ಮಾನ್ಯತೆ ನೀಡದಿದ್ದರೆ ಸುಪ್ರೀಂ ಮೊರೆ

7
ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಶಿಫಾರಸಿಗೆ ಸ್ವಾಗತ

ಮಾನ್ಯತೆ ನೀಡದಿದ್ದರೆ ಸುಪ್ರೀಂ ಮೊರೆ

Published:
Updated:

ಮೈಸೂರು: ರಾಜ್ಯ ಸರ್ಕಾರದ ಶಿಫಾರಸಿನಂತೆ ಕೇಂದ್ರ ಸರ್ಕಾರವು ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ಮಹದೇವಪ್ಪ ಇಲ್ಲಿ ಸೋಮವಾರ ಆಗ್ರಹಿಸಿದರು.

ಮಾನ್ಯತೆ ನೀಡದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಆರಂಭದಿಂದಲೂ ಬಸವಣ್ಣನ ವರನ್ನು ವಿರೋಧಿಸುತ್ತಿರುವ ಪಂಚಪೀಠವು ಬಸವ ಧರ್ಮವನ್ನು ಹತ್ತಿಕ್ಕುತ್ತ ಬಂದಿದೆ. ಧಾರ್ಮಿಕ ಆಚರಣೆ ನೆಪದಲ್ಲಿ ವೈಚಾರಿಕತೆಯ ನಿಲುವನ್ನು ಮುಚ್ಚಿ ಹಾಕಿರುವುದು ಐತಿಹಾಸಿಕ ಕುಚೋದ್ಯ’ ಎಂದು ಟೀಕಿಸಿದರು.

ಸತ್ಯ ಮತ್ತು ತಾತ್ವಿಕತೆ ಆಧಾರದ ಮೇಲೆ ರೂಪುಗೊಂಡಿರುವ ಬಸವ ಧರ್ಮವನ್ನು ಎಂದೂ ಒಡೆಯಲು ಸಾಧ್ಯವಿಲ್ಲ. ಅದೊಂದು ಸ್ವತಂತ್ರ ಧರ್ಮ. ಅದು 900 ವರ್ಷಗಳ ಹೋರಾಟದ ಬಳಿಕ ದೊರೆತಿದೆ. ಲಿಂಗಾಯತ ಧರ್ಮವು ಆಚರಣೆಯಲ್ಲಿ ಹಿಂದೂ ಧರ್ಮಕ್ಕಿಂತ ವಿಭಿನ್ನವಾಗಿದೆ. ಹೀಗಾಗಿ, ಕೇಂದ್ರ ಸರ್ಕಾರ ಮಾನ್ಯತೆ ನೀಡುವ ವಿಶ್ವಾಸವಿದೆ’ ಎಂದು ಹೇಳಿದರು.

‘ಬಿ.ಎಸ್‌.ಯಡಿಯೂರಪ್ಪ ಮತ್ತು ತೋಂಟದಾರ್ಯ ಲಿಂಗಾಯತರಲ್ಲ. ಹಿಂದೂಗಳು. ಯಡಿಯೂರಪ್ಪ ಒಂದು ದಿನವೂ ವಿಭೂತಿ ಧರಿಸಿಲ್ಲ. ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಹೇಳಿದರೆ ಬಿಜೆಪಿಯಲ್ಲಿ ಅವರಿಗೆ ಉಳಿಗಾಲವಿಲ್ಲ. ಆರ್‍ಎಸ್‍ಎಸ್‍ನವರು ಆಚೆ ಕಳುಹಿಸುತ್ತಾರೆ’ ಎಂದು ನುಡಿದರು.

ಹೊಸಮಠದ ಚಿದಾನಂದ ಸ್ವಾಮೀಜಿ ಮಾತನಾಡಿ, ‘ಈಚೆಗೆ ಮಠಕ್ಕೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು ಪ್ರತ್ಯೇಕ ಧರ್ಮದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬದಲಾಗಿ ವೀರಶೈವ ಮಹಾಸಭಾದ ತೀರ್ಮಾನಕ್ಕೆ ಬದ್ಧರಿರುವುದಾಗಿ ಹೇಳಿದ್ದರು. ಬಳಿಕ ಈ ಸಂಬಂಧ ಜಗಳ ಮಾಡಿಕೊಳ್ಳದಂತೆ ಪಂಚಪೀಠದ ಪ್ರತಿನಿಧಿಗಳ ಜತೆಯೂ ಮಾತನಾಡುವಾಗಿ ತಿಳಿಸಿದ್ದರು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನೀಲಕಂಠ ಸ್ವಾಮೀಜಿ, ರಾಷ್ಟ್ರೀಯ ಬಸವ ದಳದ ಗಂಗಾಧರ ಸ್ವಾಮೀಜಿ, ಎನ್‌.ಮಂಜುನಾಥ್, ರಾಜು ಇದ್ದರು.

**

ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ತಾತ್ವಿಕ ಮತ್ತು ಸತ್ಯತೆ ಆಧಾರದಲ್ಲಿ ನಿರ್ಧಾರ ತೆಗೆದುಕೊಂಡಿದೆ‌.

–ಮಹದೇವಪ್ಪ, ರಾಜ್ಯ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry