7

ಗೆಲುವು ಸದಾ ನಿಮ್ಮದಾಗಲಿ...

Published:
Updated:
ಗೆಲುವು ಸದಾ ನಿಮ್ಮದಾಗಲಿ...

ಪರೀಕ್ಷೆಗೆ ತಯಾರಿ ಸಮರ್ಪಕವಾಗಿದ್ದರೆ, ವಿದ್ಯಾರ್ಥಿಗಳು ಧೈರ್ಯದಿಂದ ಅದನ್ನು ಎದುರಿಸಿದರೆ ಪೋಷಕರು ಪ್ರೋತ್ಸಾಹಕರಾಗಿ ನಿಂತರೆ ಗೆಲುವು ಖಚಿತ. ಅಂಕಗಳನ್ನು ತೆಗೆಯುವ ಅತ್ಯುತ್ಸಾಹದಲ್ಲಿ ಮಂಕರಾಗದಂತೆ ಎಚ್ಚರಿಕೆ ವಹಿಸಲು ಕೆಲವು ಸರಳ ಸೂತ್ರಗಳನ್ನು ಪಾಲಿಸಿದರೆ ಸಾಕು.

ವಿದ್ಯಾರ್ಥಿಗಳಿಗೆ:  ವರ್ಷಪೂರ್ತಿ ಪಾಠ ಕೇಳಿದ ನೀವು ಖಂಡಿತ ಉತ್ತಮ ಅಂಕ ಪಡೆಯುತ್ತೀರೆಂದು ನಿಮ್ಮಲ್ಲಿ ನಿಮಗೆ ಪೂರ್ಣ ವಿಶ್ವಾಸವಿರಲಿ. ಪರೀಕ್ಷಾ ಸಮಯದಲ್ಲಿ ಪಠ್ಯದ ಪೂರ್ಣ ಓದಿಗಿಂತ ಪುನರಾವರ್ತನೆಗೆ ಹೆಚ್ಚು ಒತ್ತು ಕೊಡಿ. ಶಾಲೆಯಲ್ಲಿ ನಡೆಸಿದ್ದ ಕಿರುಪರೀಕ್ಷೆಗಳ ಪ್ರಶ್ನಪತ್ರಿಕೆ, ಉತ್ತರಪತ್ರಿಕೆಗಳನ್ನು ನೋಡಿ ಎಲ್ಲೆಲ್ಲಿ ಅಂಕಗಳು ಕಡಿಮೆ ಬಿದ್ದಿವೆ ಎಂಬುದನ್ನು ಗಮನಿಸಿ ಆ ತಪ್ಪು ಪುನರಾವರ್ತನೆ ಆಗದಂತೆ ಉತ್ತರ ಬಿಡಿಸಿ. ಮುಖ್ಯವಾಗಿ ಪೂರ್ವಭಾವಿ ಪರೀಕ್ಷೆಯ (ಪ್ರಿಪರೇಟರಿ) ಪ್ರಶ್ನಪತ್ರಿಕೆಗಳನ್ನು ಗಮನಿಸಿ. ಎಷ್ಟೋ ಬಾರಿ ಇವೇ ಅಥವಾ ಇಂತಹವೇ ಪ್ರಶ್ನೆಗಳು ಅಂತಿಮ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುತ್ತವೆ. ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನಪತ್ರಿಕೆಯನ್ನು ನೀಡಿದ ಬಳಿಕ ಅದನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶವಿರುತ್ತದೆ. ಆತಂಕಪಡದೆ ನಿಧಾನವಾಗಿ ಪ್ರಶ್ನೆಗಳನ್ನು ಓದಿ ಅರ್ಥಮಾಡಿಕೊಳ್ಳಿ. ಸಿಬಿಎಸ್‍ಇ ಪಠ್ಯಕ್ರಮ ಅಳವಡಿಕೆಯಾದ ಕಾರಣ ನೇರ ಪ್ರಶ್ನೆಗಳು ಇರುವುದಿಲ್ಲ. ಹಾಗೆಂದು ಗಾಬರಿಯಾಗಬೇಕಿಲ್ಲ. ಪ್ರಶ್ನೆಗಳನ್ನು ಚೆನ್ನಾಗಿ ಓದಿ ಅರ್ಥ ಮಾಡಿಕೊಳ್ಳಿ. ಪ್ರಶ್ನೆಯಲ್ಲಿಯೇ ಸೂಚ್ಯವಾದ ಉತ್ತರದ ಕೊಂಡಿ ಇರುತ್ತದೆ. ಪ್ರಶ್ನೆಗಳು ನೇರವಲ್ಲ ಎಂದ ಮಾತ್ರಕ್ಕೆ ಅವು ಕಷ್ಟವೆಂದಲ್ಲ. ನಿಮ್ಮ ಬುದ್ಧಿಗೆ ಕೊಂಚ ಕೆಲಸ ಕೊಟ್ಟರೆ ಉತ್ತರ ಸುಲಭವಾಗಿ ಹೊಳೆಯುತ್ತದೆ. ಪ್ರಶ್ನೆಗಳನ್ನು ಓದಿ, ಅರ್ಥಮಾಡಿಕೊಂಡು ಉತ್ತರಗಳನ್ನು ಬರೆಯಬೇಕು. ತಟಕ್ಕನೆ ಉತ್ತರಿಸಲು ಪ್ರಯತ್ನಿಸಬೇಡಿ. Read, Analyse, Write - ಇದು ಸರಿಯಾದ ಕ್ರಮ. ಗಾಬರಿಯಲ್ಲಿ ಏನೋ ಬರೆದು, ಅದು ತಪ್ಪೆನಿಸಿ ಚಿತ್ತು ಮಾಡಿ, ಮತ್ತೆ ಬರೆದು ಒದ್ದಾಡುವುದಕ್ಕಿಂತ ತಾಳ್ಮೆಯಿಂದ ಉತ್ತರಿಸಿ. ಪ್ರಶ್ನಪತ್ರಿಕೆಯನ್ನು ಓದಲೆಂದೇ, ಅರ್ಥಮಾಡಿಕೊಳ್ಳಲೆಂದೇ 15 ನಿಮಿಷ ನೀಡಿರುವುದು. ಮನಸ್ಸಿಟ್ಟು ಓದಿ, ಉತ್ತರ ಹೊಳೆಯುತ್ತದೆ.

ಭಾಷಾ ವಿಷಯಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಿ. ಪ್ರಥಮ ಭಾಷೆ ಒಟ್ಟು 125 ಅಂಕಗಳಿಗೆ, ಅದರಲ್ಲಿ ನೀವು ಬರೆಯಬೇಕಾದ್ದು 100 ಅಂಕಗಳಿಗೆ, ಇದಕ್ಕೆ 3 ಗಂಟೆಯ ಅವಧಿ (ಉಳಿದ 25 ಅಂಕಗಳು ಆಂತರಿಕ ಮೌಲ್ಯಮಾಪಕ - ಇಂಟರ್ನಲ್ಸ್) ಆದರೆ ದ್ವಿತೀಯ ಹಾಗೂ ತೃತೀಯ ಭಾಷೆಗಳು ತಲಾ 80 ಅಂಕಗಳಿಗೆ (20 ಅಂಕಗಳು ಇಂಟರ್ನಲ್ಸ್) ಮತ್ತು ಇದನ್ನು ಬರೆಯಲು ನೀಡುವ ಕಾಲಾವಕಾಶ ಎರಡೂವರೆ ಗಂಟೆಯ ಅವಧಿ. ಈ ಅಂಕಗಳು ಮತ್ತು ಪರೀಕ್ಷಾ ಅವಧಿಯ ಗುರುತು ಮನದಲ್ಲಿದ್ದರೆ ನಿಮ್ಮ ಉತ್ತರಗಳನ್ನು ಯೋಜಿಸಲು ಅನುಕೂಲವಾಗುವುದು. ಉಳಿದಂತೆ ಐಚ್ಛಿಕ ವಿಷಯಗಳು ಅಂದರೆ ಸಮಾಜ, ವಿಜ್ಞಾನ, ಗಣಿತ ಇತ್ಯಾದಿಗಳು ಕೂಡ 80-20 ಅಂಕಗಳಿಗೆ; ಮೂರು ಗಂಟೆಯ ಅವಧಿಯ ಪತ್ರಿಕೆಗಳು. ಇದರಲ್ಲಿ 15 ನಿಮಿಷದ ಪ್ರಶ್ನಪತ್ರಿಕೆಯನ್ನು ಓದಲು ಮೀಸಲಿಡುವ ಸಮಯವೂ ಸೇರಿದೆ. (ಹೆಚ್ಚಿನ ವಿವರಗಳಿಗೆ ಶಾಲೆಯ ಅಥವಾ ಪ್ರೌಢ ಶಿಕ್ಷಣ ಮಂಡಳಿಯ ಪರೀಕ್ಷಾ ವೇಳಾಪಟ್ಟಿಯನ್ನು ನೋಡಬಹುದು.) ಯಾವುದೇ ಕಾರಣಕ್ಕೂ ಆತಂಕ–ಉದ್ವೇಗಗಳಿಗೆ ಒಳಗಾಗಬೇಡಿ. ನಗುಮುಖದೊಂದಿಗೆ ಪರೀಕ್ಷಾ ಕೊಠಡಿ ಪ್ರವೇಶಿಸಿ. ನಿಮ್ಮ ನೋಂದಣಿ ಸಂಖ್ಯೆ ಬರೆದಿರುವ ಬೆಂಚಿನಲ್ಲಿ ಕುಳಿತ ಬಳಿಕ ದೀರ್ಘವಾಗಿ ನಾಲ್ಕಾರು ಬಾರಿ ಉಸಿರಾಡಿ. ಹೀಗೆ ಉಸಿರನ್ನು ಒಳಗೆಳೆದುಕೊಳ್ಳುವಾಗ ಧೈರ್ಯ, ಶಾಂತಿ, ಸಮಾಧಾನ, ಸಂತೋಷ, ವಿಜಯಗಳನ್ನು ನಿಮ್ಮೊಳಗೆ ಸೆಳೆದುಕೊಳ್ಳುತ್ತಿದ್ದೀರೆಂದು ಭಾವಿಸಿ. ಉಸಿರನ್ನು ಹೊರ ಹಾಕುವಾಗ ಭಯ, ಉದ್ವೇಗ, ಆತಂಕ, ಸೋಲುಗಳನ್ನು ಹೊರ ಹಾಕುತ್ತಿದ್ದೀರೆಂದು ಭಾವಿಸಿ.

ಪರೀಕ್ಷಾ ಕೊಠಡಿಯಲ್ಲಿ ಅಕ್ಕಪಕ್ಕದವರೊಂದಿಗೆ ಸಂಭಾಷಣೆಯಲ್ಲಿ ತೊಡಗುವುದು, ವಿಷಯಗಳನ್ನು ಚರ್ಚಿಸುವುದು ಮಾಡಬೇಡಿ. ಉತ್ತರಪತ್ರಿಕೆಯಲ್ಲಿ ತುಂಬಬೇಕಾದ ವಿವರಗಳನ್ನು ಎಚ್ಚರಿಕೆಯಿಂದ ನಿಧಾನವಾಗಿ ತುಂಬಿ. ಸಂದೇಹಗಳು ಬಂದರೆ ಕೊಠಡಿಯಲ್ಲಿರುವ ಮೇಲ್ವಿಚಾರಕರನ್ನು ಕೇಳಿ ಸೂಕ್ತ ಸಲಹೆಯನ್ನು ಪಡೆದುಕೊಳ್ಳಿ. ನಿಮ್ಮೊಂದಿಗೆ ಚಿಕ್ಕ ಬಾಟಲಿಯಲ್ಲಿ ಕುಡಿಯುವ ನೀರು ಇರಲಿ. ಪರೀಕ್ಷೆ ಬರೆಯಲು ಬೇಕಾದ ಉಪಕರಣಗಳೆಲ್ಲ ನಿಮ್ಮೊಂದಿಗಿರಲಿ. ಎರವಲು ಪಡೆಯುವುದನ್ನು, ನೀಡುವುದನ್ನು ನಿವಾರಿಸಿ. ಇದರಿಂದ ಸಮಯ ಹಾಳು, ಪರೀಕ್ಷಾ ಕೊಠಡಿಯ ಶಾಂತಿಗೂ ಭಂಗ, ಏಕಾಗ್ರತೆಗೂ ಭಂಗವಾಗುತ್ತದೆ. ಚೆನ್ನಾಗಿ ಬರೆಯುವ ಎರಡು ಪೆನ್ನು, ಎರಡು ರೀಫಿಲ್, ಹೆರೆದು ಸಜ್ಜಾದ ಎರಡು ಪೆನ್ಸಿಲ್‍ಗಳು, ಒಂದು ಶಾರ್ಪನರ್ (ಮೆಂಡರ್), ಒಂದು ಉತ್ತಮ ಇರೇಸರ್ (ರಬ್ಬರ್), ಉದ್ದನೆಯ ಸ್ಕೇಲು, ಜ್ಯಾಮಿಟ್ರಿ ಪೆಟ್ಟಿಗೆ - ಇವಿಷ್ಟು ಇರಲಿ. ಪರೀಕ್ಷೆಗೆ ಹೊರಡುವ ಮುನ್ನ ನಿಮ್ಮ ಈ ಆಯುಧಗಳ ಪಟ್ಟಿಯನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ. ಪ್ರವೇಶ ಪತ್ರದ ಮೂಲಪ್ರತಿ ನಿಮ್ಮೊಂದಿಗೆ ಪರೀಕ್ಷಾ ಕೊಠಡಿಯಲ್ಲಿ ಇರಲಿ. ಅದರ ಎರಡು ಛಾಯಾಪ್ರತಿ (ಜೆರಾಕ್ಸ್‌) ಮಾಡಿ ಮನೆಯಲ್ಲಿ ಇಟ್ಟಿರಿ. ಅಪ್ಪಿತಪ್ಪಿಯೂ ಮರೆತು ಪರೀಕ್ಷೆಗೆ ಸಂಬಂಧಿಸಿದ ಟಿಪ್ಪಣಿ ಚೀಟಿ ನಿಮ್ಮ ಜೇಬಿನಲ್ಲಿ, ಹಾಲ್‍ಟಿಕೇಟ್ ಪೌಚಿನಲ್ಲಿ, ಜ್ಯಾಮಿಟ್ರಿ ಬಾಕ್ಸ್‌ನಲ್ಲಿ ಇರದಂತೆ ನೋಡಿಕೊಳ್ಳಿ.

ಉತ್ತರಗಳನ್ನು ಒಂದು ಕ್ರಮದಲ್ಲಿ ಬರೆಯಿರಿ. ಮೊದಲಿಗೆ ನಿಮಗೆ ಉತ್ತರಗಳು ಖಚಿತವಾಗಿ ಗೊತ್ತಿರುವ ಪ್ರಶ್ನೆಗಳನ್ನು ಉತ್ತರಿಸಿ. ಅನಂತರ ಕಷ್ಟವೆನಿಸುವ ಪ್ರಶ್ನೆಗಳನ್ನು ಉತ್ತರಿಸಿ. ಮುಖ್ಯವಾಗಿ ಯಾವ ಪ್ರಶ್ನೆಯನ್ನೂ ಬಿಡದೆ ಉತ್ತರಿಸಿ. ಉತ್ತರಿಸದಿದ್ದರೆ ಆ ಪ್ರಶ್ನೆಗೆ ಅಂಕಗಳೇ ದೊರೆಯುವುದಿಲ್ಲ. ಆದರೆ ಪ್ರಯತ್ನಿಸಿ ನಾಕಾರು ಸಾಲಾದರೂ ಬರೆದರೆ ಒಂದೆರಡು ಅಂಕವಾದರೂ ದೊರೆತೀತು. ಅಂತಿಮವಾಗಿ ಪ್ರತಿಯೊಂದು ಅಂಕವೂ ಅಮೂಲ್ಯವಲ್ಲವೆ? ಪರೀಕ್ಷೆ ಬರೆದು ಮುಗಿಸಿದ ಬಳಿಕ ಉತ್ತರಗಳನ್ನು ಒಮ್ಮೆ ಓದಿ ನೋಡಿ, ತಿದ್ದಬೇಕೆನಿಸಿದಲ್ಲಿ ತಿದ್ದಿ. ಅನಂತರ ನೇರವಾಗಿ ಮನೆಗೆ ಹಿಂದಿರುಗಿ. ಆಗಿಹೋದ ಪರೀಕ್ಷೆಯ ಬಗ್ಗೆ ಮಿತ್ರರೊಂದಿಗೆ ಚರ್ಚೆ ಬೇಡ. ಮುಂದಿನ ಪರೀಕ್ಷಾ ವಿಷಯದ ಬಗ್ಗೆ ಗಮನ ಹರಿಸಿ. ನೆನಪಿರಲಿ ನೀವು ನಿಮ್ಮ ಸಹಪಾಠಿಗಳೊಂದಿಗೆ ಸ್ಪರ್ಧೆಗೆ ಇಳಿದಿಲ್ಲ. ನಿಮಗೆಷ್ಟು ವಿಷಯದ ತಿಳಿವಳಿಕೆ ಇದೆ ಎಂಬುದನ್ನು ನೀವೇ ಅರಿತುಕೊಳ್ಳಲು ಈ ಪರೀಕ್ಷೆ ಬರೆಯುತ್ತಿದ್ದೀರಿ. ಆತ್ಮವಿಶ್ವಾಸದಿಂದ ಮುಂದೆ ಸಾಗಿ.

ಪೋಷಕರಿಗೆ: ವಿದ್ಯಾರ್ಥಿಗಳು ಪರೀಕ್ಷಾ ದಿನಗಳಲ್ಲಿ ಸಹಜವಾಗಿ ಆತಂಕ ಒತ್ತಡಗಳನ್ನು ಎದುರಿಸುತ್ತಿರುತ್ತಾರೆ. ಆದುದರಿಂದ ಅವರ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಯಾವುದೇ ಕಾರಣಕ್ಕೂ ಮೂದಲಿಕೆ ಸಲ್ಲದು, ಮಕ್ಕಳಲ್ಲಿ ತಾವು ನಿಷ್ಪ್ರಯೋಜಕರು ಎಂಬ ಭಾವ ಗಟ್ಟಿಯಾಗಿಬಿಟ್ಟರೆ ಆ ಮನಃಸ್ಥಿತಿಯಿಂದ ಅವರನ್ನು ಹೊರತರುವುದು ಬಹು ಪ್ರಯಾಸದ ಕೆಲಸ. ಅವರ ಆತ್ಮಗೌರವ, ಆತ್ಮಾಭಿಮಾನವನ್ನು ಭಂಗಿಸುವ ಯಾವ ಮಾತೂ - ಹೀಗಳಿಕೆ, ಚುಚ್ಚುಮಾತು, ಬೆದರಿಕೆ, ಹೊಡೆತ ಬಳಕೆಯಾಗದಿರಲಿ. ಮಕ್ಕಳು ಸರಿಯಾಗಿ ಆಹಾರ ಸೇವಿಸುತ್ತಿದ್ದಾರೆಯೇ, ನಿದ್ರೆ ಮಾಡುತ್ತಿದ್ದಾರೆಯೇ ಎಂಬುದನ್ನು ಗಮನಿಸಿ. ಅತೀವ ಆತಂಕದ ಲಕ್ಷಣಗಳು ಕಂಡು ಬಂದರೆ ತಜ್ಞರನ್ನು ಭೇಟಿಯಾಗಲು ಹಿಂಜರಿಯದಿರಿ. ಮಕ್ಕಳು ಅಧ್ಯಯನದಲ್ಲಿ ತೊಡಗಿರುವಾಗ ಟಿ.ವಿ. ಬಂದ್ ಮಾಡಿರಿ. ಪರೀಕ್ಷಾ ಅವಧಿಯ ದಿನಗಳಲ್ಲಿ ನೀವೂ ಸಮಾರಂಭಗಳಿಂದ ದೂರವಿರಿ, ಮಕ್ಕಳನ್ನೂ ಕರೆದೊಯ್ಯಬೇಡಿ. ಹೊರಗಿನ ಆಹಾರ–ಪಾನೀಯಗಳ ಸೇವನೆಯಿಂದ ಅನಾರೋಗ್ಯ ಉಂಟಾಗುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಮಕ್ಕಳು ಓದುವಾಗ ನೀವೂ ಅವರೊಂದಿಗೆ ಏನನ್ನಾದರೂ ಓದುತ್ತ ಕುಳಿತುಕೊಳ್ಳಿ. ಆದರೆ ಆ ಸಮಯದಲ್ಲಿ ಅವರು ಓದುತ್ತಿರುವ ವಿಷಯದ ಬಗ್ಗೆ ಸಲಹೆ, ಸೂಚನೆ, ನಿರ್ದೇಶನ, ವಿಮರ್ಶೆ ಬೇಡ. ಅವರ ಪಾಡಿಗೆ ಅವರು ತಯಾರಿ ನಡೆಸಲಿ. ಗಂಟೆಗೊಮ್ಮೆ ಅವರಿಗೆ ಕನಿಷ್ಠ ಹತ್ತು ನಿಮಿಷ ಬಿಡುವು ಪಡೆದುಕೊಳ್ಳಲು ಅನುವು ಮಾಡಿಕೊಡಿ. ಪುಷ್ಟಿಕರವಾದ ಆಹಾರವನ್ನು ನೀಡಿ ಮತ್ತು ಬೇಸಿಗೆಯಾದ್ದರಿಂದ ಹೆಚ್ಚಿನ ದ್ರವಗಳನ್ನು ಅವರು ಸೇವಿಸುವಂತೆ ನೋಡಿಕೊಳ್ಳಿ. ಸಾಧ್ಯವಾದರೆ ನಿಮ್ಮ ಮಕ್ಕಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಹೋಗಿ, ಮತ್ತೆ ಹಿಂದಿರುಗಿ ಕರೆತನ್ನಿ, ಇದರಿಂದ ಅವರು ಕ್ಷೇಮವಾಗಿ, ಶೀಘ್ರವಾಗಿ ಮನೆ ತಲುಪಲು ಸಾಧ್ಯ. ಆದರೆ ಪರೀಕ್ಷಾ ವಿಷಯದ ಬಗ್ಗೆ ವಿಚಾರಣೆ, ತನಿಖೆ ಬೇಡ. ಅವರು ಬರೆದು ಮುಗಿದಿರುತ್ತದೆ. ಮುಂದಿನ ವಿಷಯದ ಕಡೆಗೆ ಗಮನ ಹರಿಸಲಿ. ಪರೀಕ್ಷಾ ಕೇಂದ್ರಕ್ಕೆ ಹೋದರೆ ಪ್ರವೇಶಪತ್ರದ ಒಂದು ಪ್ರತಿ ನಿಮ್ಮೊಂದಿಗೆ ಇಟ್ಟುಕೊಂಡಿರಿ. ತುರ್ತು ಸಂದರ್ಭಗಳಲ್ಲಿ ಅದು ಒದಗಿ ಬರುತ್ತದೆ. ಪರೀಕ್ಷಾ ದಿನಗಳ ಮಧ್ಯೆ ಬಿಡುವಿನ ದಿನ ಒದಗಿದಲ್ಲಿ ಆ ದಿನ ಮಕ್ಕಳನ್ನು ವಾಯುವಿಹಾರಕ್ಕೋ, ಆಟದ ಮೈದಾನಕ್ಕೋ ಕರೆದುಕೊಂಡು ಹೋಗಿ, ಅವರೊಂದಿಗೆ ಆಟವಾಡಿ. ಮಕ್ಕಳ ಎಲ್ಲ ಚಟುವಟಿಕೆಗಳಲ್ಲಿ ನೀವು ಪಾಲ್ಗೊಳ್ಳುವುದರಿಂದ ಅವರಿಗೆ ನೀವು ‘ಅನ್ಯರು’ ಎಂಬ ಭಾವನೆ ದೂರವಾಗುತ್ತದೆ. ಅದರಲ್ಲೂ ಕಿಶೋರ ವಯಸ್ಸಿನಲ್ಲಿ, ಮಕ್ಕಳು ತಮ್ಮ ಸ್ವಂತ ವ್ಯಕ್ತಿತ್ವ ರೂಪಿಸಿಕೊಳ್ಳುವ ಸಂದರ್ಭದಲ್ಲಿ ತಂದೆ-ತಾಯಿಗಳಿಂದ ದೂರ ಸರಿಯುವ ಪ್ರಕ್ರಿಯೆ ಆರಂಭವಾಗುವ ಆ ಸಂಧಿಗ್ದ ಅವಧಿಯಲ್ಲಿ ನೀವು ಅನ್ಯರಾಗದೇ ಉಳಿದು ಅವರ ಬೆಳವಣಿಗೆಯಲ್ಲಿ ಪೋಷಕಾಂಶವಾಗಿ ಉಳಿಯುವುದು ಕೇವಲ ಪರೀಕ್ಷೆಯ ದಿನಗಳ ದೃಷ್ಟಿಯಿಂದಲ್ಲದೆ, ಸಾಮಾನ್ಯ ದೃಷ್ಟಿಯಿಂದಲೂ ಒಳಿತೇ. ಯಾವ ಮಗುವೂ ಸೋಲನ್ನು, ಅಪಜಯವನ್ನು ಬಯಸುವುದಿಲ್ಲ. ಆದರೆ ಕೆಲವೊಮ್ಮೆ ಸೋಲು, ಅಪಜಯ ಎದುರಿಸದೆ ಬಾಳು ಗಟ್ಟಿ ಆಗುವುದಿಲ್ಲ. ನಿಮ್ಮ ಮಕ್ಕಳು ಯಾವ ಹಂತದಲ್ಲಿಯೂ ಸೋಲಬಾರದು, ಅಪಜಯ ಹೊಂದಬಾರದು ಎಂಬ ಅತೀವ ಆಶಾವಾದಿಗಳಾಗದಿರಿ. ಅಕಸ್ಮಾತ್ ಸೋತರೂ ನೀವು ಅವರೊಂದಿಗಿರುತ್ತೀರಿ ಎಂಬ ಆಶ್ವಾಸನೆ ಮಕ್ಕಳಿಗೆ ದೊರೆತರೆ ಅವರು ಗೆದ್ದೇ ಗೆಲ್ಲುತ್ತಾರೆ. ಪರೀಕ್ಷೆಗಳು ಬರುತ್ತವೆ, ಹೋಗುತ್ತವೆ. ಆದರೆ ಜೀವ, ಜೀವನ ಅಮೂಲ್ಯವೂ ಹೆಚ್ಚು ಕಾಲ ಇರುವಂತಹವೂ ಎಂಬ ನೆನಪಿರಲಿ.

ಶಿಕ್ಷಕರಿಗೆ ನಮನ: ಈ ಪರೀಕ್ಷಾ ಸಂದರ್ಭಗಳಲ್ಲಿ ವಿದ್ಯಾರ್ಥಿ, ಪೋಷಕರ ನಡುವಣ ಶಿಕ್ಷಣಸೇತುವಾದ ಅಧ್ಯಾಪಕರಿಗೂ ನಾವು ವಿಶೇಷ ನಮನಗಳನ್ನು ಸಲ್ಲಿಸಬೇಕು. ಅವರ ಶ್ರಮವನ್ನು ಸ್ಮರಿಸಬೇಕು, ಗೌರವಿಸಬೇಕು. ಒಂದು ಬದಿಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿಗೊಳಿಸುತ್ತಾ ಇನ್ನೊಂದು ಬದಿಯಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಅಂದರೆ ಪ್ರಶ್ನಪತ್ರಿಕೆ ತಯಾರಿ, ಕೇಂದ್ರದ ಸಿದ್ಧತೆ, ಮೌಲ್ಯ ಮಾಪನದ ಕಾರ್ಯಗಳನ್ನು ಮಾಡುತ್ತ ಬರುವ ಶಿಕ್ಷಕ ಸಮುದಾಯಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಇಲಾಖೆಯ ಒತ್ತಡಗಳು, ಮಕ್ಕಳು ಕಲಿಯಲಿ ಎಂಬ ಪ್ರೀತಿ, ಪೋಷಕರ ದೂರು ದುಮ್ಮಾನಗಳನ್ನು ಎದುರಿಸುತ್ತ – ಇಷ್ಟೆಲ್ಲ ಸವಾಲಿನ ನಡುವೆ ಸಕಾಲದಲ್ಲಿ ಫಲಿತಾಂಶವನ್ನು ನೀಡುತ್ತ ಬಂದಿದೆ ಶಿಕ್ಷಕ ಸಮುದಾಯ. ಶಿಕ್ಷಕ ವರ್ಗಕ್ಕೆ ಗೌರವದ ನಮಸ್ಕಾರಗಳು. ಒಟ್ಟಿನಲ್ಲಿ ಪರೀಕ್ಷಾಂಕಣದಲ್ಲಿ ಎಲ್ಲರೂ ಗೆಲ್ಲುವ ಸಾಧ್ಯತೆಗಳನ್ನು ನಿರ್ಮಿಸಬೇಕು ಎನ್ನುವುದು ಇಲಾಖೆಯ ತತ್ತ್ವ. ಪರೀಕ್ಷೆ ನಡೆಸುವುದು ಕಲಿಕಾಮಟ್ಟದ ಮಾಪನಕ್ಕೆ ಹೊರತು ಅದು ಮಕ್ಕಳಿಗೆ ನೀಡುವ ಶಿಕ್ಷಯೂ ಅಲ್ಲ, ಶಿಕ್ಷಕರಿಗೆ ಒದಗುವ ಒತ್ತಡವೂ ಅಲ್ಲ. ಅಡೆಯಿಟ್ಟರೆ ಮಾತ್ರ ಮಾವು ಹಣ್ಣಾಗುತ್ತದೆ; ಹಾಗೆ ಪರೀಕ್ಷೆಯ ಬಿಸಿ ತಾಗಿದಾಗಲೇ ವಿದ್ಯಾರ್ಥಿಗಳೂ ಪಕ್ವಗೊಳ್ಳುತ್ತಾರೆ. ಎಲ್ಲ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಅಧ್ಯಾಪಕರಿಗೆ ಶುಭಾಶಯಗಳು. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಗೆಲುವು ನಿಮ್ಮದೇ!

**

ಪೋಷಕರೇ ಇಲ್ಲಿ ಕೇಳಿ!

ಮಕ್ಕಳು ಓದುವ ವಿಚಾರದಲ್ಲಿ ಹೆಚ್ಚು ಒತ್ತಡ ಬೇಡ.

ಮಕ್ಕಳ ದೈನಂದಿನ ಚಟುವಟಿಕೆ, ಆರೋಗ್ಯದತ್ತ ಗಮನವಿರಲಿ.

ಪ್ರವೇಶಪತ್ರದ ಒಂದು ಜೆರಾಕ್ಸ್ ಪ್ರತಿ ನಿಮ್ಮೊಂದಿಗಿರಲಿ.

ಸಾಧ್ಯವಾದರೆ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಹಿಂದಿರುಗಿ ಕರೆತನ್ನಿ.

ಪರೀಕ್ಷೆ ಮುಗಿಸಿ ಬಂದ ಮಕ್ಕಳ ಜೊತೆ ಆ ವಿಷಯದ ಚರ್ಚೆ ಬೇಡ.

ಹೊರಗಿನ ಆಹಾರ ಪಾನೀಯ ಬೇಡ. ಮನೆಯಲ್ಲೇ ಪಾನಕ, ಮಜ್ಜಿಗೆ ಇತ್ಯಾದಿ ತಯಾರಿಸಿ ಕೊಡಬಹುದು.

ಮಕ್ಕಳು ಓದುವಾಗ ಮನೆಯಲ್ಲಿ ಶಾಂತಿ ಸಮಾಧಾನವಿರಲಿ, ಟಿ.ವಿ. ಬೇಡ, ದೂರವಾಣಿ ಸಂಭಾಷಣೆ ಮಿತವಾಗಿರಲಿ.

ಪ್ರಶ್ನಪತ್ರಿಕೆ ಸೋರಿಕೆ ಇತ್ಯಾದಿ ಗುಲ್ಲುಗಳಿಗೆ ಕಿವಿಗೊಡಬೇಡಿ, ಹಬ್ಬಿಸಲೂ ಬೇಡಿ. ಅಂತಹ ಸಂದರ್ಭದಲ್ಲಿ ಇಲಾಖೆಯೇ ಸೂಕ್ತ ಸಾರ್ವಜನಿಕ ಪ್ರಕಟಣೆ ನೀಡುತ್ತದೆ. ಅದನ್ನು ಮಾತ್ರ ನಂಬಿ.

ವಿದ್ಯಾರ್ಥಿಗಳನ್ನು ಪ್ರೀತಿಸಿ, ಶಿಕ್ಷಕರನ್ನು ಗೌರವಿಸಿ.

***

ವಿದ್ಯಾರ್ಥಿಗಳಿಗೊಂದಿಷ್ಟು ಟಿಪ್ಸ್‌

* ಆತಂಕ, ಉದ್ವೇಗ ಬೇಡ.

* ಅತಿಯಾದ ತಯಾರಿ, ಕಡೇ ಗಳಿಗೆಯ ಓದು ಬೇಡ. ಪರೀಕ್ಷೆಗೆ ಅರ್ಧ ಗಂಟೆ ಮೊದಲು ಓದುವುದನ್ನು ನಿಲ್ಲಿಸಿ.

* ನೀವು ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸುತ್ತಿಲ್ಲ, ನಿಮಗೆ ನೀವೇ ಸ್ಪರ್ಧಿ.

* ಪರೀಕ್ಷಾ ಅವಧಿಯ ನಡುವಿನ ಬಿಡುವಿನ ದಿನಗಳನ್ನು ಪುನರಾವರ್ತನೆಗೆ ಬಳಸಿಕೊಳ್ಳಿ, ಹೊಸ ವಿಷಯಗಳ ಕಲಿಕೆಗಲ್ಲ.

* ಹೆಚ್ಚಿನ ಸಮಯ ಪುನರಾವರ್ತನೆಗೆ, ಮನನಕ್ಕೆ ಬಳಸಿಕೊಳ್ಳಿ.

* ಸರಿಯಾದ ಸಮಯಕ್ಕೆ (9 ಗಂಟೆಗೆ) ಪರೀಕ್ಷಾ ಕೇಂದ್ರ ತಲುಪಿ.

* ಪರೀಕ್ಷೆಗೆ ಮುನ್ನ ಮಿತವಾದ ಆಹಾರ ಸೇವಿಸಿ.

* ಸಹಾಯವಾಣಿ, ಇಲಾಖಾ ಸಹಾಯವಾಣಿ ಬಳಸಲು ಹಿಂಜರಿಯದಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry