‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಲಿ’

7
‘ನನ್ನ ಶಾಲೆ ನನ್ನ ಜವಾಬ್ದಾರಿ’, ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಕಾರ್ಯಾಗಾರ

‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಲಿ’

Published:
Updated:

ರಾಮನಗರ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು.ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಹೇಳಿದರು.

ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ‘ನಾ ಕಲಿತ ಶಾಲೆ ಋಣವ ತೀರಿಸುವೆ. ಇದು ನನ್ನ ಜವಾಬ್ದಾರಿ’ ಮತ್ತು ಮಕ್ಕಳ ಹಕ್ಕುಗಳು ಹಾಗೂ ರಕ್ಷಣಾ ಕಾಯ್ದೆ ಕುರಿತು ಗುರುವಾರ ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಸಾಧನೆ ಮಾಡಿದವರನ್ನು ಆಯಾ ಶಾಲೆಗೆ ಕರೆಸಿ ವಿದ್ಯಾರ್ಥಿಗಳೊಂದಿಗೆ ಬೆರೆಯುವಂತೆ ಮಾಡಬೇಕು. ಅವರ ಸಾಧನೆ ವಿವರ ಹಂಚಿಕೊಳ್ಳಲು ಅವಕಾಶ ಕಲ್ಪಿಸಬೇಕು. ಅಂಥ ಸಾಧಕರು  ತಾವು ಓದಿದ ಶಾಲೆಗಳನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಗೆ ನೆರವಾಗಬೇಕು ಎಂದು ತಿಳಿಸಿದರು.

ಸರ್ಕಾರ ಎಲ್ಲ ಇಲಾಖೆಗಳಿಗಿಂತ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಎಲ್ಲ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ಎಲ್ಲಾ ಶಾಲೆಗಳಿಗೆ ಆವರಣ, ಕಿರು ಉದ್ಯಾನ, ಗ್ರಂಥಾಲಯ ನಿರ್ಮಾಣ, ಶೈಕ್ಷಣಿಕ ಸಾಮಗ್ರಿ ವಿತರಣೆ ಸಕಾಲದಲ್ಲಿ ಆಗಬೇಕು ಎಂದರು.

‘ನಾ ಕಲಿತ ಶಾಲೆಗೆ ತೀರಿಸುವ ಋಣವ’ ಘೋಷ ವಾಕ್ಯದಡಿ ರಚನೆಯಾಗಿರುವ ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಿಗೆ ಕಾರ್ಯಾಗಾರ ನಡೆಸಬೇಕು. ಸಮಾಜಮುಖಿ ಕೆಲಸ ಮಾಡಲು ಕಾರ್ಯಾಗಾರಗಳು ನೆರವಾಗುತ್ತವೆ ಎಂದು ತಿಳಿಸಿದರು.

ಆಯೋಜಕರ ವಿರುದ್ಧ ಅಸಮಾಧಾನ: ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಹಳೆಯ ವಿದ್ಯಾರ್ಥಿಗಳನ್ನು ಆಹ್ವಾನಿಸಿರಲಿಲ್ಲ. ಇದಕ್ಕೆ ಕೃಪಾ ಆಳ್ವ ವೇದಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಪ್ರಧಾನ ನ್ಯಾಯಾಧೀಶ ಪ್ರಕಾಶ್‌ ನಾಡಿಗೇರ್ ಸಹ ಬೇಸರ ವ್ಯಕ್ತಪಡಿಸಿದರು.

‘ಕಾರ್ಯಕ್ರಮಗಳನ್ನು ಆಸಕ್ತಿಯಿಂದ ಆಯೋಜನೆ ಮಾಡಬೇಕು. ಇಲ್ಲದಿದ್ದರೆ ಕಾರ್ಯಕ್ರಮಗಳ ಉದ್ದೇಶ ಜನರನ್ನು ತಲುಪುವುದಿಲ್ಲ’ ಎಂದು ನ್ಯಾಯಾಧೀಶ ಪ್ರಕಾಶ್ ನಾಡಿಗೇರ್‌ ಹೇಳಿದರು.

‘ಸರ್ಕಾರದ ವತಿಯಿಂದ ಅನೇಕ ಯೋಜನೆಗಳು ಜಾರಿಯಾಗುತ್ತವೆ. ಆದರೆ ಅಧಿಕಾರಿಗಳು ಸರಿಯಾಗಿ ಸಂಘಟಿತವಾಗಿ ಕಾರ್ಯಕ್ರಮ ರೂಪಿಸದ ಕಾರಣ ಯೋಜನೆಗಳು ವಿಫಲವಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್‌ ಕೆ. ರಾಜೇಂದ್ರ ಮಾತನಾಡಿ, ಕಾರ್ಯಕ್ರಮಗಳಿಗೆ ಸಂಬಂಧಪಟ್ಟವರವನ್ನು ಕರೆಯಬೇಕು. ಶಾಲೆಯ ವಿದ್ಯಾರ್ಥಿಗಳನ್ನು ಕರೆತಂದು ಕಾರ್ಯಕ್ರಮ ಮಾಡಿದರೆ, ಉದ್ದೇಶ ವಿಫಲವಾಗುತ್ತದೆ ಎಂದು ಎಚ್ಚರಿಸಿದರು.

ಈಚಿನ ದಿನಗಳಲ್ಲಿ ವಾಟ್ಸಆ್ಯಪ್‌, ಫೇಸ್ ಬುಕ್‌ ಮೂಲಕ ಹಳೆಯ ವಿದ್ಯಾರ್ಥಿಗಳೆಲ್ಲಾ ಸಂಘಟಿತರಾಗಿ ತಾವು ಓದಿದ ಶಾಲೆಗೆ ಸಹಾಯ ಮಾಡುತ್ತಿರುವುದು. ಅವಶ್ಯ ಇರುವ ವಸ್ತುಗಳನ್ನು ಶಾಲೆಗೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಚಂದ್ರಶೇಖರ್ ಆಲ್ಲಿಪುರ, ಬಾಲನ್ಯಾಯ ಮಂಡಳಿ ಸದಸ್ಯ ಪ್ರೊ.ಶಿಲಿಂಗಯ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಸ್. ಹೊನ್ನಸ್ವಾಮಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಚ್. ಗಂಗಮಾರೇಗೌಡ ಇದ್ದರು.

ಶಿಕ್ಷಕರಾದ ಕೆ.ಶಿವಹೊಂಬಯ್ಯ, ಡಿ.ಸಿ.ಭಾರತಿ ಪ್ರಾರ್ಥಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಕೆ.ರೇವಣೇಶ್ ಸ್ವಾಗತಿಸಿದರು. ಮಕ್ಕಳ ರಕ್ಷಣಾಧಿಕಾರಿ ತಾಜುದ್ದೀನ್‌ ಖಾನ್ ನಿರೂಪಿಸಿದರು. ಅಹಲ್ಯಾ ವಂದಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry