ಮತ್ತೆ ಬಂತು ಭಾವೈಕ್ಯ ಮಹತ್ವದ ಜಾತ್ರೆ

7
25ರಂದು ಕಣಿವೆ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ಮತ್ತೆ ಬಂತು ಭಾವೈಕ್ಯ ಮಹತ್ವದ ಜಾತ್ರೆ

Published:
Updated:
ಮತ್ತೆ ಬಂತು ಭಾವೈಕ್ಯ ಮಹತ್ವದ ಜಾತ್ರೆ

ಕುಶಾಲನಗರ: ಹಿಂದೂ, ಮುಸ್ಲಿಂ, ಕ್ರೈಸ್ತರ ನಡುವೆ ಭಾವೈಕ್ಯದ ಸಂದೇಶ ಸಾಉವ ಕಣಿವೆ ಗ್ರಾಮದ ರಾಮಲಿಂಗೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವ ಮಾರ್ಚ್ 23 ರಿಂದ 28ರ ನಡೆಯಲಿದೆ. ಸಿದ್ಧತೆಗಳು ಭರದಿಂದ ಸಾಗಿವೆ.

ಉತ್ತರ ಕೊಡಗಿನಲ್ಲಿ ಕಾವೇರಿ ನದಿ ದಂಡೆಯಲ್ಲಿರುವ ಕಣಿವೆ ರಾಮಲಿಂಗೇಶ್ವರ ಸ್ವಾಮಿ ವಾರ್ಷಿಕ ಬ್ರಹ್ಮರಥೋತ್ಸವ ಈ ಬಾರಿ ಮಾರ್ಚ್‌ 25ರಂದು ಮಧ್ಯಾಹ್ನ 1.15 ರಿಂದ 2ರ ಅಭಿಜಿನ್ ಮುಹೂರ್ತದಲ್ಲಿ ಜರುಗಲಿದೆ.

ನರಹರಿಶರ್ಮಾ ಅವರು ನೇತೃತ್ವ ವಹಿಸಲಿದ್ದು, ಜಾತಿ, ಮತ ಭೇದವಿಲ್ಲದೆ ಎಲ್ಲೂರು ಒಗ್ಗೂಡಿ ತೇರು ಎಳೆದು ಹಬ್ಬ ಆಚರಿಸುವುದು ಇಲ್ಲಿನ ವಿಶೇಷ. ಐತಿಹಾಸಿಕ ಹಿನ್ನೆಲೆಯ ಹೊಸ ಸಂವತ್ಸರ ಆರಂಭದ ಯುಗಾದಿ ಹಬ್ಬ ಕಳೆದ 7 ದಿನಗಳಿಗೆ ಬ್ರಹ್ಮರಥೋತ್ಸವ ನಡೆಯಲಿದೆ.

ದೇವಸ್ಥಾನದಲ್ಲಿ ರಾಮನವಮಿ ದಿನ ಭಕ್ತಾಧಿಗಳ ಸಮ್ಮುಖದಲ್ಲಿ ಜರುಗುವ ಬ್ರಹ್ಮ ರಥೋತ್ಸವಕ್ಕೆ ಜಿಲ್ಲೆಯಲ್ಲದೆ, ಹಾಸನ ಮತ್ತು ಮೈಸೂರು ಜಿಲ್ಲೆ ಗಡಿಗ್ರಾಮಗಳಿಂದಲೂ ಭಕ್ತರು ಬರುವರು.

ರಥೋತ್ಸವದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಜತೆಯಾಗಿ ರಥ ಎಳೆಯುವ ಮೂಲಕ ಭಾವೈಕ್ಯ ಸಾರುವುದು ಈ ರಥೋತ್ಸವದ ವೈಶಿಷ್ಟ್ಯವಾಗಿದೆ.

ಹೆಬ್ಬಾಲೆ ಬಸವೇಶ್ವರ ದೇವಸ್ಥಾನ ಸಮಿತಿಯು ಕಾಶಿಯಿಂದ ತರಿಸಲಾಗಿರುವ ತೀರ್ಥವನ್ನು ಅಡ್ಡಪಲ್ಲಕ್ಕಿ ಮೂಲಕ ತಂದು ದೇವರಿಗೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡುವ ಪದ್ಧತಿ ನಡೆದುಕೊಂಡು ಬಂದಿದೆ.

ಒಂದು ವಾರ ನಡೆಯುವ ವಾರ್ಷಿಕ ಜಾತ್ರೆಗೆ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಐತಿಹಾಸಿಕ ಹಿನ್ನೆಲೆ: ಕಣಿವೆ ರಾಮಲಿಂಗೇಶ್ವರ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣಗೊಂಡ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಸೀತಾಮಾತೆ ಅಪಹರಣಗೊಂಡ ಸಂದರ್ಭ ಸೀತೆ ಹುಡುಕಿ ಆಂಜನೇಯ ಮತ್ತು ಸಹೋದರ ಲಕ್ಷ್ಮಣನ ಜತೆಗೆ ಶ್ರೀರಾಮ ಕಣಿವೆ ಪ್ರದೇಶಕ್ಕೆ ಬಂದಾಗ ಇಲ್ಲಿಯೆ ಕೆಲಕಾಲ ವಿಶ್ರಮಿಸಿ ಮುಂದೆ ಸಾಗಿದನು ಎಂಬುದು ಪ್ರತೀತಿ.

ಇಲ್ಲಿ ತಪಸ್ಸಿಗೆ ತೊಡಗಿದ್ದ ವ್ಯಾಘ್ರ ಮಹರ್ಷಿಗಳು ಶ್ರೀರಾಮನಿಗೆ ಇಲ್ಲಿಗೆ ಬಂದ ನೆನಪಿಗೆ ಶಿವಲಿಂಗ ಪ್ರತಿಷ್ಠಾಪಿಸುವಂತೆ ಹೇಳುತ್ತಾರೆ. ಅದರಂತೆ ಶಿವಲಿಂಗ ತರಲು ಆಂಜನೇಯನನ್ನು ಶ್ರೀರಾಮ ಕಾಶಿಗೆ ಕಳುಹಿಸುತ್ತಾನೆ. ಆಂಜನೇಯ ಮರಳುವುದು ವಿಳಂಬವಾದ ಕಾರಣ ಮರಳಿನಿಂದ ಶಿವಲಿಂಗ ಮಾಡಿ ಪೂಜಿಸುತ್ತಾನೆ.

ಇದೇ ಕಾರಣಕ್ಕೆ ಲಿಂಗವನ್ನು ಮರಳುಲಿಂಗ ಎಂದೇ ಕರೆಯಾಗುತ್ತಾದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಎಚ್.ಆರ್.ರಾಘವೇಂದ್ರ ಆಚಾರ್ ತಿಳಿಸಿದ್ದಾರೆ.

‘ಶ್ರೀರಾಮಲಿಂಗೇಶ್ವರ ಪ್ರತಿಷ್ಠಾಪನೆ ಕಾರಣ ಗ್ರಾಮಕ್ಕೆ ಶ್ರೀರಾಮಪುರ ಎಂದು ಹೆಸರಿಡಲಾಯಿತು. ಇಂದಿಗೂ ಒಟ್ಟಾಗಿ ಸಾಮರಸ್ಯದಿಂದ ರಥೋತ್ಸವ ಆಚರಿಸಲಾಗುತ್ತಿದೆ’ ಎಂದು ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್ ಹೇಳಿದರು.

ಆಕರ್ಷಕ ತೂಗು ಸೇತುವೆ: ದೇವಸ್ಥಾನದ ಪಕ್ಕ ನದಿಗೆ ಅಡ್ಡಲಾಗಿ ಶಿವಮೊಗ್ಗ ಮಲೆನಾಡು ಅಭಿವೃದ್ಧಿ ಮಂಡಳಿ ₹ 45 ಲಕ್ಷ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಿಸಿದ್ದು, ಪ್ರಮುಖ ಆಕರ್ಷಣೆಯೂ ಆಗಿದೆ.

ಅಲ್ಲದೆ, ಶ್ರೀರಾಮಲಿಂಗೇಶ್ವರ ದೇವಸ್ಥಾನ ಸಮಿತಿ ದಾನಿಗಳ ಸಹಕಾರದಿಂದ ₹ 40 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿದೆ.

**

ಕಣವೆ ಗ್ರಾಮದಲ್ಲಿ ಎಲ್ಲ ಧರ್ಮದವರು ಸಾಮರಸ್ಯದಿಂದ ಇದ್ದಾರೆ. ಎಲ್ಲರೂ ಒಟ್ಟಾಗಿ ರಥೋತ್ಸವ ಆಚರಿಸಿಕೊಂಡು ಬರುತ್ತಿದ್ದು, ಇದು ಭಾವೈಕ್ಯ ಸಾರುವ ಉತ್ಸವವಾಗಿದೆ

– ಕೆ.ಎನ್.ಸುರೇಶ್. ಅಧ್ಯಕ್ಷ ರಾಮಲಿಂಗೇಶ್ವರ ದೇವಸ್ಥಾನ ಸಮಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry