ಲೈಂಗಿಕ ದೌರ್ಜನ್ಯ ಎಸಗಿದ್ದವರಿಗೆ ಗುಂಡೇಟು

7

ಲೈಂಗಿಕ ದೌರ್ಜನ್ಯ ಎಸಗಿದ್ದವರಿಗೆ ಗುಂಡೇಟು

Published:
Updated:
ಲೈಂಗಿಕ ದೌರ್ಜನ್ಯ ಎಸಗಿದ್ದವರಿಗೆ ಗುಂಡೇಟು

ಬೆಂಗಳೂರು: ಕಸವನಹಳ್ಳಿಯಿಂದ ಮಾರ್ಚ್ 18ರ ರಾತ್ರಿ ಯುವತಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ದುಷ್ಕರ್ಮಿಗಳ ಪೈಕಿ ಇಬ್ಬರ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

ಗುಂಡೇಟಿನಿಂದ ಗಾಯಗೊಂಡಿರುವ ಧರ್ಮಪುರಿಯ ಸೆಲ್ವಕುಮಾರ್ ಹಾಗೂ ಶಂಕರ್ ಅವರನ್ನು ಸ್ಟ್ಯಾನ್‌ಫೋರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ದಿನ ಇವರಿಬ್ಬರ ಜತೆ ಕಾರಿನಲ್ಲಿದ್ದ ಇನ್ನೊಬ್ಬ ಹಾಗೂ ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳಿಗೆ ಆಶ್ರಯ ನೀಡಿದ್ದ ಇನ್ನೂ ಮೂವರು ಸಿಗಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಕ್ಯಾಬ್ ಚಾಲಕರಾದ ಆರೋಪಿಗಳು, ಬೆಂಗಳೂರಿನಲ್ಲಿ ಮದ್ಯ ಖರೀದಿಸಿ ತಮಿಳುನಾಡಿನ ಅತಿಥಿಗೃಹಗಳಿಗೆ ಹೆಚ್ಚಿನ ಬೆಲೆಗೆ ಮಾರುವ ಕೆಲಸವನ್ನೂ ಮಾಡುತ್ತಾರೆ. ಮಾರ್ಚ್ 18ರ ರಾತ್ರಿ ಪಾನಮತ್ತರಾಗಿ ಕಸವನಹಳ್ಳಿಗೆ ಬಂದಿದ್ದ ಇವರು, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸಂತ್ರಸ್ತೆಗೆ ತಮ್ಮೊಟ್ಟಿಗೆ ಬರುವಂತೆ ಬಲವಂತ ಮಾಡಿದ್ದರು.

ಆಕೆ ಒಪ್ಪದಿದ್ದಾಗ ಕಾರಿನೊಳಗೆ ಎಳೆದುಕೊಂಡು, ಪರಪ್ಪನ ಅಗ್ರಹಾರ ಕಡೆಗೆ ಕರೆದೊಯ್ದಿದ್ದರು. ಯುವತಿ ಕಾರಿನ ಗಾಜುಗಳ ಮೇಲೆ ಬಡಿದು ಪ್ರತಿರೋಧ ತೋರುತ್ತಿರುವುದನ್ನು ಕಂಡ ಚಂದ್ರೇಗೌಡ ಎಂಬುವವರು, ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು. ಪೊಲೀಸರು ಸುತ್ತಮುತ್ತಲ ರಸ್ತೆಗಳಲ್ಲಿ ನಾಕಾಬಂದಿ ಹಾಕಿಕೊಂಡು ಕಾರ್ಯಾಚರಣೆ ಪ್ರಾರಂಭಿಸಿದ್ದರು.

ಅಷ್ಟರಲ್ಲಾಗಲೇ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಆರೋಪಿಗಳು, ಲೈಂಗಿಕ ದೌರ್ಜನ್ಯ ಎಸಗಿ ಸರ್ಜಾಪುರ ರಸ್ತೆ ಬದಿ ತಳ್ಳಿ ಪರಾರಿಯಾಗಿದ್ದರು. ನಂತರ ಸಂತ್ರಸ್ತೆ, ಸಮೀಪದ ಮಾವನ ಮನೆಗೆ ತೆರಳಿ ಘಟನೆಯನ್ನು ವಿವರಿಸಿದ್ದಳು. ಅಸ್ವಸ್ಥಗೊಂಡಿದ್ದ ಆಕೆಯನ್ನು ಮಾವ ಸೇಂಟ್ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದರು.

ಸಂತ್ರಸ್ತೆ ಆಸ್ಪತ್ರೆಯಲ್ಲಿರುವ ವಿಚಾರ ತಿಳಿದ ಬೆಳ್ಳಂದೂರು ಪೊಲೀಸರು, ಮರುದಿನ ಬೆಳಿಗ್ಗೆ ಅಲ್ಲಿಗೆ ತೆರಳಿ ಹೇಳಿಕೆ ಪಡೆದುಕೊಂಡಿದ್ದರು. ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಆಕೆ ಹೇಳಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಆರೋಪಿಗಳ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಿದರು.

‘ಸಂತ್ರಸ್ತೆಯನ್ನು ಅಪಹರಿಸಿದ ಸ್ಥಳದಿಂದ, ಕಾರು ಸಾಗಿದ ಮಾರ್ಗದ ಎಲ್ಲಾ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನೂ ಪರಿಶೀಲಿಸಿದೆವು. ಆಗ ಅದು ಬಿಳಿ ಬಣ್ಣದ ‘ಇಂಡಿಕಾ ವಿಸ್ತಾ’ ಕಾರು ಎಂಬುದು ಗೊತ್ತಾಯಿತು. ಅತ್ತಿಬೆಲೆ ಸಮೀಪದ ಟೋಲ್‌ಗೇಟ್‌ನ ಕ್ಯಾಮೆರಾದಲ್ಲೂ ಆ ಕಾರಿನ ದೃಶ್ಯ ಸೆರೆಯಾಗಿತ್ತು. ಅಲ್ಲಿ ಅದರ ನೋಂದಣಿ ಸಂಖ್ಯೆ (ಟಿಎನ್ 19 ಡಿ 0555) ಸಹ ದೊರೆಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ತನಿಖೆಗೆ ತಮಿಳುನಾಡು ಪೊಲೀಸರ ನೆರವು ಕೋರಿದ್ದೆವು. ನೋಂದಣಿ ಸಂಖ್ಯೆ ವಿವರ ಆಧರಿಸಿ, ಆ ಕಾರಿನ ಮೂಲ ಮಾಲೀಕರನ್ನು ಪತ್ತೆ ಮಾಡಿದೆವು. ವರ್ಷದ ಹಿಂದೆಯೇ ತನ್ನ ಕಾರನ್ನು ಧರ್ಮಪುರಿಯ ಶಂಕರ್ ಎಂಬಾತನಿಗೆ ಮಾರಾಟ ಮಾಡಿರುವುದಾಗಿ ಅವರು ಹೇಳಿದರು. ಆ ಸುಳಿವು ಆಧರಿಸಿ ಧರ್ಮಪುರಿಗೆ ಹೊರಟೆವು. ಅಷ್ಟರಲ್ಲಾಗಲೇ ಆತ, ಸ್ನೇಹಿತ ಸೆಲ್ವಕುಮಾರ್ ಜತೆ ಕೇರಳ ಸೇರಿದ್ದ. ಶಂಕರ್‌ನ ಸಂಬಂಧಿಕರಿಂದ ಆತನ ಮೊಬೈಲ್ ಸಂಖ್ಯೆ ಪಡೆದು ಕಾರ್ಯಾಚರಣೆ ಮುಂದುವರಿಸಿದೆವು.’

‘ನೋಂದಣಿ ಸಂಖ್ಯೆ ಹಾಗೂ ಪ್ರಕರಣದ ವಿವರವನ್ನು ಕೇರಳ ಪೊಲೀಸರಿಗೂ ರವಾನಿಸಿದೆವು. ಅವರು ಕೂಡ ಆರೋಪಿಗಳ ಶೋಧ ಕಾರ್ಯದಲ್ಲಿ ತೊಡಗಿದ್ದರು. ಸೋಮವಾರ ನಸುಕಿನ ವೇಳೆ (ಸಮಯ 3.45) ಬೆಳ್ಳಂದೂರು ಠಾಣೆಯ ಇನ್‌ಸ್ಪೆಕ್ಟರ್ ವಿಕ್ಟರ್ ಸೈಮನ್ ನೇತೃತ್ವದ ತಂಡ, ಸರ್ಜಾಪುರ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿತ್ತು. ಅದೇ ಮಾರ್ಗವಾಗಿ ಬಂದ ಆರೋಪಿಗಳು, ಬ್ಯಾರಿಕೇಡ್‌ಗಳಿಗೆ ವಾಹನ ಗುದ್ದಿಸಿ ಹಾಡೋ ಸಿದ್ದಾಪುರದ ಕಡೆಗೆ ತೆರಳಿದ್ದರು.’

‘ತಕ್ಷಣ ವಾಹನ ಹಿಂಬಾಲಿಸಿದ ಸಿಬ್ಬಂದಿ, ಕೊಡತಿ ಬಿಎಂಟಿಸಿ ಕ್ವಾಟ್ರಸ್ ಹಿಂಭಾಗದ ಪ್ರದೇಶದಲ್ಲಿ ಅಡ್ಡಗಟ್ಟಿದರು. ಈ ಹಂತದಲ್ಲಿ ಶಂಕರ್, ಕಾನ್‌ಸ್ಟೆಬಲ್ ಮಹಾಂತೇಶ್ ಅವರ ಹೊಟ್ಟೆಗೆ ಚಾಕುವಿನಿಂದ ಹಲ್ಲೆ ನಡೆಸಿದ. ಆಗ ಇನ್‌ಸ್ಪೆಕ್ಟರ್ ಆತನ ಬಲಗಾಲಿಗೆ ಗುಂಡು ಹೊಡೆದರು. ಸೆಲ್ವಕುಮಾರ್ ಕಾರಿನಿಂದ ಮಚ್ಚು ತೆಗೆಯಲು ಮುಂದಾದಾಗ, ಪಿಎಸ್‌ಐ ಸೋಮಶೇಖರ್ ಆತನತ್ತ ಗುಂಡು ಹಾರಿಸಿದರು’ ಎಂದರು.

ಮನೆ ಬಿಟ್ಟು ಬಂದಿದ್ದ ಸಂತ್ರಸ್ತೆ

‘ಕ್ಷುಲ್ಲಕ ಕಾರಣಕ್ಕೆ ಆ ದಿನ ಸಂಜೆ ತಾಯಿ ಜತೆ ಜಗಳ ಮಾಡಿಕೊಂಡಿದ್ದ ಸಂತ್ರಸ್ತೆ, ರಾತ್ರಿ ಮನೆ ಬಿಟ್ಟು ಬಂದಿದ್ದರು. ವೇಶ್ಯೆಯರ ಸಂಪರ್ಕ ಹೊಂದಿದ್ದ ಆರೋಪಿಗಳು, ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುತ್ತಿದ್ದ ಸಂತ್ರಸ್ತೆಯನ್ನೂ ಅದೇ ರೀತಿ ಕಂಡಿದ್ದರು. ಆಕೆ ಬರಲು ಒಪ್ಪದಿದ್ದಾಗ ಬಲವಂತವಾಗಿ ಎಳೆದೊಯ್ದಿದ್ದರು’ ಎಂದು ತನಿಖಾಧಿಕಾರಿಗಳು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry