ಬಿಎಂಡಬ್ಲ್ಯು: ‘ಸ್ಕಿಲ್‌ ನೆಕ್ಸ್ಟ್‌’ ಕಾರ್ಯಕ್ರಮ

7
ಸಿಎಸ್‌ಆರ್‌: ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಕಲಿಕೆಗೆ 365 ಎಂಜಿನ್‌ಗಳು

ಬಿಎಂಡಬ್ಲ್ಯು: ‘ಸ್ಕಿಲ್‌ ನೆಕ್ಸ್ಟ್‌’ ಕಾರ್ಯಕ್ರಮ

Published:
Updated:
ಬಿಎಂಡಬ್ಲ್ಯು: ‘ಸ್ಕಿಲ್‌ ನೆಕ್ಸ್ಟ್‌’ ಕಾರ್ಯಕ್ರಮ

ಚೆನ್ನೈ: ಐಷಾರಾಮಿ ಕಾರು ತಯಾರಿಕಾ ಕಂಪನಿ  ಬಿಎಂಡಬ್ಲ್ಯು, ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಕೌಶಲ ವೃದ್ಧಿಸಲು ರೂಪಿಸಿರುವ ‘ಸ್ಕಿಲ್‌ ನೆಕ್ಸ್ಟ್‌’ (Skill Next) ಕಾರ್ಯಕ್ರಮಕ್ಕೆ ಗುರುವಾರ ಇಲ್ಲಿ ಚಾಲನೆ ನೀಡಿತು.

ಆಟೊಮೊಬೈಲ್‌ ವಿಭಾಗದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಪರಿಣತರಿಂದ ಮಾರ್ಗದರ್ಶನ ಕೊಡಿಸುವುದರ ಜತೆಗೆ ಅವರಿಗೆ ಪ್ರಾಯೋಗಿಕ ತರಬೇತಿ ಒದಗಿಸುವ ಮಹತ್ವದ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿ (ಸಿಎಸ್‌ಆರ್‌) ಬಿಎಂಡಬ್ಲ್ಯು ಇದನ್ನು ಹಮ್ಮಿಕೊಂಡಿದೆ.

ಕಲಿಕೆಗೆ ದೊರೆಯಲಿವೆ 365 ಎಂಜಿನ್‌ಗಳು: ಈ ಕಾರ್ಯಕ್ರಮದ ಅಂಗವಾಗಿ, ಬಿಎಂಡಬ್ಲ್ಯು ತನ್ನ 365 ಎಂಜಿನ್‌ ಮತ್ತು ಟ್ರಾನ್ಸ್‌ಮಿಷನ್‌ ಯಂತ್ರಗಳನ್ನು ದೇಶದ ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಂಜಿನಿಯರಿಂಗ್‌ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಉಚಿತವಾಗಿ ನೀಡಲಿದೆ.

ಚೆನ್ನೈನಲ್ಲಿರುವ ಬಿಎಂಡಬ್ಲ್ಯು ಕಾರು ತಯಾರಿಕಾ ಘಟಕದಲ್ಲಿ ಹಮ್ಮಿಕೊಂಡಿದ್ದ ‘ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾ’ದ 11ನೇ ವಾರ್ಷಿಕೋತ್ಸವದಲ್ಲಿ ಕಂಪನಿಯ ಪ್ರಚಾರ ರಾಯಭಾರಿ ಸಚಿನ್‌ ತೆಂಡೂಲ್ಕರ್‌ ಅವರು, ಅಣ್ಣಾ ವಿಶ್ವವಿದ್ಯಾಲಯದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಜತೆಗೂಡಿ ಕಾರಿಗೆ ಎಂಜಿನ್‌ ಮತ್ತು ಟ್ರಾನ್ಸ್‌ಮಿಷನ್‌ ಅಳಡಿಸುವುದರ ಮೂಲಕ ‘ಸ್ಕಿಲ್‌ ನೆಕ್ಸ್ಟ್‌’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಮತ್ತು ಯುವ ಜನರು ತಮ್ಮ ಕನಸು ಮತ್ತು ಗುರಿ ಸಾಧಿಸಲು ‘ಸ್ಕಿಲ್‌ ನೆಕ್ಸ್ಟ್‌’ ಕಾರ್ಯಕ್ರಮವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಸಚಿನ್‌ ಸಲಹೆ ನೀಡಿದರು.‌

‘2018ರ ಅಂತ್ಯದೊಳಗೆ ದೇಶದ ಎಂಜಿನಿಯರಿಂಗ್‌ ಕಾಲೇಜು, ಕೈಗಾರಿಕಾ ತರಬೇತಿ ಸಂಸ್ಥೆ, ಪಾಲಿಟೆಕ್ನಿಕ್‌ ಸಂಸ್ಥೆಗಳಿಗೆ ಉಚಿತವಾಗಿ ಕಾರಿನ ಎಂಜಿನ್‌ ಮತ್ತು ಟ್ರಾನ್ಸ್‌ಮಿಷನ್‌ ಯಂತ್ರಗಳು ತಲುಪಲಿವೆ. ಮೊದಲು ಬಂದವರಿಗೆ ಮೊದಲ ಸೇವೆ ಎಂಬಂತೆ ಈ ಯಂತ್ರಗಳನ್ನು ವಿತರಿಸಲಾಗುವುದು. ವಿದ್ಯಾರ್ಥಿಗಳ ಕಲಿಕೆಗೆ ಮಾತ್ರ ಇವುಗಳನ್ನು ಬಳಸಿಕೊಳ್ಳುತ್ತೇವೆಯೆಂದು ಸಂಸ್ಥೆಗಳು ಪ್ರಮಾಣೀಕರಿಸಬೇಕು’ ಎಂದು ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾದ ಅಧ್ಯಕ್ಷ ವಿಕ್ರಂ ಪವ್ಹಾ ಹೇಳಿದರು.

ತಜ್ಞರಿಂದ ತರಬೇತಿ: ‘ದೇಶದ 20ಕ್ಕೂ ಹೆಚ್ಚು ನಗರಗಳಲ್ಲಿ ನಮ್ಮ ಡೀಲರ್‌ಗಳಿದ್ದಾರೆ. ಅಲ್ಲಿ ನುರಿತ ತಂತ್ರಜ್ಞರಿಂದ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ನೀಡಲಾಗುವುದು. ಅಲ್ಲಿ ಥಿಯರಿ ಮತ್ತು ಪ್ರಾಯೋಗಿಕ ತರಬೇತಿಯನ್ನೂ ಒದಗಿಸಲಾಗುವುದು.

‘ದೇಶದಲ್ಲಿ ದಶಕದಿಂದೀಚೆಗೆ ಐಷಾರಾಮಿ ಕಾರುಗಳ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಇಂಥಹ ಕಾರುಗಳು ರಸ್ತೆಗೆ ಇಳಿಯುತ್ತಿವೆ. ಆಟೊಮೊಬೈಲ್‌ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯೂ ಆಗಿದೆ. ಆದರೆ, ತಾಂತ್ರಿಕವಾಗಿ ಪರಿಣತಿಯ ಕೊರತೆ ಭಾರತದಲ್ಲಿ ಕಾಣುತ್ತಿದೆ. ಹೀಗಾಗಿ ಬಿಎಂಡಬ್ಲ್ಯು ‘ಸ್ಕಿಲ್‌ ನೆಕ್ಸ್ಟ್‌’ ಕಾರ್ಯಕ್ರಮ ತಂದಿದೆ.

‘ಇಲ್ಲಿ ತಾಂತ್ರಿಕ ವಿದ್ಯಾರ್ಥಿಗಳು ಅತ್ಯುತ್ತಮ ಮತ್ತು ಸುಧಾರಿಸಿದ ತಂತ್ರಜ್ಞಾನದ ಜ್ಞಾನವನ್ನು ಪಡೆದುಕೊಂಡು ತಮ್ಮ ಕೌಶಲವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದರ ಜತೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನೂ ಉಜ್ವಲಗೊಳಿಸಿಕೊಳ್ಳಲು ಅವಕಾಶವೂ ದೊರೆಯುತ್ತದೆ’ ಎಂದರು.

ಮಳೆಗೆ ಹಾನಿಯಾಗಿದ್ದ ಎಂಜಿನ್‌ ಕಲಿಕೆಗೆ

‘ಎರಡು ವರ್ಷಗಳಲ್ಲಿ ಚೆನ್ನೈನಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ಬಿಎಂಡಬ್ಲ್ಯುನ ಹಲವಾರು ಕಾರುಗಳ ಎಂಜಿನ್‌ಗಳೂ ಹಾನಿಗೊಳಗಾಗಿದ್ದವು. ಈ ಭಾಗಗಳು ವಿಮಾ ವ್ಯಾಪ್ತಿಯಲ್ಲಿ ಇದ್ದಿದ್ದರಿಂದ ಕಾರಿನ ಮಾಲೀಕರಿಗೆ ವಿಮೆ ಮೊತ್ತ ದೊರೆಯಿತು. ಆದರೆ ಕಂಪನಿಯ ಗುಣಮಟ್ಟದ ನಿಯಮಗಳ ಪ್ರಕಾರ ಈ ಎಂಜಿನ್‌ಗಳನ್ನು ಪುನಃ ಬಳಸುವಂತಿಲ್ಲ. ಹೀಗಾಗಿ ಕಂಪನಿಯು ಈ ಎಂಜಿನ್‌ಗಳನ್ನು ವಿದ್ಯಾರ್ಥಿಗಳ ಕಲಿಕೆಗೆ ಒದಗಿಸಲು ಯೋಜನೆ ರೂಪಿಸಿತು. ಇದಕ್ಕೆ ವಿಮಾ ಕಂಪನಿಯ ಒಪ್ಪಿಗೆಯೂ ದೊರೆತಿದೆ’ ಎಂದು  ವಿಕ್ರಂ ಪವ್ಹಾ ಮಾಹಿತಿ ನೀಡಿದರು.

(ಸಂಸ್ಥೆಯ ಆಹ್ವಾನದ ಮೇರೆಗೆ ವರದಿಗಾರ ಚೆನ್ನೈಗೆ ತೆರಳಿದ್ದರು)

**

ಬಿಎಂಡಬ್ಲ್ಯು: ಬೆಲೆ ಏರಿಕೆ ನಿರ್ಧಾರ

ಚೆನ್ನೈ: ಐಷಾರಾಮಿ ಕಾರು ತಯಾರಿಸುವ ಬಿಎಂಡಬ್ಲ್ಯು ಇಂಡಿಯಾ ಸಂಸ್ಥೆಯು ಏಪ್ರಿಲ್‌ 1 ರಿಂದ ಅನ್ವಯಿಸುವಂತೆ ತನ್ನೆಲ್ಲಾ ವಾಹನಗಳ ಬೆಲೆಯನ್ನು ಶೇ 3 ರಿಂದ ಶೇ 5.5ರವರೆಗೂ ಏರಿಕೆ ಮಾಡಿದೆ.

ಬಿಡಿಭಾಗಗಳ ಆಮದು ಸುಂಕ ಹೆಚ್ಚಳ ಆಗಿರುವುದರಿಂದ ವಾಹನಗಳ ಬೆಲೆ ಏರಿಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಎಂಡಬ್ಲ್ಯುಗ್ರೂಪ್‌ ಇಂಡಿಯಾದ ಅಧ್ಯಕ್ಷ ವಿಕ್ರಂ ಪವ್ಹಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry