ವರ್ಷಗಳು ಉರುಳಿದರೂ ಮುಗಿಯದ ಕಾಮಗಾರಿ

ಶುಕ್ರವಾರ, ಮಾರ್ಚ್ 22, 2019
26 °C
ಐವರಕಂಡಪುರ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ

ವರ್ಷಗಳು ಉರುಳಿದರೂ ಮುಗಿಯದ ಕಾಮಗಾರಿ

Published:
Updated:
ವರ್ಷಗಳು ಉರುಳಿದರೂ ಮುಗಿಯದ ಕಾಮಗಾರಿ

ಬೆಂಗಳೂರು: ಹೆಸರಘಟ್ಟ ಹೋಬಳಿಯ ಐವರಕಂಡಪುರ ಗ್ರಾಮದಲ್ಲಿನ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನಾಲ್ಕು ಕೊಠಡಿಗಳ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1989–90ರಲ್ಲಿ ಗ್ರಾಮದಲ್ಲಿ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಯಿತು. ಹೆಸರಘಟ್ಟ ಹೋಬಳಿಯ ಅನೇಕ ವಿದ್ಯಾರ್ಥಿಗಳು ಇದರ ಲಾಭ ಪಡೆದರು. ಕಳೆದ ವರ್ಷ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೂ ಇಲ್ಲಿ ಅವಕಾಶ ಕಲ್ಪಿಸಲಾಯಿತು. ಇದರಿಂದಾಗಿ ಕೊಠಡಿಗಳ ಕೊರತೆ ಆಗುವುದರಿಂದ ಹೆಚ್ಚುವರಿಯಾಗಿ ನಾಲ್ಕು ಕೊಠಡಿಗಳನ್ನು ನಿರ್ಮಿಸಲು ಯೋಜಿಸಲಾಯಿತು.

₹20 ಲಕ್ಷ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಯಿತು. ಆಮೆಗತಿಯಲ್ಲಿ ಸಾಗುತ್ತಿರುವ ನಿರ್ಮಾಣ ಕಾರ್ಯದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ವಿಳಂಬ ಧೋರಣೆ ಸರಿಯಲ್ಲ ಎಂದು ಗ್ರಾಮದ ನಿವಾಸಿ ಹರ್ಷ ಆಕ್ರೋಶ ವ್ಯಕ್ತಪಡಿಸಿದರು.

ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಬಿ.ಕೃಷ್ಣಯ್ಯ, ‘ಹಿಂದುಳಿದ ವರ್ಗಗಳ ಇಲಾಖೆ ಕಟ್ಟಡವನ್ನು ನಿರ್ಮಿಸಿಕೊಡುವಂತೆ ನಿರ್ಮಿತಿ ಕೇಂದ್ರಕ್ಕೆ ಕೇಳಿಕೊಂಡಿದೆ. ನಾಲ್ಕು ಕೊಠಡಿ, ಎರಡು ಶೌಚಾಲಯ ನಿರ್ಮಿಸಲು ಒಂದೂವರೆ ವರ್ಷ ತೆಗೆದುಕೊಂಡಿರುವುದು ಅತ್ಯಂತ ನೋವಿನ ವಿಷಯ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಅದಷ್ಟು ಬೇಗ ಕಾಮಗಾರಿ ಮುಗಿಸಿ ಕೊಟ್ಟರೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

‘ಒಟ್ಟು ಅರವತ್ತು ವಿದ್ಯಾರ್ಥಿಗಳು ಇಲ್ಲಿದ್ದಾರೆ. ಇಷ್ಟು ವಿದ್ಯಾರ್ಥಿಗಳಿಗೆ ಇರುವುದು ಕೇವಲ ಮೂರು ಶೌಚಾಲಯ. ಇದಕ್ಕಾಗಿ ಬೆಳಿಗ್ಗೆ ಐದು ಗಂಟೆಗೆ ಎದ್ದು ಸರತಿ ನಿಲ್ಲಬೇಕು.

ಒಂದು ಕೊಠಡಿಯಲ್ಲಿ ಹತ್ತು–ಹದಿನೈದು ಜನ ಇದ್ದು, ನಮ್ಮ ಕಷ್ಟಗಳನ್ನು ಕೇಳುವವರೇ ಇಲ್ಲ’ ಎಂದು ವಿದ್ಯಾರ್ಥಿಗಳು ದೂರಿದರು.

‘ಕೆಂಪೇಗೌಡ ಬಸ್‌ ನಿಲ್ದಾಣದ ಬಳಿ ನನ್ನ ಕಾಲೇಜಿದೆ. ಇಲ್ಲಿಂದ ಅಲ್ಲಿಗೆ ಪ್ರತಿದಿನ ಪ್ರಯಾಣಿಸುತ್ತೇನೆ. ಹಾಸ್ಟೆಲ್‌ನಿಂದ ಒಂದು ಕಿ.ಮೀ ದೂರ ನಡೆದು ಬಸ್‌ ನಿಲ್ದಾಣಕ್ಕೆ ಹೋಗಬೇಕು. ಬಸ್‌ಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಹಾಸ್ಟೆಲ್‌ನಲ್ಲಿಯೂ ಸರಿಯಾದ ವ್ಯವಸ್ಥೆ ಇಲ್ಲ’ ಎಂದು ವಿದ್ಯಾರ್ಥಿಯೊಬ್ಬ ಅಳಲು ತೋಡಿಕೊಂಡ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದುಳಿದ ವರ್ಗಗಳ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್, ‘ಕಾಮಗಾರಿ ಬೇಗ ಮುಗಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗುವುದು’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry