ಅಧಿಕಾರಿಗಳ ನಿರ್ಲಕ್ಷ್ಯ: ರೈತರ ಆಕ್ರೋಶ

7

ಅಧಿಕಾರಿಗಳ ನಿರ್ಲಕ್ಷ್ಯ: ರೈತರ ಆಕ್ರೋಶ

Published:
Updated:

ಚನ್ನಪಟ್ಟಣ: ಅಸಮರ್ಪಕ ವಿದ್ಯುತ್ ಪೂರೈಕೆ, ಅಕ್ರಮ ಸಕ್ರಮ ಹೆಸರಿನಲ್ಲಿ ಬೆಸ್ಕಾಂ ರೈತರಿಗೆ ಕೊಡುತ್ತಿರುವ ಕಿರುಕುಳ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗುರುವಾರ ಪಟ್ಟಣದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಬೆಸ್ಕಾಂ ಕಂಪನಿಯು ರೈತರನ್ನು ಸುಲಿಗೆ ಮಾಡುತ್ತಾ ಹಗಲು ದರೋಡೆ ನಡೆಸುತ್ತಿದೆ. ಅಕ್ರಮ –ಸಕ್ರಮ ಹೆಸರಿನಲ್ಲಿ ಬೆಸ್ಕಾಂ ಕಂಪನಿ ರೈತರಿಗೆ ಕಿರುಕುಳ ನೀಡುತ್ತಾ ಶೋಷಣೆ ಮಾಡುತ್ತಿದೆ. ₹15 ಸಾವಿರ ಹಣ ಪಾವತಿಸಿಕೊಂಡು ಟ್ರಾನ್ಸ್ ಫಾರ್ಮರ್ ಸಂಪರ್ಕ ನೀಡದೆ ವಿನಾಕಾರಣ ಅಲೆದಾಡುವಂತೆ ಆಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುವುದಾಗಿ ಹೇಳಿ ತಮಗಿಷ್ಟ ಬಂದಂತೆ ವಿದ್ಯುತ್ ಸ್ಥಗಿತ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದೆ ರೈತರ ಬೆಳೆಕೈಗೆ ಬಾರದೆ ಒಣಗಿ ನಷ್ಟ ಅನುಭವಿಸುವಂತಾಗಿದೆ. ಇದನ್ನು ಕಂಡೂ ಕಾಣದಂತೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಿಡಿಕಾರಿದರು.

ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ರೈತರ ಸಮಸ್ಯೆಗಳ ಬಗ್ಗೆ ಸ್ಪಂದಿಸದಿದ್ದರೆ ರೈತ ಸಂಘದಿಂದ ಪ್ರತಿ ತಾಲ್ಲೂಕಿನಿಂದ ಗ್ರಾಹಕರ ವೇದಿಕೆಗೆ ಬೆಸ್ಕಾಂ ಅಧಿಕಾರಿಗಳ ವಿರುದ್ಧ ದೂರ ದಾಖಲು ಮಾಡಲಾಗುವುದು ಎಂದು ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ರಾಮು ಎಚ್ಚರಿಸಿದರು.

ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯಂತ್ರಿಸುವವರು ಇಲ್ಲದಂತಾಗಿದೆ. ಇದನ್ನು ಸರಿಪಡಿಸದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಲ್ಲಯ್ಯ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಬೆಸ್ಕಾಂಹಿರಿಯ ಅಧಿಕಾರಿಗಳು ಪ್ರತಿಭಟನಾನಿತರರ ಅಹವಾಲು ಆಲಿಸಿ, ಸಮಸ್ಯೆ ಬಗೆಹರಿಸುವುದಾಗಿ ಪ್ರತಿಭಟನಾಕಾರರ ಮನವೊಲಿಸಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ರಾಮಕೃಷ್ಣಪ್ಪ, ತಿಮ್ಮೇಗೌಡ, ಅಪ್ಪಾಜಿಗೌಡ, ನಂಜುಂಡಯ್ಯ, ನಾಗೇಶ್, ಎ.ಪಿ.ವಿಜಯಕುಮಾರ್, ಎಚ್.ಸಿ.ಕೃಷ್ಣಯ್ಯ, ದೇವರಾಜು, ಪ್ರಕಾಶ್, ಎಚ್.ಪಿ.ಮರಿಸಿದ್ದೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry