₹ 1042 ಕೋಟಿ ವೆಚ್ಚದ ಕಾಲುವೆ ನಿರ್ಮಾಣ

6
ಎತ್ತಿನ ಹೊಳೆ ಯೋಜನೆ; 34 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ

₹ 1042 ಕೋಟಿ ವೆಚ್ಚದ ಕಾಲುವೆ ನಿರ್ಮಾಣ

Published:
Updated:

ಅರಸೀಕೆರೆ: ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನ ಹೊಳೆ ಯೋಜನೆಯಿಂದ ತಾಲ್ಲೂಕಿನ 34 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಬುಧವಾರ ಚಾಲನೆ ನೀಡಿದರು.

ತಾಲ್ಲೂಕಿನ ಹಾರನಹಳ್ಳಿ ಕೋಡಿಮಠ ಸಮೀಪ ಅರಸೀಕೆರೆ– ಹಾಸನ ರಸ್ತೆ ಬದಿ ಸರ್‌ ಎಂ. ವಿಶ್ವೇಶ್ವರಯ್ಯ ಜಲ ಭಾಗ್ಯ ನಿಗಮದ ವತಿಯಿಂದ ಆಯೋಜಿಸಿದ್ದ 45 ಕಿ.ಮೀ ವ್ಯಾಪ್ತಿ ₹ 1042 ಕೋಟಿ ವೆಚ್ಚದ ಕಾಲುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ತಾಲ್ಲೂಕಿನ ಜನರ ಬವಣೆ ಅರಿತು ಈ ಯೋಜನೆ ಬಗ್ಗೆ ಅನೇಕ ಬಾರಿ ಸದನದಲ್ಲಿ ಪ್ರಸ್ತಾವ ಸಲ್ಲಿಸಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಭಾಗದ ಜನರ ಕಷ್ಟ ಮನವರಿಕೆ ಮಾಡಿಕೊಟ್ಟಿದ್ದೆ. ಈಗ ಯೋಜನೆ ಆರಂಭಗೊಂಡು ಸಾಕಾರಗೊಳ್ಳುತ್ತಿದೆ. ಅಂದುಕೊಂಡಂತೆ ಕಾಮಗಾರಿ ನಿಗದಿತ ಅವಧಿಯೊಳಗೆ ಮುಗಿದರೆ ತಾಲ್ಲೂಕಿನ 34 ಕೆರೆಗಳ ಒಡಲು ಭರ್ತಿಯಾಗುತ್ತದೆ. ಅಂತರ್ಜಲ ಕೂಡ ವೃದ್ಧಿಯಾಗಿ ಬಯಲುಸೀಮೆ ಜನರ ಬವಣೆ ನೀಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವೇಶ್ವರಯ್ಯ ಜಲಭಾಗ್ಯ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಗುರುದತ್ತ ಮಾತನಾಡಿ, ‘ಪಶ್ಚಿಮ ಘಟ್ಟದಲ್ಲಿ ಹರಿಯುವ 8 ಹಳ್ಳಗಳಿಂದ ಸಂಗ್ರಹಿಸುವ ನೀರನ್ನು ಪಂಪ್‌ ಮಾಡಿ ಅರಸೀಕೆರೆ ತಾಲ್ಲೂಕು ಸೇರಿದಂತೆ 170 ಕಿ.ಮೀ ದೂರದ ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಇದಾಗಿದೆ’ ಎಂದು ಹೇಳಿದರು.

‘ಎತ್ತಿನ ಹೊಳೆ ಯೋಜನೆಗಾಗಿ ಸರ್ಕಾರದ ನಿಯಮವನ್ನು ಪಾಲಿಸಿದ್ದು, ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ತಾಲ್ಲೂಕಿನ ಕಾಮಲಾಪುರ ಗ್ರಾಮದ ಬಳಿಯಿಂದ ಕಾಲುವೆ ಕಾಮಗಾರಿ ಆರಂಭವಾಗಲಿದ್ದು, ಗಡಿಭಾಗದ ಮೈಲನಹಳ್ಳಿ ಕೊಪ್ಪಲು ಬಳಿ ಮುಕ್ತಾಯವಾಗಲಿದೆ. ರೈತರು ಹಾಗೂ ಸಾರ್ವಜನಿಕರು ಸಹಕಾರ ನೀಡಿದರೆ ಗುಣಮಟ್ಟದ ಕಾಮಗಾರಿ ಸಾಧ್ಯ’ ಎಂದು ಹೇಳಿದರು.

ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ, ಜಿ.ಪಂ ಮಾಜಿ ಅಧ್ಯಕ್ಷ ಬಿಳಿಚೌಡಯ್ಯ ಮಾತನಾಡಿದರು. ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವತ್ಸಲಾ ಶೇಖರಪ್ಪ, ತಾ.ಪಂ ಅಧ್ಯಕ್ಷ ರೂಪಾ ಗುರುಮೂರ್ತಿ, ತಾ.ಪಂ ಸದಸ್ಯರಾದ ಪ್ರೇಮಾ ದರ್ಮಣ್ಣ, ಲಕ್ಷ್ಮಿದೇವಮ್ಮ ಶಿವರಾಜ್‌, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್‌, ಜಿ.ಪಂ ಮಾಜಿ ಅಧ್ಯಕ್ಷ ಹುಚ್ಚೇಗೌಡ, ತಾ.ಪಂ ಮಾಜಿ ಅಧ್ಯಕ್ಷರಾದ ಹಾರನಹಳ್ಳಿ ಶಿವಮೂರ್ತಿ, ನಂಜುಂಡಪ್ಪ, ಮುಖಂಡರಾದ ಧರ್ಮಶೇಖರ್‌, ಯಳವಾರೆ ಕೇಶವಮೂರ್ತಿ, ಗಂಡಸಿ ಅಯ್ಯಣ್ಣ, ಮುದುಡಿ ಗಂಗಾಧರ್‌ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry