ಮಾನವ ಕಳ್ಳ ಸಾಗಣೆ ತಡೆಗಟ್ಟಿ

7
ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ನ್ಯಾ.ಎಸ್.ವಿ. ಕುಲಕರ್ಣಿ ಸೂಚನೆ

ಮಾನವ ಕಳ್ಳ ಸಾಗಣೆ ತಡೆಗಟ್ಟಿ

Published:
Updated:

ಹಾವೇರಿ: ಮಾನವ ಕಳ್ಳ ಸಾಗಣೆ ಪ್ರಕರಣಗಳು ಕಂಡು ಬಂದರೆ, ತಕ್ಷಣವೇ ಕ್ರಮಕೈಗೊಂಡು ನೊಂದವರಿಗೆ ರಕ್ಷಣೆ ನೀಡಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ವಿ.ಕುಲಕರ್ಣಿ ಹೇಳಿದರು.

ನಗರದ ಡಿ.ದೇವರಾಜ ಅರಸು ಭವನದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಂಜೀವಿನಿ ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆ ಆಶ್ರಯದಲ್ಲಿ ನಡೆದ ‘ಸಾಗಾಣಿಕೆ ಹಾಗೂ ಲೈಂಗಿಕ ಶೋಷಣೆಯ ಸಂತ್ರಸ್ತರ ಯೋಜನೆ–2015 ಮತ್ತು ಸಮಾಜದ ಅಂಚಿನಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾನೂನು ಸಾಕ್ಷರತಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಹಳ್ಳಿಗಳಲ್ಲಿ ಬಡತನ ಪ್ರಮಾಣ ಹೆಚ್ಚಿರುವುದರಿಂದ ಚಿಕ್ಕ ಮಕ್ಕಳ ಮಾರಾಟ, ಸಾಗಾಣಿಕೆ ಹಾಗೂ ಹೆಣ್ಣು ಮಕ್ಕಳನ್ನು ಮಾರುಕಟ್ಟೆಯ ಉದ್ದೇಶದಿಂದ ನಗರ ಪ್ರದೇಶಗಳಿಗೆ ಸಾಗಾಣಿಕೆ ಮಾಡುವ ವ್ಯವಸ್ಥೆ ಉಂಟಾಗುತ್ತಿದ್ದು, ತಡೆಗಟ್ಟಬೇಕು. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಶೋಷಿತರು ಕಾನೂನಿನ ನೆರವು ಪಡೆಯಬೇಕು’ ಎಂದು ಹೇಳಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿರುವ ಪ್ರತಿಯೊಂದು ಹಕ್ಕುಗಳು ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸಿಗಬೇಕು. ಆರ್ಥಿಕವಾಗಿ ಹಿಂದುಳಿದ ಮತ್ತು ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ವ್ಯಾಪಾರೀಕರಣ, ಮಾನವ ಸಾಗಾಣಿಕೆ ತಡೆಗಟ್ಟಬೇಕು. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ರಕ್ಷಣೆ ನೀಡಬೇಕು’ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ವೈ.ಎಲ್.ಲಾಡಖಾನ್‌ ಮಾತನಾಡಿದರು. ಹಾವೇರಿ ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯದರ್ಶಿ ಜಾಫರ್ ಶರೀಫ್ ಸುತಾರ ಅಧ್ಯಕ್ಷತೆ ವಹಿಸಿದ್ದರು.

ಸಂಜೀವಿನಿ ಲಿಂಗತ್ವ ಅಲ್ಪಸಂಖ್ಯಾತರ ಸಂಘದ ಅಧ್ಯಕ್ಷರಾದ ಅಕ್ಷತಾ ಕೆ.ಸಿ, ‘ಲಿಂಗತ್ವ ಅಲ್ಪಸಂಖ್ಯಾತರ ಸಮಸ್ಯೆಗಳು ಮತ್ತು ಪರಿಹಾರ’, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಎಂ.ಎಚ್.ವಾಲೀಕಾರ ‘ಸಂತ್ರಸ್ತರ ಪರಿಹಾರಧನ ಯೋಜನೆ’ ಹಾಗೂ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ಐ. ಗೌಡಪ್ಪಗೌಡ್ರ ‘ಪೊಲೀಸ್ ದೂರು ಪ್ರಾಧಿಕಾರದ ರಚನೆ ಮತ್ತು ಮಹತ್ವ’ ಕುರಿತು ಉಪನ್ಯಾಸ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಪ್ಪ ನಾಯಕ, ಪೊಲೀಸ್‌ ಸಬ್ ಇನ್‌ಸ್ಪೆಕ್ಟರ್ ಎಂ.ಎಂ. ಮಹಾಂತೇಶ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ನೀರಲಗಿ, ಪ್ರಧಾನ ಕಾರ್ಯದರ್ಶಿ ದೇವರಾಜ್ ನಾಯ್ಡು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್.ಮಾಳಿಗೇರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್. ಉಮಾ, ವಿನಯ್ ಎಸ್ ಗುಡಗೂರ, ಎಂ.ಬಿ ಬಸವನಾಯಕ ಇದ್ದರು.

**

ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರು ತಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಲು ಕಾನೂನು ಸೇವಾ ಪ್ರಾಧಿಕಾರವು ಯೋಜನೆಯನ್ನು ಜಾರಿಗೊಳಿಸಿದೆ

– ವೈ.ಎಲ್.ಲಾಡಖಾನ್‌, ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry