ಆಗದವರನ್ನು ನಿಭಾಯಿಸುವ ಕಲೆ

7

ಆಗದವರನ್ನು ನಿಭಾಯಿಸುವ ಕಲೆ

Published:
Updated:
ಆಗದವರನ್ನು ನಿಭಾಯಿಸುವ ಕಲೆ

ನಿಮಗಾದವರನ್ನು ಪ್ರತಿದಿನ ಎದುರಾಗುವ ಸಂದರ್ಭ ಬಂದಾಗ ಏನು ಮಾಡುವಿರಿ? ಒಂದೇ ಕಡೆ ಕೆಲಸ ಮಾಡುವವರು, ಪಕ್ಕದ ಮನೆಯವರು, ಸಂಬಂಧಿಗಳಾಗಿದ್ದರೆ  ಅವರನ್ನು ಸಂಪೂರ್ಣವಾಗಿ ಅಲಕ್ಷಿಸಲು ಆಗದು. ಒಂದಲ್ಲ ಒಂದು ಸಂದರ್ಭದಲ್ಲಿ ಮಾತನಾಡಲೇ ಬೇಕಾದ ಪರಿಸ್ಥಿತಿ ಬರುತ್ತದೆ. ಆಗ ಅವರೊಂದಿಗಿನ ಸಂವಹನ ಹೇಗಿರಬೇಕು ಎಂಬುದನ್ನು ತಿಳಿಯೋಣ...

* ಸಂವಾದವನ್ನು ಸಂಕ್ಷಿಪ್ತಗೊಳಿಸಿ: ಇಷ್ಟವಾಗದವರೊಂದಿಗೆ ವ್ಯವಹರಿಸುವುದು ಅಗತ್ಯವಾದಾಗ ಸಂಕ್ಷಿಪ್ತತೆಯ ಅಸ್ತ್ರ ಬಳಸಿಕೊಳ್ಳಿ. ಆ ವ್ಯಕ್ತಿ ನಿಮ್ಮ ಎದುರಿಗಿದಷ್ಟು ನಿಮ್ಮಲ್ಲಿ ಕಿರಿಕಿರಿ ಉಂಟಾಗಬಹುದು. ಹಾಗಾಗಿ ಏನು ಹೇಳಬೇಕು ಅಂದುಕೊಂಡಿದ್ದೀರೋ ಅದನ್ನು ಅದಷ್ಟು ಬೇಗ, ಸಂಕ್ಷಿಪ್ತವಾಗಿ ಹೇಳಿ ಮುಗಿಸಿ. ಅವರೊಂದಿಗೆ ವಿನಯದಿಂದಲೇ ಮಾತನಾಡಿ.

* ಅವರ ದೃಷ್ಟಿಕೋನದಿಂದ ಪರಿಸ್ಥಿತಿ ಅರಿಯಿರಿ: ಪ್ರತಿ ಮನುಷ್ಯನು ಪರಿಸ್ಥಿತಿಯ ಕೈಗೊಂಬೆ. ಹಾಗಾಗಿ ನಿಮ್ಮ ಎದುರಿನ ವ್ಯಕ್ತಿ ನಿಮ್ಮೊಂದಿಗೆ ಯಾಕೆ ಹಾಗೆ ನಡೆದುಕೊಳ್ಳುತ್ತಿರಬಹುದು ಎಂಬುದನ್ನು ಅವಲೋಕಿಸಿ. ನಿಮ್ಮ ಯಾವ ನಡವಳಿಕೆ ಅವರಿಗೆ ಇಷ್ಟವಾಗುತ್ತಿಲ್ಲ ಎಂಬುದನ್ನು ತಿಳಿಯಿರಿ. ಅವರ ಬಗ್ಗೆ ಸರಿಯಾಗಿ ತಿಳಿಯದೆ ದೂರುವುದು ಸರಿಯಲ್ಲ. ಅವರೊಂದಿಗೆ ಮಾತನಾಡಿ ಅವರಲ್ಲಿ ನಿಮಗೆ ಕೋಪ ತರಿಸುವ ಸ್ವಭಾವವಿದ್ದರೆ ಬದಲಾಯಿಸಲು ಸಾಧ್ಯವಿದೆಯೇ ಕಂಡುಕೊಳ್ಳಿ.

* ಮಾತಿಗೆ ಗಡಿಯಿರಲಿ: ಯಾರೊಂದಿಗೆ ಎಷ್ಟು ಮಾತನಾಡಬೇಕು, ಯಾವೆಲ್ಲ ವಿಷಯಗಳನ್ನು ಹಂಚಿಕೊಳ್ಳಬೇಕು ಎಂಬ ಗಡಿ ಹಾಕಿಕೊಳ್ಳಿ. ಎಲ್ಲ ವಿಷಯವನ್ನು ಎಲ್ಲರೊಂದಿಗೂ ಹಂಚಿಕೊಳ್ಳಲು ಹೋಗಬೇಡಿ. ಸಂಬಂಧಗಳು ಕನ್ನಡಿಯಂತೆ. ಜೋಪಾನ ಮಾಡಿದಷ್ಟು ಬಾಳಿಕೆ ಜಾಸ್ತಿ. ಒಮ್ಮೆ ಕನ್ನಡಿ ಬಿದ್ದರೆ ಪುಡಿಪುಡಿಯಾಗುವಂತೆ ಸಂಬಂಧವೂ ಕೂಡ. ಹಾಗಾಗಿ ಮಾತನಾಡುವ ಮುನ್ನ ಸಾವಿರ ಬಾರಿ ಯೋಚಿಸಿ ಮಾತನಾಡಿ.

* ಸಂಭಾಷಣೆ ಸಮಯದಲ್ಲಿ ವಿಷಯ ಬದಲಾಯಿಸಿ: ನಿಮಗೆ ಇಷ್ಟವಾಗದ ವಿಷಯದ ಬಗ್ಗೆ ಸಂಭಾಷಣೆ ನಡೆಯುತ್ತಿದ್ದರೆ ವಿಷಯವನ್ನು ಬದಲಿಸಿಬಿಡಿ. ಇದರಿಂದ ನೀವು ಅನುಭವಿಸುವ ಕಿರಿಕಿರಿ ಕಡಿಮೆ ಮಾಡಬಹುದು.

* ಅಂತರವಿರಲಿ: ಇನ್ನು ಇವರೊಂದಿಗೆ ಸಂಬಂಧ ಉತ್ತಮ ಪಡಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನಿಸಿದರೆ, ಅವರೊಂದಿಗೆ ಅಂತರ ಕಾಯ್ದುಕೊಳ್ಳಿ. ಸಾಧ್ಯವಾದಷ್ಟು ಅವರ ಸಂಗದಿಂದ ದೂರವಿರಿ.

* ವೈಯಕ್ತಿಕವಾಗಿ ತೆಗೆದುಕೊಳ್ಳದಿರಿ: ಯಾವುದೇ ವಿಷಯವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದಿರಿ. ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ಕೊರತೆ ಇರುತ್ತದೆ. ಹಾಗಾಗಿ ಎಲ್ಲಾ ವಿಷಯದ ಬಗ್ಗೆ ದೀರ್ಘವಾಗಿ ಯೋಚಿಸುವುದನ್ನು ನಿಲ್ಲಿಸಿ. ಯಾರೋ ಏನು ಹೇಳಿದರು ಎಂದು ತಲೆ ಕೆಡಿಸಿಕೊಂಡು ಕೂರಬೇಡಿ. ಜಗತ್ತಿನಲ್ಲಿ ಯೋಚಿಸಬೇಕಾದ್ದು ತುಂಬಾ ವಿಷಯಗಳಿವೆ.

* ಅವರ ಬಗ್ಗೆ ಹೆಚ್ಚು ಯೋಚಿಸದಿರಿ: ಮೀಟಿಂಗ್‌ನಲ್ಲಿ ನಿಮಗೆ ಆಗದವರು ಜೊತೆಯಾಗಿದ್ದರೆ ಅವರ ಬಗ್ಗೆ ಚಿಂತಿಸದೆ ಮೀಟಿಂಗ್‌ಗೆ ಹೇಗೆ ತಯಾರಾಗಬೇಕು ಎಂಬುದನ್ನು ಯೋಚಿಸಿ. ಅವರ ಬಗ್ಗೆ ಯೋಚಿಸುತ್ತಾ ಸಮಯ ಹಾಳು ಮಾಡಿದರೆ ನಿಮ್ಮ ವೃತ್ತಿ ಭವಿಷ್ಯಕ್ಕೆ ಕುತ್ತು ಬರಬಹುದು.

* ಭಾವನೆಗಳನ್ನು ನಿಯಂತ್ರಿಸಿ: ಎಲ್ಲಾ ವಿಷಯದಲ್ಲೂ ಯಾವಾಗಲೂ ಭಾವನಾತ್ಮಕವಾಗಿಯೇ ಚಿಂತಿಸುವುದು ತಪ್ಪು. ಭಾವನಾತ್ಮಕ ವಿಷಯಗಳು ಅನೇಕ ಬಾರಿ

ನಮ್ಮಲ್ಲಿ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry