ಧರ್ಮ ಒಡೆಯುವವರು ಪಾಕಿಸ್ತಾನದ ಏಜೆಂಟರು: ಶ್ರೀಶೈಲಶ್ರೀ

7
ವಿಜಯಪುರದಲ್ಲಿ ವೀರಶೈವ ಲಿಂಗಾಯತ ಸಮಾವೇಶ: ವಿವಿಧ ಮಠಾಧೀಶರು ಭಾಗಿ, ಸಚಿವ ಎಂ.ಬಿ.ಪಾಟೀಲ ವಿರುದ್ಧ ಪರೋಕ್ಷ ವಾಗ್ದಾಳಿ

ಧರ್ಮ ಒಡೆಯುವವರು ಪಾಕಿಸ್ತಾನದ ಏಜೆಂಟರು: ಶ್ರೀಶೈಲಶ್ರೀ

Published:
Updated:
ಧರ್ಮ ಒಡೆಯುವವರು ಪಾಕಿಸ್ತಾನದ ಏಜೆಂಟರು: ಶ್ರೀಶೈಲಶ್ರೀ

ವಿಜಯಪುರ: ‘ವೀರಶೈವ ಲಿಂಗಾಯತ ಧರ್ಮ ಒಡೆಯಲು ಮುಂದಾಗಿ ರುವವರು ಪಾಕಿಸ್ತಾನದ ಏಜೆಂಟರು’ ಎಂದು ಶ್ರೀಶೈಲದ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಗಂಭೀರ ಆರೋಪ ಮಾಡಿದರು.

‘2019ರ ಲೋಕಸಭಾ ಚುನಾವಣೆ ಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾದರೆ, ಪಾಕಿಸ್ತಾನ ವಿಶ್ವದ ಭೂಪಟದಲ್ಲಿರುವುದಿಲ್ಲ ಎಂಬ ಕಾರಣಕ್ಕೆ ಧರ್ಮ ಒಡೆಯುವ ಕಾರ್ಯ ಬಿರುಸಿನಿಂದ ನಡೆದಿದೆ’ ಎಂದು ನಗರದಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತರ ಸಮಾವೇಶದಲ್ಲಿ ಕಿಡಿಕಾರಿದರು.

‘ಮೋದಿಗೆ ಹಿಂದೂ ಧರ್ಮದ ಬಲವಿದೆ. ಇದನ್ನು ತಪ್ಪಿಸಲಿಕ್ಕಾಗಿಯೇ ರಾಜಸ್ತಾನದಲ್ಲಿ ಜಾಟರು, ಗುಜರಾತಿನಲ್ಲಿ ಪಟೇಲರು, ಮಹಾರಾಷ್ಟ್ರದಲ್ಲಿ ಮರಾಠಿಗರನ್ನು ಎತ್ತಿ ಕಟ್ಟಿದ ಕಾಂಗ್ರೆಸ್‌, ಇದೀಗ ಕರ್ನಾಟಕದಲ್ಲಿ ವೀರಶೈವ ಲಿಂಗಾಯತರನ್ನು ವಿಭಜಿಸಲು ಮುಂದಾಗಿದೆ’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಬ್ರಿಟಿಷರು ದೇಶ ಬಿಟ್ಟು ಹೋದರೂ; ಕಾಂಗ್ರೆಸ್‌ ಮಾತ್ರ ಇಂದಿಗೂ ತನ್ನ ಒಡೆದಾಳುವ ನೀತಿ ಕೈ ಬಿಟ್ಟಿಲ್ಲ. ಕಿತ್ತೂರ ರಾಣಿ ಚನ್ನಮ್ಮಾಜಿಗೆ ದ್ರೋಹ ಬಗೆದ ಮಲ್ಲಪ್ಪಶೆಟ್ಟಿ, ರುದ್ರಪ್ಪ ಶೆಟ್ಟಿ ಮೃತಪಟ್ಟು ಶತಮಾನ ಗತಿಸಿದರೂ, ಕೆಲವರು ಇನ್ನೂ ಈ ಗುಣಗಳನ್ನು ಸಮಾಜ ಒಡೆಯುವಲ್ಲಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಶ್ರೀಶೈಲದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಮಾತನಾಡಿ ‘ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ ಚಟುವಟಿಕೆಗಳನ್ನು ಚುರುಕುಗೊಳಿಸುತ್ತೇವೆ. ಅಖಿಲ ಭಾರತ ವೀರಶೈವ ಮಹಾಸಭಾ ಮೂಲಕ ರಾಜ್ಯದ ಎಲ್ಲೆಡೆ ಹೋರಾಟದ ರೂಪುರೇಷೆ ರೂಪಿಸುತ್ತೇವೆ’ ಎಂದು ತಿಳಿಸಿದರು.

‘ಪಂಚಪೀಠದ ಪರಂಪರೆಯ ಸ್ವಾಮೀಜಿಗಳು ಅತೀವ ನೋವು ಅನುಭವಿಸುತ್ತಿದ್ದಾರೆ. ನಿಮಗೆ ಅಂತಿಮ ಎಚ್ಚರಿಕೆ ನೀಡುತ್ತಿದ್ದೇವೆ. ಪೀಠಗಳ ಜತೆ ಸರಿಯಾಗಿ ನಡೆದುಕೊಳ್ಳಿ. ಇಲ್ಲದಿದ್ದರೇ ಮುಂದಿನ ಪರಿಣಾಮ ಎದುರಿಸಲು ಸಿದ್ಧರಾಗಿ’ ಎಂದು ರಂಭಾಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದರು.

‘ಪ್ರತ್ಯೇಕ ಧರ್ಮದ ಹೆಸರಿನಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ರಾಜ್ಯ ಸರ್ಕಾರ ಮೂರು ಭಾಗವಾಗಿ ವಿಂಗಡಿಸಿದೆ. ಸ್ವತಂತ್ರ ಧರ್ಮದಿಂದ ಸಾಮಾನ್ಯ ಜನರಿಗೆ ಕಿಂಚಿತ್‌ ಲಾಭವಿಲ್ಲ. ಹೋರಾಟದ ಮುಂಚೂಣಿಯಲ್ಲಿರುವ ನಾಯಕರ ಶಿಕ್ಷಣ ಸಂಸ್ಥೆಗಳಿಗಷ್ಟೇ ಅತ್ಯಧಿಕ ಲಾಭವಾಗಲಿದೆ’ ಎಂದು ಕಾಶಿಯ ಡಾ.ಚಂದ್ರಶೇಖರ ಶಿವಾಚಾರ್ಯರು ವ್ಯಂಗ್ಯವಾಡಿದರು.

ಬಳ್ಳಾರಿ ಜಿಲ್ಲೆಯ ಎಮ್ಮಿಗನೂರು ಮಠದ ವಾಮದೇವ ಶಿವಾಚಾರ್ಯರು ಮಾತನಾಡಿ ‘ಸಮುದ್ರ ಬತ್ತುವಿಕೆ ಎಂದೆಂದೂ ಅಸಾಧ್ಯ. ಅದೇ ರೀತಿ ವೀರಶೈವ ಲಿಂಗಾಯತವೂ ಅಚಲ. ಬಿಎಲ್‌ಡಿಇ ಸಂಸ್ಥೆಯ ಕೃಪೆಯಿಂದಲೇ ನೀವೂ ಅಧಿಕಾರ ಪಡೆದಿದ್ದೀರಿ. ಹಣ ಗಳಿಸಿದ್ದೀರಿ ಎಂಬುದನ್ನು ಮರೆಯಬೇಡಿ’ ಎಂದು ಪರೋಕ್ಷವಾಗಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಹರಿಹಾಯ್ದರು.

**

ಹಲವು ಭಾಗ್ಯಗಳ ಮೂಲಕ ಗೋಪುರಗಳ ಭಾಗ್ಯವನ್ನೇ ನಿರ್ಮಿಸಿದ್ದ ಸಿದ್ದರಾಮಯ್ಯ, ಧರ್ಮ ಒಡೆಯುವ ಮೂಲಕ ಗೋಪುರಕ್ಕೆ ‘ವಿಚ್ಛೇದನ ಭಾಗ್ಯ’ದ ಕಳಸವಿಟ್ಟಿದ್ದಾರೆ.

-ವೃಷಭಲಿಂಗ ಸ್ವಾಮೀಜಿ, ಬಂಥನಾಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry