ಪ್ರತಿಧ್ವನಿಸಿದ ಕುಡಿಯುವ ನೀರಿನ ಸಮಸ್ಯೆ

7
ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾ ಪಂಚಾಯಿತಿ ಸದಸ್ಯರು

ಪ್ರತಿಧ್ವನಿಸಿದ ಕುಡಿಯುವ ನೀರಿನ ಸಮಸ್ಯೆ

Published:
Updated:
ಪ್ರತಿಧ್ವನಿಸಿದ ಕುಡಿಯುವ ನೀರಿನ ಸಮಸ್ಯೆ

ಚಾಮರಾಜನಗರ: ಇಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ವಿಚಾರ ಮಧ್ಯಾಹ್ನದವರೆಗೂ ಚರ್ಚೆಯಾಯಿತು. ಬಹುತೇಕ ಎಲ್ಲ ಸದಸ್ಯರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳ ಕಾರ್ಯವೈಖರಿ ಯನ್ನು ತರಾಟೆಗೆ ತೆಗೆದುಕೊಂಡರು.

ಸದಸ್ಯೆ ಶಶಿಕಲಾ ‘ಅಧಿಕಾರಿಗಳದ್ದು ಬೇಜವಾಬ್ದಾರಿಯುತ ನಡೆ’ ಎಂದು ವಿಷಯ ಪ್ರಸ್ತಾಪಿಸಿದರು.

ನರಸಮಂಗಲದಿಂದ ನಿಜಲಿಂಗ ಪುರಕ್ಕೆ ಹೋಗುವ ರಸ್ತೆ ಬದಿಯಲ್ಲಿ ಸಾಕಷ್ಟು ಜಾಗವಿದ್ದರೂ ಕುಡಿಯುವ ನೀರು ಸರಬರಾಜಿನ ಪೈಪ್‌ಲೈನ್‌ನ್ನು ರಸ್ತೆಯಲ್ಲೇ ಹಾಕಲಾಗಿದೆ. ವಾಹನಗಳು ಸಂಚರಿಸಿ ಪೈಪ್ ಒಡೆದು ಹೋಗುವ ಸಾಧ್ಯತೆ ಇದೆ. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.

ಕೊತ್ತಲವಾಡಿ ಮುಖ್ಯರಸ್ತೆಯನ್ನು ಇದೇ ಕಾರಣಕ್ಕೆ ಅಗೆದು ಆರು ತಿಂಗಳಾದರೂ ಸರಿಪಡಿಸಿಲ್ಲ. ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ದೇವರಾಜು ವಿರುದ್ಧ ಹರಿಹಾಯ್ದರು.

ಎಚ್.ವಿ.ಚಂದ್ರು ಮಾತನಾಡಿ, ‘ಹೊನ್ನೂರಿನಲ್ಲಿ 2 ಸಾವಿರ ಜನರಿದ್ದಾರೆ. ನೀರಿನ ಸಮಸ್ಯೆ ಇದೆ ಎಂದು 6 ತಿಂಗಳುಗಳಿಂದ ಹೇಳುತ್ತಿದ್ದೇನೆ. ಸ್ಥಳ ಪರಿಶೀಲನೆ ಮಾಡಿಲ್ಲ. ನೀರಿನ ಟ್ಯಾಂಕ್ ನಿರ್ಮಿಸಿಲ್ಲ’ ಎಂದು ವಿಷಯ ಪ್ರಸ್ತಾಪಿಸಿದರು.

‘ದೊಡ್ಡರಾಯನಪೇಟೆಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಕಾಮ ಗಾರಿಗೆ ಅನುಮೋದನೆ ದೊರೆತಿದ್ದರೂ ಇನ್ನು ಕಾರ್ಯಾರಂಭ  ಮಾಡಿಲ್ಲ ಏಕೆ’ ಎಂದು ಬಾಲರಾಜು ಪ್ರಶ್ನಿಸಿದರು.

ಸ್ಥಳದಲ್ಲೇ ಅಮಾನತುಪಡಿಸುವ ಎಚ್ಚರಿಕೆ: ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‌ಕುಮಾರ್, ‘ಏಕೆ ನಿರ್ಮಿಸಿಲ್ಲ ಎಂಬುದಕ್ಕೆ ಕಾನೂನಾತ್ಮಕವಾದ ಉತ್ತರ ನೀಡಬೇಕು. ಹಾರಿಕೆಯ ಉತ್ತರ ನೀಡಿದರೆ ಸ್ಥಳದಲ್ಲೇ ಅಮಾನ ತುಪಡಿಸಲಾಗುವುದು’ ಎಂದು ದೇವರಾಜ್ ಅವರಿಗೆ ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿದ ದೇವರಾಜ್, ‘ಮೊದಲ ಹಂತದಲ್ಲಿ ತಳಪಾಯ ತೆಗೆಸಲಾಯಿತು. ಆದರೆ, ಮಣ್ಣು ವಿಪರೀತ ಸಡಿಲ ಇರುವುದರಿಂದ ತಾಂತ್ರಿಕ ವಿಭಾಗದಿಂದ ವರದಿ ಕೇಳಲಾಗಿದೆ. ಆದಷ್ಟು ಶೀಘ್ರ ನಿರ್ಮಿಸ ಲಾಗುವುದು’ ಎಂದು ಭರವಸೆ ನೀಡಿದರು.

ಯರಿಯೂರಿನಲ್ಲಿ 25 ಕುರಿಗಳ ಸಾವು–  ಅಧ್ಯಕ್ಷ ಯೋಗೇಶ್

ಯರಿಯೂರಿನಲ್ಲಿ ಮೂರೇ ದಿನಗಳ ಅಂತರದಲ್ಲಿ 25 ಕುರಿಗಳು ಮೃತಪಟ್ಟಿವೆ ಎಂದು ‌ಪ್ರಭಾರಿ ಅಧ್ಯಕ್ಷ ಯೋಗೇಶ್ ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಈ ಕುರಿತು ವೈದ್ಯರಿಂದ ವರದಿ ಬಂದ ಬಳಿಕ ಎಲ್ಲ ಕುರಿಗಳಿಗೆ ತಲಾ ₹ 5 ಸಾವಿರದಂತೆ ಪರಿಹಾರ ವಿತರಿಸಲಾಗುವುದು ಎಂದರು.

ಹಾಸ್ಟೆಲ್‌ಗಳಲ್ಲಿ ಮಕ್ಕಳ ಕೊರತೆ: ಬಿಸಿಎಂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಸುಮಾರು ₹ 1 ಕೋಟಿಗೂ ಅಧಿಕ ಹಣ ಉಳಿತಾಯ ವಾಗಿದೆ ಎಂಬ ಅಂಶ ಸಭೆಯಲ್ಲಿ ಪ್ರಸ್ತಾಪವಾಯಿತು. ಇದಕ್ಕೆ ಶಾಲೆ ಮತ್ತು ಕಾಲೇಜಿನಲ್ಲಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಅರಿವು ಮೂಡಿಸದೇ ಇರುವುದರಿಂದ ಹಾಸ್ಟೆಲ್‌ ಸೀಟುಗಳು ಖಾಲಿ ಉಳಿಯುತ್ತಿವೆ ಎಂದು ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಉಳಿದಿರುವ ಹಣಕ್ಕೆ ವಿದ್ಯಾರ್ಥಿಗಳಿಗಾಗಿ ಮಂಚ, ಹಾಸಿಗೆ ಮತ್ತು ನೀರನ್ನು ಶುದ್ಧಗೊಳಿಸುವ ಯಂತ್ರವನ್ನು ಖರೀದಿಸುವುದಕ್ಕೆ ಸಭೆ  ಒಪ್ಪಿಗೆ ಸೂಚಿಸಿತು.

**

ತಡವಾಗಿ ಹಾಜರಾಗುತ್ತಿರುವ ಅಧಿಕಾರಿಗಳು

ಸದಸ್ಯ ಸಿ.ಎನ್.ಬಾಲರಾಜು ಮಾತನಾಡಿ, ‘ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ನಿತ್ಯ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಕೆಲ್ಲಂಬಳ್ಳಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಡವಾಗಿ ಬಂದರು. ಕಚೇರಿಗಳಿಗೆ ಸಿಇಒ ದಿಢೀರ್ ಭೇಟಿ ನೀಡುವ ಮೂಲಕ ಅಧಿಕಾರಿಗಳನ್ನು ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಮಾಡಬಹುದು’ ಎಂದು ಸಲಹೆ ನೀಡಿದರು.

**

ಬಿರುಕುಬಿಟ್ಟ ನೀರಿನ ಟ್ಯಾಂಕ್ ದುರಸ್ತಿ ಮುಂದಿನ ವರ್ಷ!

ಸದಸ್ಯ ಬಾಲರಾಜ್ ಅವರು ರೇಚಂಬಳ್ಳಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ಬಿರುಕು ಬಿಟ್ಟಿದೆ ಎಂದು ವಿಷಯ ಪ್ರಸ್ತಾಪಿಸಿದರು. ಮುಂದಿನ ಹಣಕಾಸು ವರ್ಷದಲ್ಲಿ ಇದರ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ದೇವರಾಜು ಭರವಸೆ ನೀಡಿದರು.

**

ಹರವೆ ಎಲ್ಲಿದೆ?– ನವೀನ್ ಪ್ರಶ್ನೆ

‘ಕುಡಿಯುವ ನೀರಿನ ವಿಷಯಕ್ಕೆ ಬಂದರೆ ಹರವೆ ಹೋಬಳಿ ಎಲ್ಲಿದೆ ಎಂದು ಹುಡುಕಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅತ್ತ ಗುಂಡ್ಲುಪೇಟೆ ತಾಲ್ಲೂಕಿನ ಕಾರ್ಯಪಡೆಗೂ ಇತ್ತ ಚಾಮರಾಜನಗರ ತಾಲ್ಲೂಕಿನ ಕಾರ್ಯಪಡೆಗೂ ಹರವೆ ಸೇರಿಲ್ಲ’ ಎಂದು ಸದಸ್ಯ ನವೀನ್ ಚರ್ಚೆಗೆ ನಾಂದಿ ಹಾಡಿದರು.

ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಕುಡಿಯುವ ನೀರಿನ ಕಾರ್ಯಪಡೆ ಸಭೆಯಲ್ಲಿ ಹರವೆ ಸೇರಿಸಿಲ್ಲ ಎಂಬುದನ್ನು ಒಪ್ಪಿಕೊಂಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ದೇವರಾಜು ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು ಎಂದರು.

**

ಜನರಿಗೆ ಶುದ್ಧ ನೀರು ಇಷ್ಟವಾಗುತ್ತಿಲ್ಲ

ಹರವೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಶುದ್ಧೀಕರಣವಾಗುತ್ತಿಲ್ಲ ಎಂದು ನವೀನ್ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಹರೀಶ್‌ಕುಮಾರ್ ‘ಆಲ್ಕೊಹಾಲ್ ಇಷ್ಟವೊ, ನೀರು ಇಷ್ಟವೊ’ ಎಂದು ಪ್ರಶ್ನಿಸಿದರು. ಕೆಲವು ಸದಸ್ಯರು ಆಲ್ಕೊಹಾಲ್ ಎಂದರು. ‘ಹರವೆಯ ಶುದ್ಧ ಕುಡಿಯುವ ನೀರಿನ ವಿಚಾರದಲ್ಲೂ ಹೀಗೆ ಆಗಿದೆ. ಕೊಳವೆಬಾವಿಯಲ್ಲಿನ ನೀರಿನಲ್ಲಿ ಮೆಗ್ನಿಷಿಯಂ, ಪೊಟಾಷಿಯಂ ಸೇರಿದಂತೆ ಹಲವು ಧಾತುಗಳಿರುತ್ತವೆ. ಇವು ನೀರಿಗೆ ಒಂದು ವಿಧದ ರುಚಿ ನೀಡುತ್ತವೆ. ಆದರೆ, ಶುದ್ಧೀಕರಣವಾಗುವಾಗ ಈ ಧಾತುಗಳೆಲ್ಲ ಹೊರಹೋಗುತ್ತವೆ. ಹಾಗಾಗಿ, ನೀರು ರುಚಿ ಕಳೆದುಕೊಳ್ಳುತ್ತದೆ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry