ಬುಧವಾರ, ಏಪ್ರಿಲ್ 8, 2020
19 °C

ಪಂಥ ಯಾವುದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಹಾ ಅವರ ಲೇಖನ ಓದಿ ಬೇಸರವಾಯಿತು. ಅವರಂಥ ‘ಅಧಿಕೃತ ಇತಿಹಾಸಕಾರ’ರು(?) ತಮ್ಮ ಪಂಥವನ್ನು ಬಹಿರಂಗವಾಗಿ ಹೇಳುವುದು ಯಾವಾಗ?

‘ಲೆನಿನ್ ಬದಲಿಗೆ ಭಗತ್‍ ಸಿಂಗ್ ಯಾಕಾಗದು’ ಎಂದು ಒಬ್ಬ ಶ್ರೀಸಾಮಾನ್ಯ ಕೇಳಿದ್ದರೆ, ಅದು ವಿವರಣೆ ನೀಡಲು ಯೋಗ್ಯವಾದ ಪ್ರಶ್ನೆ. ಅದೇ ಪ್ರಶ್ನೆಯನ್ನು ಗುಹಾ ಕೇಳಿದಾಗ ಒಂದೋ ಅಜ್ಞಾನವೆನಿಸುತ್ತದೆ, ಇಲ್ಲಾ ‘ಉದ್ದೇಶಪೂರಿತ’ ಎನಿಸುತ್ತದೆ. ಈ ದೇಶದ ಬಲಪಂಥೀಯರಿಗೆ ಭಗತ್‍ ಸಿಂಗ್ ಸಹ ಬೇಕಾಗಿಲ್ಲ ಎಂಬುದು ಗುಹಾ ಅವರಿಗೆ ತಿಳಿಯದ ವಿಚಾರವಲ್ಲ. ಅವರೇ ಹೇಳಿಕೊಳ್ಳುವಂತೆ ಅವರೊಬ್ಬ ಜನತಾಂತ್ರಿಕ ಮೌಲ್ಯಗಳನ್ನು ನಂಬುವ ವ್ಯಕ್ತಿಯಾಗಿದ್ದರೆ, ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಕೆಲವು ಪುಂಡರು ಒಂದು ಸ್ಮಾರಕವನ್ನು ನಾಶಪಡಿಸುವ ಕೆಲಸಕ್ಕೆ ಕೈಹಾಕಿದಾಗ ಅದನ್ನು ಖಂಡಿಸಬೇಕಾಗಿತ್ತು. ಆದರೆ ಗುಹಾ, ಅಲ್ಲಿಂದ ಹಿಡಿದ ಒಂದು ಎಳೆಯಿಂದ ತಮ್ಮ ವೈಚಾರಿಕ ಭಿನ್ನಾಭಿಪ್ರಾಯವನ್ನು ವಿಕೃತವಾಗಿ ದಾಖಲಿಸಿದ್ದಾರೆ.

ಐತಿಹಾಸಿಕ ಸತ್ಯಗಳನ್ನು ಪರಾಮರ್ಶಿಸದೆ ಅವರು ಹೇಳಿರುವ ಕಾಗಕ್ಕ- ಗುಬ್ಬಕ್ಕ ಕಥೆಗಳು ಬೇಸರ ಮೂಡಿಸುವಂಥವು.

ಸ್ಟಾಲಿನ್ ವಿರುದ್ಧ ದಶಕಗಳ ಕಾಲ ದೋಷಾರೋಪಣೆ, ಟೀಕೆ- ಟಿಪ್ಪಣಿಗಳನ್ನು ಅಮೆರಿಕ ಪ್ರೇರಿತ ಮಾಧ್ಯಮಗಳು ಯಥೇಚ್ಛವಾಗಿ ಮಾಡಿವೆ. ನಮ್ಮ ದೇಶದ ಮಾಧ್ಯಮಗಳೂ ಹಿಂದು–ಮುಂದು ಆಲೋಚಿಸದೆ ಅವುಗಳನ್ನು ಅನುಸರಿಸಿವೆ ಮತ್ತು ಪ್ರಚಾರ ಮಾಡಿವೆ. ಅದರ ಬಗ್ಗೆ ಸತ್ಯಾನ್ವೇಷಣೆಯನ್ನು

ಇತಿಹಾಸಕಾರರು ಮಾಡಲಿ. ಸ್ಟಾಲಿನ್‍ ಕಾಲದಲ್ಲಿ ನಡೆಯಿತು ಎನ್ನಲಾಗಿರುವ ವಿದ್ಯಮಾನಗಳ ಬಗ್ಗೆ ಹಲವಾರು ಅನ್ವೇಷಕರು ಹುಡುಕಾಟ ನಡೆಸಿದ್ದಾರೆ. ಅದಿರಲಿ. ಆದರೆ, ಲೆನಿನ್ ಬಗ್ಗೆ ಗುಹಾ ವ್ಯಕ್ತಪಡಿಸಿರುವ ಅಭಿಪ್ರಾಯ ಅಚ್ಚರಿ ಮೂಡಿಸುವಂತಿದೆ. ರಷ್ಯಾದಲ್ಲಿ ಝಾರ್ ಆಡಳಿತವನ್ನು ಕೊನೆಗಾಣಿಸಿ, 1917ರಲ್ಲಿ ಕ್ರಾಂತಿಯಾದ ನಂತರ ಲೆನಿನ್ ಬದುಕಿದ್ದುದು ಏಳು ವರ್ಷ ಮಾತ್ರ. ಅದರಲ್ಲಿ 2 ವರ್ಷ ಅವರು ಹಾಸಿಗೆ ಹಿಡಿದಿದ್ದರು. ಅಷ್ಟರಲ್ಲೇ ಲೆನಿನ್, ಲಕ್ಷಾಂತರ ಜನರನ್ನು ಕೊಂದರೇ? ಸರ್ವಾಧಿಕಾರಿಯಾಗಿ ಮೆರೆದರೇ? ಹಸಿ ಸುಳ್ಳುಗಳನ್ನು ಬರೆಯುವ ಮೊದಲು, 1930ರ ದಶಕದ ರಷ್ಯಾದ ನೈಜ ಸ್ಥಿತಿಗತಿಗಳ ಬಗ್ಗೆ ಅರಿಯಲು ಸಿಡ್ನಿ ಮತ್ತು ಬೆಯಾಟ್ರಿಸ್ ವೆಬ್ ದಂಪತಿಯನ್ನು ಗುಹಾ ಅವಲಂಬಿಸಬಹುದಿತ್ತಲ್ಲವೇ? ಸ್ಟಾಲಿನ್‍ರ ಬಗ್ಗೆ ಅರಿಯಲು ಗ್ರೋವರ್ ಫರ್, ಪ್ಯಾಟ್ ಸ್ಲೋನ್, ಲುಡೋ ಮಾರ್ಟೆನ್ಸ್, ಮಾರಿಯೋ ಸೌಜಾಂ ಮುಂತಾದವರನ್ನು ಓದಬಹುದಿತ್ತಲ್ಲ! ಗುಹಾ ತಮ್ಮ ಲೇಖನದಲ್ಲಿ ಕಮ್ಯುನಿಸ್ಟ್ ಸಿದ್ಧಾಂತದ ಬಗೆಗಿನ ತಮ್ಮ ಅಸಹಿಷ್ಣುತೆಯನ್ನು

ಹೊರಹಾಕಿದ್ದಾರೆ.

ಕಮ್ಯುನಿಸ್ಟೋ, ಸಮಾಜವಾದಿಯೋ ಅಥವಾ ಡೆಮಾಕ್ರೆಟೋ... ಏನಾದರೂ ಇರಲಿ, ಒಬ್ಬ ವ್ಯಕ್ತಿ ಮೊದಲಿಗೆ ಸತ್ಯನಿಷ್ಠನಾಗಿರಬೇಕಲ್ಲವೇ?

-ಡಾ. ಜಿ. ಶಶಿಕುಮಾರ್, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)