ಫಲಿತಾಂಶ ಪ್ರಕಟಣೆಗೆ ಒತ್ತಾಯ

7
ವಿದ್ಯಾರ್ಥಿನಿಯರಿಂದ ಪ್ರತಿಭಟನೆ, ತಹಶೀಲ್ದಾರ್‌ಗೆ ಮನವಿ

ಫಲಿತಾಂಶ ಪ್ರಕಟಣೆಗೆ ಒತ್ತಾಯ

Published:
Updated:

ಚಿಂತಾಮಣಿ: ನಗರದ ಸರ್ಕಾರಿ ಮಹಿಳಾ ಕಾಲೇಜಿನ 2ನೇ ಸೆಮಿಸ್ಟರ್‌ನ 18 ವಿದ್ಯಾರ್ಥಿನಿಯರ ಪರೀಕ್ಷಾ ಫಲಿತಾಂಶ ಪ್ರಕಟಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿನಿಯರು ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಅಧಿಕಾರಿಗಳು ಮಾಡಿರುವ ಯಡವಟ್ಟಿನಿಂದ ಮಹಿಳಾ ಕಾಲೇಜಿನ 2ನೇ ಸೆಮಿಸ್ಟರ್‌ನ 18 ವಿದ್ಯಾರ್ಥಿನಿಯರ ಫಲಿತಾಂಶ ಪ್ರಕಟವಾಗದೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಗ್ರಾಮೀಣ ಭಾಗಗಳಿಂದ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವುದೇ ದೊಡ್ಡ ಸಾಧನೆಯಾಗಿದೆ. ಹೀಗಿರುವಾಗ ಫಲಿತಾಂಶವಿಲ್ಲದೆ ವಿದ್ಯಾರ್ಥಿನಿಯರು ತೊಂದರೆಗೆ ಒಳಗಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಎಬಿವಿಪಿ ಜಿಲ್ಲಾ ಸಂಚಾಲಕ ಸುರೇಶ್‌ ಮಾತನಾಡಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ಎಡವಟ್ಟುಗಳು ಸಾಮಾನ್ಯವಾಗಿವೆ. ಪರೀಕ್ಷೆಯ ಶುಲ್ಕ ಕಟ್ಟಿ, ಪರೀಕ್ಷೆ ಬರೆದರೂ ಸಹ ಫಲಿತಾಂಶ ಪ್ರಕಟವಾಗದೆ ಪರದಾಡುವಂತಾಗಿದೆ ಎಂದು ದೂರಿದರು.

ಮರುಮೌಲ್ಯಮಾಪನಕ್ಕೆ ಇಚ್ಛಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಉತ್ತರಪತ್ರಿಕೆಗಳ ಜೆರಾಕ್ಸ್‌ ಪ್ರತಿ ಪಡೆದುಕೊಳ್ಳಬೇಕು ಎನ್ನುವ ಷರತ್ತು ಗಮನಿಸಿದರೆ ಹಣ ಮಾಡುವ ಉದ್ದೇಶದಲ್ಲಿ ಸಂಶಯ ಇಲ್ಲ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಅಧಿಕಾರಿಗಳು ರಾಜಕೀಯ ಪಕ್ಷಗಳ ನಾಯಕರಂತೆ ವರ್ತಿಸದೆ ಪರೀಕ್ಷಾ ಕೆಲಸಗಳನ್ನು ಸಮರ್ಪಕವಾಗಿ ನಡೆಸಿ ಫಲಿತಾಂಶ ಪ್ರಕಟಿಸಿದ್ದರೆ ಇಂತಹ ತಪ್ಪು ನಡೆಯುತ್ತಿರಲಿಲ್ಲ. ನೊಂದ ವಿದ್ಯಾರ್ಥಿನಿಯರಿಗೆ ಶೀಘ್ರವಾಗಿ ನ್ಯಾಯ ದೊರಕದಿದ್ದರೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ವಿಶ್ವನಾಥ್‌ ಮಾತನಾಡಿ, ಫಲಿತಾಂಶ ಪ್ರಕಟಿಸುವಂತೆ ವಿಶ್ವವಿದ್ಯಾಲಯದ ಮೇಲೆ ಒತ್ತಡ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ವಿದ್ಯಾರ್ಥಿನಿಯರಾದ ಭವ್ಯ, ಚೈತ್ರ, ಬಿಂದು, ಭವಾನಿ, ಚೈತನ್ಯ, ಅಭಿನಯ, ಅಶ್ವಿನಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry