4

ಮೂರ್ಖರ ದಿನದಂದು ಮಂಗ ಆದವರ ಕತೆ

Published:
Updated:
ಮೂರ್ಖರ ದಿನದಂದು ಮಂಗ ಆದವರ ಕತೆ

ರಜೆ ದಿನ ಕಾಲೇಜಿಗೆ ಹೋಗಿದ್ದೆ

ನಾನು ಸ್ನೇಹಿತರು, ಮನೆಯವರಿಂದ ಏಪ್ರಿಲ್‌ 1ರಂದು ಸಣ್ಣ ವಿಷಯಕ್ಕಾದರೂ ಫೂಲ್‌ ಆಗಿರ್ತೀನಿ. ಹಿಂದಿನ ದಿನ ನಾಳೆ  ಏಪ್ರಿಲ್‌ 1 ಯಮಾರಬಾರದು ಎಂದು ಅಂದುಕೊಂಡಿರ್ತೀನಿ. ಆದ್ರೆ ಆ ದಿನ ನೆನಪೇ ಇರುವುದಿಲ್ಲ. ಎರಡು ವರ್ಷಗಳ ಹಿಂದೆ ಏಪ್ರಿಲ್‌ 1ರಂದು ಕಾಲೇಜಿಗೆ ರಜೆ ಇತ್ತು. ಬೆಳಿಗ್ಗೆ ನನ್ನ ಫ್ರೆಂಡ್‌ ಫೋನ್‌ ಮಾಡಿ, ಇವತ್ತು ಸ್ಪೆಷಲ್‌ ಕ್ಲಾಸ್‌ ಇದೆ, ಸರ್‌ ಎಲ್ಲರಿಗೂ ಹೇಳೋಕೆ ಹೇಳಿದ್ದಾರೆ ಅಂದ್ಳು. ನಾನೂ ಬ್ಯಾಗ್‌ ಹಾಕಿಕೊಂಡು ಕಾಲೇಜಿಗೆ ಹೋದೆ. ಕಾಲೇಜು ಮನೆಯಿಂದ ತುಂಬಾ ದೂರ. ನಾನು ನಮ್ಮ ಕ್ಲಾಸ್‌ಗೆ ಹೋದಾಗ ಬೀಗ ಹಾಕಿತ್ತು. ಯಾರೂ ಇಲ್ಲ. ಸ್ನೇಹಿತೆಗೆ ಪೋನ್‌ ಮಾಡಿದಾಗಲೇ ಗೊತ್ತಾಗಿದ್ದು ನಾನು ಮಂಗ ಆಗಿದ್ದೀನಿ ಅಂತಾ.

ಅರೋಹಿ ನಾರಾಯಣ್‌, ನಟಿ

**

ಅಮ್ಮನ ಸುಳ್ಳಿಗೆ ಮೂರ್ಖ ಆಗ್ತಾನೇ ಇರ್ತೀನಿ

ನನ್ನನ್ನು ಯಾರಾದರೂ ಹೇಗೆ ‍ಫೂಲ್‌ ಆಗಿದ್ದೀಯಾ ಅಂತಾ ಕೇಳಿದ್ರೆ ಸಣ್ಣವಯಸ್ಸಿನಲ್ಲಿ ನಡೆದ ಘಟನೆಯೇ ನೆನಪಿಗೆ ಬರುತ್ತೆ. ನಾನು ಸಣ್ಣವನಿದ್ದಾಗ ಒಬ್ಬ ಅಪರಿಚಿತ ನನಗೆ ಪೂಸಿ ಹೊಡೆದು ನನ್ನ ಬಳಿ ಇದ್ದ ಸೈಕಲ್‌ ಕದ್ದುಕೊಂಡು ಹೋಗಿದ್ದ. ಕಾಲೇಜಿನಲ್ಲಿ, ಬೇರೆ ಕಡೆಗಳಲ್ಲಿ ಆಗಾಗ ಸ್ನೇಹಿತರಿಂದ ಸಣ್ಣದಾಗಿ ಬೇಸ್ತು ಬಿದ್ದಿದ್ದಿದೆ. ಈಗ ನಾನು ಶೂಟಿಂಗ್‌ನಿಂದ ಬಿಡುವು ಸಿಕ್ಕಾಗ ಸ್ನೇಹಿತರ ಜೊತೆ ತಿರುಗಾಡಲು ಹೋಗಿರ್ತೀನಿ. ಮನೆಗೇ ಬೇಗ ಹೋಗೋದೇ ಇಲ್ಲ. ಮರುದಿನ ಬೇಗ ಶೂಟ್‌ಗೆ ಹೋಗ್ಬೇಕಾಗಿರುತ್ತೆ. ಆಗ ಅಮ್ಮ ಫೋನ್‌ ಮಾಡಿ, ‘ನನಗೆ ಆರಾಮಿಲ್ಲ, ಸ್ವಲ್ಪ ಬೇಗ ಮನೆಗೇ ಬಾ’ ಎಂದು ಹೇಳುತ್ತಾಳೆ. ಈ ಸುಳ್ಳು ನನಗೆ ಅಭ್ಯಾಸ ಆಗಿಹೋಗಿದೆ. ಆದ್ರೆ ಮನಸ್ಸಿನಲ್ಲಿ ಸ್ವಲ್ಪ ಭಯ. ಹಾಗಾಗಿ ಮನೆಗೆ ಬೇಗ ಹೋಗ್ತೀನಿ. ಅಮ್ಮ ಈ ಟ್ರಿಕ್‌ನ್ನ ಆಗಾಗ ಉಪಯೋಗಿಸ್ತಾನೇ ಇರ್ತಾರೆ.

ವಿಜಯ್‌ ಸೂರ್ಯ, ನಟ***

ನಗೆ ಕಾರಣ ಗೊತ್ತಾಗಿ ಬೇಸ್ತು

ನನ್ನ ಫ್ರೆಂಡ್‌ ಸಿನಿಮಾ ಮಾಡುತ್ತಿದ್ದರು. ಹೀಗಾಗಿ ಹೆಚ್ಚು ಸಮಯ ಅವರ ಜೊತೆನೇ ಇರುತ್ತಿದ್ದೆ. ನಾವಿಬ್ಬರು ಹೊರಗಡೆ ಹೊರಟಾಗ ನಮ್ಮ ಮನೆಯ ಎದುರು ನಿಂತಿರುತ್ತಿದ್ದ ವ್ಯಕ್ತಿ ದಿನಾ ನನ್ನಲ್ಲಿ ನಗೋರು. ತುಂಬಾ ಗೌರವ ಕೊಡುತ್ತಿದ್ದರು. ಸ್ವಲ್ಪ ದಿನ ಕಳೆದಾದ ಮೇಲೆ ಸ್ನೇಹಿತನ ಜೊತೆ ಅವರ ವಿಷಯ ಪ್ರಸ್ತಾಪಿಸಿದೆ. ಸ್ನೇಹಿತ ಜೋರಾಗಿ ನಗಲು ಆರಂಭಿಸಿದರು. ‘ನಿನ್ನ ಜೊತೆ ಅವರು ನಗುತ್ತಾರಾ? ತುಂಬ ಗೌರವ ಕೊಡ್ತಾರಾ’ ಅಂತ ಕೇಳಿದರು. ಹೌದು ಹೌದು ಅಂತಾ ತಲೆಯಾಡಿಸಿದೆ. ‘ನಂಗೂ ಅವರು ತುಂಬ ರೆಸ್ಪಾಕ್ಟ್‌ ಕೊಡ್ತಾರೆ. ಎಲ್ಲಾ ಕೂದಲ ಮಹಿಮೆ’ ಎಂದು ತಮ್ಮ ಬೋಳಾದ ತಲೆಯನ್ನು ಸವರಿಕೊಂಡರು. ಆಗ ಗೊತ್ತಾಯಿತು ಆ ನಗುವ ವ್ಯಕ್ತಿ ಅವರು ಬೋಳು ತಲೆಗೆ ಕೂದಲು ನೆಡುವವರು. ಬೋಳು ತಲೆಯ ವ್ಯಕ್ತಿಗಳನ್ನು ಅವರು ಹುಡುಕಿ ಹುಡುಕಿ, ಪರಿಚಯ ಮಾಡಿಕೊಂಡು ಬಳಿಕ ಕೂದಲ ಕಸಿ ಚಿಕಿತ್ಸೆ ಬಗ್ಗೆ ವ್ಯವಹಾರ ನಡೆಸುತ್ತಾರೆ. ನಾನು ಹೀಗೆ ಯಾಮಾರಿದ್ದನ್ನೇ ‘ಒಂದು ಮೊಟ್ಟೆ ಕತೆ’ ಸಿನಿಮಾದಲ್ಲಿ ಬಳಸಿದ್ದೇನೆ.

ರಾಜ್‌ ಶೆಟ್ಟಿ, ಸಿನಿಮಾ ನಿರ್ದೇಶಕ, ನಟ

***

ನಿರ್ದೇಶಕರನ್ನು ಗೋಳು ಹೊಯ್ಕೊಂಡೆವು

‘8 ಎಂ.ಎಂ’ ಸಿನಿಮಾದ ಶೂಟಿಂಗ್‌ ನಡೆಯುತ್ತಿತ್ತು. ಆದಿನ ನನ್ನ, ವಸಿಷ್ಠ ಸಿಂಹ ಅವರ ದೃಶ್ಯಗಳ ಶೂಟಿಂಗ್‌ ನಡೆಯಬೇಕಿತ್ತು. ಸ್ವಲ್ಪ ಹೊತ್ತಿನಲ್ಲಿ ವಸಿಷ್ಠ ಸಿಂಹ ಹಾಗೂ ನನ್ನ ಜಗಳ ಆರಂಭವಾಯಿತು. ಮಾತಿಗೆ ಮಾತು ಬೆಳೆಯಿತು. ನನ್ನ ಜೊತೆ ಅವರು, ಅವರ ಜೊತೆ ನಾನು ಚಿತ್ರೀಕರಣ ಮಾಡುವುದೇ ಇಲ್ಲ ಎಂದು ಕುಳಿತುಬಿಟ್ಟೆವು.  ಮಧ್ಯಾಹ್ನದವರೆಗೂ ನಮ್ಮ ಜಗಳ ಮುಂದುವರಿಯಿತು. ನಿರ್ದೇಶಕ ಹರಿಕೃಷ್ಣ ಅವರು ಗಾಬರಿ ಬಿದ್ದು ಹೋಗಿದ್ದರು. ಆ ದಿನದ ಚಿತ್ರೀಕರಣ ನಡೆಯಲೇಬೇಕಿತ್ತು. ಅವರ ಮುಖ ನೋಡಕ್ಕಾಗುತ್ತಿರಲಿಲ್ಲ. ಅವರು ಸ್ವಲ್ಪ ಬೇಜಾರು ಮಾಡಿಕೊಂಡಾಗ ಸೆಟ್‌ನಲ್ಲೆಲ್ಲಾ ಜೋರಾಗಿ ನಗು. ಕೊನೆಗೇ ಅವರಿಗೆ ನಾವು ಮಾಡಿದ್ದು ತಮಾಷೆಗೆ ಎಂದು ಗೊತ್ತಾಯಿತು.

ಮಯೂರಿ, ನಟಿ

***ರಾಜ್‌ ಶೆಟ್ಟಿ, ಸಿನಿಮಾ ನಿರ್ದೇಶಕ, ನಟ

***

ಒಂದು ಗಂಟೆ ಶಿವಣ್ಣನ ಸ್ವರದಲ್ಲಿ ಮಾತಾಡಿದ್ದೆ

ನಾನು ರೇಡಿಯೋ ಜಾಕಿಯಾಗಿದ್ದಾಗ ಶಿವಣ್ಣ ಅವರ ಸ್ವರದಲ್ಲೇ ಕೇಳುಗರ ಜೊತೆ ಒಂದು ಗಂಟೆ ಮಾತಾಡಿದ್ದೇನೆ. ಶಿವರಾಜ್ ಕುಮಾರ್‌ ಅವರ ಸಿನಿಮಾವೊಂದು ಬಿಡುಗಡೆಯಾಗಿತ್ತು. ಆಗ ನಾವು ‘ಶಿವಣ್ಣ ಅವರು ರೇಡಿಯೋ ಸ್ಟೇಷನ್‌ಗೆ ಬರುತ್ತಾರೆ. ಫೂನ್‌– ಇನ್‌ ಕಾರ್ಯಕ್ರಮ ಇದೆ’ ಎಂದು ಘೋಷಣೆ ಮಾಡಿದ್ದೇವು. ಆದರೆ ಆ ದಿನ ಶಿವಣ್ಣ ಅವರಿಗೆ ಬರಕ್ಕಾಗಲಿಲ್ಲವೋ ಅಥವಾ ನಮ್ಮ ನಿರ್ದೇಶಕರು ಅವರ ಜೊತೆ ಮಾತಾಡಿಲ್ಲವೋ ಗೊತ್ತಿಲ್ಲ, ಒಟ್ಟಿನಲ್ಲಿ ಶಿವಣ್ಣ ಕಾರ್ಯಕ್ರಮಕ್ಕೆ ಬಂದಿಲ್ಲ. ಜನರಿಂದ ಫೋನ್‌ಕರೆಗಳು ಬರಲು ಆರಂಭವಾದವು. ಆಗ ನಾನೇ ಶಿವಣ್ಣ ಅವರ ಸ್ವರದಲ್ಲಿ ಅವರ ಜೊತೆ ಮಾತಾಡಲಾರಂಭಿಸಿದೆ. ಎಲ್ಲರೂ ಶಿವಣ್ಣ ಅಂತಾ ತುಂಬ ಪ್ರೀತಿಯಿಂದ ಮಾತಾಡಿಸ್ತಿದ್ರು. ನಾನು 1 ಗಂಟೆ ಹೇಗೋ ಸಂಭಾಳಿಸಿದ್ದೆ.

ನಾನು ನನ್ನ ಸ್ನೇಹಿತರನ್ನು, ಆರ್‌. ಜೆ ಆಗಿದ್ದಾಗ ಕೇಳುಗರನ್ನು ಯಾಮರಿಸಿದ್ದಕ್ಕೆ ಲೆಕ್ಕವೇ ಇಲ್ಲ. ಹಾಗೇ ನಾನೂ ಯಮಾರಿದ್ದೇನೆ. ನನಗೆ ಮೊದಲಿಂದಲೂ ಆ್ಯಕ್ಟಿಂಗ್‌ ಮಾಡಬೇಕು, ನಟನಾಗಿ ಹೆಸರು ಮಾಡಬೇಕು ಎಂಬ ಆಸೆ ಇತ್ತು. ಒಂದು ಬಾರಿ ಫೋನ್‌ ಕರೆಯೊಂದು ಬಂತು. ನೀವೇ ನಮ್ಮ ಸಿನಿಮಾದಲ್ಲಿ ನಟಿಸಬೇಕು ಎಂದು ಕೇಳಿಕೊಂಡ್ರು. ನಾನು ಸಿನಿಮಾ ವಿಚಾರ ಮಾತಾಡಲು ಅವರನ್ನು ಭೇಟಿ ಮಾಡಲು ಹೋದೆ. ಅಲ್ಲಿ ಅವರು ಸಂಭಾವನೆ ಬಗ್ಗೆ ಮಾತಾಡುವಾಗ ‘₹ 1 ಕೋಟಿ ಸಂಭಾವನೆ ಸಾಕಾ?’ ಎಂದು ಕೇಳಿದರು. ನನಗೆ ಲಡ್ಡು ಬಂದು ಬಾಯಿಗೆ ಬಿತ್ತಾ? ಸ್ಥಿತಿ. ನಾನು ಬೇಡ ಬೇಡ, ಸಿನಿಮಾ ಚೆನ್ನಾಗಿ ಆದ್ರೆ ಸಾಕು, ಸಂಭಾವನೆ ಅಷ್ಟು ಬೇಡ ಎಂದು ಹೇಳ್ತಾನೇ ಇದ್ದೀನಿ. ಅಷ್ಟರಲ್ಲಿ ನನ್ನ ಸ್ನೇಹಿತರು ಬಂದರು. ಎಲ್ಲರಿಗೂ ಎಷ್ಟು ಅಂತಾ ಚಳ್ಳೆಹಣ್ಣು ತಿನ್ನಿಸ್ತೀಯಾ? ನೀನೂ ಅನುಭವಿಸು ಎಂದು ಹೇಳಿದರು.

ಏಪ್ರಿಲ್‌ ಫೂಲ್‌ ದಿನ ತಮಾಷೆಯಾಗಿ ಸಣ್ಣ ವಿಚಾರಗಳಲ್ಲಿ ಫೂಲ್‌ ಮಾಡಿ. ತಮಾಷೆ ಹೆಸರಿನಲ್ಲಿ ಬೇರೆಯವರ ಭಾವನೆ ಜೊತೆ ಆಟ ಆಡಬಾರದು.

ನಿರಂಜನ್‌ ದೇಶಪಾಂಡೆ, ನಿರೂಪಕ, ನಟ

***

ತುಂಬಾ ಬಾರಿ ಮಂಗ ಆಗಿದ್ದೆ

ನಮ್ಮದು ಹಳ್ಳಿ. ಮನೆಯಲ್ಲಿ ಹಸು– ಕರು ತಂಬಾ ಇದ್ದವು. ನನಗೆ ಅವುಗಳೆಂದರೆ ತುಂಬಾ ಪ್ರೀತಿ. ಒಂದು ದಿನ ಏಪ್ರಿಲ್‌ 1ರಂದು ನಾನಿನ್ನೂ ಎದ್ದಿರಲಿಲ್ಲ. ನಮ್ಮ ಎದುರು ಮನೆಯ ನಾಗೇಶಣ್ಣ ನನ್ನ ಎಬ್ಬಿಸಿ, ನಿನ್ನ ಕರು ಮೋರಿಗೆ ಬಿದ್ದಿದೆ ಎಂದು ಹೇಳಿದರು. ನಾನು ನಿದ್ದೆಗಣ್ಣಿನಲ್ಲಿಯೇ ಓಡಿದ್ದೆ. ಅಲ್ಲಿಗೆ ಹೋಗಿ ನೋಡಿದಾಗಲೇ ನಾನು ಮಂದ ಆಗಿದ್ದು ಅಂತಾ ಗೊತ್ತಾಗಿದ್ದು. ಸಣ್ಣವರಿದ್ದಾಗ ಪ್ರತಿವರ್ಷ ಒಂದಲ್ಲ ಒಂದು ವಿಷಯಕ್ಕೆ ಮಂಗ ಆಗಿದ್ದೆ. ಈಗ ಶೂಟಿಂಗ್‌ ಬೇರೆ ಕಡೆ ಶಿಫ್ಟ್‌ ಆಗಿರುತ್ತೆ. ನಾನು ಗೊತ್ತಿಲ್ಲಲ್ದೆ ಹಳೆ ಸ್ಥಳಕ್ಕೆ ಹೋಗೋದು, ಅರ್ಧ ದಾರೀಲಿ ನೆನಪಾಗಿ ವಾಪಸ್‌ ಬರೋದು ಇದೆಲ್ಲ ಈಗ ಸಾಮಾನ್ಯ. ಆ ನಂತರ ಅದನ್ನು ಎಲ್ಲರ ಹತ್ರ ಹಂಚಿಕೊಂಡು ನಗುತ್ತೇವೆ.

ಸುನಿಲ್‌ಕುಮಾರ್‌, ನಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry