ಹಿಂದೂ– ವೈದಿಕ ಧರ್ಮವಲ್ಲ

7

ಹಿಂದೂ– ವೈದಿಕ ಧರ್ಮವಲ್ಲ

Published:
Updated:

ಲಿಂಗಾಯತ ಜಾತಿ ಸಮೂಹಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬಹುದೆಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿರುವ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದ ಸಮಿತಿಯ ವರದಿಯ ಮುಖ್ಯಾಂಶಗಳನ್ನು ‘ಪ್ರಜಾವಾಣಿ’ ಪ್ರಕಟಿಸಿದೆ (ಮಾ.15).

ಇದನ್ನು ಗಮನಿಸಿದರೆ ಸಮಿತಿಯು ಹಿಂದೂ ಧರ್ಮವೆಂದರೆ ವೈದಿಕ ಧರ್ಮವೆಂದು ಭಾವಿಸಿ, ಅನೇಕ ವಿಷಯಗಳಲ್ಲಿ ವೈದಿಕಕ್ಕೂ, ಲಿಂಗಾಯತಕ್ಕೂ ಇರುವ ವ್ಯತ್ಯಾಸಗಳನ್ನು ಎತ್ತಿ ತೋರಿಸುತ್ತಾ, ತನ್ನ ಶಿಫಾರಸಿಗೆ ಸಮರ್ಥನೆ ನೀಡಿದಂತಿದೆ. ಆದರೆ ಹಿಂದೂ ಧರ್ಮ ಎಂದರೆ ವೈದಿಕ ಧರ್ಮವಲ್ಲ. ಅದು ವೈದಿಕವೂ ಸೇರಿದಂತೆ, ವೈದಿಕಕ್ಕೆ ಕಾಲಾನುಕಾಲದಲ್ಲಿ ಪ್ರತಿಕ್ರಿಯಿಸುತ್ತಾ, ಅದನ್ನು ಪ್ರಶ್ನಿಸುತ್ತಾ ಅದಕ್ಕೆ ಸವಾಲೆಸೆಯುತ್ತಾ ಅದನ್ನು ಮರುನಿರೂಪಿಸುತ್ತಾ ಬಂದಿರುವ ಅವೈದಿಕ- ಅರೆ ವೈದಿಕ, ಜಾನಪದ, ಚಾರ್ವಾಕ, ನಾಸ್ತಿಕ ಮತ್ತು ಬುಡಕಟ್ಟು ಧರ್ಮಗಳ ಒಕ್ಕೂಟವಾಗಿ ಕಾಲಾನುಕಾಲದಿಂದ ತನ್ನದೇ ಚಲನಶೀಲತೆಯೊಂದಿಗೆ ಬದುಕಿ ಬಂದಿದೆ. ಹೀಗೆ ವ್ಯಾಸ- ವಾಲ್ಮೀಕಿಗಳಿಂದ ಹಿಡಿದು ಶಂಕರಾಚಾರ್ಯ-ಕಬೀರರೂ ಸೇರಿದಂತೆ, ನಮ್ಮ ಕೊಡೇಕಲ್ ಬಸವಣ್ಣ- ಮಂಟೇಸ್ವಾಮಿಯವರೆಗೂ ಹಿಂದೂ ಎಂಬ ಅಭಿದಾನ ಹರಡಿದೆ. ಹಾಗಾಗಿಯೇ ತಮ್ಮನ್ನು ‘ಹೆಮ್ಮೆಯ ಹಿಂದೂ’ ಎಂದು ಕರೆದುಕೊಳ್ಳುತ್ತಿದ್ದ ಗಾಂಧಿ, ‘ಹಿಂದೂ ಧರ್ಮ ಋಷಿ ಮುನಿಗಳ ಧರ್ಮ ಮಾತ್ರವಾಗಿರದೆ, ಸಾಧು-ಸಂತರ ಪರಂಪರೆಯ ಧರ್ಮವೂ ಆಗಿದೆ’ ಎಂದು ನಿರೂಪಿಸುತ್ತಾ ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿಯನ್ನು ಧರ್ಮದ ಭಾಗವೆಂದು ಒಪ್ಪಲು ನಿರಾಕರಿಸಿದ್ದು.

ಹಿಂದೂ ಎಂಬ ಶಬ್ದ ಚಾಲ್ತಿಗೆ ಬಂದುದೇ ಭಾರತದ ವಾಯವ್ಯ ಗಡಿಯಾಚೆಯ ಜನರು ಭಾರತ ಉಪಖಂಡದ ಜೀವನಕ್ರಮ ಮತ್ತು ನಂಬಿಕೆಗಳನ್ನು ಒಟ್ಟಾಗಿ ಗುರುತಿಸಲು ‘ಸಿಂಧೂ ನದಿಯಾಚೆಯ ಸಂಸ್ಕೃತಿ’ ಎಂಬ ಅರ್ಥದಲ್ಲಿ ಎಂಬುದು ಇತಿಹಾಸದ ಪ್ರಾಥಮಿಕ ಪಾಠಗಳನ್ನು ಬಲ್ಲವರಿಗೂ ಗೊತ್ತು. ಆದರೆ ಇದು ಹಲವು ಕ್ಷೇತ್ರಗಳ ವಿದ್ವಾಂಸರನ್ನೂ, ಸಂಸ್ಕೃತಿ ಚಿಂತಕರನ್ನೂ ಒಳಗೊಂಡ ಸಮಿತಿಗೆ ಏಕೆ ತಿಳಿಯಲಿಲ್ಲವೋ ಗೊತ್ತಾಗುತ್ತಿಲ್ಲ.

ಹಾಗಾಗಿ ಲಿಂಗಾಯತ ಆಚರಣೆ ಮತ್ತು ನಂಬಿಕೆಗಳು ವೈದಿಕಕ್ಕೆ ವಿರುದ್ಧವಾದವು ಎಂಬ ಆಧಾರದ ಮೇಲೆ ಅದು ಹಿಂದೂ ಧರ್ಮದ ಭಾಗವಲ್ಲ ಎಂದು ಹೇಳಿ ಅದನ್ನು ಸ್ವತಂತ್ರ ಧರ್ಮ ಎಂದು ಘೋಷಿಸಬಹುದೆಂದು ಶಿಫಾರಸು ಮಾಡುವುದು ಸರಿಯಲ್ಲ. ಹಾಗೆ ಮಾಡುವುದಾದರೆ ಲಿಂಗಾಯತದ ಜೊತೆಗೆ ಹಲವು ಪಂಗಡಗಳು ಸ್ವತಂತ್ರ ಧರ್ಮಗಳೆನಿಸಿಕೊಳ್ಳಲು ಯೋಗ್ಯವಾಗುತ್ತವೆ. ಅದೇನೇ ಇರಲಿ, ಲಿಂಗಾಯತವು ಜಾತಿ ಶ್ರೇಣೀಕರಣವನ್ನು ಒಪ್ಪುವುದಿಲ್ಲ ಎಂಬ ಸಮಿತಿಯ ವರದಿಯಲ್ಲಿನ ಹೇಳಿಕೆ ವಾಸ್ತವವನ್ನು ನೋಡಿದರೆ ಹಾಸ್ಯಾಸ್ಪದವೆನ್ನಿಸುತ್ತದೆ. ಏಕೆಂದರೆ ಲಿಂಗಾಯತವು ಹಿಂದೂ ಧರ್ಮದಡಿಯ ಇತರೆಲ್ಲ ಜಾತಿ ‘ಒಕ್ಕೂಟ’ಗಳಂತೆಯೇ ಅಸ್ಪೃಶ್ಯತೆಯನ್ನು ಆಚರಿಸುವ ಉಪಜಾತಿಗಳ ಒಂದು ಒಕ್ಕೂಟವೇ ಆಗಿರುವುದು ನಮ್ಮ ಕಣ್ಣು ಕುಕ್ಕುವ ಸತ್ಯವಾಗಿದೆ. ಇವನ್ನು ಬಿಟ್ಟು ಸಾರ್ವಜನಿಕವಾಗಿ ಗೊತ್ತಿಲ್ಲದ ಬೇರೇನಾದರೂ ಕಾರಣಗಳು ಸಮಿತಿಯ ಪರಿಗಣೆನೆಗೆ ಒಳಗಾಗಿದ್ದವೆಂದರೆ ಅದು ಬೇರೆ ವಿಷಯ. ಹೀಗಾಗಿ ಸಮಿತಿಯ ಸದ್ಯದ ಶಿಫಾರಸು, ‘ನಮ್ಮ ಬುದ್ಧಿಜೀವಿಗಳು ಹಿಂದೂ ಧರ್ಮದ ವಿರೋಧಿಗಳಾಗಿದ್ದು ಅದನ್ನು ನಾಶ ಮಾಡುವುದೇ ಅವರ ಗುರಿಯಾಗಿದೆ’ ಎಂಬ ಹಿಂದೂ ಕೋಮುವಾದದ ಪ್ರಚಾರಕ್ಕೆ ಮತ್ತಷ್ಟು ಕುಮ್ಮಕ್ಕು ಕೊಡುವಂತಿದೆ ಮತ್ತು ‘ಹಿಂದುತ್ವ’ ಎಂಬ ಧರ್ಮದ ಏಕರೂಪೀಕರಣವನ್ನು ಪ್ರೋತ್ಸಾಹಿಸುವಂತಿದೆ ಎಂದೇ ಹೇಳಬೇಕು.

–ಡಿ.ಎಸ್. ನಾಗಭೂಷಣ, ಶಿವಮೊಗ್ಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry