ಡೀಮ್ಡ್ ವಿ.ವಿ: ಎಂಜಿನಿಯರಿಂಗ್ ಪ್ರವೇಶಕ್ಕೆ ತಡೆ

7

ಡೀಮ್ಡ್ ವಿ.ವಿ: ಎಂಜಿನಿಯರಿಂಗ್ ಪ್ರವೇಶಕ್ಕೆ ತಡೆ

Published:
Updated:
ಡೀಮ್ಡ್ ವಿ.ವಿ: ಎಂಜಿನಿಯರಿಂಗ್ ಪ್ರವೇಶಕ್ಕೆ ತಡೆ

ನವದೆಹಲಿ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಪೂರ್ವಾನುಮತಿ ಇಲ್ಲದೆ ಡೀಮ್ಡ್‌ ವಿಶ್ವವಿದ್ಯಾಲಯಗಳು ಎಂಜಿನಿಯರಿಂಗ್‌ ಪದವಿ ಕೋರ್ಸ್‌ಗಳಿಗೆ ಪ್ರವೇಶ ನೀಡದಂತೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.

ಎಐಸಿಟಿಇ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮೂವರು ಸದಸ್ಯರ ಪೀಠ ಈ ಆದೇಶ ಹೊರಡಿಸಿದೆ. 2018–19ನೇ ಸಾಲಿನ ಎಂಜಿನಿಯರಿಂಗ್‌ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಈ ತಡೆಯಾಜ್ಞೆ ಅನ್ವಯಿಸುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

‘ಅಂಚೆ ತೆರಪಿನ ಶಿಕ್ಷಣ ಅಥವಾ ದೂರ ಶಿಕ್ಷಣದ ಮೂಲಕ ತಾಂತ್ರಿಕ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದು ಕಳೆದ ನವೆಂಬರ್‌ 3ರಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು’ ಎಂದು ಎಐಸಿಟಿಇ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ಡೀಮ್ಡ್ ವಿಶ್ವವಿದ್ಯಾಲಯಗಳು ಎಐಸಿಟಿಇ ಅನುಮತಿ ಇಲ್ಲದೆ 2018–19ನೇ ಸಾಲಿನ ಎಂಜಿನಿಯರಿಂಗ್‌ ಪ್ರವೇಶ ನೀಡುವಂತಿಲ್ಲ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಎಐಸಿಟಿಇ ಪತ್ರಿಕಾ ಪ್ರಕಟಣೆ ನೀಡಿತ್ತು.

ಇದನ್ನು ಪ್ರಶ್ನಿಸಿ ಅನೇಕ ರಾಜ್ಯಗಳ ವಿಶ್ವವಿದ್ಯಾಲಯಗಳು ಆಯಾ ಹೈಕೋರ್ಟ್‌ಗಳ ಮೊರೆ ಹೋಗಿವೆ.

ಸುಪ್ರೀಂ ಕೋರ್ಟ್‌ ಆದೇಶ ಅಂಚೆ ತೆರಪಿನ ಮತ್ತು ದೂರ ಶಿಕ್ಷಣದ ಮೂಲಕ ನೀಡುವ ತಾಂತ್ರಿಕ ಶಿಕ್ಷಣಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಈ ಶೈಕ್ಷಣಿಕ ಸಂಸ್ಥೆಗಳು ವಾದ ಮಂಡಿಸಿವೆ.

ಈ ಸಂಬಂಧ ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಸಲ್ಲಿಸಿರುವ ರಿಟ್‌ ಅರ್ಜಿಗಳನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸುವಂತೆ ನಿರ್ದೇಶನ ನೀಡಬೇಕು ಎಂದು ಎಐಸಿಟಿಇ ವಕೀಲರು ಮನವಿ ಮಾಡಿದರು.

ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನ್ಯಾಯಾಲಯ ಮಧ್ಯಂತರ ಆದೇಶ ನೀಡಬೇಕು ಎಂದು ಅವರು ಮನವಿ ಮಾಡಿದರು.

ಇದನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌ ಪೀಠವು ಎಂಜಿನಿಯರಿಂಗ್‌ ಪ್ರವೇಶಕ್ಕೆ ತಡೆಯಾಜ್ಞೆ ನೀಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry