ಚಿನ್ನೇನಹಳ್ಳಿ: ನೀರಿಗೆ ತತ್ವಾರ

7

ಚಿನ್ನೇನಹಳ್ಳಿ: ನೀರಿಗೆ ತತ್ವಾರ

Published:
Updated:
ಚಿನ್ನೇನಹಳ್ಳಿ: ನೀರಿಗೆ ತತ್ವಾರ

ಕೊಟ್ಟೂರು: ತಾಲ್ಲೂಕಿನ ಕಾಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನೇನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇದುವರೆಗೆ ಸುಮಾರು ಎಂಟು ಕೊಳವೆ ಬಾವಿಗಳನ್ನು ಕೊರೆಸಿದ್ದರೂ ನೀರು ದೊರಕದೆ ಪರಿಸ್ಥಿತಿ ಬಿಗಡಾಯಿಸಿದೆ.

ಗ್ರಾಮದಲ್ಲಿ ಕೃಷಿಕರು ಹಾಗೂ ಕೂಲಿ ಕೆಲಸಗಾರರು ಹೆಚ್ಚಿದ್ದು, ದುಡಿಮೆಯನ್ನು ಬಿಟ್ಟು ನೀರಿಗಾಗಿ ಕಾಯುವ ಸನ್ನಿವೇಶ ನಿರ್ಮಾಣವಾಗಿದೆ. ಅವರೊಂದಿಗೆ ಮಕ್ಕಳೂ ಶಾಲೆಯನ್ನು ಬಿಟ್ಟು ನೀರಿಗಾಗಿ ಅಲೆದಾಡುತ್ತಿದ್ದಾರೆ.

‘ಬೇಸಿಗೆ ಆರಂಭಕ್ಕೂ ಮೊದಲೇ ಕಾಣಿಸಿಕೊಂಡಿರುವ ಕುಡಿಯುವ ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿ ತೀವ್ರಗೊಂಡರೆ ಏನು ಮಾಡುವುದು. ದಿನವಿಡೀ ಕಾದರೂ ಹನಿ ನೀರು ಸಿಗದಂತಹ ಪರಿಸ್ಥಿತಿ ಇದೆ’ ಎಂದು ಎಂ.ಶಿವರಾಜ್ ‘ಪ್ರಜಾವಾಣಿ’ಯೊಂದಿಗೆ ಅಸಹಾಯಕತೆ ವ್ಯಕ್ತಪಡಿಸಿದರು.

ಸುಮಾರು 200 ಕುಟುಂಬಗಳಿರುವ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗೆಂದೇ 3 ಕೊಳವೆ ಬಾವಿಗಳಿದ್ದು ಒಂದು ಬತ್ತಿದೆ. ಮತ್ತೊಂದರಲ್ಲಿ ದೊರಕುವ ಅಲ್ಪ ಸ್ವಲ್ಪ ನೀರನ್ನೇ ಅರ್ಧ ಗ್ರಾಮಕ್ಕೆ ಪೂರೈಸಲಾಗುತ್ತಿದೆ. ಉಳಿದ ಅರ್ಧ ಗ್ರಾಮಕ್ಕೆ ಟ್ಯಾಂಕರ್ ನೀರು ಸಾಕಾಗುತ್ತಿಲ್ಲ’ ಎಂದು ಗ್ರಾಮದ ಪರಶುರಾಂ ದೂರಿದರು.

ವ್ಯರ್ಥ ಟ್ಯಾಂಕ್‌: ನೀರು ಪೂರೈಕೆಗಾಗಿ 2012-13ನೇ ಸಾಲಿನಲ್ಲಿ ಒವರ್ ಹೆಡ್ ಟ್ಯಾಂಕ್ ನಿರ್ಮಿಸಿದ್ದು, ಆರಂಭದ ಒಂದೆರಡು ತಿಂಗಳು ಬಿಟ್ಟರೆ ಇದುವರೆಗೂ ನೀರು ಸಂಗ್ರಹಿಸಿಲ್ಲ. ಹೀಗಾಗಿ, ಅಲ್ಲಿ ಗಿಡಗಂಟೆ ಬೆಳೆದು ನಿಂತಿದೆ.

‘ಚೆನ್ನೇನಹಳ್ಳಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕಾಳಾಪುರ ಗ್ರಾಮಕ್ಕೆ ಪೂರೈಕೆ ಮಾಡುತ್ತಿರುವ ಕೊಳವೆಬಾವಿಯಿಂದ ಈ ಗ್ರಾಮಕ್ಕೂ ನೀರು ಪೂರೈಸಲಾಗುವುದು’ ಎಂದು ಪಂಚಾಯಿತಿ ಅಧ್ಯಕ್ಷ ಅಕ್ಕಪ್ಪ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry