ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಪ್ರಮೋದ್‌ ಮಧ್ವರಾಜ್‌ ವಿರುದ್ಧ ತನಿಖೆಗೆ ಆಗ್ರಹ

ಕಡಿಮೆ ಮೌಲ್ಯದ ಆಸ್ತಿಗೆ ಭಾರಿ ಮೊತ್ತದ ಸಾಲ:
Last Updated 14 ಮಾರ್ಚ್ 2018, 20:25 IST
ಅಕ್ಷರ ಗಾತ್ರ

ನವದೆಹಲಿ: ಕಡಿಮೆ ಮೌಲ್ಯದ ಆಸ್ತಿಯನ್ನು ಅಡ ಇರಿಸಿ ರಾಷ್ಟ್ರೀಕೃತ ಬ್ಯಾಂಕ್‌ ಒಂದರಿಂದ ಭಾರಿ ಮೊತ್ತದ ಸಾಲ ಪಡೆದಿರುವ ಆರೋಪ ಕರ್ನಾಟಕದ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಪ್ರಮೋದ್‌ ಮಧ್ವರಾಜ್‌ ವಿರುದ್ಧ ಕೇಳಿಬಂದಿದೆ.

ಕೇವಲ ₹ 1.10 ಕೋಟಿ ಮೌಲ್ಯದ ಜಮೀನನ್ನು ಅಡ ಇರಿಸಿರುವ ಸಚಿವರಿಗೆ ಸಿಂಡಿಕೇಟ್‌ ಬ್ಯಾಂಕ್‌ನ ಉಡುಪಿ ಜಿಲ್ಲೆಯ ಮಲ್ಪೆ ಶಾಖೆಯಿಂದ ₹193 ಕೋಟಿ ಸಾಲ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ, ಕೂಡಲೇ ಈ ಕುರಿತು ತನಿಖೆ ನಡೆಸಬೇಕು ಎಂದು ಕೋರಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ನ ಮುಖ್ಯಸ್ಥರಿಗೆ ಬುಧವಾರ ದೂರು ನೀಡಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ಹೋಬಳಿ ವ್ಯಾಪ್ತಿಯ ಉಪ್ಪೂರು ಗ್ರಾಮದಲ್ಲಿನ ತಮ್ಮ 3.08 ಎಕರೆ ಜಮೀನನ್ನು ಅಡ ಇಟ್ಟು, ₹ 193 ಕೋಟಿ ಸಾಲವನ್ನು ಸಚಿವರು ಸಿಂಡಿಕೇಟ್‌ ಬ್ಯಾಂಕ್‌ನಿಂದ ಪಡೆದುಕೊಂಡಿದ್ದಾರೆ. ಅವರ ಆಸ್ತಿಯ ಮೊತ್ತ ಕೇವಲ ₹ 1.10 ಕೋಟಿಯಷ್ಟಾಗಿದೆ ಎಂದು ಅವರು ಹಣಕಾಸು ಸಚಿವಾಲಯದ ಹಣಕಾಸು ಸೇವಾ ವಿಭಾಗಕ್ಕೂ ದಾಖಲೆಗಳ ಸಮೇತ ದೂರು ನೀಡಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್‌ಗಳು ಯಾವುದೇ ಆಸ್ತಿಯ ಆಧಾರದ ಮೇಲೆ ಸಾಲ ನೀಡಲು ಪ್ರಮಾಣ ನಿಗದಿಪಡಿಸಲಾಗುತ್ತದೆ. ಆದರೆ, ಸಚಿವರಿಗೆ ಇಷ್ಟೊಂದು ಪ್ರಮಾಣದ ಸಾಲ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅವರು, ಬ್ಯಾಂಕ್‌ನ ವ್ಯವಸ್ಥಾಪಕರ ಸಹಕಾರವಿಲ್ಲದೆ ಭಾರಿ ಮೊತ್ತದ ಸಾಲ ಪಡೆಯಲು ಸಾಧ್ಯವಿಲ್ಲ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

‘ಸಚಿವರ ಜಮೀನಿನ ಮೌಲ್ಯ ₹1.10 ಕೋಟಿಯಷ್ಟಿದೆ. ಆದರೆ, ಆ ಜಮೀನಿನ ಪ್ರತಿ ಚದರ ಅಡಿಗೆ ₹19,000 ನಿಗದಿ ಮಾಡಿದ್ದರೆ ಅಷ್ಟು ಪ್ರಮಾಣದ ಸಾಲ ನೀಡಬಹುದಾಗಿದೆ. ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿಯೂ ನಿವೇಶನದ ಬೆಲೆ ಇಷ್ಟೊಂದು ಪ್ರಮಾಣದಲ್ಲಿ ಇಲ್ಲ. ಆದರೂ ಗ್ರಾಮವೊಂದರಲ್ಲಿನ ಜಮೀನಿಗೆ ಇಷ್ಟು ಮೊತ್ತದ ಸಾಲ ಮಂಜೂರು ಮಾಡಿದ್ದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಒಂದೇ ಜಮೀನಿನ ದಾಖಲೆಗಳನ್ನು ಪ್ರಸ್ತುತಪಡಿಸಿ, ಹಲವು ಬಾರಿ ಸಾಲ ಪಡೆದುಕೊಳ್ಳಲಾಗಿದೆ. ಸಚಿವರಿಗೆ ಸಾಲ ಮಂಜೂರು ಮಾಡಿರುವುದರ ಹಿಂದೆ ಅನೇಕರು ಶಾಮೀಲಾಗಿದ್ದಾರೆ. ಹಣಕಾಸು ಸಚಿವಾಲಯವು ಇಲಾಖಾ ತನಿಖೆಗೆ ಆದೇಶ ನೀಡಿದರೆ, ಅಕ್ರಮ ಬಯಲಾಗಲಿದೆ ಎಂದು ಹೇಳಿದ್ದಾರೆ.

ರಾಜ್ಯ ವಿಧಾನಸಭೆಗೆ 2013ರಲ್ಲಿ ನಡೆದಿದ್ದ ಚುನಾವಣೆ ಸಂದರ್ಭ ಪ್ರಮೋದ್ ಮಧ್ವರಾಜ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರಗಳನ್ನೇ ಆಧಾರವಾಗಿಸಿಕೊಂಡು ದೂರು ನೀಡಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ನೀರವ್ ಮೋದಿ ವಂಚನೆ ಮಾಡಿರುವ ಹಗರಣದಂತೆಯೇ ಇರುವ ಈ ಅಕ್ರಮದ ಕುರಿತು ತನಿಖೆ ಆಗಬೇಕು ಎಂದು ಹೇಳಿರುವ ಅಬ್ರಹಾಂ, ಸಚಿವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಬೇಕು ಎಂದು ಕೋರಿದ್ದಾರೆ.

ಬ್ಯಾಂಕ್‌ನವರಿಗೆ ತಲೆ ಕೆಟ್ಟಿಲ್ಲ: ಸಚಿವ

ಕಡಿಮೆ ಮೊತ್ತದ ಆಸ್ತಿ ಅಡ ಇರಿಸಿಕೊಂಡು ಭಾರಿ ಮೊತ್ತದ ಸಾಲ ನೀಡಲು ಬ್ಯಾಂಕ್‌ನವರಿಗೆ ತಲೆ ಕೆಟ್ಟಿಲ್ಲ. ಈ ರೀತಿ ಆರೋಪ ಮಾಡಿರುವವರಿಗೇ ತಲೆ ಕೆಟ್ಟಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘ನಮ್ಮ ತಂದೆಯ ಕಾಲದಿಂದಲೂ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ನಮ್ಮ ವ್ಯವಹಾರ ಇದೆ. ನಾನು ಸಾಲ ಪಡೆಯುವಾಗ ಎಷ್ಟು ಪ್ರಮಾಣದ ಆಸ್ತಿಯನ್ನು ಅಡ ಇರಿಸಬೇಕೋ ಅದಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಅಡ ಇಟ್ಟಿದ್ದೇನೆ. ನನ್ನ ವಿರುದ್ಧದ ಆರೋಪಗಳು ಸಂಪೂರ್ಣ ಸುಳ್ಳು’ ಎಂದು ಅವರು ಹೇಳಿದರು.

‘ಇಷ್ಟೊಂದು ಪ್ರಮಾಣದ ಸಾಲ ಪಡೆದವನು ಸಂತೋಷದಿಂದ ಇರುವು
ದಕ್ಕೆ ಸಾಧ್ಯವೇ’ ಎಂದು ಪ್ರಶ್ನಿಸಿದ ಅವರು, ‘ಸಿದ್ದರಾಮಯ್ಯ ಅವರ ಸಂಪುಟ
ದಲ್ಲಿ ಅತ್ಯಂತ ಸಂತೋಷದಿಂದ ಇರುವ ಸಚಿವ ನಾನೊಬ್ಬನೇ. ಆರೋಪ ಮಾಡಿದವರಿಗೆ ಹುಚ್ಚು ಹಿಡಿದಿದೆ. ಅವರು ನೀಡಿರುವ ಅಂಕಿ ಅಂಶಗಳೆಲ್ಲ ಶುದ್ಧ ಸುಳ್ಳು’ ಎಂದು ತಿಳಿಸಿದರು.

‘ನನ್ನ ಆಸ್ತಿ ಎಷ್ಟು, ಅಡ ಇಟ್ಟಿರುವ ಆಸ್ತಿಯ ಮೌಲ್ಯ ಎಷ್ಟು, ಪಡೆದಿರುವ ಸಾಲದ ಮೊತ್ತ ಎಷ್ಟು ಎಂಬುದನ್ನು ಬಹಿರಂಗಪಡಿಸಲಾರೆ. ಲೋಕಾಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ನನ್ನ ಆಸ್ತಿ, ಸಾಲ, ವ್ಯವಹಾರಗಳ ಮಾಹಿತಿ ನೀಡಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT