ನಗರದ ಸುತ್ತಲಿನ ಗ್ರಾಮಗಳಿಂದ ಸತ್ತಿಗೆ, ಸೂರಾಪಾನಿಗಳನ್ನು ತಂದು ವಿಜೃಂಭಣೆ ಯಿಂದ ಮೆರವಣಿಗೆ ನಡೆಸಲಾಯಿತು.

ದೇವಸ್ಥಾನದ ಮುಂಭಾಗ ನೆರೆದಿದ್ದ ಸಾವಿರಾರು ಭಕ್ತರು ಸತ್ತಿಗೆ, ಸೂರಾಪಾನಿಗಳಿಗೆ ವೀಳ್ಯೆದೆಲೆ, ಕಾಸು ಎಸೆದರು. ಇನ್ನೂ ಕೆಲವು ಭಕ್ತರು ಕೋಳಿ ಮರಿಗಳನ್ನು ಎಸೆದು ಹರಕೆ ತೀರಿಸಿದರು.

ನೆಂಟರಿಷ್ಟರ ಭೇಟಿ: ಮಾರಮ್ಮನ ಹಬ್ಬದ ಅಂಗವಾಗಿ ಜಿಲ್ಲೆಯ ವಿವಿಧ ಗ್ರಾಮಗಳು ಹಾಗೂ ಹೊರ ಜಿಲ್ಲೆಗಳಿಂದ ಬಂಧು ಬಳಗದವರು ಬಂದಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು.

ಮನೆಗಳಲ್ಲೂ ಸಸ್ಯಾಹಾರ ಹಾಗೂ ಮಾಂಸಾಹಾರದ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಸವಿದರು.

ಮೆರವಣಿಗೆ ವೇಳೆ ಯುವಕರು, ಮಕ್ಕಳು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಯುಗಾದಿ ಹಬ್ಬಕ್ಕೂ ಮುನ್ನ ಎಲ್ಲೆಡೆ ಮಾರಿ ಹಬ್ಬ ನಡೆಯುತ್ತವೆ. ಕಷ್ಟಗಳೆಲ್ಲ ತೀರಲಿ, ಹೊಸ ಸಂವತ್ಸರದಲ್ಲಿ ಉತ್ತಮ ಮಳೆ, ಬೆಳೆ ಬಂದು ಸಮೃದ್ಧಿ ತರಲಿ ಎಂದು ಜನರು ಬೇಡಿಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry