ನಲಪಾಡ್‌ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

7

ನಲಪಾಡ್‌ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

Published:
Updated:
ನಲಪಾಡ್‌ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

ಬೆಂಗಳೂರು: ‘ಉದ್ಯಮಿ ಪುತ್ರ ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಮೊಹಮದ್‌ ನಲಪಾಡ್‌ ಹ್ಯಾರಿಸ್‌ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನಿನ ಮೇಲೆ ಜೈಲಿನಿಂದ ಹೊರಬಂದರೆ ನಿಸ್ಸಂಶಯವಾಗಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ’ ಎಂಬ ಅಭಿಪ್ರಾಯದ ಮೇರೆಗೆ ನಲಪಾಡ್‌ಗೆ ಜಾಮೀನು ನೀಡಲು ಹೈಕೋರ್ಟ್‌ ನಿರಾಕರಿಸಿದೆ.

ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿ ಮೇಲಿನ ಆದೇಶವನ್ನು ಬುಧವಾರ ಪ್ರಕಟಿಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ ಕುಮಾರ್ ಅವ

ರಿದ್ದ ಏಕ ಸದಸ್ಯ ನ್ಯಾಯಪೀಠವು, ಅರ್ಜಿಯನ್ನು ತಿರಸ್ಕರಿಸಿರುವುದಾಗಿ ಹೇಳಿತು.

38 ಪುಟಗಳ ಆದೇಶದಲ್ಲಿ ನ್ಯಾಯಮೂರ್ತಿಗಳು, ‘ಜಾಮೀನು ಅರ್ಜಿಯೊಂದರಲ್ಲಿ ನ್ಯಾಯಪೀಠ ಔದಾರ್ಯತೆ ತೋರಬಹುದು. ಆದರೆ, ಈ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಒಂದು ವೇಳೆ ಆರೋಪಿಯು ಜೈಲಿನಿಂದ ಹೊರಬಂದರೆ ತನ್ನ ಪ್ರಭಾವ ಬಳಸಿಕೊಂಡು ಸಾಕ್ಷ್ಯ ನಾಶಪಡಿಸಬಹುದು’ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಆದೇಶದ ಮುಖ್ಯಾಂಶಗಳು:

l→ಮೇಲ್ನೋಟಕ್ಕೆ ಆರೋಪಿಯು ಭಾರತೀಯ ದಂಡ ಸಂಹಿತೆ ಕಲಂ 307ರ (ಕೊಲೆ ಯತ್ನ) ಆರೋಪ ಎದುರಿಸುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಆರೋಪಿಗೆ ಜಾಮೀನು ನೀಡಬೇಕಾದರೆ ಆತನ ವೈಯಕ್ತಿಕ ಚಾರಿತ್ರ್ಯ ಹಾಗೂ ಅವನ ವರ್ತನೆಗಳು ಬಹುಮುಖ್ಯವಾಗುತ್ತವೆ.

l→ಪ್ರಕರಣಕ್ಕೆ ಸಂಬಂಧಿಸಿದ ಘಟನಾವಳಿಯ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದರೆ ಇದೊಂದು ಕ್ರೌರ್ಯದ ಪರಮಾವಧಿಯಾಗಿರುವುದು ಕಂಡು ಬರುತ್ತದೆ.

l→ಶಾಂತಿಯುತ ಸಮಾಜದ ಮೇಲೆ ಅಪರಾಧಗಳು ಗಾಢ ಪ್ರಭಾವ ಬೀರುತ್ತವೆ. ಯಾವುದೇ ಒಬ್ಬ ವ್ಯಕ್ತಿ ಮತ್ತೊಬ್ಬನ ಮೇಲೆ ಹಲ್ಲೆ ನಡೆಸುವುದು, ಉಪದ್ರವ ನೀಡುವುದು ಅಥವಾ ಭಯೋತ್ಪಾದಕನಾಗಿ ವರ್ತಿಸುವುದು ಸಲ್ಲ.

l→ಸಂತ್ರಸ್ತನಿಗೆ ಏನೋ ಸಣ್ಣಪುಟ್ಟ ಗಾಯಗಳಾಗಿವೆ ಎಂಬ ಆಧಾರದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ. ನಲಪಾಡ್‌ ತಂದೆ ಶಾಸಕರಾಗಿದ್ದು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ.

l→ಅರ್ಜಿದಾರರ ಪರ ವಕೀಲರು ಹೇಳಿದಂತೆ ವಿದ್ವತ್‌ ಸುಖಾಸುಮ್ಮನೇ ಒಂದಲ್ಲ ಒಂದು ನೆಪ ಹೇಳಿ ಹಾಸಿಗೆ ಹಿಡಿದು ಆಸ್ಪತ್ರೆಯಲ್ಲೇ ಒಳರೋಗಿಯಾಗಿ ಉಳಿದುಕೊಂಡಿದ್ದಾರೆ. ಡಾ.ಆನಂದ್‌ ನೀಡಿರುವ ವೈದ್ಯಕೀಯ ವರದಿ ಅನುಸಾರ ವಿದ್ವತ್‌ ಚೆನ್ನಾಗಿಯೇ ಇದ್ದಾನೆ ಎಂಬುದನ್ನೆಲ್ಲಾ ನಂಬಲು ಸಾಧ್ಯವಿಲ್ಲ.

l→ಒಳರೋಗಿಯನ್ನು ಬಿಡುಗಡೆ ಮಾಡುವಂತೆ ಡಾ.ಆನಂದ್‌ ನೀಡಿರುವ ವರದಿಯು ತಿರುಚಿದ ವರದಿಯಾಗಿದೆ. ಇದು ವಾಸ್ತವ ಚಿತ್ರಣದಿಂದ ಕೂಡಿಲ್ಲ ಮತ್ತು ವೈದ್ಯರು ತಮ್ಮ ಮಿತಿ ಮೀರಿ ವರ್ತಿಸಿದ್ದಾರೆ.

l→ಈ ವರದಿಯ ಪ್ರತಿಯನ್ನು ಪ್ರಾಸಿಕ್ಯೂಷನ್‌ಗೆ ನೀಡದೆ ಇರುವುದು ಸಮರ್ಥನೀಯ ಅಂಶವಲ್ಲ. ಇದನ್ನು ನೋಡಿದರೆ ಯಾರೋ ಇದರಲ್ಲಿ ಮಧ್ಯಪ್ರವೇಶಿಸಿ ಕೈಯಾಡಿಸಿದಂತಿದೆ.

l→ವಿದ್ವತ್‌ ಮಾತನಾಡುವ ಸಾಮರ್ಥ್ಯ ಹೊಂದಿದ್ದ ಎಂದು ಹೇಳುವ ಯೂ ಟ್ಯೂಬ್ ತುಣುಕು ತಿರುಚಿದ ದಾಖಲೆಯಾಗಿದೆ.

l→ಕುಡಿದ ಮತ್ತಿನಲ್ಲಿ ನಡೆಸಿದ ಗಲಾಟೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ.

ಯು.ಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಮೊಹಮದ್ ನಲಪಾಡ್‌ ಕಳೆದ ತಿಂಗಳು 17ರಂದು ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ನಲಪಾಡ್‌ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ನಲಪಾಡ್‌ ಜಾಮೀನು ಅರ್ಜಿಯನ್ನು ಸೆಷನ್ಸ್‌ ನ್ಯಾಯಾಲಯ ಮಾರ್ಚ್‌ 2ರಂದು ತಿರಸ್ಕರಿಸಿತ್ತು.

ಹೈಕೋರ್ಟ್‌ನಲ್ಲಿ ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಗೂ ಪ್ರಾಸಿಕ್ಯೂಷನ್‌ ಪರ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಎಂ.ಎಸ್‌.ಶ್ಯಾಮಸುಂದರ್ ವಾದ ಮಂಡಿಸಿದ್ದರು.

ಹಣಬಲ–ತೋಳ್ಬಲಕ್ಕೆ ಕೋರ್ಟ್‌ ತಪರಾಕಿ’

‘ಈ ಆದೇಶ ನಾಗರಿಕ ಸಮಾಜಕ್ಕೆ ನ್ಯಾಯಾಲಯದಿಂದ ದೊರಕಿದ ರಕ್ಷಣೆಯಾಗಿದೆ’ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಎಂ.ಎಸ್.ಶ್ಯಾಮಸುಂದರ್‌ ಪ್ರತಿಕ್ರಿಯಿಸಿದರು.

‘ರೌಡಿಸಂ ಎಂಬುದೊಂದು ದುರ್ವರ್ತನೆ. ಅಂತಹವರನ್ನು ಸುಮ್ಮನೇ ಬಿಡೋದಿಲ್ಲ, ಮಟ್ಟ ಹಾಕುತ್ತೇವೆ ಎಂದು ಕೋರ್ಟ್‌ ನೀಡಿರುವ ಸಂದೇಶ ಇದರಿಂದ ಪ್ರತಿಧ್ವನಿಸುತ್ತದೆ. ಹಣಬಲ ತೋಳ್ಬಲ ಇದ್ದರೆ ಏನು ಮಾಡಿದರೂ ದಕ್ಕಿಸಿಕೊಳ್ಳುತ್ತೇನೆ ಎಂದು ಬೀಗುವವರಿಗೆ ಕೋರ್ಟ್‌ ನೀಡಿರುವ ತಪರಾಕಿ ಇದು. ಸಾಕ್ಷ್ಯ ನಾಶಪಡಿಸುವ ಆರೋಪಿಗಳಿಗೆ ಕ್ಷಮೆಯೂ ಇಲ್ಲ ಎಂಬುದನ್ನು ಈ ಆದೇಶ ಖಡಕ್ಕಾಗಿ ತಿಳಿಸಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry