ಅವಕಾಶವಾದಿ ಜೆಡಿಎಸ್‌ನವರನ್ನು ನಂಬಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

7

ಅವಕಾಶವಾದಿ ಜೆಡಿಎಸ್‌ನವರನ್ನು ನಂಬಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

Published:
Updated:
ಅವಕಾಶವಾದಿ ಜೆಡಿಎಸ್‌ನವರನ್ನು ನಂಬಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

ಹಾಸನ: ‘ಜೆಡಿಎಸ್‌ನವರು ಅವಕಾಶವಾದಿಗಳು. ಅವರನ್ನು ನಂಬಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬುಧವಾರ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಸಂದರ್ಭ ಹಾಸನದ ಎಲ್ಲಾ ಕ್ಷೇತ್ರಗಳಿಗೂ ಬಂದೇ ಬರುತ್ತೇನೆ. ಜೆಡಿಎಸ್‌ನವರು ಅವಕಾಶವಾದಿಗಳು. ಅವರನ್ನು ನಂಬಬೇಡಿ. ಐದಾರು ಜಿಲ್ಲೆಗಳನ್ನು ಬಿಟ್ಟರೆ ಬೇರೆ ಜಿಲ್ಲೆಗಳಲ್ಲಿ ಅವರಿಗೆ ಅಸ್ತಿತ್ವ ಇಲ್ಲ. ಹಾಸನದವರು ಜೆಡಿಎಸ್ ಬೆಂಬಲಿಸಿದರೆ ಪರೋಕ್ಷ ವಾಗಿ ಬಿಜೆಪಿ ಬೆಂಬಲಿಸಿದಂತೆ’ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಅಲ್ಲದೆ, ರಾಜ್ಯದ ಜನತೆ ಚುನಾವಣೆಯಲ್ಲಿ ಅತ್ಯಂತ ಜಾಗರೂಕತೆಯಿಂದ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು. 

‘ಜಾತ್ಯತೀತ ತತ್ವಕ್ಕೆ ಬದ್ಧವಾಗಿರುವ ಪಕ್ಷ ಎಂದು ಹೇಳಿಕೊಳ್ಳುವ ಅವರು (ಜೆಡಿಎಸ್) ಆ ರೀತಿ ನಡೆದುಕೊಂಡಿಲ್ಲ. ಕೋಮುವಾದ ವಿರೋಧಿಸುತ್ತೇವೆ ಎನ್ನುವ ಅವರು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಇದನ್ನು ರಾಜ್ಯದ ಇತಿಹಾಸ ಹೇಳುತ್ತದೆ. 2009ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಅನ್ನುವ ಒಂದೇ ಕಾರಣಕ್ಕೆ ಕೋಮುವಾದಿಗಳ ಜತೆ ಸೇರಿದರು’ ಎಂದು ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್‌ನವರು ಕೋಮುವಾದ ವಿರೋಧಿಸುತ್ತೇವೆ ಎನ್ನುವುದು ಕೇವಲ ರಾಜಕೀಯಕ್ಕಾಗಿ. ಅದು ಅವರ ಬದ್ಧತೆ ಅಲ್ಲ. ಜೆಡಿಎಸ್‌ನವರು ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ. ಅದು ದೇವೇಗೌಡರೂ ಸೇರಿದಂತೆ ಎಲ್ಲರಿಗೂ ಗೊತ್ತು. ಆದರೂ‌ ನಾವು ಕಿಂಗ್ ಮೇಕರ್ ಆಗುತ್ತೇವೆ ಅಂತ ಹುಯಿಲೆಬ್ಬಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಆದ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡುತ್ತೇನೆ ಅಂತ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ ಅವರು ಮುಖ್ಯಮಂತ್ರಿ ಆಗಿದ್ದಾಗ, ಅವರ ತಂದೆ ಮುಖ್ಯಮಂತ್ರಿ ಆಗಿದ್ದಾಗ ಏಕೆ ಮಾಡಲಿಲ್ಲ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ದಲಿತರನ್ನು, ಮುಸ್ಲಿಮರನ್ನು‌ ಉಪಮುಖ್ಯಮಂತ್ರಿ ಮಾಡುತ್ತೇವೆ ಅಂತ ಹೇಳುತ್ತಿದ್ದಾರೆ. ಆದರೆ, ದಲಿತರನ್ನು‌ ಮುಖ್ಯಮಂತ್ರಿ ಮಾಡುತ್ತೇವೆ ಎಂದು ದೇವೇಗೌಡರು ಹೇಳಲಿ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಅಲ್ಲದೆ, ಮಗನನ್ನು‌ ಮುಖ್ಯಮಂತ್ರಿ ಮಾಡುವುದು ದೇವೇಗೌಡರ ಕೊನೆಯ ಆಸೆ ಎಂದು ವ್ಯಂಗ್ಯವಾಡಿದರು.

‘ಹಾಸನದಲ್ಲಿ ‌7ಕ್ಕೆ 7 ಸ್ಥಾನ‌ ಗೆಲ್ಲಿಸಿದರೆ ನೀವು ಇತಿಹಾಸ ಬರೆಯುತ್ತೀರಿ. ಜೆಡಿಎಸ್‌ನವರು ಸುಳ್ಳು ಹೇಳಿ ಜನರನ್ನು ಮೋಸ ಮಾಡಲು ಆಗುವುದಿಲ್ಲ. ಬಿಜೆಪಿ ರಾಜ್ಯಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಾನೇ‌ ಮುಖ್ಯಮಂತ್ರಿ ಅನ್ನುತ್ತಿದ್ದಾರೆ. ಬಿಜೆಪಿಯವರ 150 ಮಿಷನ್ ಈಗ 50ಕ್ಕೆ ಇಳಿದಿದೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry