ನಿರ್ಲಕ್ಷ್ಯದಿಂದ ಅಗ್ನಿ ಅನಾಹುತ: ಪುಟಿನ್‌

7
ಮೃತಪಟ್ಟ 64 ಜನರ ಪೈಕಿ 41 ಮಕ್ಕಳು

ನಿರ್ಲಕ್ಷ್ಯದಿಂದ ಅಗ್ನಿ ಅನಾಹುತ: ಪುಟಿನ್‌

Published:
Updated:
ನಿರ್ಲಕ್ಷ್ಯದಿಂದ ಅಗ್ನಿ ಅನಾಹುತ: ಪುಟಿನ್‌

ಮಾಸ್ಕೊ, ರಷ್ಯಾ: ಕೆಮೆರೊವ್‌ನಲ್ಲಿ 64 ಮಂದಿಯ ಸಾವಿಗೆ ಕಾರಣವಾದ ಶಾಪಿಂಗ್ ಮಾಲ್ ಅಗ್ನಿ ಅವಘಡಕ್ಕೆ ತೀವ್ರ ನಿರ್ಲಕ್ಷ್ಯವೇ ಕಾರಣ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಘಟನೆ ನಡೆದು ಎರಡು ದಿನಗಳ ಬಳಿಕ ಮಂಗಳವಾರ ಸ್ಥಳಕ್ಕೆ ಅವರು ಭೇಟಿ ನೀಡಿದರು.

ಈ ಮಧ್ಯೆ, ಮೃತಪಟ್ಟ 64 ಮಂದಿಯಲ್ಲಿ 41 ಮಕ್ಕಳು ಸೇರಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ ರಿಯಾ ನೋವೊಸ್ಟಿ ವರದಿ ಮಾಡಿದೆ. ಈ ಮಕ್ಕಳ ಹೆಸರುಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

‘ನಾವು ಜನಸಂಖ್ಯೆ ಬಗ್ಗೆ ಮಾತನಾಡುತ್ತೇವೆ. ಜೊತೆಗೆ ಸಾಕಷ್ಟು ಜನರನ್ನೂ ಕಳೆದುಕೊಳ್ಳುತ್ತಿದ್ದೇವೆ. ಇದಕ್ಕೆಲ್ಲಾ ಕಾರಣ ಅಜಾಗರೂಕತೆ ಹಾಗೂ ನಿರ್ಲಕ್ಷ್ಯ’ ಎಂದು ಪುಟಿನ್‌ ನುಡಿದರು.

ಕೆಮರೊವ್ ಪ್ರದೇಶದಲ್ಲಿ ಮಂಗಳವಾರದಿಂದ ಮೂರು ದಿನ ಶೋಕಾಚರಣೆ ಘೋಷಿಸಲಾಗಿದೆ. ಆದರೆ ದೇಶದಾದ್ಯಂತ ಶೋಕಾಚರಣೆ ಏಕೆ ಘೋಷಿಸಿಲ್ಲ ಎಂದು ಸಾಕಷ್ಟು ಟೀಕಾಕಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ವಾಹಿನಿಯು ಮನರಂಜನೆ ಕಾರ್ಯಕ್ರಮಗಳ ಪ್ರಸಾರ ನಿಲ್ಲಿಸಿಲ್ಲ ಎಂದೂ ದೂರಿದ್ದಾರೆ.

ಮಾಲ್‌ನ ತುರ್ತು ನಿರ್ಗಮನ ದ್ವಾರಗಳು ಮುಚ್ಚಿದ್ದರಿಂದ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಪ್ರತಿಭಟನಾ ರ‍್ಯಾಲಿ

ಮಾಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ನಗರದ ಸಾವಿರಾರು ಮಂದಿ ರ‍್ಯಾಲಿ ನಡೆಸಿದರು.

ಅಧಿಕೃತ ಸಾವಿನ ಸಂಖ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ವಸ್ತುಸ್ಥಿತಿಯನ್ನು ಅಧಿಕಾರಿಗಳು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಲ್‌ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದಾಗ ಎಚ್ಚರಿಕೆ ಗಂಟೆ ಕಾರ್ಯನಿರ್ವಹಿಸಿಲ್ಲ. ಅಲ್ಲದೇ ಹೆಚ್ಚಿನ ಬಾಗಿಲುಗಳು ಬೀಗ ಹಾಕಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry