ಜಟ್ಟಂಗಿ ರಾಮೇಶ್ವರ ಜಾತ್ರೆಗೆ ಸಿದ್ಧತೆ

ಭಾನುವಾರ, ಮಾರ್ಚ್ 24, 2019
27 °C
ರಾಮಾಯಣ ಇತಿಹಾಸ, ಬೆಟ್ಟದ ಮೇಲೆ ಜಾತ್ರೆ

ಜಟ್ಟಂಗಿ ರಾಮೇಶ್ವರ ಜಾತ್ರೆಗೆ ಸಿದ್ಧತೆ

Published:
Updated:
ಜಟ್ಟಂಗಿ ರಾಮೇಶ್ವರ ಜಾತ್ರೆಗೆ ಸಿದ್ಧತೆ

ಮೊಳಕಾಲ್ಮುರು: ಜಿಲ್ಲೆಯ ಐತಿಹಾಸಿಕ ಸ್ಥಳಗಳಲ್ಲಿ ಒಂದಾದ ತಾಲ್ಲೂಕಿನ ದೇವಸಮುದ್ರ ಸಮೀಪದ ಜಟ್ಟಂಗಿ ರಾಮೇಶ್ವರ ಬೆಟ್ಟದಲ್ಲಿ ಮಾರ್ಚ್‌ 20ರಂದು ನಡೆಯಲಿರುವ ಜಾತ್ರೆಗೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

ರಾಮಯಣದ ಐತಿಹ್ಯ ಹೊಂದಿರುವ ಈ ಪುಣ್ಯಕ್ಷೇತ್ರದಲ್ಲಿ ಪ್ರತಿವರ್ಷ ಯುಗಾದಿ ವೇಳೆ ಧಾರ್ಮಿಕ ಕಾರ್ಯಕ್ರಮವನ್ನು ನೂರಾರು ವರ್ಷಗಳಿಂದ ಆಚರಿಸಲಾಗುತ್ತಿದೆ.

ಈ ವರ್ಷ ಸೋಮವಾರ ಬೆಟ್ಟದ ಮೇಲೆ ರಾಮೇಶ್ವರ ಜಾತ್ರೆ ನಡೆಯಲಿದೆ. ಇದರ ಅಂಗವಾಗಿ ಮಾರ್ಚ್‌ 19ರಿಂದ ವಿಶೇಷ ಪೂಜೆ, ಜಾಗರಣೆ, ಹೋಮಗಳನ್ನು ಹಮ್ಮಿಕೊಳ್ಳಲಾಗಿದೆ. 20ರಂದು ಬೆಳಿಗ್ಗೆ ವಿಶೇಷ ಧಾರ್ಮಿಕ ಪೂಜೆ ನಂತರ ರಾಮಸಾಗರ ಗ್ರಾಮಸ್ಥರು ತರುವ ಕಳಸವನ್ನು ಸ್ವೀಕರಿಸಿ ಜಾತ್ರೆಗೆ ಚಾಲನೆ ನೀಡಲಾಗುವುದು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಇದಾದ ನಂತರ ಬೆಟ್ಟದ ಕೆಳಗಡೆ ಇರುವ ಪರಮೇಶ್ವರ ಚೌಕಿಮಠ ಆವರಣದಲ್ಲಿಯೂ ಸಂಜೆ ರಥೋತ್ಸವ ನಡೆಯಲಿದೆ.

ಕ್ಷೇತ್ರದ ಹಿನ್ನೆಲೆ: ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ತಡೆದು ನಿಲ್ಲಿಸಲು ಹೋದ ಪಕ್ಷಿರಾಜ ಜಟಾಯು ಗಾಯಗೊಂಡು, ಜಟ್ಟಂಗಿ ಬೆಟ್ಟದ ಮೇಲೆ ಬಿದ್ದಿತಂತೆ. ನಂತರ ನಡೆದ ವಿಷಯವನ್ನು ರಾಮನಿಗೆ ತಿಳಿಸಿ ಮೋಕ್ಷ ನೀಡುವಂತೆ ಕೇಳಿಕೊಂಡಿತಂತೆ. ರಾಮ ಇದೇ ಬೆಟ್ಟದಲ್ಲಿ ಜಟಾಯುವನ್ನು ಸಮಾಧಿ ಮಾಡಿದ ಎಂಬ ನಂಬಿಕೆಯಿದೆ.

ನಂತರ ರಾಮ ಬೆಟ್ಟದ ಮೇಲೆ ಲಿಂಗರೂಪಿಯಾಗಿ ಪ್ರತಿಷ್ಠಾಪನೆಗೊಂಡನೆಂದೂ, ಈ ಕಾರಣಕ್ಕಾಗಿ ಜಟ್ಟಂಗಿ ರಾಮೇಶ್ವರ ಬೆಟ್ಟ ಎಂಬ ಹೆಸರು ಬಂದಿತು ಎಂದು ದೇವಸ್ಥಾನದ ಸಮಿತಿಯ ಪಿ.ಕೆ. ಕುಮಾರಸ್ವಾಮಿ ಹೇಳುತ್ತಾರೆ.

ಬೃಹತ್‌ ಬಂಡೆಗಳಿಂದ ಕೂಡಿರುವ ಬೆಟ್ಟದ ಮೇಲೆ ಮರದ ದಿಮ್ಮಿಗಳಿಂದ ಕೂಡಿದ ಜಟಾಯು ಸಮಾಧಿ, ಕಾಲಭೈರವ, ಚಾಮುಂಡೇಶ್ವರಿ, ಗಣಪತಿ, ಸೂರ್ಯದೇವರು, ಗಣಪತಿ ಒಳಗೊಂಡಂತೆ ಹತ್ತಾರು ದೇವಸ್ಥಾನಗಳು ಹಾಗೂ 101 ಶಿವಲಿಂಗ ಇರುವುದು ಇಲ್ಲಿನ ವಿಶೇಷ.

‘ಸಮುದ್ರಮಟ್ಟದಿಂದ 3,469 ಅಡಿ ಎತ್ತರದಲ್ಲಿರುವ ಈ ದೇವಸ್ಥಾನ ಇರುವ ಸ್ಥಳ, ಹಿಂದೆ ಜನವಸತಿ ಪ್ರದೇಶವಾಗಿತ್ತು. 10ನೇ ಶತಮಾನಕ್ಕೂ ಮುನ್ನ ಇಟ್ಟಿಗೆಯಿಂದ ಕಟ್ಟಿದ್ದ ದೇವಸ್ಥಾನವಿತ್ತು. ‘ಲಿಂಗಸಿವ ಜೀವ’ ಎಂಬ ಅರ್ಚಕ ಭಿಕ್ಷಾಟನೆ ಮೂಲಕ ಸಂಗ್ರಹಿಸಿದ ಧನದಿಂದ, ಕಲ್ಲಿನ ದೇವಸ್ಥಾನ ನಿರ್ಮಿಸಿದ ಎಂಬ ಐತಿಹ್ಯವಿದೆ’ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry