ಇವಿಎಂನಲ್ಲಿ ಸಾಂಕೇತಿಕವಾಗಿ ಇನ್ಷಿಯಲ್ ಅಳವಡಿಕೆ

7
ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಡಳಿತದಿಂದ ಮಾಹಿತಿ

ಇವಿಎಂನಲ್ಲಿ ಸಾಂಕೇತಿಕವಾಗಿ ಇನ್ಷಿಯಲ್ ಅಳವಡಿಕೆ

Published:
Updated:
ಇವಿಎಂನಲ್ಲಿ ಸಾಂಕೇತಿಕವಾಗಿ ಇನ್ಷಿಯಲ್ ಅಳವಡಿಕೆ

ಚಿತ್ರದುರ್ಗ: ಜೆ, ಎಫ್, ಐ, ಸಿ, ಡಿ, ಕೆ, ಎಸ್, ಎಂ, ಎನ್, ಜೆಡ್ ಹೀಗೆ ಇನ್ಷಿಯಲ್ ಮಾದರಿಯನ್ನು ಇವಿಎಂ ಮತ ಯಂತ್ರದಲ್ಲಿ ಸಾಂಕೇತಿಕವಾಗಿ ನೋಟಾದ ಜತೆಯಲ್ಲಿ ಅಳವಡಿಸಲಾಗಿತ್ತು.

ವಿವಿಧ ಪಕ್ಷಗಳ ಕೆಲ ಪ್ರತಿನಿಧಿಗಳೇ ಸ್ವತಃ ಯಂತ್ರದ ಗುಂಡಿ ಒತ್ತುವ ಮೂಲಕ ಯಾವ ರೀತಿ ಮತ ಚಲಾವಣೆಯ ಪ್ರಕ್ರಿಯೆ ನಡೆಯಲಿದೆ ಎಂಬುದನ್ನು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಖಾತರಿ ಪಡಿಸಿಕೊಂಡರು.

ಇದು ಕಂಡು ಬಂದಿದ್ದು, ಕೇಂದ್ರ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದಿಂದ ಇಲ್ಲಿನ ಗುರುಭವನದಲ್ಲಿ ಸೋಮವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗಾಗಿ ಹಮ್ಮಿಕೊಂಡಿದ್ದ ಇವಿಎಂ ಮತ್ತು ವಿವಿ ಪ್ಯಾಟ್ ಯಂತ್ರ ಬಳಕೆಯ ಮಾಹಿತಿ ಕಾರ್ಯಕ್ರಮದಲ್ಲಿ.

ವಿವಿ ಪ್ಯಾಟ್ ಬಗ್ಗೆ ಮಾಹಿತಿ: ಇವಿಎಂ ಮತ ಯಂತ್ರದ ಗುಂಡಿ ಒತ್ತಿದ ನಂತರ ಪಕ್ಕದಲ್ಲಿರುವ ವಿವಿ ಪ್ಯಾಟ್‌ (ವೋಟರ್‌ ವೆರಿಫೈಯೇಬಲ್‌ ಪೇಪರ್‌ ಆಡಿಟ್‌ ಟ್ರಯಲ್‌) ಯಂತ್ರದಲ್ಲಿ ಮತದಾರ ಯಾವ ಅಭ್ಯರ್ಥಿಗೆ ಮತ ನೀಡಿದ್ದಾರೆ ಎಂಬುದನ್ನು ಇದೇ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಲಾಯಿತು.

ವಿವಿ ಪ್ಯಾಟ್‌ ಯಂತ್ರದ ಗಾಜಿನ ಕಿಂಡಿಯಲ್ಲಿ ಅಭ್ಯರ್ಥಿಯ ಕ್ರಮ ಸಂಖ್ಯೆ ಹಾಗೂ ಚಿಹ್ನೆ ಪ್ರದರ್ಶನಗೊಳ್ಳುತ್ತದೆ. 7 ಸೆಕೆಂಡ್‌ಗಳವರೆಗೆ ಮಾತ್ರ ವೀಕ್ಷಣೆಗೆ ಅವಕಾಶವಿರುತ್ತದೆ. ಹೊಸ ಯಂತ್ರದಿಂದ ತಮಗೆ ಬೇಕಾದ ಅಭ್ಯರ್ಥಿಗೆ ಮತ ನೀಡಿದ ಬಗ್ಗೆ ಮತದಾರರು ಖಚಿತ ಪಡಿಸಿಕೊಳ್ಳಬಹುದಾಗಿದೆ. ಅಲ್ಲದೆ, ವಿವರಗಳನ್ನು ಒಳಗೊಂಡ ಚೀಟಿಯು ಪ್ರತ್ಯೇಕ ಪೆಟ್ಟಿಗೆಯಲ್ಲಿ ಬೀಳುತ್ತದೆ. ಈ ಯಂತ್ರದ ಬಳಕೆಯ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಪರಿಚಯಿಸಿದರು.

ಇವಿಎಂ ಯಂತ್ರಗಳಲ್ಲಿ ಮತದಾರರು ಯಾವ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಅವಕಾಶವಿರಲಿಲ್ಲ. ಆದರೆ, ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಲ್ಲಿ, ಮತದಾರರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ಅವುಗಳ ಜತೆಗೆ ಮತ ಖಾತರಿ ಯಂತ್ರಗಳನ್ನು (ವಿ.ವಿ. ಪ್ಯಾಟ್) ಬಳಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿ ಕ್ರಮ ಕೈಗೊಂಡಿದೆ ಎಂದರು.

ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳ ಬಗ್ಗೆ ತಾಲ್ಲೂಕು ಮಟ್ಟದಲ್ಲೂ ಪ್ರಾತ್ಯಕ್ಷತೆ ಮೂಲಕ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅರಿವು ಮೂಡಿಸಲಾಗುತ್ತದೆ. ಪ್ರತಿ ಬ್ಯಾಲೆಟ್ ಯುನಿಟ್‌ನಲ್ಲಿ 15 ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಯನ್ನು ನಮೂದಿಸಲು ಅವಕಾಶವಿದೆ. 15 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ, ಅಂತಹ ಕ್ಷೇತ್ರಗಳಲ್ಲಿ ಎರಡು ಬ್ಯಾಲೆಟ್‌ಗಳನ್ನು ಉಪಯೋಗಿಸಲಾಗುತ್ತದೆ. ಅಂತಹ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಲೀಲಾಧರ ಠಾಕೂರ್ ಮಾತನಾಡಿ, ಬೂತ್ ಮಟ್ಟದಲ್ಲಿ ಏಜೆಂಟರ್‌ಗಳು ಮಾಹಿತಿ ಕೊರತೆಯಿಂದ ತಪ್ಪು ದೂರು ದಾಖಲಿಸಬಹುದು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ. ಒಂದು ವೇಳೆ ಶಿಕ್ಷೆಯಾದರೆ, ಅದರ ಪ್ರಮಾಣ ಎಷ್ಟು ಎಂದು ಪ್ರಶ್ನಿಸಿದರು.

ನೀವು ಮಾಹಿತಿ ನೀಡಿದರೆ, ನಮ್ಮ ಏಜೆಂಟರ್‌ಗಳಿಂದ ತಪ್ಪಾಗದಂತೆ ಹಾಗೂ ತಪ್ಪು ದೂರು ದಾಖಲಿಸದಂತೆ ನೋಡಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಪ್ರೊಬೆಷನರಿ ಉಪವಿಭಾಗಾಧಿಕಾರಿ ಎ.ಇ. ರಘು ಮಾತನಾಡಿ, ತಪ್ಪು ದೂರು ದಾಖಲಿಸಿದವರಿಗೆ ಆಯೋಗದ ನಿರ್ದೇಶನ ಹಾಗೂ ನಿಯಮಾನುಸಾರ ಶಿಕ್ಷೆ ವಿಧಿಸುವ ಅವಕಾಶ ಇದೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ಮುಖಂಡ ಡಿ.ಎನ್. ಮೈಲಾರಪ್ಪ, ಬಿಎಸ್‌ಪಿ ಮುಖಂಡ ಕುಮಾರ್ ಇದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಸಂಗಪ್ಪ, ಪ್ರೊಬೆಷನರಿ ಉಪವಿಭಾಗಾಧಿಕಾರಿ ಸುರೇಖಾ, ಪ್ರೊಬೆಷನರಿ ತಹಶೀಲ್ದಾರ್ ಎ.ಎಚ್. ಮಹೇಂದ್ರ, ಬಿಇಒ ನಾಗಭೂಷಣ್, ಸರ್ಕಾರಿ ವಿಜ್ಞಾನ ಕಾಲೇಜಿನ ಐಕ್ಯುಎಸಿ ಸಂಚಾಲಕ ಡಾ.ಕೆ.ಕೆ. ಕಮಾನಿ, ಚುನಾವಣಾ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.

**

ತಪ್ಪು ಸಾಬೀತಾದರೆ ಕ್ರಿಮಿನಲ್ ಪ್ರಕರಣ:

ಮತ ಚಲಾವಣೆ ಪ್ರಕ್ರಿಯೆ ವೇಳೆ ಮತಯಂತ್ರದ ಬಗ್ಗೆ ಸುಮ್ ಸುಮ್ನೆ ತಕಾರಾರು ಮಾಡುವಂತಿಲ್ಲ. ಒಂದೊಮ್ಮೆ ಅದು ತಪ್ಪು ಎಂದು ಸಾಬೀತಾದರೆ, ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ವಿ.ವಿ. ಜ್ಯೋತ್ಸ್ನಾ ಎಚ್ಚರಿಸಿದರು.

ಮತದಾನ ಮಾಡಿದಾಗ ವಿವಿ ಪ್ಯಾಟ್‌ನಲ್ಲಿ ಯಾವ ಅಭ್ಯರ್ಥಿಗೆ ಮತ ಹಾಕಲಾಗಿದೆ ಎಂಬುದನ್ನು ಯಂತ್ರ ಖಚಿತ ಪಡಿಸುತ್ತದೆ. ಚಲಾಯಿಸಿದ ಮತ ಬೇರೆ ಅಭ್ಯರ್ಥಿಗೆ ಚಲಾವಣೆ ಆಗಿದೆ ಎಂಬ ಅನುಮಾನ ಬಂದರೆ ಆಕ್ಷೇಪಣೆ ಸಲ್ಲಿಸಬಹುದು. ಆದರೆ, ಯಂತ್ರದಲ್ಲಿ ಯಾವುದೇ ಲೋಪ ಕಂಡು ಬರದಿದ್ದರೆ, ದೂರುದಾರನ ವಿರುದ್ಧ ಮೂಲಾಜಿಲ್ಲದೆ, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

*

ಮತಗಟ್ಟೆಗಳಲ್ಲಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಲ ಕಡೆಗಳಲ್ಲಿ ಶೌಚಾಲಯ ಸಮಸ್ಯೆ ಇದ್ದು, ಅದನ್ನು ಕೂಡ ಸರಿಪಡಿಸಲು ಕ್ರಮ ಕೈಗೊಂಡಿದ್ದೇನೆ.

– ವಿ.ವಿ. ಜ್ಯೋತ್ಸ್ನಾ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry