ಬಿರುಗಾಳಿ ಸಹಿತ ಮಳೆಗೆ 19 ಮರಗಳು ಧರೆಗೆ

7

ಬಿರುಗಾಳಿ ಸಹಿತ ಮಳೆಗೆ 19 ಮರಗಳು ಧರೆಗೆ

Published:
Updated:
ಬಿರುಗಾಳಿ ಸಹಿತ ಮಳೆಗೆ 19 ಮರಗಳು ಧರೆಗೆ

ಬೆಂಗಳೂರು: ನಗರದ ಹಲವೆಡೆ ಶುಕ್ರವಾರ ಸಂಜೆ ಹಾಗೂ ರಾತ್ರಿ ಬಿರುಗಾಳಿಹಾಗೂ ಮಿಂಚು ಸಹಿತ ಬಿರುಸಿನ ಮಳೆಯಾಗಿದೆ.

ಸಂಜೆ ಬಿಡುವು ನೀಡಿದ್ದ ಮಳೆ, ರಾತ್ರಿ 11 ಗಂಟೆ ಸುಮಾರಿಗೆ ಜೋರಾಗಿ ಸುರಿಯಿತು. ವಿಜಯನಗರ ಹಾಗೂ ರಾಜಾಜಿನಗರ ಸುತ್ತ–ಮುತ್ತ ಅರ್ಧ ಗಂಟೆ ಮಳೆ ಸುರಿದ ಪರಿಣಾಮ ಆ ಭಾಗದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು.

ಕೆ.ಆರ್‌.ಪುರ, ಮಹದೇವಪುರ, ಗರುಡಾಚಾರ್‌ ಪಾಳ್ಯ, ವೈಟ್‌ಫೀಲ್ಡ್‌ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು ಅರ್ಧ ಗಂಟೆಗೂ ಅಧಿಕ ಆಲಿಕಲ್ಲು ಮಳೆ ಸುರಿದಿದೆ. ಈ ಭಾಗದ ನಿವಾಸಿಗಳು ಆಲಿಕಲ್ಲುಗಳನ್ನು ಕಂಡು ಖುಷಿ ಪಟ್ಟರು. ಕೆಲವರು ಅವುಗಳನ್ನು ಬಾಟಲಿಗಳಲ್ಲಿ ಸಂಗ್ರಹಿಸಿಟ್ಟುಕೊಂಡರು.

ವಿಧಾನಸೌಧ, ಮೆಜೆಸ್ಟಿಕ್, ಎಂ.ಜಿ.ರಸ್ತೆ, ರಿಚ್ಮಂಡ್‌ ಟೌನ್, ಶಾಂತಿನಗರ, ಬಸವನಗುಡಿ, ಜಯನಗರ, ಜೆ.ಪಿ.ನಗರ, ಬನಶಂಕರಿ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಹಲಸೂರು, ಇಂದಿರಾನಗರ, ರಾಜಾಜಿನಗರ, ಬಸವೇಶ್ವರನಗರ, ವಿಜಯನಗರ, ಯಶವಂತಪುರ, ಹನುಮಂತನಗರ, ಕೆಂಗೇರಿ ಹಾಗೂ ಆಸುಪಾಸು ಕೆಲ ಹೊತ್ತು ಜೋರಾಗಿ ಮಳೆಯಾಗಿದೆ.

ಅಲ್ಲಿಯ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು. ಶಿವಾನಂದ ವೃತ್ತದ ಬಳಿಯ ಕೆಳ ಸೇತುವೆ ಬಳಿ ನಿಂತಿದ್ದ ನೀರಿನಲ್ಲಿ ಕೆಲ ವಾಹನಗಳು ಸಂಚರಿಸಿದ್ದರಿಂದ ಅವುಗಳು ನೀರಿನ ಮಧ್ಯೆಯೇ ಕೆಟ್ಟು ನಿಂತವು. ಕೆಳಗೆ ಇಳಿದ ಸವಾರರು ವಾಹನಗಳನ್ನು ತಳ್ಳಿಕೊಂಡು ಮುಂದೆಸಾಗಿದರು. ಹೀಗಾಗಿ, ಈ ಮಾರ್ಗದಲ್ಲಿ ವಾಹನಗಳ ಸಂಚಾರ ಮಂದಗತಿಯಲ್ಲಿತ್ತು.

ನೆಲಕ್ಕುರುಳಿದ 19 ಮರಗಳು: ಶಂಕರಮಠ, ಮಲ್ಲೇಶ್ವರದ ಬಿಜೆಪಿ ಕಚೇರಿ, ನಂದಿನಿ ಲೇಔಟ್, ಗೊರಗುಂಟೆಪಾಳ್ಯದ ಕೆಎಲ್‌ಇ ದಂತ ಕಾಲೇಜು, ಹಳೇ ವಿಮಾನ ನಿಲ್ದಾಣರಸ್ತೆ, ಯಲಹಂಕ, ಯಶವಂತಪುರದ ಸೋಪ್ ಫ್ಯಾಕ್ಟರಿ, ಬನಶಂಕರಿ ಎರಡನೇ ಹಂತ, ಸಂಜಯನಗರದ ದೇವಸ್ಥಾನ ರಸ್ತೆ, ಬೌರಿಂಗ್ ಆಸ್ಪತ್ರೆ ಹತ್ತಿರ, ವಿಲಿಯಮ್ಸ್‌ ಟೌನ್, ಬಾಣಸವಾಡಿಯ ಎಚ್‌ಡಿಎಫ್‌ಸಿ ಬ್ಯಾಂಕ್, ಬಿಎಂಶ್ರೀ ರಸ್ತೆ, ಮಡಿವಾಳ, ಕಸ್ತೂರಿನಗರ, ಮಾರತ್ತಹಳ್ಳಿ, ಕಗ್ಗದಾಸಪುರ ಹಾಗೂ ಮನೋ ರಾಮನಪಾಳ್ಯದಲ್ಲಿ ಒಟ್ಟು 19 ಮರಗಳು ಬಿದ್ದಿವೆ.

ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್‌ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಅದೇ ಮರದ ಕೆಳಗೆ ನಿಂತಿದ್ದ ಸವಾರ ಅಪಾಯದಿಂದ ಪಾರಾಗಿದ್ದಾರೆ. ಬೈಕ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಸಂಚಾರ ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಅದನ್ನು ತೆರವುಗೊಳಿಸಿದರು.

ದೂರು ಸ್ವೀಕರಿಸಿದ ಆಯುಕ್ತ: ನಗರದ ಹಲವೆಡೆ ಮಳೆ ಪ್ರಾರಂಭವಾಗುತ್ತಿದ್ದಂತೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಬಂದ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್, ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದರು.

‘ರಸ್ತೆಗಳ ಹಾಗೂ ವಿದ್ಯುತ್‌ ತಂತಿಗಳ ಮೇಲೆ ಮರಗಳು ಬಿದ್ದಿದ್ದರಿಂದ ಸಂಚಾರಕ್ಕೆ ಹಾಗೂ ವಿದ್ಯುತ್ ಪೂರೈಕೆಗೆ ತೊಂದರೆಯಾಗಿತ್ತು. ಹೀಗಾಗಿ, ಸಿಬ್ಬಂದಿ ಅವುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ’ ಎಂದು ಅವರು ಹೇಳಿದರು.

ಜಲಾವೃತಗೊಂಡ ನಾಗಪ್ಪರೆಡ್ಡಿ ಬಡಾವಣೆ ರಸ್ತೆ

ಕೆ.ಆರ್.ಪುರದ ವಿಜಿನಾಪುರ ಬಳಿಯ ನಾಗಪ್ಪರೆಡ್ಡಿ ಬಡಾವಣೆಯ ಹಲವು ಮನೆಗಳಿಗೆ ರಾಜಕಾಲುವೆಯ ಕೊಳಚೆ ನೀರು ನುಗ್ಗಿದೆ. ಬಡಾವಣೆಯ ಕೆಲ ರಸ್ತೆಗಳು ಜಲಾವೃತಗೊಂಡಿದ್ದವು.

ವಿಜಿನಾಪುರ, ರಾಮಮೂರ್ತಿನಗರ ಮುಖ್ಯರಸ್ತೆ, ಐಟಿಐ, ದೇವಸಂದ್ರ ಮುಖ್ಯರಸ್ತೆ, ಬಸವನಪುರ, ಚಿಕ್ಕದೇವಸಂದ್ರ ಮಂಜುನಾಥ್ ಬಡಾವಣೆ, ಗೋಕುಲ ಬಡಾವಣೆ, ನೇತ್ರಾವತಿ ಬಡಾವಣೆಯ ಸಾಕಷ್ಟು ಮನೆಗಳಿಗೂ ನೀರು ನುಗ್ಗಿದೆ.

ಐಟಿಐ ಗೇಟ್‌, ವಿಜಿನಾಪುರ ಮತ್ತು ರಾಮಮೂರ್ತಿ ನಗರ ಕೆಳಸೇತುವೆಗಳು ಜಲಾವೃತಗೊಂಡಿದ್ದವು. ಇದರಿಂದ ಒಂದುಗಂಟೆಗೂ ಅಧಿಕ ಸಂಚಾರ ದಟ್ಟಣೆ ಉಂಟಾಗಿತ್ತು.

‘ತಗ್ಗುಪ್ರದೇಶದಲ್ಲಿ ಈ ಬಡಾವಣೆ ಇರುವುದಿಂದ ಮಳೆ ಸುರಿದಾಗಲೆಲ್ಲ ಸಮಸ್ಯೆ ಉಂಟಾಗುತ್ತಿದೆ. ರಾಜಕಾಲುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಕೊಳಚೆ ನೀರು ಬಡಾವಣೆಯ ಮನೆಗಳಿಗೆ ನುಗ್ಗುತ್ತಿದೆ’ ಎಂದು ನಾಗಪ್ಪರೆಡ್ಡಿ  ಬಡಾವಣೆಯ ನಿವಾಸಿಗಳು

ದೂರಿದರು.

ಕಾಂಪೌಂಡ್ ಮೇಲೆ ಬಿದ್ದ ಕೊಂಬೆ

ಹೆಸರಘಟ್ಟ:
ಇಲ್ಲಿನ ಸೋಲದೇವನಹಳ್ಳಿಯಲ್ಲಿ ಮರದ ಕೊಂಬೆಯು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌ ಮೇಲೆ ಬಿದ್ದಿದೆ.

ಸೋಲದೇವನಹಳ್ಳಿ, ಕುಂಬಾರಹಳ್ಳಿ, ಕೊಡಗಿ, ತಿರುಮಲಾಪುರದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಹಲವು ಮರಗಳ ಕೊಂಬೆಗಳು

ಮುರಿದಿವೆ. ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಕೊಂಬೆಗಳನ್ನು ಬೆಸ್ಕಾಂ ಅಧಿಕಾರಿಗಳು ತೆರವುಗೊಳಿಸಿದರು.

ದಾಬಸ್‌ಪೇಟೆಯಲ್ಲೂ ಆಲಿಕಲ್ಲು

ದಾಬಸ್‌ಪೇಟೆ: ನೆಲಮಂಗಲದ ದಾಬಸ್ ಪೇಟೆ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ.

ಮಧ್ಯಾಹ್ನ 2.45ರ ಸುಮಾರಿಗೆ ಪ್ರಾರಂಭವಾದ ಮಳೆ ಸಣ್ಣದಾಗಿ ಪ್ರಾರಂಭವಾಗಿ ನಂತರ ಬಿರುಸುಗೊಂಡಿತು. ಹತ್ತು ನಿಮಿಷದವರೆಗೆ ಗೋಲಿ ಗಾತ್ರದ ಆಲಿಕಲ್ಲುಗಳು ಬಿದ್ದವು. ಆಲಿಕಲ್ಲಿನಿಂದಾಗಿ ಮಾವಿನ ಬೆಳೆಗೆ ಹಾನಿಯಾಗಿದೆ ಎಂದು ರೈತ ತ್ಯಾಗರಾಜ್ ಹೇಳಿದರು.

ನಗರದಲ್ಲಿ ವಿದ್ಯುತ್‌ ವ್ಯತ್ಯಯ

ಮಳೆಯ ವೇಳೆ ಗಾಳಿಯೂ ಜೋರಾಗಿಯೇ ಬೀಸಿತು. ಇದರಿಂದಾಗಿ ಜೆ.ಪಿ.ನಗರ, ಬನಶಂಕರಿ, ಗಾಂಧಿನಗರ, ಕಾಟನ್‌ಪೇಟೆ, ಚಿಕ್ಕಪೇಟೆ, ಬಸವನಗುಡಿ ಹಾಗೂ ಸುತ್ತಮುತ್ತಲ ಕೆಲ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ಕಡಿತಗೊಳಿಸಲಾಗಿತ್ತು.

ಮಾರತ್ತಹಳ್ಳಿ ಹಾಗೂ ಮುನೇಕೊಳಾಲ 5, ಬಾಣಸವಾಡಿ 4, ಮಹಾಲಕ್ಷ್ಮೀಪುರ 2, ಮಲ್ಲೇಶ್ವರ ಹಾಗೂ ಪುಟ್ಟೇನಹಳ್ಳಿಯಲ್ಲಿ ತಲಾ 2 ಕಂಬಗಳು (ಒಟ್ಟು 13) ಮುರಿದು ಬಿದ್ದಿವೆ. ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ವಿದ್ಯುತ್ ವ್ಯತ್ಯಯದ ಕುರಿತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ 1,893 ದೂರುಗಳ ಬಂದಿವೆ. ಆ ಪೈಕಿ 952 ದೂರುಗಳಿಗೆ ಸ್ಪಂದಿಸಿದ್ದು, 941 ದೂರುಗಳು ಬಾಕಿ ಇವೆ ಎಂದರು.

ವಿಮಾನ ಹಾರಾಟ ವ್ಯತ್ಯಯ

ಮಳೆಯಿಂದಾಗಿ ಕೆಂಪೇಗೌಡ ಅಂತರರಾಷ್ಟ್ರಿಯ ವಿಮಾನನಿಲ್ದಾಣದಲ್ಲಿ (ಕೆಐಎಎಲ್) ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಯಿತು.

ವಿಮಾನ ನಿಲ್ದಾಣ ಸುತ್ತಮುತ್ತಲ ಪ್ರದೇಶದಲ್ಲಿ ಮಧ್ಯಾಹ್ನ 3.45ರ ಸುಮಾರಿಗೆ ಜೋರಾಗಿ ಬಿರುಗಾಳಿ ಬೀಸಿದ್ದರಿಂದ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು. ನಗರದಲ್ಲಿ ಇಳಿಯಬೇಕಿದ್ದ ಎರಡು ಸ್ಪೈಸ್‌ಜೆಟ್ ವಿಮಾನಗಳನ್ನು ಚೆನ್ನೈ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದರು.

ವಿದ್ಯುತ್‌ ವ್ಯತ್ಯಯ

ಮಳೆಯ ವೇಳೆ ಗಾಳಿಯೂ ಜೋರಾಗಿಯೇ ಬೀಸಿತು. ಇದರಿಂದಾಗಿ ಜೆ.ಪಿ.ನಗರ, ಬನಶಂಕರಿ, ಗಾಂಧಿನಗರ, ಕಾಟನ್‌ಪೇಟೆ, ಚಿಕ್ಕಪೇಟೆ, ಬಸವನಗುಡಿ ಹಾಗೂ ಸುತ್ತಮುತ್ತಲ ಕೆಲ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ಕಡಿತಗೊಳಿಸಲಾಗಿತ್ತು.

ಮಾರತ್ತಹಳ್ಳಿ ಹಾಗೂ ಮುನೇಕೊಳಾಲ 5, ಬಾಣಸವಾಡಿ 4, ಮಹಾಲಕ್ಷ್ಮೀಪುರ 2, ಮಲ್ಲೇಶ್ವರ ಹಾಗೂ ಪುಟ್ಟೇನಹಳ್ಳಿಯಲ್ಲಿ ತಲಾ 2 ಕಂಬಗಳು (ಒಟ್ಟು 13) ಮುರಿದು ಬಿದ್ದಿವೆ. ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ವಿದ್ಯುತ್ ವ್ಯತ್ಯಯದ ಕುರಿತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ 1,893 ದೂರುಗಳ ಬಂದಿವೆ. ಆ ಪೈಕಿ 952 ದೂರುಗಳಿಗೆ ಸ್ಪಂದಿಸಿದ್ದು, 941 ದೂರುಗಳು ಬಾಕಿ ಇವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry