ರೌಡಿ ರೂಪೇಶ್‌ ಕಾಲಿಗೆ ಗುಂಡೇಟು

7
ಎದುರಾಳಿ ಗುಂಪಿನ ಅತೂಷ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ

ರೌಡಿ ರೂಪೇಶ್‌ ಕಾಲಿಗೆ ಗುಂಡೇಟು

Published:
Updated:
ರೌಡಿ ರೂಪೇಶ್‌ ಕಾಲಿಗೆ ಗುಂಡೇಟು

ಬೆಂಗಳೂರು: ಕುಖ್ಯಾತ ರೌಡಿ ಅತೂಷ್ ಹತ್ಯೆಗೆ ಸಂಚು ರೂಪಿಸಿದ್ದ ಕಾಟನ್‌ಪೇಟೆ ಠಾಣೆ ರೌಡಿಶೀಟರ್ ನಿರ್ಮಲ್ ಅಲಿಯಾಸ್ ರೂಪೇಶ್‌ನ (34) ಕಾಲಿಗೆ ಪಶ್ಚಿಮ ವಿಭಾಗದ ಪೊಲೀಸರು ಬುಧವಾರ ಬೆಳಿಗ್ಗೆ ಗುಂಡು ಹೊಡೆದಿದ್ದಾರೆ.

‘ಮೂರೂವರೆ ವರ್ಷಗಳಿಂದ ತಮಿಳುನಾಡಲ್ಲಿ ತಲೆಮರೆಸಿಕೊಂಡಿದ್ದ ಈತ, ಅತೂಷ್‌ನನ್ನು ಕೊಲ್ಲಲು ವಾರದ ಹಿಂದೆ ನಗರಕ್ಕೆ ಬಂದಿದ್ದ. ಬುಧವಾರ ನಸುಕಿನ ವೇಳೆ ಚಾಮರಾಜಪೇಟೆಯ ಸ್ಮಶಾನದಲ್ಲಿ ಮಲಗಿರುವ ವಿಚಾರ ತಿಳಿದು ಬಂಧಿಸಲು ಹೋಗಿದ್ದೆವು. ಈ ವೇಳೆ ಆತ ಚಾಕುವಿನಿಂದ ಹೆಡ್‌ಕಾನ್‌ಸ್ಟೆಬಲ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದರಿಂದ, ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ಅವರು ಕಾಲಿಗೆ ಗುಂಡು ಹೊಡೆದರು’ ಎಂದು ಪೊಲೀಸರು ಹೇಳಿದ್ದಾರೆ.

‘ಕಾಟನ್‌ಪೇಟೆಯ ಜೈಭೀಮಾನಗರ ನಿವಾಸಿಯಾದ ರೂಪೇಶ್ ವಿರುದ್ಧ ಕೊಲೆ, ಕೊಲೆಯತ್ನ ಸೇರಿದಂತೆ ನಾಲ್ಕು ಅಪರಾಧ ಪ್ರಕರಣಗಳು ದಾಖಲಾಗಿವೆ. 2012ರಲ್ಲಿ ಜೀವಾನಂದ್ ಎಂಬ ರೌಡಿಯನ್ನು ಹತ್ಯೆಗೈದ ನಂತರ, ಈತನ ಹೆಸರನ್ನು ಕಾಟನ್‌ಪೇಟೆ ಠಾಣೆಯ ರೌಡಿಪಟ್ಟಿಯಲ್ಲಿ ಸೇರಿಸಲಾಗಿತ್ತು’ ಎಂದು ಮಾಹಿತಿ ನೀಡಿದ್ದಾರೆ. ‌

2014ರ ಜೂನ್‌ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ರೂಪೇಶ್, ನಂತರ ವಿಚಾರಣೆಗೆ ಹಾಜರಾಗದೆ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ. ಆತನ ವಿರುದ್ಧ ನ್ಯಾಯಾಲಯ 12 ವಾರಂಟ್‌ಗಳನ್ನು ಜಾರಿಗೊಳಿಸಿತ್ತು. ಕಾಟನ್‌ಪೇಟೆ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ, ವಿಶೇಷ ತಂಡ ರಚಿಸಿಕೊಂಡು ರೂಪೇಶ್‌ನ ಹಿಂದೆ ಬಿದ್ದಿದ್ದರು.

‘ತಮಿಳುನಾಡಿನಿಂದ ಬಂದು ಜಿಂಕೆಪಾರ್ಕ್ ಬಳಿ ಇರುವ ಗೆಳೆಯನ ಮನೆಯಲ್ಲಿ ಉಳಿದುಕೊಂಡಿದ್ದ ರೂಪೇಶ್, ಅತೂಷ್‌ನನ್ನು ಕೊಲ್ಲಲು ಹುಡುಗರನ್ನು ಹೊಂದಿಸುತ್ತಿದ್ದ. ತಾನು ಗೆಳೆಯನ ಮನೆಯಲ್ಲಿರುವ ವಿಚಾರ ಕೆಲ ಎದುರಾಳಿಗಳಿಗೆ ಗೊತ್ತಾಗಿದ್ದರಿಂದ, ಭಾನುವಾರ ಸಂಜೆ ಮನೆ ತೊರೆದಿದ್ದ. ಜಿಂಕೆಪಾರ್ಕ್ ಸಮೀಪದ ಲಿಂಗಾಯತರ ಸ್ಮಶಾನದಲ್ಲಿರುವ ಹಳೇ ಕಟ್ಟಡವೊಂದರಲ್ಲಿ ಸಹಚರ ಗಣೇಶ್ ಅಲಿಯಾಸ್ ಕಿಚ್ಚನ ಜತೆ ಉಳಿದುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಬೆಳಿಗ್ಗೆ 5.15ಕ್ಕೆ ನಮ್ಮ ಸಿಬ್ಬಂದಿ ಸ್ಮಶಾನಕ್ಕೆ ತೆರಳಿದ್ದರು. ಈ ವೇಳೆ ಎಚ್ಚರಗೊಂಡ ಗಣೇಶ್, ಹೆಡ್‌ಕಾನ್‌ಸ್ಟೆಬಲ್ ಅಬ್ದುಲ್ ರೆಹಮಾನ್ ಅವರನ್ನು ತಳ್ಳಿದ. ಈ ಹಂತದಲ್ಲಿ ಚಾಮರಾಜಪೇಟೆ ಇನ್‌ಸ್ಪೆಕ್ಟರ್ ಪ್ರಶಾಂತ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರು. ಗುಂಡಿನ ಸದ್ದು

ಕೇಳುತ್ತಿದ್ದಂತೆಯೇ ರೂಪೇಶ್ ಸಹ ಎದ್ದು, ಸಿಬ್ಬಂದಿ ಕುಮಾರ್ ಕೈಗೆ ಚಾಕುವಿನಿಂದ ಹಲ್ಲೆ ನಡೆಸಿದ. ಆಗ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ಆತನ ಎಡಗಾಲಿಗೆ ಗುಂಡು ಹೊಡೆದರು. ಗಣೇಶ್ ತಪ್ಪಿಸಿಕೊಂಡು ಓಡಿದ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚೆನ್ನಣ್ಣನವರ್ ಕಾರ್ಯಾಚರಣೆಯನ್ನು ವಿವರಿಸಿದರು.

ಜೈಲಿನಿಂದಲೂ ಕಾರ್ಯಾಚರಣೆ

‘ಅತೂಷ್ ಕೂಡ ಕಾಟನ್‌ಪೇಟೆ ಠಾಣೆಯ ರೌಡಿಶೀಟರ್. ಆತನ ವಿರುದ್ಧವೂ 15 ಅಪರಾಧ ಪ್ರಕರಣಗಳು ದಾಖಲಾಗಿವೆ. ಸದ್ಯ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಫ್ಲವರ್‌ ಗಾರ್ಡನ್‌ನಲ್ಲಿ ನೆಲೆಸಿದ್ದಾನೆ. ಅತೂಷ್‌ನನ್ನು ಕೊಲ್ಲಲು ಜೈಲಿನಲ್ಲಿರುವ ಆತನ ಎದುರಾಳಿಗಳು ಸಹ ರೂಪೇಶ್‌ಗೆ ನೆರವಾಗುವ ಭರವಸೆ ಕೊಟ್ಟಿದ್ದರು ಎಂಬುದು ಗೊತ್ತಾಗಿದೆ. ಹೀಗಾಗಿ ಕಾರಾಗೃಹಕ್ಕೆ ತೆರಳಿ ‌ಆ ಕೈದಿಗಳನ್ನೂ ವಿಚಾರಣೆ ನಡೆಸಲಾಗುವುದು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry