ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ನುಡಿದಂತೆ ನಡೆದಿದ್ದೇವೆ ಮತ್ತೊಮ್ಮೆ ಆಶೀರ್ವದಿಸಿ -ಸಿದ್ದರಾಮಯ್ಯ

Last Updated 16 ಮಾರ್ಚ್ 2018, 6:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ/ ಗೌರಿಬಿದನೂರು: ‘ಐದು ವರ್ಷಗಳಲ್ಲಿ ಜನಪರ ಆಡಳಿತ ಕೊಟ್ಟಿದ್ದೇವೆ. ನುಡಿದಂತೆ ನಡೆದು ನಿಮ್ಮ ವಿಶ್ವಾಸ ಉಳಿಸಿಕೊಂಡು ನಿರೀಕ್ಷೆಗೆ ತಕ್ಕಂತೆ ಆಡಳಿತ ಕೊಟ್ಟಿದ್ದೇವೆ. ಹೀಗಾಗಿ ಮತ್ತೊಮ್ಮೆ ನೀವು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದರು.

ಪಟ್ಟಣದ ಹೊರವಲಯದ ನೇತಾಜಿ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗೌರಿಬಿದನೂರಿನ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮಗಿಂತಲೂ ಹಿಂದೆ ಬಿಜೆಪಿ ಆಡಳಿತದಲ್ಲಿ ಐದು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳಾದರು. ಆದರೆ ನಾನು ನಿಮ್ಮ ಆರ್ಶೀವಾದದಿಂದ ಐದು ವರ್ಷ ಜನಸೇವೆ ಮಾಡಿದೆ. ದೇವರಾಜ ಅರಸು ನಂತರ ಐದು ವರ್ಷ ಪೂರ್ಣಗೊಳಿಸುವ ಅವಕಾಶ ಸಿಕ್ಕಿದ್ದು ನನಗೆ. ಕಳೆದ ಚುನಾವಣೆಯಲ್ಲಿ 165 ಭರವಸೆ ಕೊಟ್ಟಿದ್ದೆವು. ಆ ಪೈಕಿ ಈವರೆಗೆ 158 ಈಡೇರಿಸಿದ್ದೇವೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ’ ಎಂದು ಹೇಳಿದರು.

‘ಬಿಜೆಪಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬೇಡಿ. ಅವರಿಗೆ ಯಾವುದೇ ಕಾರ್ಯಕ್ರಮವಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬರುವ ಪಕ್ಷವಲ್ಲ. ಅವರು 25 ಸ್ಥಾನ ಗೆದ್ದರೆ ಅದೇ ಹೆಚ್ಚು. ಅಷ್ಟು ಗೆಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಕುಮಾರಸ್ವಾಮಿ ಸುಮ್ಮನೆ ನಾನೂ ಮುಖ್ಯಮಂತ್ರಿ ಎಂದು ಕನಸು ಕಾಣುತ್ತಿದ್ದಾರೆ. ಇನ್ನೊಂದೆಡೆ ಯಡಿಯೂರಪ್ಪ ನಾನೂ ಮುಖ್ಯಮಂತ್ರಿ ಎನ್ನುತ್ತಾರೆ’ ಎಂದು ವ್ಯಂಗ್ಯ ಮಾಡಿದರು.

‘ನಮ್ಮಷ್ಟು ಜನಪರ ಯೋಜನೆಗಳನ್ನು ಕುಮಾರಸ್ವಾಮಿ, ಯಡಿಯೂರಪ್ಪ ಮಾಡಿದ್ದಾರಾ? ಅಧಿಕಾರ ನಡೆಸಿ ಎಂದರೆ ಯಡಿಯೂರಪ್ಪ ಅವರು ಲಂಚ ತೆಗೆದುಕೊಂಡು ಜೈಲಿಗೆ ಹೋದರು. ಅವರ ಹಿಂದೆ ಬಿಜೆಪಿ ಅನೇಕ ಮುಖಂಡರು ಜೈಲಿಗೆ ಹೋದರು. ಇದೆಲ್ಲ ಗೊತ್ತಿದ್ದರೂ ಮೋದಿ ಅವರು ಶೇ100 ಭ್ರಷ್ಟಾಚಾರ ಮಾಡಿದ ಯಡಿಯೂರಪ್ಪ ಅವರನ್ನು ಪಕ್ಕದಲ್ಲಿಯೇ ಇಟ್ಟುಕೊಂಡು ನಮ್ಮದು ಶೇ10 ಕಮಿಷನ್ ಸರ್ಕಾರ ಎಂದು ಆರೋಪ ಮಾಡುತ್ತಾರೆ. ಸ್ವತಂತ್ರ ಭಾರತದಲ್ಲಿ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿಯನ್ನು ನಾನು ಕಂಡಿಲ್ಲ’ ಎಂದರು.

‘ನಾವು ಈಗಾಗಲೇ ₹ 13 ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಂಡು ₹ 3,000 ಕೋಟಿ ಖರ್ಚು ಮಾಡಿದ್ದೇವೆ. ಬೆಂಗಳೂರಿನ ತ್ಯಾಜ್ಯ ನೀರು ಶುದ್ಧೀಕರಿಸಿ ಜಿಲ್ಲೆಯ ಕೆರೆಗಳನ್ನು ತುಂಬಲು ಮುಂದಾಗಿದ್ದೇವೆ. ಆದರೆ ಕುಮಾರಸ್ವಾಮಿ ಎತ್ತಿನಹೊಳೆ ಯೋಜನೆಯಲ್ಲಿ ನೀರೇ ಬರುವುದಿಲ್ಲ ಎಂದು ಸುಳ್ಳು ಹೇಳುತ್ತಾರೆ. ಇದನ್ನು ನಂಬಬೇಡಿ. ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಜಿಲ್ಲೆ ಮಾಡಿದ್ದು ಬಿಟ್ಟು ಬೇರೆ ಏನು ಮಾಡಿದ್ದಾರೆ? ಈ ಜಿಲ್ಲೆಯಲ್ಲಿ ಏನಾದರೂ ಅಭಿವೃದ್ಧಿಯಾಗಿದ್ದರೆ ಅದು ನಮ್ಮ ಸರ್ಕಾರ ಮಾಡಿದ್ದು’ ಎಂದು ತಿಳಿಸಿದರು.

‘ಇಲ್ಲಿ ನಾಲ್ಕು ಬಾರಿ ಒಳ್ಳೆಯ ಶಾಸಕನನ್ನು ಆಯ್ಕೆ ಮಾಡಿದ್ದಿರಿ. ಕಳೆದ ಐದು ವರ್ಷಗಳಲ್ಲಿ ಶಿವಶಂಕರರೆಡ್ಡಿ ಅವರು ಕೂಡ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇಷ್ಟೆಲ್ಲ ಮಾಡಿದ ಮೇಲೆ ನೀವು ನಮಗೆ ಆಶೀರ್ವಾದ ಮಾಡಬೇಕಲ್ಲ? ಶಿವಶಂಕರರೆಡ್ಡಿ ಅವರು ಮತ್ತೊಮ್ಮೆ ಶಾಸಕರಾಗಿ ಬರಬೇಕಲ್ವಾ? ಮಾಡ್ತೀರಲ್ವಾ’ ಎನ್ನುತ್ತ ಪ್ರಶ್ನಿಸುತ್ತಲೇ ನೆರೆದವರಿಂದಲೇ ‘ಹೌದು’ ಎಂಬ ಘೋಷಣೆ ಮೊಳಗಿಸಿದರು.

ಸಂಸದ ವೀರಪ್ಪ ಮೊಯಿಲಿ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವ ಸರ್ಕಾರ ರಾಜ್ಯದ ಇತಿಹಾಸದಲ್ಲಿಯೇ ಎಲ್ಲಾ ವರ್ಗದ ಜನತೆಗೂ ಅನುಕೂಲವಾಗುವ ಯೋಜನೆಗಳನ್ನು ರೂಪಿಸಿ, ಆರ್ಥಿಕ ಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗಾಗಿ ಹಿಂದಿದ್ದ ಸರ್ಕಾರಗಳಿಗಿಂತ ಮೂರು ಪಟ್ಟು ಹೆಚ್ಚು ಹಣ ಖರ್ಚು ಮಾಡಿದೆ’ ಎಂದು ಹೇಳಿದರು.

ವಿಧಾನಸಭಾ ಉಪಸಭಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ‘ಕಳೆದ 20 ವರ್ಷಗಳಲ್ಲಿ ತಾಲ್ಲೂಕಿನಲ್ಲಿ ನಡೆಯದ ಅಭಿವೃದ್ಧಿ ಕಾರ್ಯಗಳು ಕಳೆದ ಐದು ವರ್ಷಗಳಲ್ಲಿ ನಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ. ನಮ್ಮ ಸರ್ಕಾರ ಇವತ್ತು ಇಡೀ ದೇಶದಲ್ಲಿಯೇ ಮಾದರಿಯಾಗಿದೆ. ಮುಂದಿನ ಬಾರಿಯೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕು ಎಂಬುದೇ ನಮ್ಮೆಲ್ಲರ ಆಶಯ’ ಎಂದು ಹೇಳಿದರು.

ಗೃಹ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್ ಹೆಗ್ಡೆ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ಜಯಂದರ್, ಮುಖಂಡರಾದ ಎಚ್.ಎನ್.ಪ್ರಕಾಶರೆಡ್ಡಿ, ಹನುಮಂತರೆಡ್ಡಿ, ಅರುಂದತಿ, ಎನ್.ಚಿಕ್ಕೇಗೌಡ, ಇಬ್ನಿ ಹಸನ್, ಎಂ.ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಯೋಗಿ ಮಾತು ಕೇಳಬೇಡಿ
‘ರಾಜ್ಯದಲ್ಲಿ ಎಲ್ಲ ಧರ್ಮದ ನಾವೆಲ್ಲರೂ ಒಂದೇ ತಾಯಿ ಮಕ್ಕಳಂತಿದ್ದೇವೆ. ಆದರೆ ಬಿಜೆಪಿಯವರು ಇಲ್ಲಿ ಹುಳಿ ಹಿಂಡಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕರೆದುಕೊಂಡು ಬರುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

‘ಇತ್ತೀಚಿಗೆ ಉತ್ತರಪ್ರದೇಶದಲ್ಲಿ ನಡೆದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ತಮ್ಮ ಸ್ಥಾನವನ್ನೇ ಉಳಿಸಿಕೊಳ್ಳದವರು ಕರ್ನಾಟಕಕ್ಕೆ ಬಂದು ಪಾಠ ಹೇಳಲು ಬರುತ್ತಾರೆ. ಇವರಿಗೆ ನಾಚಿಕೆಯಾಗಬೇಡವೆ? ಅವರ ಮಾತು ಕೇಳುತ್ತೀರಾ? ಕೇಳಬೇಡಿ’ ಎಂದು ಸಿದ್ದರಾಮಯ್ಯ ಹೇಳಿದರು.

*
ಸಮೀಕ್ಷೆಗಳು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿವೆ. ಹೀಗಾಗಿ ಬಿಜೆಪಿಯವರು, ಜೆಡಿಎಸ್‌ನ ಅಪ್ಪ–ಮಕ್ಕಳು ಹತಾಶರಾಗಿ ನನ್ನನ್ನು ಬೈದಾಡುತ್ತಿದ್ದಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT