7

ಶಾಸಕರ ವಿರುದ್ಧ ಆರೋಪ

Published:
Updated:

ಪಿರಿಯಾಪಟ್ಟಣ: ‘ದೇವರಾಜ ಅರಸು ವಸತಿ ನಿಗಮ ಯೋಜನೆ ಯಡಿ ಮನೆ ವಿತರಿಸುವುದಾಗಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಖಾಲಿ ನಿವೇಶನಗಳನ್ನು ರಾತ್ರಿ ವೇಳೆ ಜಿಪಿಎಸ್‌ ಮಾಡಿಸುವ ಮೂಲಕ ಶಾಸಕ ಕೆ.ವೆಂಕಟೇಶ್‌ ಮತದಾರರನ್ನು ವಂಚಿಸಲು ಯತ್ನಿಸುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಮು ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕರ ಸೂಚನೆಯಂತೆ ಪಿಡಿಒ ಹಾಗೂ ಕಾರ್ಯದರ್ಶಿಗಳು ವಸತಿ ಯೋಜನೆ ಫಲಾನುಭವಿಗಳಿಗೆ ರಾತ್ರಿ ವೇಳೆಯಲ್ಲಿ ಖಾಲಿ ನಿವೇಶನದ ಜಿಪಿಎಸ್ ಮಾಡುತ್ತಿದ್ದು, ಈ ಬಗ್ಗೆ ಆಯಾ ಗ್ರಾಮ ಪಂಚಾಯಿತಿ ಸದಸ್ಯರಿಗೂ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದ ದೂರಿದರು.

ನವಿಲೂರು, ಪೂನಾಡಹಳ್ಳಿ, ರಾಮನಾಥತುಂಗಾ ಸೇರಿದಂತೆ ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ರೀತಿಯ ಅಕ್ರಮ ಎಸಗುತ್ತಿರುವುದು ಕಂಡುಬರುತ್ತಿದೆ. ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಇಒ, ಪಿಡಿಒ ಹಾಗೂ ಕಾರ್ಯದರ್ಶಿಗಳ ವಿರುದ್ದ ಜಿಲ್ಲಾಧಿಕಾರಿಗೆ ಮತ್ತು ಸಿಇಒಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಈಚೆಗೆ ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿರಿಯಾಪಟ್ಟಣ ತಾಲ್ಲೂಕನ್ನು ಬಯಲು ಶೌಚಮುಕ್ತ ತಾಲ್ಲೂಕು ಎಂದು ಘೋಷಿಸಲಾಗಿದೆ. ಆದರೆ, ತಾಲ್ಲೂಕಿನ ಶೇ. 50ಕ್ಕೂ ಹೆಚ್ಚು ಮನೆಗಳಲ್ಲಿ ಶೌಚಾಲಯಗಳಿಲ್ಲ. ಆದರೂ ತಪ್ಪು ಮಾಹಿತಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.

ಮಂಚದೇವನಹಳ್ಳಿ ಮತ್ತು ದೊಡ್ಡಹರವೆ ಗ್ರಾಮದಲ್ಲಿ 79 ಕುಟುಂಬ ಶೌಚಾಲಯ ಹೊಂದಿಲ್ಲ. ಬಯಲು ಶೌಚಮುಕ್ತ ತಾಲ್ಲೂಕು ಎಂದು ಘೋಷಣೆಯಾದಲ್ಲಿ ಶೌಚಾಲಯ ನಿರ್ಮಿಸಲು ಸರ್ಕಾರದಿಂದ ನೀಡಲಾಗುವ ಅನುದಾನ ಸ್ಥಗಿತಗೊಳ್ಳಲಿದ್ದು, ಈ ರೀತಿಯ ಸುಳ್ಳು ಮಾಹಿತಿಯಿಂದ ಅನುದಾನದ ನಿರೀಕ್ಷೆಯಲ್ಲಿರುವ ಗ್ರಾಮಸ್ಥರಿಗೆ ಇದರಿಂದ ಅನನುಕೂಲವಾಗಲಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry