ಕಟ್ಟಡ ಕುಸಿಯುವುದೇಕೆ?

7

ಕಟ್ಟಡ ಕುಸಿಯುವುದೇಕೆ?

Published:
Updated:
ಕಟ್ಟಡ ಕುಸಿಯುವುದೇಕೆ?

* ಮನೆ ಕಟ್ಟಿಸುತ್ತೀರಾ..? ಸುರಕ್ಷತೆಗೆ ಆದ್ಯತೆಯಿರಲಿ...ಅಡಿಪಾಯ ಗಟ್ಟಿ ಇದ್ದರೆ ತಾನೇ ಕಟ್ಟಡ ನಿಲ್ಲೋದು ಎಂಬ ಮಾತು ತರ್ಕ ಮತ್ತು ಅರ್ಥಬದ್ಧವಾದುದು. ಅಡಿಪಾಯ ಹಾಕುವಾಗ ಜಾಗ್ರತೆ ವಹಿಸಿದಷ್ಟೂ ಕಟ್ಟಡದ ಧಾರಣ ಸಾಮರ್ಥ್ಯ ಹೆಚ್ಚುತ್ತದೆ. ಅಡಿಪಾಯ ದುರ್ಬಲವಾಗಿದ್ದ ಕಾರಣಕ್ಕೆ ಕಟ್ಟಡಗಳು ಕುಸಿದ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.

ಸರ್ಜಾಪುರ ರಸ್ತೆಯ ಕಸವನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಐದು ಮಹಡಿ ಕಟ್ಟಡ ಕಳೆದ ಫೆಬ್ರುವರಿಯಲ್ಲಿ ಕುಸಿದು ಬಿದ್ದು ನಾಲ್ಕು ಜನರು ಸಾವನ್ನಪ್ಪಿದ ಘಟನೆ ಇನ್ನೂ ಹಸಿರಾಗಿದೆ. ಈ ಕಟ್ಟಡಕ್ಕೆ ಹತ್ತು ವರ್ಷಗಳಷ್ಟು ಹಿಂದೆಯೇ ಅಡಿಪಾಯ ಹಾಕಲಾಗಿತ್ತು. ಕೋರ್ಟ್‌ನಲ್ಲಿ ತಡೆಯಾಜ್ಞೆ ಇದ್ದ ಕಾರಣ ಕೆಲಸ ಅರ್ಧಕ್ಕೇ ನಿಂತಿತ್ತು. ವ್ಯಾಜ್ಯ ಇತ್ಯರ್ಥಗೊಂಡ ನಂತರ ಮತ್ತೆ ಕಾಮಗಾರಿ ಆರಂಭವಾಗಿತ್ತು.

ಇದರ ಜೊತೆಗೆ ವೈಟ್‌ಫೀಲ್ಡ್‌ನಲ್ಲಿರುವ ಅಸೆಂಚರ್‌ ಕ್ಯಾಂಪಸ್‌ ಪಕ್ಕದಲ್ಲಿ ಕಟ್ಟಡ ಕುಸಿತ, ಈಜಿಪುರದಲ್ಲಿ ಸಿಲಿಂಡರ್‌ ಸ್ಫೋಟದಿಂದ ಏಳು ಜನರು ಸಾವನ್ನಪ್ಪಿದ ಘಟನೆ, ಹೆಚ್‌ಎಸ್‌ಆರ್‌ ಬಡಾವಣೆಯಲ್ಲಿ ಏಳು ಅಂತಸ್ತಿನ ಕಟ್ಟಡ ಕುಸಿತ... ಹೀಗೆ ಕಟ್ಟಡ ಕುಸಿತದ ಹತ್ತಾರು ಉದಾಹರಣೆಗಳು ಕಣ್ಣ ಮುಂದೆ ಬರುತ್ತವೆ.

ಈ ಮೇಲಿನ ಎಲ್ಲ ಉದಾಹರಣೆಗಳೂ ಕಟ್ಟಡ ಕಾಮಗಾರಿಯ ಅವ್ಯವಸ್ಥೆ, ಕಳಪೆ ಗುಣಮಟ್ಟದ ಸಾಧನಗಳ ಬಳಕೆ, ಕಟ್ಟಡ ನಿರ್ಮಾಣದ ಮಿತಿಯನ್ನು ಮೀರಿ ಹಾಗೂ ಕಾನೂನನ್ನು ಉಲ್ಲಂಘಿಸಿ ಹೆಚ್ಚುವರಿ ಅಂತಸ್ತುಗಳ ನಿರ್ಮಾಣ, ಕಟ್ಟಡ ಕಾಮಗಾರಿಗಳ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸಂಭವಿಸಿದ ಅನಾಹುತಗಳು.

‘ಯಾವುದೇ ಕಟ್ಟಡವನ್ನು ಕಟ್ಟುವಾಗ ಅದು ದೀರ್ಘ ಕಾಲ ಬಾಳಿಕೆ ಬರಬೇಕೆಂದಿದ್ದರೆ ಅಡಿಪಾಯ ತೆಗೆಯುವ ಮುನ್ನವೇ ಮಣ್ಣಿನ ಗುಣದ ಪರೀಕ್ಷೆ (ಸಾಯಿಲ್‌ ಟೆಸ್ಟ್‌) ಮಾಡಿಸಬೇಕು. ಒಂದೇ ಅಂತಸ್ತಿನ ಕಟ್ಟಡವಾದರೂ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಮುಂದುವರಿಯುವುದು ಒಳ್ಳೆಯದು’ ಎಂದು ಸಲಹೆ ಮಾಡುತ್ತಾರೆ ಬಾಣಸವಾಡಿಯಲ್ಲಿರುವ ಕ್ಯಾಲಿಬರ್‌ ಕನ್ಸಲ್ಟಿಂಗ್‌ ಎಂಜಿನಿಯರ್ಸ್‌ ಕಂಪೆನಿಯಲ್ಲಿ ಸ್ಟ್ರಕ್ಚರಲ್‌ ಡಿಸೈನ್‌ ಎಂಜಿನಿಯರ್‌ ಆಗಿರುವ ಅಮುದ ಲಿಂಗಂ.

‘ಇಂದು ಜನರಲ್ಲಿ ನಿರೀಕ್ಷೆಗಳು ಹೆಚ್ಚು. ಸೈಟ್‌ ಸಣ್ಣದಾಗಿದ್ದರೂ, ಸಣ್ಣ ಜಾಗವಿದ್ದರೂ ಮನೆಯೊಳಗೆ ಮಾತ್ರ ತುಂಬ ಜಾಗಬೇಕು, ಮನೆ ದೊಡ್ಡದಾಗಿರಬೇಕು, ಮನೆ ಮೇಲೆ ಮನೆ ಬೇಕು ಎಂಬ ಕಾರಣಕ್ಕೆ ಹೆಚ್ಚಿನ ಹೊರೆ (ಲೋಡ್‌) ಆಗುವಂಥ ಮನೆಯನ್ನು ಅವೈಜ್ಞಾನಿಕವಾಗಿ ಕಟ್ಟಿಸುತ್ತಾರೆ. ಮನೆಯ ಸುರಕ್ಷತೆ, ಭದ್ರತೆ (ಸ್ಟ್ರಕ್ಚರಲ್‌ ಸ್ಟೆಬಿಲಿಟಿ) ನೋಡದೆಯೇ ಕಟ್ಟಿಸಿಬಿಡುತ್ತಾರೆ. ಮಕ್ಕಳಿಗೆ ಅಂತ ಹೆಚ್ಚುವರಿ ರೂಮ್‌ ಇರಲಿ ಎಂದು ಪ್ಲ್ಯಾನ್‌ಗೆ ವಿರುದ್ಧವಾಗಿ ಅಥವಾ ನಕ್ಷೆಯನ್ನು ಬದಿಗಿರಿಸಿ ತಮಗೆ ಇಷ್ಟಬಂದ ರೀತಿಯಲ್ಲಿ ಕಟ್ಟಿಸುತ್ತಾರೆ. ಇದರಿಂದ ಮನೆಗೆ ಅಪಾಯವೇ ಹೆಚ್ಚು’ ಎಂದು ಎಚ್ಚರಿಕೆ ನೀಡುತ್ತಾರೆ ಅವರು.

ಹಾಗಾದರೆ ಮನೆಯ ಸುರಕ್ಷತೆಗೆ, ಗಾಳಿ ಮಳೆ ಏನೇ ಬಂದರೂ ಮನೆ ಅಲುಗಾಡದೇ ಹಾಗೇ ಭದ್ರವಾಗಿ ಇರಬೇಕು ಎಂದಾದರೆ ಏನು ಮಾಡಬಹುದು?

ಎಂಜಿನಿಯರ್‌ ಹೇಳಿದ ಪ್ರಕಾರವೇ ಮನೆ ಕಟ್ಟಿಸಿ. ಕೆಳಭಾಗ ಮತ್ತು ಅದರ ಮೇಲೆ ಎರಡು ಅಂತಸ್ತು ಕಟ್ಟಿಸುವುದಾದರೆ ನಿಗದಿಯಂತೆ ಆರರಿಂದ ಎಂಟು ಪಿಲ್ಲರ್‌ ಹಾಕಿ ಅದಕ್ಕನುಗುಣವಾಗಿಯೇ ಮೇಲೆ ಕಟ್ಟಿಸುತ್ತಾ ಹೋಗಿ. ಅಗ್ನಿಶಾಮಕ ಸುರಕ್ಷತಾ ನೀತಿಗಳನ್ನೂ ಅನುಸರಿಸಿ. 15 ಮೀಟರ್‌ ಮೇಲಿನವರೆಗೆ ಕಟ್ಟಿಸಿದರೆ ಅಗ್ನಿ ಸುರಕ್ಷತಾ ನಿಯಮಗಳನ್ನು (ಫೈರ್ ನಾರ್ಮ್ಸ್) ಅನುಸರಿಸಬೇಕು. ಆದರೆ ಈಗ ಕೆಲವೆಡೆ ಇದನ್ನು ಪಾಲಿಸುತ್ತಿಲ್ಲ. ಇದೂ ಕಟ್ಟಡದ ಅಸುರಕ್ಷತೆಗೆ ಪ್ರಮುಖ ಕಾರಣ.

‘ಕೆಲವರು ಮನೆಯನ್ನು ತಮ್ಮ ಸ್ವಂತ ವಾಸ್ತವ್ಯಕ್ಕೆ ಎಂದು ಕಟ್ಟಿ ಹಣದಾಸೆಗಾಗಿ ಅದನ್ನು ಗೋಡೌನ್‌ಗಾಗಿಯೋ, ಶಾಲೆ, ಕಚೇರಿಯ ಬಳಕೆಗಾಗಿಯೋ ಬಾಡಿಗೆಗೆ ಕೊಡುತ್ತಾರೆ. ಹಾಗಿದ್ದಾಗ ಮನೆ ಬೀಳುವ ಸಂಭವ ಇರುತ್ತದೆ’ ಎಂದು ಅಪಾಯದ ಸಾಧ್ಯತೆ ಬಗ್ಗೆ ಬೆಳಕು ಚೆಲ್ಲುತ್ತಾರೆ ಇನ್ನೊಬ್ಬ ಸ್ಟ್ರಕ್ಚರಲ್‌ ಎಂಜಿನಿಯರ್‌ ಸುನಿಲ್‌ಕುಮಾರ್‌.

‘ಬಾಡಿಗೆ ದುಡ್ಡಿನ ಆಸೆಯಿಂದ ಅವೈಜ್ಞಾನಿಕವಾಗಿ ಮಹಡಿಗಳನ್ನು ಕಟ್ಟುವುದರಿಂದಲೂ ತಳಪಾಯದ ಧಾರಣಾ ಸಾಮರ್ಥ್ಯಕ್ಕೆ ಧಕ್ಕೆಯಾಗಿ ಕುಸಿಯುವ ಅಪಾಯ ಇದೆ. ಅಷ್ಟೇ ಅಲ್ಲದೆ ಈ ವರ್ಷ ಎರಡು ಮಹಡಿಯ ಮನೆ ಕಟ್ಟಿ ನಾಲ್ಕೈದು ವರ್ಷ ಕಳೆದು ಮತ್ತೆ ಇನ್ನೆರಡು ಮಹಡಿಯನ್ನು ತಜ್ಞರ ಸಲಹೆ, ಅಭಿಪ್ರಾಯಗಳನ್ನು ಪಡೆಯದೆಯೇ ಕಟ್ಟಿಸಿಬಿಡುತ್ತಾರೆ. ಇದು ಕೂಡ ಮನೆ ಗಟ್ಟಿತನ ಕಳೆದುಕೊಳ್ಳಲು ಕಾರಣ’ ಎನ್ನುತ್ತಾರೆ ಅವರು.

‘ಮನೆ ಕಟ್ಟುವ ಮುನ್ನ ಮಣ್ಣಿನ ಗುಣ ಹೇಗಿದೆ, ಮರಳು ಮಿಶ್ರಿತ ಮಣ್ಣೋ, ಜೇಡಿಮಣ್ಣಿನ ರೀತಿಯದ್ದೋ ಅಥವಾ ಕಪ್ಪು ಮಣ್ಣು ಇದೆಯೇ ಎಂಬುದನ್ನು ಪರಿಶೀಲಿಸಬೇಕು, ಮನೆ ಕಟ್ಟಿದ ಮೇಲೆ ಸಂಪಿನ ಮೂಲಕ ನೀರು ಸೋರಿಕೆ ಉಂಟಾಗಿಯೋ, ಅಂತರ್ಜಲ ನೀರು ಬಂದು ಕಟ್ಟಡಕ್ಕೆ ಸೇರಿಕೊಂಡರೂ ಅಪಾಯ ಇದ್ದದ್ದೇ. ಇದರಿಂದ ಕಟ್ಟಡ ಭಾರ ತಡೆದುಕೊಳ್ಳುವ ಸಾಮರ್ಥ್ಯ ಕಳೆದುಕೊಂಡು ಬಿದ್ದು ಹೋಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಎಂಜಿನಿಯರ್‌ ಆನಂದ ಕುಮಾರ್‌.

ಕಟ್ಟಡ ಕಾಮಗಾರಿಗಳನ್ನು ಭರದಿಂದ ಪ್ರಾರಂಭಿಸಿ ತರಾತುರಿಯಿಂದ ಮುಗಿಸಿ ಶುಭ ಮುಹೂರ್ತದಲ್ಲಿ ಗೃಹಪ್ರವೇಶವನ್ನೂ ಮಾಡಿ ಸಂಭ್ರಮಿಸುವ ಮುನ್ನ ಕಟ್ಟಡದ ಸಂಪೂರ್ಣ ಸುರಕ್ಷತೆ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಒಳಿತು.

ಎಂಜಿನಿಯರ್‌ ಆನಂದ ‌ಕುಮಾರ್ ಅವರ ಸಂಪರ್ಕಕ್ಕೆ ಮೊ 97318 77224

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry