ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಕಲಿ ಅಂಕಪಟ್ಟಿ’ ಆರೋಪಿ ಸೂಪರಿಂಟೆಂಡೆಂಟ್!

Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಅಂಕಪಟ್ಟಿ ಪಡೆದ ಆರೋಪಕ್ಕೆ ಗುರಿಯಾಗಿರುವ ಉದ್ಯೋಗಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಪರೀಕ್ಷಾಂಗ ವಿಭಾಗದ ಆಯಕಟ್ಟಿನ ಹುದ್ದೆ ದಯಪಾಲಿಸಿದ ‘ಪವಾಡ’ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) ನಡೆದಿದೆ.

ನಕಲಿ ಅಂಕಪಟ್ಟಿ, ನೇಮಕಾತಿ ಅಕ್ರಮ ಸೇರಿದಂತೆ ಹಗರಣಗಳ ಕೂಪದಲ್ಲಿ ಮುಳುಗಿ, ಮಾನ್ಯತೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿರುವ ಕೆಎಸ್ಒಯುನಲ್ಲಿ ಇದೇ ವರ್ಷದ ಜನವರಿಯಲ್ಲಿ ನಡೆದ ಯಡವಟ್ಟು ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯ ಮೇಲಿನ ಸಂಶಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂಬ ಮಾತುಗಳು ಶೈಕ್ಷಣಿಕ ವಲಯದಲ್ಲಿ ವ್ಯಕ್ತವಾಗಿವೆ.

ನಕಲಿ ಅಂಕಪಟ್ಟಿ ಹಗರಣದ ಕುರಿತು ಮೈಸೂರಿನ ನಗರ ಅಪರಾಧ ವಿಭಾಗ (ಸಿಸಿಬಿ) ತನಿಖೆ ನಡೆಸುತಿದ್ದು, ಕುಲಸಚಿವ ಹುದ್ದೆಯಲ್ಲಿದ್ದವರೂ ಸೇರಿದಂತೆ ಅನೇಕರನ್ನು ಬಂಧಿಸಿ ವಿಚಾರಣೆ ನಡೆಸಿದೆ. ಪರೀಕ್ಷಾಂಗ ವಿಭಾಗದ ಕುಲಸಚಿವರಾಗಿದ್ದ ಪ್ರೊ.ಕೆ.ಜೆ. ಸುರೇಶ್ ವಿರುದ್ಧ ವಿಚಾರಣೆ ನಡೆಯುತ್ತಿದೆ. ಸಹಾಯಕ ಕುಲಸಚಿವ ಸಿದ್ಧರಾಜು ಅವರನ್ನು ಅಮಾನತು ಮಾಡಲಾಗಿದೆ. ತಾತ್ಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಅಂಕಪಟ್ಟಿ ಹಗರಣದ ಆರೋಪಿಗಳನ್ನು ವಜಾ ಮಾಡಲಾಗಿದೆ. ವಿಶ್ವವಿದ್ಯಾಲಯದ ‘ಘನತೆ’, ‘ವಿಶ್ವಾಸ’ ಮರಳಿ ತರಲು ಹಲವು ಯತ್ನಗಳು ನಡೆಯುತ್ತಿರುವ ಮಧ್ಯೆಯೇ ಕಳಂಕಿತ ರಿಗೆ ಪ್ರಮುಖ ಹುದ್ದೆ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ.

2018ರ ಜನವರಿ 27ರಂದು ಕೆಎಸ್‌ಒಯು ಹೊರಡಿಸಿದ ಆದೇಶದಲ್ಲಿ (ಸಂಖ್ಯೆ: ಕರಾಮುವಿ/ಆವಿ/ಸಿಬ್ಬಂದಿ/2/08/2017–18), ‘ವಿಶ್ವವಿದ್ಯಾಲಯದ ಕೇಂದ್ರ ಕಚೇರಿಯ ಸುಸೂತ್ರ ಆಡಳಿತ ನಿರ್ವಹಣೆಯ ದೃಷ್ಟಿಯಿಂದ ಶ್ರೀಧರ ಅವರನ್ನು ಸಿದ್ಧ ಪಾಠ ವಿಭಾಗದಿಂದ ಪರೀಕ್ಷಾಂಗ ವಿಭಾಗದ ಸೂಪರಿಂಟೆಂಟೆಂಡ್‌ ಹುದ್ದೆಗೆ ವರ್ಗಾವಣೆ ಮಾಡಿದೆ’ ಎಂದು ತಿಳಿಸಲಾಗಿದೆ.

ಕೆಎಸ್ಒಯುಗೆ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸಕ್ಕೆ ಸೇರಿದ ಎಂ. ಶ್ರೀಧರ, ಪದವಿ ಪಡೆದಿರಲಿಲ್ಲ. ಪದವಿ ಪೂರ್ವ ಶಿಕ್ಷಣದ ಅರ್ಹತೆ ಆಧರಿಸಿ, ಉದ್ಯೋಗಕ್ಕೆ ಸೇರಿದ ಮೇಲೆ ದೂರಶಿಕ್ಷಣ ಕೋರ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅದಾದ ಬಳಿಕ ಬಡ್ತಿಯನ್ನೂ ಪಡೆದರು. ಸೂಪರಿಂಟೆಂಡೆಂಟ್‌ ಹುದ್ದೆಗೆ ಏರಲು ಯಾವುದಾದರೂ ಸ್ನಾತಕ ಪದವಿ ಪಡೆಯುವುದು ಕಡ್ಡಾಯವಾಗಿತ್ತು. ಅದಕ್ಕಾಗಿ ದೆಹಲಿಯ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಲಾಂಗ್‌ ಲರ್ನಿಂಗ್‌’ ನಲ್ಲಿ ಬಿ.ಎಗೆ ಪ್ರವೇಶ ಪಡೆದಿದ್ದರು. ವಿಶ್ವವಿದ್ಯಾಲಯದ ಅಂಕಪಟ್ಟಿ ಹಗರಣದ ಬಗ್ಗೆ ತನಿಖೆ ನಡೆಸಿದ ಸಿಸಿಬಿ, ಈ ಸಂಸ್ಥೆ  (‘ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಲಾಂಗ್‌ ಲರ್ನಿಂಗ್‌’)ಯಲ್ಲಿ ಪದವಿ ಪಡೆದವರು, ಪದವಿಗೆ ಪ್ರವೇಶ ಪಡೆದವರು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಹೇಳಿದೆ. ಈ ಪಟ್ಟಿಯಲ್ಲಿ ಶ್ರೀಧರ ಹೆಸರು ಕೂಡ ಇರುವುದನ್ನು ಸಿಸಿಬಿ ತನಿಖೆ ದೃಢಪಡಿಸಿದೆ.

ಹೀಗೆ ನಕಲಿ ಅಂಕಪಟ್ಟಿಯ ಕಳಂಕಕ್ಕೆ ಗುರಿಯಾದವರನ್ನೇ ಪರೀಕ್ಷಾಂಗ ವಿಭಾಗದ ಸೂಪರಿಂಟೆಂಟೆಂಡ್‌ ಹುದ್ದೆಗೆ ವರ್ಗಾಯಿಸುವ ಮೂಲಕ ಅಲ್ಲಿ ಆಗಿರುವ ಅಕ್ರಮಗಳನ್ನು ಸಕ್ರಮಗೊಳಿಸಲು ವಿಶ್ವವಿದ್ಯಾಲಯ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆರೋಪವೇನು?: ನಕಲಿ ಅಂಕಪಟ್ಟಿ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ, ದೂರ ಶಿಕ್ಷಣ ಕೋರ್ಸ್‌ ನಡೆಸಲು ಕೆಎಸ್‌ಒಯು ಜತೆಗೆ ಒಪ್ಪಂದ ಮಾಡಿಕೊಂಡಿದ್ದ ಸಂಸ್ಥೆಗಳಲ್ಲಿರುವ ದಾಖಲೆಗಳನ್ನು ‍ವಶಕ್ಕೆ ಪಡೆದಿತ್ತು. ದೇಶದ ವಿವಿಧ ರಾಜ್ಯಗಳಲ್ಲಿನ ಇಂತಹ ಸಂಸ್ಥೆಗಳಲ್ಲಿ ದೂರ ಶಿಕ್ಷಣ ಕೋರ್ಸ್ ಮುಗಿಸಿದ್ದ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ, ಶುಲ್ಕ ಪಾವತಿ ವಿವರ, ನೋಂದಣಿ ಸಂಖ್ಯೆ, ಪರೀಕ್ಷಾ ಪಟ್ಟಿ ಅನುಮೋದನೆ, ಪರೀಕ್ಷಾ ಕೇಂದ್ರದ ಹೆಸರು ಸೇರಿದಂತೆ ಎಲ್ಲ ವಿವರಗಳನ್ನು ಸಂಗ್ರಹಿಸಿತ್ತು. ಈ ಮಾಹಿತಿ ಆಧರಿಸಿ ಯಾವ ಅಭ್ಯರ್ಥಿ ನಕಲಿ ಎಂಬುದನ್ನು ತನಿಖೆ ವೇಳೆ ಪತ್ತೆ ಹಚ್ಚಲಾಗಿತ್ತು.

ಕೆಎಸ್‌ಒಯು ಸಹಭಾಗಿತ್ವ ಸಂಸ್ಥೆಯಾದ ದೆಹಲಿಯ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಲಾಂಗ್‌ ಲರ್ನಿಂಗ್‌’ ನಲ್ಲಿ ಪದವಿ ಪಡೆದವರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 79ರಲ್ಲಿ ಎಂ. ಶ್ರೀಧರ ಅವರ ಹೆಸರಿದೆ. ಇವರ ನೋಂದಣಿ ಸಂಖ್ಯೆ 14207ಬಿಎಜಿ799 ಹಾಗೂ ಅಂಕಪಟ್ಟಿ ಸಂಖ್ಯೆ ಎಂ 140635087 ಕೂಡ ನಕಲಿ ಎಂದೂ ಸಿಸಿಬಿ ಹೇಳಿದೆ.

‘ಪರೀಕ್ಷಾಂಗ ನೀಡಿರುವ ಪಟ್ಟಿಯಲ್ಲಿ 87 ವಿದ್ಯಾರ್ಥಿಗಳ ಹೆಸರಿದೆ. ಈ ಎಲ್ಲ ವಿದ್ಯಾರ್ಥಿಗಳು ಪ್ರವೇಶ ‍ಪಡೆದಿರಲಿಲ್ಲ, ಪರೀಕ್ಷೆ ಶುಲ್ಕ ಕಟ್ಟಿರಲಿಲ್ಲ. ಪರೀಕ್ಷೆ ತೆಗೆದುಕೊಂಡಿರುವುದರ ಮಾಹಿತಿ ಕೂಡ ಲಭ್ಯವಿಲ್ಲ. ಕೊಠಡಿ ಮೇಲ್ವಿಚಾರಕರ ಪಟ್ಟಿ, ಎ ಫಾರಂಗಳ ಮಾಹಿತಿಯೂ ಇಲ್ಲ‌’ ಎಂದು ಸಿಸಿಬಿ ವಿವರಿಸಿದೆ.

ಸಿಸಿಬಿ ತನಿಖಾ ವರದಿ ಅವಲೋಕಿಸಿದ್ದ  ರಾಜ್ಯಪಾಲ ವಜುಭಾಯಿವಾಲಾ, ನಕಲಿ ಅಂಕಪಟ್ಟಿ ಪಡೆದವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆದೇಶಿಸಿದ್ದರು. ಅದನ್ನು ಕೂಡ ಕೆಎಸ್ಒಯು ನಿರ್ಲಕ್ಷ್ಯ ಮಾಡಿದೆ.

ಸ್ಪಷ್ಟ ಉತ್ತರ ನೀಡದ ಪ್ರೊ. ಶಿವಲಿಂಗಯ್ಯ
‘ಶ್ರೀಧರ ಎಂಬ ಅಧಿಕಾರಿ ಪರೀಕ್ಷಾಂಗ ವಿಭಾಗದಲ್ಲಿ ಇಲ್ಲ’ ಎಂದು ಮೊದಲು ಹೇಳಿದ್ದ ಕೆಎಸ್‌ಒಯು ಕುಲಪತಿ ಪ್ರೊ. ಶಿವಲಿಂಗಯ್ಯ, ‘ ಶ್ರೀಧರ ಎಂಬುವರು ಇದ್ದಾರೆ. ಆದರೆ, ಅವರ ವಿರುದ್ಧ ಯಾವುದೇ ಆಪಾದನೆ ಇಲ್ಲ’ ಎಂದು ನಂತರ ತಿಳಿಸಿದ್ದರು.

‘ನಕಲಿ ಅಂಕಪಟ್ಟಿಯ ಆರೋಪಕ್ಕೆ ಗುರಿಯಾಗಿರುವ ಶ್ರೀಧರ ಅವರನ್ನು ಪರೀಕ್ಷಾಂಗ ವರ್ಗಕ್ಕೆ ವರ್ಗಾಯಿಸಿರುವುದು ಸರಿಯೇ’ ಎಂದು ‘ಪ್ರಜಾವಾಣಿ’ ಪ್ರಶ್ನಿಸಿದಾಗ, ಅವರು ಎರಡು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು.

ಮತ್ತೆ ‘ಪ್ರಜಾವಾಣಿ’ಗೆ ಕರೆ ಮಾಡಿದ ಅವರು, ‘ಶ್ರೀಧರ ಬಿ.ಎ ಪರೀಕ್ಷೆಗೆ ನೋಂದಾಯಿಸಿದ್ದು ಹೌದು. ಆದರೆ, ಪರೀಕ್ಷೆ ಬರೆದಿಲ್ಲ. ಅವರು ಪರೀಕ್ಷೆಗೆ ನೋಂದಾಯಿಸಿದ ಸಂಸ್ಥೆ ತಪ್ಪು ಮಾಡಿದ್ದು ಗೊತ್ತಾದ ಮೇಲೆ ಅವರು ಪದವಿ ಪಡೆದಿಲ್ಲ. ಏನೇ ಆದರೂ ಮತ್ತೊಮ್ಮೆ ದಾಖಲೆ ತರಿಸಿ ನಿಮಗೆ ಸ್ಪಷ್ಟ ಮಾಹಿತಿ ನೀಡುತ್ತೇನೆ’ ಎಂದೂ ತಿಳಿಸಿದ್ದರು.

ಮತ್ತೆ ಸ್ಪಷ್ಟನೆಗಾಗಿ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT