ದಾಂಪತ್ಯ ಜೀವನಕ್ಕೆ ಕಾಲಿಟ್ಟ 6 ಜೋಡಿ

7
ಪಂಗುನಿ ಉತ್ತಿರ ಜಾತ್ರಾ ಮಹೋತ್ಸವ– ಸಾಮೂಹಿಕ ವಿವಾಹ

ದಾಂಪತ್ಯ ಜೀವನಕ್ಕೆ ಕಾಲಿಟ್ಟ 6 ಜೋಡಿ

Published:
Updated:

ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲೇನಹಳ್ಳಿಯ ಕುಮಾರಗಿರಿಯ ಸುಬ್ರಹ್ಮಣ್ಯಸ್ವಾಮಿ ಪಂಗುನಿ ಉತ್ತಿರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.ಅಂಗವಾಗಿ ಸುಬ್ರಮಣ್ಯಸ್ವಾಮಿ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ, ಕಾವಡಿ ಸಮರ್ಪಣೆ, ಮುರುಗನ್, ವಳ್ಳಿ, ದೇವಸೇನಾ ವಿಗ್ರಹಗಳ ಕಲ್ಯಾಣೋತ್ಸವ ನೆರವೇರಿತು. ಕುಮಾರಗಿರಿಯ ಮುಖ್ಯದ್ವಾರ ಮತ್ತು ಸುಬ್ರಮಣ್ಯಸ್ವಾಮಿ ದೇಗುಲ ತಳಿರು ತೋರಣ, ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.

ಜಾತ್ರೆಗೆ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಿಂದ ಭಕ್ತರು ಬಂದಿದ್ದರು. ಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಕೆಲವರು ಬಾಯಿಬೀಗ ಚುಚ್ಚಿಕೊಂಡು ಹರಕೆ ತೀರಿಸಿದರು. ಕೆಲವರು ಬೆನ್ನಿಗೆ ಕಬ್ಬಿಣದ ಹುಕ್ಕು ಸಿಕ್ಕಿಸಿಕೊಂಡು ಸುಬ್ರಹ್ಮಣ್ಯಸ್ವಾಮಿ ಭಾವಚಿತ್ರವಿದ್ದ ಬಂಡಿಯನ್ನು ಕುಮಾರಗಿರಿ ಕಡೆಗೆ ಎಳೆದೊಯ್ದರು. ಮತ್ತೆ ಕೆಲವರು ಕಾವಡಿ ಹೊತ್ತು ನೃತ್ಯ ಮಾಡಿದರು.

‘21 ದಿನಗಳು ವ್ರತ ಪಾಲಿಸಿ, ಪಂಗುನಿ ಉತ್ತಿರ ಜಾತ್ರಾ ಮಹೋತ್ಸವದ ಕೊನೆಯ ದಿನ ಬಾಯಿಬೀಗ ಚುಚ್ಚಿಕೊಂಡು ಕುಮಾರಗಿರಿಗೆ ಕಾಲ್ನಡಿಗೆಯಲ್ಲಿ ಬರುತ್ತೇವೆ. ಈ ರೀತಿ ಮಾಡಿದರೆ ಇಷ್ಟಾರ್ಥ ಸಿದ್ಧಿಸುತ್ತದೆ, ಲೇಸಾಗುತ್ತದೆ ಎಂಬ ನಂಬಿಕೆ ಇದೆ. ಸತತ ಏಳು ವರ್ಷಗಳಿಂದ ಗಿರಿಗೆ ಬರುತ್ತಿದ್ದೇನೆ’ ಎಂದು ಕಲ್ಲುದೊಡ್ಡಿಯ ಭಕ್ತ ಕಾರ್ತಿಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸುಬ್ರಹ್ಮಣ್ಯಸ್ವಾಮಿ ದೇಗುಲ ಸಮಿತಿ ವತಿಯಿಂದ ಜಾತ್ರೆ ನಿಮಿತ್ತ ಸರಳ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು. ಆರು ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು. ಈ ಪೈಕಿ ಅಂತರ್ಜಾತಿಯ ಮೂರು ಜೋಡಿಗಳಿದ್ದವು.

ಜಿಲ್ಲೆಯ ಮುಸ್ಲಾಪುರ ಹಟ್ಟಿ ಎಂ.ಜಿ.ದೀಪಾ– ಚನ್ನಗೊಂಡನಹಳ್ಳಿ ಕೆ.ರವಿ, ಶಿರವಾಸೆಯ ಕಮಲಾಕ್ಷಿ – ಯಾದಗಿರಿ ರಘು, ಬ್ಯಾಗದಹಳ್ಳಿಯ ಬಿ.ಆರ್.ಸಂಗೀತಾ– ಮಳಲೂರು ಎಂ.ಎನ್.ಚೇತನ್, ಇಂದಿರಾನಗರದ ಸೆಲ್ವಿ– ದಕ್ಷಿಣ ಕನ್ನಡದ ಕೃಷ್ಣಾ, ಇಂದಿರಾನಗರದ ಪ್ರೇಮಾ– ಉಡುಪಿ ಪ್ರಭಾಕರ, ಹುಕ್ಕುಂದದ ಅಮುದಾ – ಮುನಿಯಪ್ಪ ಹೊಸ ಬಾಳಿಗೆ ಕಾಲಿಟ್ಟರು.

‘ಪಂಗುನಿ ಉತ್ತಿರ ಜಾತ್ರೆಯಂದು ಸರಳ ಸಾಮೂಹಿಕ ವಿವಾಹ ನಡೆಸುವ ಪರಿಪಾಠ 21ವರ್ಷಗಳಿಂದ ನಡೆದುಕೊಂಡು ಬಂದಿದೆ. ಜೋಡಿಗಳಿಗೆ ವಸ್ತ್ರ, ತಾಳಿ, ಕಾಲುಂಗುರ, ಪಾತ್ರೆಗಳನ್ನು ಉಚಿತವಾಗಿ ನೀಡುತ್ತೇವೆ. ಈ ಬಾರಿ 12 ಅರ್ಜಿಗಳು ಸಲ್ಲಿಕೆಯಾಗಿದ್ದವು, ದಾಖಲೆ ಒದಗಿಸಿದ ಆರು ಜೋಡಿಗಳಿಗೆ ಹಸೆಮಣೆ ಏರಲು ಅವಕಾಶ ನೀಡಿದೆವು’ ಎಂದು ದೇಗುಲದ ಧರ್ಮದರ್ಶಿ ಸಮಿತಿಯ ಕಾರ್ಯದರ್ಶಿ ರಮೇಶ್ ತಿಳಿಸಿದರು.

–ಸಿ.ಎಸ್‌.ಅನಿಲ್‌ಕುಮಾರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry