ಬಿಜೆಪಿಗರಿಂದ ಸತ್ಯ ಮರೆಮಾಚುವ ಪ್ರಯತ್ನ

7
ಇಡಗುಂದಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹೆಬ್ಬಾರ ಚಾಲನೆ

ಬಿಜೆಪಿಗರಿಂದ ಸತ್ಯ ಮರೆಮಾಚುವ ಪ್ರಯತ್ನ

Published:
Updated:

ಯಲ್ಲಾಪುರ: ‘ಶಾಸಕರು ಹೋದಲ್ಲೆಲ್ಲ ಗುದ್ದಲಿಪೂಜೆ ನೆರವೇರಿಸುತ್ತಿದ್ದಾರೆ ಎಂದು ಬಿಜೆಪಿಗರು ಗೇಲಿ ಮಾಡುತ್ತಿದ್ದಾರೆ. ಆದರೆ, ನಾನು ಗುದ್ದಲಿ ಪೂಜೆ ಮಾಡಿರುವ ಎಲ್ಲ ಕಾಮಗಾರಿಗಳಿಗೆ ಹಣ ಮಂಜೂರು ಆಗಿ, ಟೆಂಡರ್ ಪ್ರಕ್ರಿಯೆ ಮುಗಿಸಿದೆ. ಬಿಜೆಪಿ ಮುಖಂಡರು ಸುಳ್ಳನ್ನು ಸೃಷ್ಟಿಸಿ, ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ’ ಎಂದು ಶಾಸಕ ಶಿವರಾಮ ಹೆಬ್ಬಾರ ತಿರುಗೇಟು ನೀಡಿದರು.

ತಾಲ್ಲೂಕಿನ ಇಡಗುಂದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ₹ 4.5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಮೂಲೆಪಾಲ ರಸ್ತೆ, ₹ 60 ಲಕ್ಷ ವೆಚ್ಚದ ಒಟ್ಟು 4 ಸೇತುವೆಗಳನ್ನು ಭಾನುವಾರ ಉದ್ಘಾಟಿಸಿ, ಅವರು ಮಾತನಾಡಿದರು. ‘ಅರಬೈಲ್ ಭಾಗದ ಅಭಿವೃದ್ಧಿಗೆ ಶಾಸಕರ ನಿಧಿ ಅಡಿಯಲ್ಲಿ ₹ 120 ಕೋಟಿ ವೆಚ್ಚದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಹಿಂದೆ ಸತತವಾಗಿ 20 ವರ್ಷ ಬಿಜೆಪಿ ಶಾಸಕರು ಇಲ್ಲಿ ಅಧಿಕಾರದಲ್ಲಿದ್ದರು. ಅವರು ಕ್ಷೇತ್ರಕ್ಕೆ ಯಾವ ಕೊಡುಗೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ’ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಮುಖಂಡ ಪ್ರೇಮಾನಂದ ನಾಯ್ಕ ಮಾತನಾಡಿ,‘ಕ್ರಿಯಾಶೀಲ ಶಾಸಕರಿದ್ದರೆ ಅಭಿವೃದ್ಧಿ ಕಾರ್ಯ ನಡೆಸಬಹುದು ಎಂಬುದಕ್ಕೆ ಶಿವರಾಮ ಹೆಬ್ಬಾರ ಉದಾಹರಣೆಯಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಮೂಲ ಸೌಕರ್ಯಗಳ ಕೊರತೆ ಇದ್ದು, ಬರುವ ದಿನಗಳಲ್ಲಿ ಅವರು ಅದಕ್ಕೆ ಪರಿಹಾರ ಒದಗಿಸುವ ಭರವಸೆಯಿದೆ’ ಎಂದರು. ಇದೇ ಸಂದರ್ಭದಲ್ಲಿ ಶಾಸಕರು, ₹ 9 ಲಕ್ಷ ವೆಚ್ಚದ ಸೇತುವೆಗೆ ಗುದ್ದಲಿ ಪೂಜೆ ನೆರವೇರಿಸಿದರು. ಅರಬೈಲ್ ಮಾರುತಿ ದೇವಸ್ಥಾನ ಆವರಣದಲ್ಲಿ ₹ 4 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಹಾಗೂ ₹ 30 ಲಕ್ಷ ವೆಚ್ಚದ ದಬ್ಗುಳಿ ರಸ್ತೆಗೆ ಗುದ್ದಲಿ ಪೂಜೆ, ಅರಬೈಲ್ ಹೆದ್ದಾರಿ ಪಕ್ಕ ₹ 3.5 ಲಕ್ಷ ವೆಚ್ಚದ ಹೈಟೆಕ್ ಬಸ್ ತಂಗುದಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಪ್ರಮುಖರಾದ ಗಣಪತಿ ಭಟ್ಟ, ಕೃಷ್ಣಾನಂದ ನಾಯ್ಕ, ಗಣಪತಿ ನಾಯ್ಕ, ಇಡಗುಂದಿ ಗ್ರಾಮ ಪಂಚಾಯ್ತಿ ಸದಸ್ಯರಾದ ನಾಗರಾಜ ನಾಯ್ಕ, ಆಶಾ ನಾಯರ್ ಉಪಸ್ಥಿತರಿದ್ದರು. ತ್ರೇಶಾ ನೋಹಾ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry