ಬಿಸಿಯೂಟ ತಯಾರಿಕೆಗೂ ನೀರಿಲ್ಲ!

7
ವಿಶ್ವನಾಥನಹಳ್ಳಿಯಲ್ಲಿ ಗ್ರಾಮಸ್ಥರ ಪರದಾಟ

ಬಿಸಿಯೂಟ ತಯಾರಿಕೆಗೂ ನೀರಿಲ್ಲ!

Published:
Updated:
ಬಿಸಿಯೂಟ ತಯಾರಿಕೆಗೂ ನೀರಿಲ್ಲ!

ಹೊಳಲ್ಕೆರೆ: ತಾಲ್ಲೂಕಿನ ವಿಶ್ವನಾಥನಹಳ್ಳಿಯಲ್ಲಿ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಪರದಾಡುವಂತೆ ಆಗಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸುವುದೂ ಕಷ್ಟವಾಗಿದೆ!

ಗ್ರಾಮದಲ್ಲಿ ಸುಮಾರು 75 ಮನೆಗಳಿದ್ದು, ಪರಿಶಿಷ್ಟ ಜಾತಿಯ ಕುಟುಂಬಗಳೇ ಹೆಚ್ಚಿವೆ. ಇಡೀ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲು ಒಂದು ಕೊಳವೆಬಾವಿ ಇದ್ದು, ಅದರಲ್ಲೂ ನೀರು ಕಡಿಮೆ ಆಗಿದೆ. ವಿದ್ಯುತ್ ಸರಬರಾಜು ಇದ್ದಾಗ ದಿನಕ್ಕೆ ಒಂದು ಗಂಟೆ ನೀರು ಬಿಡುತ್ತಾರೆ. ಕೊಳವೆಬಾವಿಯಲ್ಲಿ ನೀರು ಕಡಿಮೆ ಇರುವುದರಿಂದ ಅರ್ಧ ಗಂಟೆ ಮಾತ್ರ ನೀರು ಬರುತ್ತದೆ. ಇದರಿಂದ ಪ್ರತೀ ಮನೆಗೆ ಕೇವಲ ಮೂರ್ನಾಲ್ಕು ಕೊಡ ನೀರು ಸಿಗುತ್ತದೆ.

‘ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ ಜನ ಪರಿತಪಿಸುತ್ತಿದ್ದರೂ ಅಧಿಕಾರಿಗಳಾಗಲೀ, ಜನಪ್ರತಿನಿಧಿ ಗಳಾಗಲೀ ಗಮನ ಹರಿಸಿಲ್ಲ. ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದು ಅದಕ್ಕೂ ಸಂಪರ್ಕ ಕಲ್ಪಿಸಿಲ್ಲ. ಗ್ರಾಮದಲ್ಲಿ ಮತ್ತೊಂದು ಕೊಳವೆಬಾವಿ ಕೊರೆಸಿದರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ’ ಎಂದು ಗ್ರಾಮದ ಜಿ.ಬಸವರಾಜು ಆಗ್ರಹಿಸಿದ್ದಾರೆ.

‘ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಕೆಗೂ ತೊಂದರೆ ಆಗಿದೆ. ನಿತ್ಯ 2 ಕೊಡ ನೀರು ಸಂಗ್ರಹಿಸಿ ಬಿಸಿಯೂಟ ತಯಾರಿಸುತ್ತಿದ್ದೆವು. ಆದರೆ ಈಚೆಗೆ ಅಷ್ಟೂ ನೀರು ಸಿಗುವುದಿಲ್ಲ. ಟ್ಯಾಂಕರ್ ಗಳಲ್ಲಿ ತೋಟಗಳಿಗೆ ನೀರು ಸರಬರಾಜು ಮಾಡುತ್ತಿರುವ ರೈತರಿಂದ ನೀರು ಪಡೆದು ಊಟ ತಯಾರಿಸುತ್ತಿದ್ದೇವೆ. ಈಚೆಗೆ ಅವರೂ ನೀರು ಕೊಡುತ್ತಿಲ್ಲ’ ಎಂದು ಶಿಕ್ಷಕರು ಅಳಲು ತೋಡಿಕೊಂಡರು.

ಕೊಳವೆ ಬಾವಿ ಮುಂದೆ ಕೊಡಗಳನ್ನಿಟ್ಟು ನೀರಿಗಾಗಿ ಹಗಲೂ ರಾತ್ರಿ ಕಾಯುತ್ತೇವೆ. ಆದರೂ ಮೂರು ಕೊಡ ನೀರು ಸಿಗುವುದಿಲ್ಲ. ಕೆಲಸ ಬಿಟ್ಟು ನೀರಿಗಾಗಿ ಕಾಯಯುವ ಸ್ಥಿತಿ ಇದೆ ಎಂದು ಮಹಿಳೆಯರು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry