ಮುಸ್ಲಿಂ ಯುವತಿ ಮೇಲೆ ಹಲ್ಲೆ

7

ಮುಸ್ಲಿಂ ಯುವತಿ ಮೇಲೆ ಹಲ್ಲೆ

Published:
Updated:
ಮುಸ್ಲಿಂ ಯುವತಿ ಮೇಲೆ ಹಲ್ಲೆ

ಶಿವಮೊಗ್ಗ: ಹಿಂದೂ ಹುಡುಗ ಹಾಗೂ ಹುಡುಗಿಯ ಜತೆ ಮುಸ್ಲಿಂ ಯುವತಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ತಡೆದ ಕೆಲ ಹುಡುಗರು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಂಭೀರವಾಗಿ ಹಲ್ಲೆ ನಡೆಸಿದ ಪ್ರಕರಣ ಇಲ್ಲಿನ ಸವಾಯಿ ಪಾಳ್ಯ ಕ್ರಾಸ್‌ನಲ್ಲಿ ಈಚೆಗೆ ನಡೆದಿದೆ.

ಕುರುಬರ ಪಾಳ್ಯದಲ್ಲಿದ್ದ ಗೆಳತಿಯ ಮನೆಗೆ ನೋಟ್ಸ್ ತರಲು ಮಾರ್ಚ್‌ 22ರಂದು ಇಬ್ಬರೂ ಹಿಂದೂ ಸ್ನೇಹಿತರೊಂದಿಗೆ ತೆರಳುತ್ತಿದ್ದಾಗ ಸುಮಾರು 50 ಯುವಕರು ತಡೆದು, ‘ಮುಸ್ಲಿಂ ಯುವತಿಯಾಗಿ ಹಿಂದೂ ಹುಡುಗನ ಜತೆಗೆ ಹೋಗುವುದಕ್ಕೆ ನಿನಗೆ ನಾಚಿಕೆ ಆಗುವುದಿಲ್ಲವೇ? ನೀನು, ನಿಮ್ಮ ಕುಟುಂಬದವರು ಊರು ಬಿಟ್ಟು ಹೋಗಬೇಕು' ಎಂದು ಬೆದರಿಕೆ ಹಾಕಿದ್ದರು. ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೂ ಸ್ಥಳದಲ್ಲೇ ನಿಲ್ಲಿಸಿಕೊಂಡಿದ್ದರು.

ನಂತರ ಮುಸ್ಲಿಂ ಯುವತಿಯ ಪರ್ಸ್ ಕಿತ್ತುಕೊಂಡು, ಅದರಲ್ಲಿದ್ದ ₹ 2,500 ತೆಗೆದುಕೊಂಡಿದ್ದಾರೆ. ಮೊಬೈಲ್‌ನಲ್ಲಿದ್ದ ಫೋಟೊಗಳನ್ನು ತಮ್ಮ ಮೊಬೈಲ್‌ಗೆ ರವಾನಿಸಿಕೊಂಡು, ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಿದ್ದು, ಅವು ವೈರಲ್ ಆಗಿವೆ.

‘ರಾತ್ರಿ 200ಕ್ಕೂ ಹೆಚ್ಚು ಮಂದಿ ಮನೆಗೆ ಬಂದರು. ಅವರಲ್ಲಿ ಕೆಲವು ಯುವಕರು ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಉರ್ದು ಪತ್ರಿಕೆಯೊಂದರಲ್ಲಿ ನನ್ನ ಬಗ್ಗೆ ಅಶ್ಲೀಲವಾಗಿ ಬರೆದಿದ್ದಾರೆ. ಪಾಲಿಕೆಯ 32ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಸಯ್ಯದ್‌ ಮಝರ್ ಜಾವಿದ್‌ ಹಾಗೂ ಮಸೀದಿಯ ಇಮಾಮ್, ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಯಲ್ಲಿ ಗುರುತಿಸಿಕೊಂಡ ಕಾರ್ಯಕರ್ತರು, ಅತೀಕ್, ಮಸೀ ಮೊದಲಾದ

ವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಯುವತಿ ಮಾರ್ಚ್‌ 23ರಂದು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೇಕೆಂದೇ ಯಾರಿಂದಲೋ ಅಪಪ್ರಚಾರ’

‘ಮುಸ್ಲಿಂ ಹುಡುಗರು ಫೋನ್‌ ಮಾಡಿ ವಿಷಯ ತಿಳಿಸಿ, ಸ್ಥಳಕ್ಕೆ ಬರುವಂತೆ ಹೇಳಿದರು. ನಾನು ಒಂದು ಗಂಟೆಯ ನಂತರ ಅಲ್ಲಿಗೆ ಹೋದೆ. ‘ನೀನು ಏಕೆ ಈ ರೀತಿ ಮಾಡಿದ್ದೀಯಾ? ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬೇಡ. ಇನ್ನೊಮ್ಮೆ ಹೀಗೆ ಮಾಡಬೇಡ’ ಎಂದು ಯುವತಿಗೆ ಬುದ್ಧಿ ಹೇಳಿದೆ. ನಂತರ ಅವರ ಪೋಷಕರನ್ನು ಕರೆಯಿಸಿ, ಮಕ್ಕಳಿಗೆ ಮೊಬೈಲ್ ಕೊಡಬೇಡಿ ಎಂದು ಸಲಹೆ ನೀಡಿದೆ. ಗಲಾಟೆ ಮಾಡಬೇಡಿ ಎಂದು ಅಲ್ಲಿದ್ದ ಹುಡುಗರಿಗೆ ಹೇಳಿ ಹೊರಟುಹೋದೆ. ನಂತರದ ಬೆಳವಣಿಗೆ ಕುರಿತು ನನಗೆ ಗೊತ್ತಿಲ್ಲ’ ಎಂದು ಸಯ್ಯದ್‌ ಮಝರ್ ಜಾವಿದ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸಮಾಜದಲ್ಲಿ ಶಾಂತಿ ಕಾಪಾಡಲು ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ಹೇಳಿದ್ದೆ. ಇಡೀ ಶಿವಮೊಗ್ಗ ಜನರಿಗೆ ನನ್ನ ಬಗ್ಗೆ ತಿಳಿದಿದೆ. ಯಾರೋ ಬೇಕೆಂದೇ ಅಪಪ್ರಚಾರ ಮಾಡುತ್ತಿದ್ದಾರೆ. ಈ ವಿಷಯದಿಂದ ನನಗೆ ಬೇಸರವಾಗಿದೆ’ ಎಂದು ಹೇಳಿದರು.

*

ಅನೈತಿಕ ಪೊಲೀಸ್‌ಗಿರಿ ನಡೆಸುವ ಪುಂಡರು ಯಾರೇ ಆಗಲಿ ಅವರನ್ನು ಬಂಧಿಸುತ್ತೇವೆ.

–ಅಭಿನವ ಖರೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry