ಗದ್ದಲದಲ್ಲಿ ಕೊಚ್ಚಿಹೋದ ಕಲಾಪ

7

ಗದ್ದಲದಲ್ಲಿ ಕೊಚ್ಚಿಹೋದ ಕಲಾಪ

Published:
Updated:
ಗದ್ದಲದಲ್ಲಿ ಕೊಚ್ಚಿಹೋದ ಕಲಾಪ

ನವದೆಹಲಿ: ಸತತ 11 ದಿನವೂ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳು ವಿರೋಧ ಪಕ್ಷಗಳ ಗದ್ದಲಕ್ಕೆ ಬಲಿಯಾದವು.

ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದ್ದರಿಂದ ಎನ್‌ಡಿಎ ಸರ್ಕಾರದ ವಿರುದ್ಧ ತೆಲುಗು ದೇಶಂ(ಟಿಡಿಪಿ) ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಸೋಮವಾರವೂ ಲೋಕಸಭೆಯಲ್ಲಿ ಚರ್ಚೆಗೆ ಬರಲಿಲ್ಲ.

ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆಯೇ ಹಲವು ಬೇಡಿಕೆ ಮುಂದಿಟ್ಟುಕೊಂಡು ಟಿಆರ್‌ಎಸ್‌, ಐಎಡಿಎಂಕೆ, ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಸದಸ್ಯರು ಸ್ಪೀಕರ್‌ ಪೀಠದ ಎದುರು ನುಗ್ಗಿ ಪ್ರತಿಭಟನೆಯಲ್ಲಿ ತೊಡಗಿದರು.

ಹಲವು ಬಾರಿ ಮನವಿ ಮಾಡಿಕೊಂಡ ಹೊರತಾಗಿಯೂ ಗದ್ದಲ ನಿಯಂತ್ರಣ ಬಾರದಿದ್ದಾಗ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಒಂದು ದಿನದ ಮಟ್ಟಿಗೆ ಕಲಾಪ ಮುಂದೂಡಿದರು. ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲು ಸಾಧ್ಯವಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಮಂಗಳವಾರ ಎರಡೂ ಪಕ್ಷಗಳ ಸದಸ್ಯರು ಮತ್ತೆ ಹೊಸದಾಗಿ ಅವಿಶ್ವಾಸ ನಿರ್ಣಯ ಮಂಡಿಸಲಿದ್ದು, ಆಗ ಚರ್ಚೆಗೆ ಬರುವ ನಿರೀಕ್ಷೆ ಇದೆ.

ಚರ್ಚೆಗೆ ಸರ್ಕಾರ ಸಿದ್ಧ

‘ಅವಿಶ್ವಾಸ ನಿರ್ಣಯ ಸೇರಿದಂತೆ ವಿರೋಧ ಪಕ್ಷಗಳು ಎತ್ತಿರುವ ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದು ಗೃಹ ಸಚಿವ ರಾಜನಾಥ್ ಸಿಂಗ್‌ ಲೋಕಸಭೆಗೆ ತಿಳಿಸಿದರು.

ಪ್ರತಿಭಟನೆ ಕೈಬಿಟ್ಟು ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ ಸಚಿವರು, ವಿರೋಧ ಪಕ್ಷಗಳ ಸಹಕಾರ ಕೋರಿದರು.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ತೆಲುಗು ದೇಶಂ (ಟಿಡಿಪಿ) ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಶುಕ್ರವಾರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದವು.

ಕಾಂಗ್ರೆಸ್‌, ಎಡ ಪಕ್ಷಗಳು, ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಕ್ಷ, ಎಐಎಂಐಎಂ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.

ಕೇಂದ್ರ ಸರ್ಕಾರದ ವಿರುದ್ಧ ನಾಲ್ಕೂವರೆ ವರ್ಷದಲ್ಲಿ ಇದೇ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯ ಮಂಡಿಸಲಾಗಿದ್ದು, ಇದರಿಂದ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದೆ.

ರಾಜ್ಯಸಭೆಯಲ್ಲೂ ಇದೇ ಸ್ಥಿತಿ

ಇವೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಟಿಡಿಪಿ ಮತ್ತು ಎಐಎಡಿಎಂಕೆ ಸದಸ್ಯರು ಪ್ರತಿಭಟನೆ ನಡೆಸಿದ ಕಾರಣ ರಾಜ್ಯಸಭೆಯಲ್ಲಿಯೂ ಇದೇ ಸ್ಥಿತಿ ನಿರ್ಮಾಣವಾಗಿತ್ತು.

ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರಾಜ್ಯಸಭೆಯ ಸದಸ್ಯರು ಫಲಕಗಳನ್ನು ಪ್ರದರ್ಶಿಸಿದರು. ಪರಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಕಲಾಪ ಮುಂದೂಡಲಾಯಿತು.

ಮಾರ್ಚ್‌ 5ರಿಂದ ಆರಂಭವಾಗಿರುವ ಬಜೆಟ್‌ ಅಧಿವೇಶನ ಬಹುತೇಕ ಗದ್ದಲದಲ್ಲಿಯೇ ಕೊನೆಗಾಣುತ್ತಿದೆ.

ಒಟ್ಟು 539 ಬಲದ ಲೋಕಸಭೆಯಲ್ಲಿ ಸರಳ ಬಹುಮತಕ್ಕಿಂತ (270) ಹೆಚ್ಚಿನ ಸದಸ್ಯರ ಬಲವನ್ನು (315) ಎನ್‌ಡಿಎ ಹೊಂದಿದೆ. ಹೀಗಾಗಿ ಸದ್ಯಕ್ಕೆ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ.

* ಸದನದಲ್ಲಿ ಪ್ರತಿಧ್ವನಿಸಿದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆ ಹಗರಣ

* ವಿರೋಧ ಪಕ್ಷಗಳ ಸಹಕಾರ ಕೋರಿದ ಸರ್ಕಾರ

* ಅವಿಶ್ವಾಸ ನಿರ್ಣಯಕ್ಕೆ ವಿರೋಧ ಪಕ್ಷಗಳ ಬೆಂಬಲ ಕೋರಿದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು

*  ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದರೆ ಮತದಾನದಿಂದ ದೂರ ಉಳಿಯುವುದಾಗಿ ಶಿವಸೇನಾ ಘೋಷಣೆ

* ಸರ್ಕಾರವನ್ನು ಬೆಂಬಲಿಸಲ್ಲ, ವಿರೋಧಿಸುವುದೂ ಇಲ್ಲ: ಶಿವಸೇನಾ ಸ್ಪಷ್ಟನೆ

* ಈಚೆಗೆ ಅಗಲಿದ ಮಾಜಿ ಸಂಸದರು ಮತ್ತು ಭೌತವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಅವರಿಗೆ ಶ್ರದ್ಧಾಂಜಲಿ

* ಛತ್ತೀಸ್‌ಗಡದಲ್ಲಿ ನಕ್ಸಲೀಯರ ನೆಲಬಾಂಬ್‌ಗೆ ಬಲಿಯಾದ ಸಿಆರ್‌ಪಿಎಫ್‌ ಯೋಧರಿಗೆ ಗೌರವ

* ಲೋಕಸಭಾ ಉಪ ಚುನಾವಣೆಯಲ್ಲಿ ಆಯ್ಕೆಯಾದ ಸಮಾಜವಾದಿ ಮತ್ತು ಆರ್‌ಜೆಡಿ ಸಂಸದರ ಪ್ರಮಾಣ ವಚನ

 

ಸದನಕ್ಕೆ ರಂಗು ತಂದ ಬಣ್ಣದ ಬಟ್ಟೆಗಳು

ವಿವಿಧ ಪಕ್ಷಗಳ ಸದಸ್ಯರು ತಮ್ಮ ಪಕ್ಷವನ್ನು ಸಂಕೇತಿಸುವ ಬಣ್ಣದ ಬಟ್ಟೆ ಧರಿಸಿ ಬಂದಿದ್ದರಿಂದ ಸದನಗಳು ಕಳೆಗಟ್ಟಿದ್ದವು.

ಆಂಧ್ರ ಪ್ರದೇಶಕ್ಕೆ ಪ್ರತ್ಯೇಕ ಸ್ಥಾನಮಾನಕ್ಕೆ ಒತ್ತಾಯಿಸಲು ಸ್ಪೀಕರ್‌ ಮುಂದಿನ ಪೀಠಕ್ಕೆ ಬಂದ ಟಿಆರ್‌ಎಸ್‌ ಸದಸ್ಯರು ತಿಳಿ ಗುಲಾಬಿ ಮತ್ತು ಟಿಡಿಪಿ ಸಂಸದರು ಹಳದಿ ಬಣ್ಣದ ಅಂಗಿ ಮತ್ತು ಅಂಗವಸ್ತ್ರ ಧರಿಸಿದ್ದರು.

ಆಂಧ್ರ ಪ್ರದೇಶದ ಬಗ್ಗೆ ಕೇಂದ್ರ ಸರ್ಕಾರದ ಮಲತಾಯಿ ಧೊರಣೆ ಖಂಡಿಸಿ ಸೀರೆಯುಟ್ಟು ಬಂದಿದ್ದ ಟಿಡಿಪಿ ಸಂಸದ ಎನ್‌. ಶಿವಪ್ರಸಾದ್‌ ಎಲ್ಲರ ಗಮನ ಸೆಳೆದರು. ಕಾಂಗ್ರೆಸ್‌ ಸಂಸದೆ ರೇಣುಕಾ ಚೌಧರಿ ಅವರು ಶಿವಪ್ರಸಾದ್‌ ವಿನೂತನ ಪ್ರತಿಭಟನೆಗೆ ಬೆಂಬಲವಾಗಿ ನಿಂತರು.

ಕಾವೇರಿ ನದಿ ನೀರು ಹಂಚಿಕೆ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಎಐಎಡಿಎಂಕೆ ಸದಸ್ಯರು ಕಪ್ಪು, ಬಿಳಿ ಮತ್ತು ಕೆಂಪು ಬಣ್ಣದ ಶಾಲು ಪ್ರದರ್ಶಿಸಿದರು.

ಸಮಾಜವಾದಿ ಪಕ್ಷದ ಸಂಸದರು ಕೆಂಪು ಟೊಪ್ಪಿಗೆಗಳು ಸದನಕ್ಕೆ ರಂಗು ತಂದವು.

****

ಸದಸ್ಯರ ಗದ್ದಲ ಮತ್ತು ಪದೇ ಪದೇ ಕಲಾಪ ಮುಂದೂಡಿಕೆಯಿಂದ ಸಂಸತ್‌ ನಗೆಪಾಟಿಲಿಗೀಡಾಗಿದೆ. 

ವೆಂಕಯ್ಯ ನಾಯ್ಡು

ರಾಜ್ಯಸಭಾ ಅಧ್ಯಕ್ಷ

****

ನಮಗೆ ಅಗತ್ಯ ಸದಸ್ಯರ ಬೆಂಬಲವಿರುವುದರಿಂದ ಅವಿಶ್ವಾಸ ನಿರ್ಣಯಕ್ಕೆ ಹೆದರುವುದಿಲ್ಲ

ರಾಮ್‌ ಮಾಧವ್‌

ಬಿಜೆಪಿ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry