ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿಯರು ಮುಖ್ಯಮೌಲ್ಯಮಾಪಕರು!

Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮೈಸೂರು: ಈ ಬಾರಿಯ ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಕಿರಿಯ ಉಪನ್ಯಾಸಕರನ್ನು ಮುಖ್ಯಮೌಲ್ಯಮಾಪಕರನ್ನಾಗಿ ನೇಮಿಸಲಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಹಿಂದಿನ ವರ್ಷಗಳಲ್ಲಿ ಮುಖ್ಯಮೌಲ್ಯಮಾಪಕರಾಗಿ ಕೆಲಸ ನಿರ್ವಹಿಸಿದವರು ಈ ಬಾರಿ ಸಹಾಯಕ ಮೌಲ್ಯಮಾಪಕರಾಗಿ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ನಗರದ ಕಾಲೇಜೊಂದರ ಹಿರಿಯ ಉಪನ್ಯಾಸಕರೊಬ್ಬರು ಅಸಮಾಧಾನ ತೋಡಿಕೊಂಡಿದ್ದಾರೆ.

ಪಿಯು ಉಪನ್ಯಾಸಕರಾಗಿ ಬಡ್ತಿ ಹೊಂದಿರುವ ಪ್ರೌಢಶಾಲಾ ಶಿಕ್ಷಕರಿಗೆ ಮುಖ್ಯಮೌಲ್ಯಮಾಪಕರ ಜವಾಬ್ದಾರಿ ನೀಡಲಾಗಿದೆ. ಇದರಲ್ಲಿ ತಪ್ಪೇನಿಲ್ಲ. ಆದರೆ ಅವರಿಗೆ ಅನುಭವ ಇದೆಯೇ ಎಂಬುದನ್ನು ನೋಡಬೇಕಿತ್ತು ಎಂದು ಅವರು ತಿಳಿಸಿದ್ದಾರೆ.

ಉಪನ್ಯಾಸಕರಾಗಿ 25 ವರ್ಷ ಸೇವೆ ಸಲ್ಲಿಸಿದವರು 10 ವರ್ಷ ಸೇವೆ ಸಲ್ಲಿಸಿದವರ ಕೈಕೆಳಗೆ ಸಹಾಯಕ ಮೌಲ್ಯಮಾಪಕರಾಗಿ ಕೆಲಸ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಅದಕ್ಕೆ ಸಿದ್ಧರಿದ್ದಾರೆ. ಆದರೆ ಮೌಲ್ಯಮಾಪನ ಸಮರ್ಪಕವಾಗಿ ನಡೆಯ
ಬಹುದೇ ಎಂಬ ಪ್ರಶ್ನೆ ಎದ್ದಿದೆ ಎಂದರು.

ಸಾಮಾನ್ಯವಾಗಿ ಪ್ರಾಂಶುಪಾಲರು ಮತ್ತು ಹಿರಿಯ ಉಪನ್ಯಾಸಕರನ್ನು ಮುಖ್ಯಮೌಲ್ಯಮಾಪಕರನ್ನಾಗಿ ನೇಮಿಸಲಾಗುತ್ತದೆ. ಅವರಿಗೆ ವಿಷಯಜ್ಞಾನ ಚೆನ್ನಾಗಿದ್ದು, ಸಹಾಯಕ ಮೌಲ್ಯಮಾಪಕರು ತಪ್ಪು ಮಾಡಿದ್ದಲ್ಲಿ ಅದನ್ನು ಸರಿಪಡಿಸುತ್ತಾರೆ. ಈ ಬಾರಿ ಅನನುಭವಿಗಳಿಗೆ ಜವಾಬ್ದಾರಿ ನೀಡಿರುವುದರಿಂದ ಸಹಾಯಕ ಮೌಲ್ಯಮಾಪಕರು ನೀಡುವ ಅಂಕವೇ ಸರಿ ಎಂದು ತೀರ್ಮಾನಿಸುವ ಸಾಧ್ಯತೆಯಿದೆ. ಮೌಲ್ಯಮಾಪನದಲ್ಲಿ ತಪ್ಪುಗಳು ಉಂಟಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲವು ಉಪನ್ಯಾಸಕರು ಈ ವಿಷಯವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಗಮನಕ್ಕೂ ತಂದಿದ್ದಾರೆ. ಉಪನ್ಯಾಸಕರ ವಾದವನ್ನು ಅವರೂ ಒಪ್ಪಿಕೊಂಡಿದ್ದಾರೆ. ಆದರೂ ಸರಿಪಡಿಸಿಲ್ಲ ಎಂದು ಹೇಳಿದರು.

ದೂರುಗಳು ಕೇಳಿ ಬಂದಿವೆ

‘ಹಿರಿಯ ಉಪನ್ಯಾಸಕರನ್ನು ಸಹಾಯಕ ಮೌಲ್ಯಮಾಪಕರನ್ನಾಗಿ ಮತ್ತು ಕಿರಿಯ ಉಪನ್ಯಾಸಕರನ್ನು ಮುಖ್ಯಮೌಲ್ಯಮಾಪಕರನ್ನಾಗಿ ನೇಮಿಸಲಾಗಿದೆ ಎಂಬ ಬಗ್ಗೆ ಕೆಲವರು ನನಗೂ ಕರೆಮಾಡಿ ಅಸಮಾಧಾನ ತೋಡಿಕೊಂಡಿದ್ದಾರೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ದಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ಮೌಲ್ಯಮಾಪನ ಇದೇ 24ರಿಂದ ಆರಂಭವಾಗಲಿದ್ದು, ಅದಕ್ಕೂ ಮುನ್ನ ತಪ್ಪನ್ನು ಸರಿಪಡಿಸುವ ವಿಶ್ವಾಸವಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಕಂಪ್ಯೂಟರ್‌ನಿಂದ ಆಗಿರುವ ದೋಷದಿಂದ ಹೀಗಾಗಿದ್ದು, ತಪ್ಪನ್ನು ಸರಿಪಡಿಸುವುದಾಗಿ ಪಿಯು ಮಂಡಳಿ ತಿಳಿಸಿದೆ.

-ದಯಾನಂದ, ಡಿಡಿಪಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT