4

ತ್ಯಾಜ್ಯ ನೀರಲ್ಲ ಶುದ್ಧ ಜಲ!

Published:
Updated:
ತ್ಯಾಜ್ಯ ನೀರಲ್ಲ ಶುದ್ಧ ಜಲ!

ಬಳಸಿದ ನೀರನ್ನು ಕುಡಿಯಲು ಯೋಗ್ಯವಾಗಿಸುವ ತಂತ್ರಜ್ಞಾನಗಳು ಬಂದಿದ್ದರೂ ‘ವ್ಯಾಕ್‌’ ಅನ್ನುವವರೇ ಹೆಚ್ಚು. ‘ಅದು ಕೊಳೆ ನೀರು, ಅದನ್ನು ಕುಡಿದರೆ ವಾಂತಿಭೇದಿ ಆಗೋದು ಗ್ಯಾರಂಟಿ’ ಎಂದು ತಕರಾರು ಸಾಮಾನ್ಯ. ತ್ಯಾಜ್ಯ ನೀರು ಕುಡಿಯಲು ಯೋಗ್ಯವಾದಷ್ಟು ಶುದ್ಧವಾಗಿ ಬರುವ ಬಗೆ, ಆರೋಗ್ಯದ ಮೇಲೆ ಅದರ ಪರಿಣಾಮ ಮತ್ತು ರುಚಿಯ ಬಗ್ಗೆ ಯೋಚಿಸುವುದೂ ಇಲ್ಲ. ಆದರೆ, ತ್ಯಾಜ್ಯ ನೀರನ್ನೂ ಸಂಸ್ಕರಿಸಿ ಕುಡಿಯುವ ಕಾಲ ಈಗ ಸನ್ನಿಹಿತವಾಗಿದೆ. ಈ ತಂತ್ರಜ್ಞಾನ ಜನಸ್ನೇಹಿ ಎನಿಸುತ್ತಿದೆ. ವಿಶೇಷವಾಗಿ, ಅಪಾರ್ಟ್‌ಮೆಂಟುಗಳಲ್ಲಿ ನೀರಿನ ಬರಕ್ಕೆ ಪರಿಣಾಮಕಾರಿ ಪರಿಹಾರವಾಗುತ್ತಿದೆ.

ಎಚ್.ಎಸ್.ಆರ್. ಬಡಾವಣೆ ಎರಡನೇ ಸೆಕ್ಟರ್‌ನಲ್ಲಿರುವ ‘ಟ್ರಾನ್ಸ್‌ವಾಟರ್ಸ್‌’ ಸಂಸ್ಥೆ ಒಂದು ದಶಕದಿಂದ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಯುರೋಪ್‌ ತಂತ್ರಜ್ಞಾನವುಳ್ಳ ನೀರು ಉಳಿತಾಯ ಮತ್ತು ಸಂಸ್ಕರಣೆ ಮಾರ್ಗಗಳನ್ನು ಪ್ರಚುರಪಡಿಸುತ್ತಿರುವ ಈ ಸಂಸ್ಥೆ, ಉಡುಪಿ ಮೂಲದ ವಿಕಾಸ್‌ ಬ್ರಹ್ಮಾವರ ಅವರ ಕನಸಿನ ಕೂಸು. ತ್ಯಾಜ್ಯ ನೀರಿನ ಸಂಸ್ಕರಣೆ ಎಂಬ ಕಾರ್ಯರೂಪದ ಪರಿಹಾರದ ಬಗ್ಗೆ ಅವರು ಇಲ್ಲಿ ಮಾತನಾಡಿದ್ದಾರೆ.

* ತ್ಯಾಜ್ಯ ನೀರನ್ನು ಕುಡಿಯಲು ಯೋಗ್ಯವೆನಿಸುವಂತೆ ಸಂಸ್ಕರಿಸುವುದು ನಿಜಕ್ಕೂ ಸಾಧ್ಯವೇ?

ಖಂಡಿತಾ ಸಾಧ್ಯ. ನಗರದ ಕೆಲವು ಅಪಾರ್ಟ್‌ಮೆಂಟುಗಳು ನಮ್ಮ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಶಸ್ವಿಯಾಗಿವೆ. ಬೆಂಗಳೂರಿನ ನೀರಿನ ಬರಕ್ಕೆ ಕಾರ್ಯರೂಪದ ಪರಿಹಾರವಿದು ಎಂಬುದು ಸಾಬೀತಾಗಿದೆ.

* ‘ಟ್ರಾನ್ಸ್‌ವಾಟರ್ಸ್‌’ ಎಂಬ ಉದ್ಯಮ ಸ್ಥಾಪಿಸುವ ಯೋಚನೆ ಬಂದಿದ್ದು ಹೇಗೆ?

2002ರಿಂದ ಯುರೋಪ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದೆ. ಅಲ್ಲಿ ನೀರಿಗೆ ಕೊರತೆ ಇರಲಿಲ್ಲ. ನಾಳೆಯ ನೆಮ್ಮದಿಗಾಗಿ ನೀರಿನ ಉಳಿತಾಯ ಮತ್ತು ಮಿತ ಬಳಕೆಗೆ ಪ್ರತಿಯೊಬ್ಬರೂ ಆದ್ಯತೆ ಕೊಡುತ್ತಾರೆ. ಸಂಸ್ಕರಣೆ, ತ್ಯಾಜ್ಯ ನೀರಿನ ಮರುಬಳಕೆ ಅಲ್ಲಿ ಸಾಮಾನ್ಯ ಪರಿಕಲ್ಪನೆ. ಹಾಗಾಗಿ 2008ರಲ್ಲಿ ಭಾರತಕ್ಕೆ ಹಿಂತಿರುಗಿ ನೀರಿನ ಸಂಸ್ಕರಣೆ ಮತ್ತು ತ್ಯಾಜ್ಯ ನೀರಿನ ಮರುಬಳಕೆ ಕ್ಷೇತ್ರದಲ್ಲಿಯೇ ಉದ್ಯಮ ಶುರು ಮಾಡಿದೆ. ನಗರದ ನೀರಿನ ಬರಕ್ಕೆ ಸಂಸ್ಕರಿತ ನೀರಿನ ಬಳಕೆ ಅತ್ಯುತ್ತಮ ಪರಿಹಾರ ಎಂಬ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ನನ್ನ ಮೊದಲ ಆದ್ಯತೆ. ಉದ್ಯಮ ನನ್ನ ಎರಡನೇ ಆದ್ಯತೆ.

*ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ (ತ್ಯಾಜ್ಯ ನೀರಿನ ಸಂಸ್ಕರಣೆ ಘಟಕ) ಕಡ್ಡಾಯ ಮಾಡಲಾಗಿದೆ ಅಲ್ವೇ?

ಸರ್ಕಾರ ಕಡ್ಡಾಯ ಮಾಡಿದೆ ಎಂಬ ಅನಿವಾರ್ಯತೆಗೆ ಕಟ್ಟುಬಿದ್ದು ಎಸ್‌ಟಿಪಿ ಅಳವಡಿಸಿಕೊಂಡಿರುವ ಅಪಾರ್ಟ್‌ಮೆಂಟ್‌ಗಳು ಬೆಂಗಳೂರಿನಲ್ಲಿ ಸಾಕಷ್ಟಿವೆ. ಆದರೆ ಅವುಗಳಲ್ಲಿ ‘ಗ್ರೇ ವಾಟರ್‌’ ಅಂದರೆ ಪಾತ್ರೆ, ಬಟ್ಟೆ ತೊಳೆದ ನೀರು ಮತ್ತು ಬಚ್ಚಲಿನ ನೀರನ್ನು ಸಂಸ್ಕರಿಸಿ ಸೀಮಿತವಾದ ಮರುಬಳಕೆ ಮಾಡಲಾಗುತ್ತಿದೆ. ಅಂದರೆ ಸಂಸ್ಕರಿಸಿದ ನೀರನ್ನು ಕಾರು ಮತ್ತು ನೆಲ ತೊಳೆಯಲು ಹಾಗೂ ಕೈತೋಟಗಳಿಗಷ್ಟೇ ಬಳಸಲಾಗುತ್ತಿದೆ. ಕೆಲವೆಡೆ ಈ ಬಳಕೆಯನ್ನೂ ನಿವಾಸಿಗಳು ವಿರೋಧಿಸುವುದೂ ಇದೆ. ಈ ಕಾರಣಕ್ಕಾಗಿ ಸಂಸ್ಕರಿತ ನೀರನ್ನು ಮತ್ತೆ ಮೋರಿಗೆ ಹರಿಬಿಡುವುದೂ ಉಂಟು. ಆಗ ಎಸ್‌ಟಿ‍ಪಿಗಳು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗುತ್ತವೆ.

*ಎಸ್‌ಟಿಪಿಯಲ್ಲಿ ಸಂಸ್ಕರಿತ ನೀರಿಗೂ, ನೀವು ಅನುಸರಿಸುವ ಮಾರ್ಗಕ್ಕೂ ವ್ಯತ್ಯಾಸವೇನು?

ಸಂಸ್ಕರಿತ ‘ಗ್ರೇ ವಾಟರ್‌’ನಲ್ಲಿ ಸ್ವಲ್ಪ ಪ್ರಮಾಣದ ವಾಸನೆ, ಕೊಳಕು ಬಣ್ಣ ಇರುವುದು ನಿಜ. ಅಂದರೆ ಅದರ ಸಂಸ್ಕರಣೆ ಸಮರ್ಪಕವಾಗಿಲ್ಲ ಎಂದೇ ಅರ್ಥ. ಹಾಗಾಗಿ ‘ಟ್ರಾನ್ಸ್‌ವಾಟರ್ಸ್‌’ ಆರಂಭದ ಐದು ವರ್ಷಗಳಲ್ಲಿ ಎಸ್‌ಟಿಪಿಗಳ ಸಮರ್ಪಕ ಬಳಕೆ ಹೇಗೆ ಎಂಬ ಬಗ್ಗೆ ಜಾಗೃತಿ ಮೂಡಿಸುತ್ತಾ ಬಂದೆವು. ಆಮೇಲೆ, ಬಳಸಲು ನೀರೇ ಇಲ್ಲದಿರುವಾಗ ಸಂಸ್ಕರಣೆ ಎಲ್ಲಿಂದ ಎಂದು ಕೇಳಲಾರಂಭಿಸಿದರು. ಆಗ ನಾವು 11 ಹಂತದಲ್ಲಿ ಸಂಸ್ಕರಣೆ ಕ್ರಮವನ್ನು ಪರಿಚಯಿಸಿದೆವು. ಇದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿನರಲ್ ವಾಟರ್‌ಗೆ ಪ್ರಮಾಣೀಕೃತ ಗುಣಮಟ್ಟದ ನೀರನ್ನು ಕೊಡುತ್ತದೆ.

*ನೀವು ಹೇಳುವ ಓಜೊನೇಸೇಷನ್‌ ಸಿಸ್ಟಂ ಎಂದರೇನು?

ಎಸ್‌ಟಿಪಿಯಿಂದ ಹೊರಬಂದ ನೀರಿನಲ್ಲಿರುವ ಕಶ್ಮಲವೇನು, ಗುಣಮಟ್ಟ ಹೇಗಿದೆ ಎಂಬುದನ್ನು ನಿಖರ ಪರೀಕ್ಷೆ ಮೂಲಕ ಪತ್ತೆ ಹಚ್ಚಿ ಅದಕ್ಕೆ ಅನುಗುಣವಾಗಿ ಸಂಸ್ಕರಣೆ ಪ್ರಕ್ರಿಯೆ ಮಾಡುತ್ತೇವೆ. ನೀರನ್ನು ಬಟ್ಟೆಯಿಂದ ಶೋಧಿಸುವಂತೆ ಸೂಕ್ಷ್ಮ ಕಸ ಮತ್ತು ಕೊಳೆಯನ್ನೂ ಶೋಧಿಸಿ, ನೀರನ್ನು ಶುದ್ಧೀಕರಿಸಲು ಬ್ಯಾಕ್ಟೀರಿಯಾದಂತಹ ಸೂಕ್ಷ್ಮ ಕಣಗಳನ್ನೂ ನಿವಾರಿಸುವ ‘ಮೆಂಬ್ರೇನ್‌ ಸಿಸ್ಟಂ’, ಯುವಿ ಮತ್ತು ಓಜೊನೇಷನ್‌ ಎಂಬ ಪ್ರಮುಖ ಹಂತಗಳು ಅತಿಸೂಕ್ಷ್ಮಾಣುಗಳನ್ನೂ ನಿವಾರಿಸಿ ಪರಿಪೂರ್ಣವಾದ ಶುದ್ಧ ಜಲವಾಗಿ ಪರಿವರ್ತಿಸುತ್ತದೆ.

*ಇಷ್ಟೂ ಹಂತಗಳಲ್ಲಿ ರಾಸಾಯನಿಕಗಳ ಬಳಸಲಾಗುತ್ತದೆಯೇ?

ಹನ್ನೊಂದರ ಪೈಕಿ ಬಹುತೇಕ ಹಂತಗಳಲ್ಲಿ ಒತ್ತಡ (ಪ್ರೆಷರ್‌) ತಂತ್ರಜ್ಞಾನವೇ ಮುಖ್ಯವಾಗಿರುತ್ತದೆ. ರಾಸಾಯನಿಕಗಳನ್ನು ಅಗತ್ಯಕ್ಕನುಗುಣವಾಗಿ ಒಂದು ಇಲ್ಲವೇ ಎರಡು ಹಂತದಲ್ಲಿ ಮಾತ್ರ ಬಳಸಲಾಗುತ್ತದೆ. ನಾವು ಅಳವಡಿಸಿರುವ ತಂತ್ರಜ್ಞಾನಗಳ ಮೂಲಕ ಸಂಸ್ಕರಿಸಿದ ನೀರು ಆರೋಗ್ಯಕ್ಕೆ ಪೂರಕವಾಗಿದೆ ಎಂಬುದನ್ನು ಗ್ರಾಹಕರ ಮುಂದೆ ದೃಢೀಕರಿಸಿಯೇ ಕೊಡಲಾಗುತ್ತದೆ.

*ಯೋಜನಾ ವೆಚ್ಚ?

ಎಸ್‌ಟಿಪಿ ಇದ್ದರೆ ನಮ್ಮ ಘಟಕ ಸ್ಥಾಪಿಸಲು ಕನಿಷ್ಠ 10 ಲಕ್ಷ ವೆಚ್ಚವಾಗುತ್ತದೆ. ಇದು ದುಬಾರಿ ಎಂಬ ಕಾರಣಕ್ಕೆ ಬಿಲ್ಡರ್‌ಗಳು ಆಸಕ್ತಿ ತೋರಿಸುತ್ತಿರಲಿಲ್ಲ. ಅದಕ್ಕಾಗಿ, ಘಟಕವನ್ನು ನಾವು ಉಚಿತವಾಗಿ ಸ್ಥಾಪಿಸಿಕೊಡುತ್ತಿದ್ದೇವೆ. ಅದಕ್ಕೆ ಪ್ರತಿಯಾಗಿ ಅವರು, ಲೀಟರ್‌ಗೆ ₹5ರಂತೆ ನಮಗೆ ಪಾವತಿಸುವ ಅವಕಾಶವನ್ನು ಮುಂದಿಟ್ಟಿದ್ದೇವೆ. ಇದಾದ ಬಳಿಕ ಅನೇಕ ಬಿಲ್ಡರ್‌ಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

‘ವಕೀಲ್‌’ನ ಯಶೋಗಾಥೆ

ನಗರದಲ್ಲಿ ಮೊದಲ ಬಾರಿಗೆ ಎಸ್‌ಟಿಪಿ ನೀರನ್ನು ಕುಡಿಯುವ ನೀರಾಗಿ ಸಂಸ್ಕರಿಸಿ ಬಳಸಿದ್ದು ಸರ್ಜಾಪುರ ರಸ್ತೆಯ ‘ವಕೀಲ್‌’ ಬಿಲ್ಡರ್ಸ್‌ನವರ ಅಪಾರ್ಟ್‌ಮೆಂಟ್‌ನಲ್ಲಿ. 2012ರಲ್ಲಿ ಅಲ್ಲಿನ 12 ಬೋರ್‌ವೆಲ್‌ಗಳೂ ಬರಿದಾಗಿದ್ದವು. ಟ್ಯಾಂಕರ್‌ ನೀರು ತರಿಸಿಕೊಳ್ಳುತ್ತಿದ್ದರು. ಎಸ್‌ಟಿಪಿಯಿಂದ ಹೊರಬರುತ್ತಿದ್ದ 35ಸಾವಿರ ಲೀಟರ್ ನೀರನ್ನು ಮರುಬಳಕೆ ಮಾಡಲು ನಮ್ಮ ತಂತ್ರಜ್ಞಾನವನ್ನು ಅಳವಡಿಸಿದೆವು. ಅಲ್ಲಿಂದೀಚೆ ಎಲ್ಲಾ ಬೋರ್‌ವೆಲ್‌ಗಳಿಗೂ ಎಸ್‌ಟಿಪಿ ನೀರನ್ನು ಮರುಪೂರಣ ಮಾಡುತ್ತಿದ್ದು, ಈಗ ಎಂಟು ಬೋರ್‌ವೆಲ್‌ಗಳು ಪೂರ್ಣಪ್ರಮಾಣದಲ್ಲಿ ನೀರು ಕೊಡುತ್ತಿವೆ.

‘ಟ್ರಾನ್ಸ್‌ವಾಟರ್ಸ್‌’ ಸಂಪರ್ಕಕ್ಕೆ: blorebuy@gmail.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry